ಸಿರಿಯಾ ನರಮೇಧ: ವ್ಯಾಪಕ ಖಂಡನೆ

7

ಸಿರಿಯಾ ನರಮೇಧ: ವ್ಯಾಪಕ ಖಂಡನೆ

Published:
Updated:
ಸಿರಿಯಾ ನರಮೇಧ: ವ್ಯಾಪಕ ಖಂಡನೆ

ಡಮಾಸ್ಕಸ್ (ಎಎಫ್‌ಪಿ): ಸಿರಿಯಾ ಸರ್ಕಾರ ನಾಗರಿಕರ ಪ್ರತಿಭಟನೆ ಹತ್ತಿಕ್ಕಲು ಕೈಗೊಂಡಿರುವ ಕ್ರಮಗಳ ವಿರುದ್ಧ ಭದ್ರತಾ ಮಂಡಳಿ ತೆಗೆದುಕೊಂಡಿದ್ದ ನಿರ್ಣಯಕ್ಕೆ ರಷ್ಯಾ ಮತ್ತು ಚೀನಾ ವಿರೋಧ ವ್ಯಕ್ತಪಡಿಸಿದರೂ, ಹೋಮ್ಸನಲ್ಲಿ ಶುಕ್ರವಾರ ರಾತ್ರಿ ನಡೆದ ನರಮೇಧವನ್ನು ಜಗತ್ತಿನಾದ್ಯಂತ ಖಂಡಿಸಲಾಗಿದೆ.ಇನ್ನೂರು ಮಂದಿ ಹತ್ಯೆಯಾಗಿದ್ದರು ಎಂದು ವರದಿಯಾಗಿತ್ತು. ಆದರೆ ಸಿರಿಯಾದಲ್ಲಿನ ಮಾನವಹಕ್ಕುಗಳ ಸಂಘಟನೆ ಇನ್ನೂ 47 ಮಂದಿ ಸತ್ತಿರುವುದಾಗಿ ಭಾನುವಾರ ತಿಳಿಸಿದೆ. ಅಧ್ಯಕ್ಷ ಬಶರ್-ಅಲ್-ಅಸ್ಸಾದ್ ವಿರುದ್ಧ ಹನ್ನೊಂದು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಶನಿವಾರದ ಘಟನೆ ಅತ್ಯಂತ ಭೀಕರವಾಗಿದ್ದು, ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ಹತ್ಯೆ ಮಾಡಿವೆ. `ಮಕ್ಕಳು, ಮಹಿಳೆಯರು ಎನ್ನದೇ ಎಲ್ಲರನ್ನೂ ಸರ್ಕಾರಿ ಪಡೆಗಳು ನಿರ್ಧಯವಾಗಿ ಹತ್ಯೆ ಮಾಡಿವೆ~ ಎಂದು ವಿರೋಧ ಪಕ್ಷವಾದ ಸಿರಿಯಾ ರಾಷ್ಟ್ರೀಯ ಪರಿಷತ್ ಆರೋಪಿಸಿದೆ. ಕಳೆದ ಮಾರ್ಚ್‌ನಿಂದ ಇಲ್ಲಿಯವರೆಗೆ ಸರ್ಕಾರಿ ಪಡೆಗಳು ಸುಮಾರು ಆರು ಸಾವಿರ ಜನರನ್ನು ಹತ್ಯೆ ಮಾಡಿರುವುದಾಗಿಯೂ ಅದು ದೂರಿದೆ.ಸಿರಿಯಾದಲ್ಲಿನ ಪರಿಸ್ಥಿತಿ ನಿಯಂತ್ರಿಸಲು ವಿಶ್ವದ ಬಲಾಢ್ಯ ದೇಶಗಳು ಒಮ್ಮತದ ನಿರ್ಣಯ ಕೈಗೊಳ್ಳುವಲ್ಲಿ ವಿಫಲವಾಗಿರುವ ಕುರಿತೂ ಪ್ರತಿರೋಧ ವ್ಯಕ್ತವಾಗಿದೆ. ಕಳೆದ ನಾಲ್ಕು ತಿಂಗಳಿನಲ್ಲಿ ಎರಡನೇ ಬಾರಿಗೆ ಸಿರಿಯಾ ಅಧ್ಯಕ್ಷರ ವಿರುದ್ಧದ ಭದ್ರತಾ ಮಂಡಳಿ ನಿರ್ಣಯದ ವಿರುದ್ಧ `ವಿಟೊ~ ಚಲಾವಣೆಯಾಗಿದೆ.`ಒಂದೇ ನಿರ್ಣಯದ ವಿರುದ್ಧ ಎರಡು ಬಾರಿ ವಿಟೊ ಚಲಾವಣೆ ಆಗಿರುವುದರಿಂದ ನಮಗೆ ನಿರಾಸೆಯಾಗಿದೆ~ ಎಂದು ಅಮೆರಿಕ ಹೇಳಿದೆ. ಶುಕ್ರವಾರ ರಾತ್ರಿಯ ನರಮೇಧವನ್ನು `ಮಾನವ ಕುಲದ ಮೇಲೆ ನಡೆದ ದಾಳಿ~ ಎಂದು ಫ್ರಾನ್ಸ್ ಬಣ್ಣಿಸಿದೆ.ಒಬಾಮ ಖಂಡನೆ: ಸಿರಿಯಾದಲ್ಲಿ ಅಧ್ಯಕ್ಷ ಅಸ್ಸಾದ್ ಬಣ್ಣಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಮಾನವಹಕ್ಕು ಉಲ್ಲಂಘನೆ ಮಾಡುತ್ತಿದ್ದು, ಇಂತಹ ವರ್ತನೆಯನ್ನು ತಾವು ಖಂಡಿಸುವುದಾಗಿ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.ತಕ್ಷಣವೇ ಅಲ್ಲಿ ರಾಜಕೀಯ ಸ್ಥಿತ್ಯಂತರಕ್ಕೆ ಅವಕಾಶ ಕಲ್ಪಿಸಬೇಕು ಎಂದೂ ಒಬಾಮ ಒತ್ತಾಯ ಮಾಡಿದ್ದಾರೆ. ಬಂಧುಗಳು, ಸ್ನೇಹಿತರನ್ನು ಕಳೆದುಕೊಂಡಿರುವ ಜನರಿಗೆ ಸಾಂತ್ವಾನ ಹೇಳುತ್ತಿರುವುದಾಗಿಯೂ ತಿಳಿಸಿದ್ದಾರೆ.

ಅಧಿಕಾರದಲ್ಲಿರಲು ಅಸ್ಸಾದ್‌ಗೆ ಯಾವುದೇ ಹಕ್ಕು ಇಲ್ಲ. ಆ ದೇಶದ ಜನರಷ್ಟೇ ಅಲ್ಲ, ಅಂತರರಾಷ್ಟ್ರೀಯ ಸಮುದಾಯ ಸಹ ಅವರ ವಿರುದ್ಧ ಇದೆ ಎಂದು ಒಬಾಮ ಹೇಳಿದ್ದಾರೆ.ಭದ್ರತಾ ಪಡೆಗಳು ನಡೆಸಿದ ನರಮೇಧ ವಿರುದ್ಧ ಸ್ಥಳೀಯ ಸಮನ್ವಯ ಸಮಿತಿ ಎರಡು ದಿನಗಳ ಪ್ರತಿಭಟನೆಗೆ ಕರೆ ನೀಡಿದೆ. ಜತೆಗೆ ಭದ್ರತಾ ಮಂಡಳಿ ನಿರ್ಣಯದ ವಿರುದ್ಧ `ವಿಟೊ~ ಚಲಾಯಿಸಿರುವ ಚೀನಾ ಮತ್ತು ರಷ್ಯಾದ ಕ್ರಮವನ್ನು ಖಂಡಿಸಿದೆ.ರಾಜತಾಂತ್ರಿಕ ಕಚೇರಿಯಲ್ಲಿ ದಾಂಧಲೆ (ಕ್ಯಾನ್‌ಬೆರಾ ವರದಿ): ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿನ ಸಿರಿಯಾ ರಾಜತಾಂತ್ರಿಕ ಕಚೇರಿಗೆ ನುಗ್ಗಿದ ಸಿರಿಯಾ ಪರ ಇರುವ ಜನರು ದಾಂಧಲೆ ನಡೆಸಿದ್ದಾರೆ.

