ಸಿರಿಯಾ ದಾಳಿ: ಸಂಸತ್ ಒಪ್ಪಿಗೆ ಕೋರಿದ ಒಬಾಮ

7

ಸಿರಿಯಾ ದಾಳಿ: ಸಂಸತ್ ಒಪ್ಪಿಗೆ ಕೋರಿದ ಒಬಾಮ

Published:
Updated:

ವಾಷಿಂಗ್ಟನ್ (ಪಿಟಿಐ):  ಸಿರಿಯಾ ವಿರುದ್ಧದ ದಾಳಿಗೆ ಸಂಬಂಧಿಸಿದಂತೆ ಭಾನುವಾರ ನಡೆದ ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಸೀಮಿತ ಸೇನಾ ಕಾರ್ಯಾಚರಣೆಗೆ ಒಪ್ಪಿಗೆ ನೀಡುವಂತೆ ಕಾಂಗ್ರೆಸ್‌ನ (ಅಮೆರಿಕ ಸಂಸತ್) ಮೊರೆ ಹೋಗಿದ್ದಾರೆ.ಒಬಾಮ ಅವರ ಈ ನಿರ್ಧಾರವನ್ನು ಸಿರಿಯಾ ಮಾಧ್ಯಮಗಳು ಲೇವಡಿ ಮಾಡಿದ್ದು, ಅಮೆರಿಕಕ್ಕೆ ಆದ ಹಿನ್ನಡೆ ಎಂದು ಬಣ್ಣಿಸಿವೆ. ಈ ವಾದವನ್ನು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ತಳ್ಳಿ ಹಾಕಿದ್ದಾರೆ.ಒತ್ತಡಕ್ಕೆ ಸಿಲುಕಿರುವ ಒಬಾಮ ಅವರು ಗೊಂದಲಕ್ಕೀಡಾಗಿದ್ದು, ಡೋಲಾಯಮಾನ ಸ್ಥಿತಿಯಲ್ಲಿದ್ದಾರೆ ಎಂದು ಸಿರಿಯಾ ವ್ಯಂಗ್ಯ ಮಾಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅನುಮೋದನೆಗೆ ಕಾಯದೆ ದಾಳಿ ನಡೆಸುವುದಾಗಿ ಒಬಾಮ ಘೋಷಿಸಿದ್ದಾರೆ. ಇದೇ ವೇಳೆ ಭದ್ರತಾ ಮಂಡಳಿ ನಿಷ್ಕ್ರಿಯತೆ ಮತ್ತು ದಾಳಿಯಿಂದ ಹಿಂದೇಟು ಹಾಕಿದ ರಾಷ್ಟ್ರಗಳ ನಿಲುವಿನ ಕುರಿತು ಅವರು ಅತೃಪ್ತಿ ಹೊರಹಾಕಿದ್ದಾರೆ.ಸಿರಿಯಾದ ವಿರುದ್ಧದ ದಾಳಿಯಲ್ಲಿ ಅಮೆರಿಕ ಸೇನೆಯನ್ನು ಬಳಸುವ ಪರಮಾಧಿಕಾರವನ್ನು ಅಧ್ಯಕ್ಷ ಒಬಾಮ ಅವರಿಗೆ ನೀಡುವಂತೆ ಕೋರಿದ ಕರಡು ನಿರ್ಣಯವನ್ನು ಶ್ವೇತಭನವ ಕಾಂಗ್ರೆಸ್‌ಗೆ ಕಳಿಸಿದೆ. ದಾಳಿಗೆ ಸಂಬಂಧಿಸಿದಂತೆ ಕರಡು ನಿರ್ಣಯದಲ್ಲಿ ಯಾವುದೇ ನಿರ್ದಿಷ್ಟವಾದ ಗಡುವು ವಿಧಿಸಿಲ್ಲ. ಸೇನೆಯ ಬಳಕೆಗೆ ಸಂಬಂಧಿಸಿದಂತೆ ಅಗತ್ಯವಾದ ನಿರ್ಧಾರಗಳನ್ನು ಕೈಗೊಳ್ಳಲು ಅಧ್ಯಕ್ಷರಿಗೆ ಪರಮಾಧಿಕಾರ ನೀಡುವಂತೆ ಕೋರಿದೆ.ರಾಸಾಯನಿಕ ಅಸ್ತ್ರ ಪ್ರಯೋಗದ ಬಗ್ಗೆ ಕೇವಲ ತನಿಖೆ ನಡೆಸಿ ವರದಿ ನೀಡಿದರೆ ಸಾಲದು, ಅದಕ್ಕೆ ತಕ್ಕ ಶಿಕ್ಷೆಯಾಗಬೇಕು ಎಂದು ವಿಶ್ವಸಂಸ್ಥೆಯ ವಿರುದ್ಧ ಒಬಾಮ ಹರಿಹಾಯ್ದಿದ್ದಾರೆ. ಕೊನೆಯ ಗಳಿಗೆಯಲ್ಲಿ ಕೈಕೊಟ್ಟ ರಾಷ್ಟ್ರಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.ಕಾಂಗ್ರೆಸ್ ಒಪ್ಪಿಗೆ ದೊರೆತ ಬೆನ್ನಲ್ಲೇ ತಮ್ಮ ಬೆಂಬಲಕ್ಕೆ ನಿಂತ ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹಾಲನ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಒಬಾಮ ಅವರು ಕೃತಜ್ಞತೆ ಸಲ್ಲಿಸಿದರು. ದಾಳಿ ನಡೆಸುವ ಕುರಿತು ಅವರು ಹೆಚ್ಚಿನ ವಿವರ ನೀಡಲಿಲ್ಲ. 

 

ಪ್ರತಿಭಟನಾ ನಿರತ ನಾಗರಿಕರ ಮೇಲೆ ರಾಸಾಯನಿಕ ಅಸ್ತ್ರ ಪ್ರಯೋಗಿಸಿದ ಆರೋಪ ಎದುರಿಸುತ್ತಿರುವ ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಅವರಿಗೆ ಪಾಠ ಕಲಿಸಲು ಮುಂದಾದ ಒಬಾಮ ಅವರಿಗೆ ಕಾಂಗ್ರೆಸ್ ಒಪ್ಪಿಗೆ ಪಡೆಯುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಸಿರಿಯಾ ಮೇಲೆ ಅಮೆರಿಕ ದಾಳಿ ನಡೆಸುವುದು ಖಚಿತವಾದಂತಾಗಿದ್ದು, ಯಾವಾಗ ದಾಳಿ ನಡೆಯುತ್ತದೆ ಎನ್ನುವುದು ಉಳಿದಿರುವ ಪ್ರಶ್ನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry