ಸೋಮವಾರ, ಏಪ್ರಿಲ್ 12, 2021
23 °C

ಸಿರಿಯಾ ಬಿಕ್ಕಟ್ಟಿಗೆ ಪರಿಹಾರ- ರಷ್ಯ, ಇರಾನ್ ಪಾತ್ರ ನಿರ್ಣಾಯಕ: ಅನ್ನಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ಯಾರಿಸ್ (ಎಎಫ್‌ಪಿ): ಸಿರಿಯಾದಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಕೊನೆಗಾಣಿಸಿ ಶಾಶ್ವತ ಶಾಂತಿಯನ್ನು ಮರು ಸ್ಥಾಪಿಸುವ ಮಹತ್ವದ ಕಾರ್ಯದಲ್ಲಿ ರಷ್ಯಾ ಮತ್ತು ಇರಾನ್ ಪಾತ್ರ ನಿರ್ಣಾಯಕ ಎಂದು ಅಂತರರಾಷ್ಟ್ರೀಯ ಸಮುದಾಯದ ಪ್ರತಿನಿಧಿ ಹಾಗೂ ವಿಶ್ವಸಂಸ್ಥೆಯ ಮಾಜಿ ಮಹಾಪ್ರಧಾನ ಕಾರ್ಯದರ್ಶಿ ಕೊಫಿ ಅನ್ನಾನ್ ಅಭಿಪ್ರಾಯಪಟ್ಟಿದ್ದಾರೆ.ಕಳೆದ 16 ತಿಂಗಳಿನಿಂದ ಅವ್ಯಾಹತವಾಗಿ ನಡೆದಿರುವ ನರಮೇಧ ಮತ್ತು ರಕ್ತಪಾತ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ತಮ್ಮ ಸಂಧಾನ ಯಶಸ್ವಿಯಾಗುವ ಭರವಸೆಯೂ ಇಲ್ಲ ಎಂದು ವಿಶ್ವಸಂಸ್ಥೆ ಮತ್ತು ಅರಬ್ ಲೀಗ್ ಪ್ರತಿನಿಧಿಯಾಗಿರುವ ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.ಸಿರಿಯಾ ಬಿಕ್ಕಟ್ಟಿಗೆ ಶಾಂತಿಯುತ ರಾಜಕೀಯ ಪರಿಹಾರ ಕಂಡುಹಿಡಿಯುವ ಉದ್ದೇಶದಿಂದ 3 ತಿಂಗಳಿನಿಂದ ನಿರಂತರವಾಗಿ ತಾವು ನಡೆಸಿರುವ ಸಂಧಾನ ಇದುವರೆಗೂ ಯಾವುದೇ ನಿರೀಕ್ಷಿತ ಫಲ ನೀಡಿಲ್ಲ. ಸಕಾರಾತ್ಮಕ ಫಲಿತಾಂಶ ಹೊರಹೊಮ್ಮುವ ಭರವಸೆಯೂ ಈಗ ತಮ್ಮಲ್ಲಿ ಉಳಿದಿಲ್ಲ ಎಂದು ಅವರು ನುಡಿದಿದ್ದಾರೆ.ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಆಡಳಿತದ ವಿರುದ್ಧ ಜಾಗತಿಕ ಸಮುದಾಯ ಕ್ರಮ ಕೈಗೊಳ್ಳುವುದಕ್ಕೆ ರಷ್ಯಾ ಮತ್ತು ಇರಾನ್ ಅಡ್ಡಿಯಾಗಿವೆ ಎಂದಿದ್ದಾರೆ.ಮಧ್ಯ ಪ್ರಾಚ್ಯದ ಮೇಲೆ ಸವಾರಿ ಮಾಡುವ ಉದ್ದೇಶ ಮತ್ತು ಇಸ್ರೇಲ್‌ಗೆ ನೆರವು ನೀಡುವ ಉದ್ದೇಶದಿಂದ ವಿಶ್ವಸಂಸ್ಥೆ ಮತ್ತು ಅದರ ಸಮಾನ ಮನಸ್ಕ ರಾಷ್ಟ್ರಗಳು ಬಶರ್ ಆಡಳಿತದ ವಿರುದ್ಧ ನಿಂತಿವೆ ಎಂದು ಇರಾನ್ ಅಧ್ಯಕ್ಷ ಮಹಮ್ಮದ್ ಅಹಮದಿನೇಜಾದ್ ಬಲವಾಗಿ ಟೀಕಿಸಿದ್ದಾರೆ.

 

ನಿಲ್ಲದ ರಕ್ತಪಾತ
ಬೀರತ್ ವರದಿ: ಈ ನಡುವೆ, ಸಿರಿಯಾದಲ್ಲಿ ರಕ್ತಪಾತ ಮುಂದುವರೆದಿದ್ದು ಬಂಡುಕೋರರು ಮತ್ತು ಸರ್ಕಾರಿ ಪಡೆಗಳ ನಡುವೆ ಕದನದಲ್ಲಿ ಭಾನುವಾರ ಮತ್ತೆ 17 ನಾಗರಿಕರು ಸೇರಿದಂತೆ ಕನಿಷ್ಠ 35 ಜನರು ಪ್ರಾಣ ಕಳೆದುಕೊಂಡಿದ್ದಾರೆ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.