ಅಲ್ಲದೆ ಮಧ್ಯ ಪ್ರಾಚ್ಯ ಮತ್ತು ಯೂರೋಪ್‌ಗಳಲ್ಲಿಯೂ ಸಿರಿಯಾ ರಾಜತಾಂತ್ರಿಕ ಕಚೇರಿಗಳ ಮೇಲೆ ದಾಳಿ ನಡೆದಿದೆ.ಈ ನಡುವೆ ಸಿರಿಯಾದಲ್ಲಿನ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿರುವ ಅರಬ್‌ಲೀಗ್, ಅಲ್ಲಿಗೆ ತನ್ನ ನಿಯೋಗವನ್ನು ಕಳುಹಿಸಲು ಕಷ್ಟವಾಗುತ್ತಿದೆ. ಈ ಭಾಗದಲ್ಲಿ (ಸಿರಿಯಾ) ಶಾಂತಿ ಮತ್ತು ಸ್ಥಿರತೆಯ ಅಗತ್ಯ ಇದೆ. ಆ ದೇಶದ ಸಾರ್ವಭೌಮತ್ವವನ್ನು ಉಳಿಸಿಕೊಂಡು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದೆ.ಚೀನಾ ಮತ್ತು ರಷ್ಯಾದ ಕ್ರಮಗಳು ಸಿರಿಯಾದಲ್ಲಿ ಹಿಂಸಾಚಾರ ಕೊನೆಗೊಳಿಸಲು ಇದ್ದ ಅವಕಾಶವನ್ನು ಹಾಳು ಮಾಡಿದಂತೆ ಆಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ನಿರ್ಣಯದ ಪರ ಭಾರತ

ನ್ಯೂಯಾರ್ಕ್ (ಐಎಎನ್‌ಎಸ್):
ಸಿರಿಯಾದಲ್ಲಿನ ಪರಿಸ್ಥಿತಿ ಹಾಗೂ ಅಧ್ಯಕ್ಷ ಬಶರ್- ಅಲ್ - ಅಸ್ಸಾದ್ ವಿರುದ್ಧ ಕ್ರಮ ಕೈಗೊಳ್ಳುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಕ್ಕೆ ಭಾರತ ಬೆಂಬಲ ವ್ಯಕ್ತಪಡಿಸಿದೆ. ಆದರೆ ರಷ್ಯಾ ಮತ್ತು ಚೀನಾಗಳು `ವಿಟೊ~ ಚಲಾವಣೆ ಮಾಡಿವೆ.ಭದ್ರತಾ ಮಂಡಳಿ ನಿರ್ಣಯ ಬೆಂಬಲಿಸಿದ ಭಾರತದ ಕ್ರಮಕ್ಕೆ ಅಮೆರಿಕ ಮೂಲದ ಮಾನವ ಹಕ್ಕುಗಳ ಸಂಘಟನೆ ನವದೆಹಲಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ. ನಿರ್ಣಯ ಬೆಂಬಲಿಸುವ ಮೂಲಕ ಭಾರತ ಸಿರಿಯಾದ ಜನರನ್ನು ಬೆಂಬಲಿಸಿದೆ ಎಂದೂ ಈ ಸಂಘಟನೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry