ಸಿರಿಯಾ ಮೇಲೆ ದಾಳಿಗೆ ಸಿದ್ಧತೆ

7

ಸಿರಿಯಾ ಮೇಲೆ ದಾಳಿಗೆ ಸಿದ್ಧತೆ

Published:
Updated:

ವಾಷಿಂಗ್ಟನ್ (ಪಿಟಿಐ)/ (ಎಎಫ್‌ಪಿ): ಸಿರಿಯಾದ ಮೇಲೆ ಸತತ ಮೂರು ದಿನಗಳ ಕಾಲ ಮಿಂಚಿನ ಬಾಂಬ್ ಮತ್ತು ಕ್ಷಿಪಣಿ ದಾಳಿ ನಡೆಸಲು ಅಮೆರಿಕದ ಸೇನಾ ಪ್ರಧಾನ ಕಚೇರಿ ಪೆಂಟಗಾನ್ ಸಿದ್ಧತೆ ನಡೆಸುತ್ತಿದೆ ಎಂದು `ಲಾಸ್ ಏಂಜಲಿಸ್ ಟೈಮ್ಸ' ವರದಿ ಮಾಡಿದೆ.ಮೊದಲ ದಾಳಿಯಲ್ಲಿ ಉದ್ದೇಶಿತ ಕಟ್ಟಡ ಅಥವಾ ಸ್ಥಾವರ ನಾಶವಾಗದಿದ್ದರೆ, ಕೂಡಲೇ ಮತ್ತೊಂದು ದಾಳಿ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ಸಿರಿಯಾ ಅಧ್ಯಕ್ಷ ಬಶರ್ ಅಸಾದ್ ಅವರ ಸೇನಾ ಪಡೆಯೇ ಅಮೆರಿಕ ದಾಳಿಯ ಪ್ರಮುಖ ಗುರಿಯಾಗಿದ್ದು, ಎಲ್ಲೆಲ್ಲಿ ದಾಳಿ ಮಾಡಬೇಕು ಎಂಬುದನ್ನು ಈಗಾಗಲೇ ನಿರ್ಧರಿಸಲಾಗಿದೆ. ದಾಳಿ ಮಾಡಬೇಕಾಗಿರುವ ಸುಮಾರು 50 ಸ್ಥಳಗಳ ಪಟ್ಟಿಯನ್ನು ಪೆಂಟಗಾನ್ ಅಧಿಕಾರಿಗಳು ಶ್ವೇತಭವನಕ್ಕೆ ಕಳುಹಿಸಿದ್ದಾರೆ ಎಂದು ಪತ್ರಿಕೆ ತಿಳಿಸಿದೆ.ಮೆಡಿಟರೇನಿಯನ್ ಸಮುದ್ರದ ಪೂರ್ವ ಭಾಗದಲ್ಲಿ ಈಗ ಗಸ್ತು ನಡೆಸುತ್ತಿರುವ ಐದು ಯುದ್ಧ ನೌಕೆಗಳಿಂದ ಕ್ಷಿಪಣಿ ದಾಳಿಯ ಜತೆಗೆ ಯುದ್ಧ ವಿಮಾನಗಳ ಮೂಲಕ ಬಾಂಬ್ ದಾಳಿ ನಡೆಸುವುದರ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. 72 ತಾಸುಗಳ ಕಾಲ ಸತತವಾಗಿ ಕ್ಷಿಪಣಿ ಸುರಿಮಳೆ ಮಾಡಲು ಸೇನಾ ಅಧಿಕಾರಿಗಳು ಯೋಜನೆ ಸಿದ್ಧಪಡಿಸುತ್ತಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ದಾಳಿಗೆ ಬೆಂಬಲ ಪಡೆಯಲು ವಿಫಲವಾದ ನಂತರ ಒಬಾಮ ಮತ್ತು ಅವರ ನಿಕಟವರ್ತಿ ಅಧಿಕಾರಿಗಳು ದೇಶದ ಜನತೆಯ ಮತ್ತು ಅಮೆರಿಕ ಕಾಂಗ್ರೆಸ್‌ನ ಬೆಂಬಲ ಪಡೆಯಲು ಸತತ ಪ್ರಯತ್ನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪೆಂಟಗಾನ್ ಸಿರಿಯಾ ಮೇಲೆ ದಾಳಿ ನಡೆಸಲು ಕೊನೆ ಹಂತದ ಸಿದ್ಧತೆ ನಡೆಸುತ್ತಿದೆ.

ಈ ನಡುವೆ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಅವರು ಐರೋಪ್ಯ ಹಾಗೂ ಅರಬ್ ರಾಷ್ಟ್ರಗಳ ನಾಯಕರ ಬೆಂಬಲ ಸಂಪಾದಿಸಲು ಯತ್ನಿಸುತ್ತಿದ್ದಾರೆ.

ಮಾಲೂಲಾ ಪಟ್ಟಣ ಬಂಡುಕೋರರ ವಶ: ಬೈರೂತ್  (ವರದಿ) ಜಿಹಾದಿಗಳು ಸೇರಿದಂತೆ ಸಿರಿಯಾದ ಬಂಡುಕೋರರು ಡಮಾಸ್ಕಸ್‌ನ ಉತ್ತರ ಭಾಗದ ಐತಿಹಾಸಿಕ ಕ್ರೈಸ್ತರ ಪಟ್ಟಣವಾದ ಮಾಲೂಲಾವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮಾಲೂಲಾ ಪಟ್ಟಣದಲ್ಲಿ ಹೆಚ್ಚಿನವರು ಕ್ರೈಸ್ತರಾಗಿದ್ದು, ಏಸು ಕ್ರಿಸ್ತನ ಮಾತೃ ಭಾಷೆಯಾಗಿದ್ದ ಅರ್ಮೈಕ್ ಭಾಷೆಯಲ್ಲಿ ಇವರು ಮಾತನಾಡುತ್ತಾರೆ.ಇರಾನ್-ಇರಾಕ್ ನಾಯಕರ ಭೇಟಿ: (ಬಾಗ್ದಾದ್ ವರದಿ) ಸಚಿವರಾಗಿ ನೇಮಕಗೊಂಡ ನಂತರ ಇದೇ ಮೊದಲ ಬಾರಿಗೆ ವಿದೇಶ ಪ್ರವಾಸ ಮಾಡಿರುವ ಇರಾನ್ ಹಣಕಾಸು ಸಚಿವ ಮೊಹಮದ್ ಜಾವೇದ್ ಜರಿಫ್ ಅವರು ಬಾಗ್ದಾದ್‌ನಲ್ಲಿ ಇರಾಕ್ ಪ್ರಧಾನಿ ನುರಿ ಅಲ್-ಮಲಿಕಿ ಅವರ ಜತೆ ಸಿರಿಯಾ ಮೇಲೆ ಅಮೆರಿಕದ ಸಂಭಾವ್ಯ ದಾಳಿಯ ಬಗ್ಗೆ ಚರ್ಚಿಸಿದರು.ಸಿರಿಯಾ ಅಧ್ಯಕ್ಷ ಬಶರ್ ಅಸಾದ್ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಇರಾನ್, ಅಮೆರಿಕ ಮತ್ತು ಫ್ರಾನ್ಸ್‌ನ ಉದ್ದೇಶಿತ ಸೇನಾ ದಾಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಇರಾಕ್ ಮತ್ತು ಇರಾನ್ ಮುಖಂಡರ ನಡುವೆ ನಡೆಯುತ್ತಿರುವ ಮಾತುಕತೆಗೆ ಬಹಳ ಮಹತ್ವ ಬಂದಿದೆ.

ರಾಸಾಯನಿಕ ಅಸ್ತ್ರ ಬಳಕೆ: ಗೋಪ್ಯ ವೈದ್ಯಕೀಯ ಪರೀಕ್ಷೆ

ಲಂಡನ್ (ಪಿಟಿಐ): ಸಿರಿಯಾದಲ್ಲಿ ಬಂಡುಕೋರರನ್ನು ದಮನ ಮಾಡಲು ಅಸಾದ್ ಅವರ ನಿಯಂತ್ರಣದಲ್ಲಿರುವ ಸೇನಾ ಪಡೆಯು ಅಂಗವಿಕಲತೆ ಉಂಟು ಮಾಡುವ ವಿಷಾನಿಲವನ್ನು ಬಳಸಿದೆ ಎಂಬುನ್ನು ತನಿಖಾ ತಂಡವು ಪತ್ತೆಹಚ್ಚಿದ್ದು, ವೈದ್ಯಕೀಯ ಪರೀಕ್ಷೆಗಾಗಿ ವಿಷಾನಿಲ ಸಂತ್ರಸ್ತರಲ್ಲಿ ಕೆಲವರನ್ನು ಗೋಪ್ಯವಾಗಿ ಬ್ರಿಟನ್‌ಗೆ ಒಯ್ಯಲಾಗಿದೆ ಎನ್ನಲಾಗುತ್ತಿದೆ.

ಕಳೆದ ಆಗಸ್ಟ್ 21ರಂದು ಡಮಾಸ್ಕಸ್‌ನ ಪೂರ್ವಭಾಗದಲ್ಲಿ ಅಂಗವಿಕಲತೆ ಉಂಟು ಮಾಡುವ ಮಾರಕ ವಿಷಾನಿಲವನ್ನು (ರಾಸಾಯನಿಕ ಅಸ್ತ್ರ) ಪ್ರಯೋಗ ಮಾಡಿರುವುದು ಪತ್ತೆಯಾಗಿದೆ ಎಂದು ಸಿರಿಯಾ ಬಂಡಕೋರರ ಸಂಘಟನೆಯ ಅಧ್ಯಕ್ಷ ಅಹಮದ್ ಅಸಿ ಅಲ್ ಜರ್ಬಾ ಹೇಳಿದ್ದಾರೆ ಎಂದು `ಸಂಡೇ ಟೈಮ್ಸ' ವರದಿ ಮಾಡಿದೆ.ರಾಸಾಯನಿಕ ಅಸ್ತ್ರ ಬಳಕೆಯ ಪುರಾವೆ- ಅಮೆರಿಕನ್ನರ ಶಂಕೆ (ವಾಷಿಂಗ್ಟನ್ ವರದಿ): ಈ ಮಧ್ಯೆ, ಸಿರಿಯಾದಲ್ಲಿ ಅಧ್ಯಕ್ಷ ಬಶರ್ ಅಸಾದ್ ಅವರು ಬಂಡುಕೋರರನ್ನು ಹತ್ತಿಕ್ಕಲು ರಾಸಾಯನಿಕ ಅಸ್ತ್ರ ಬಳಸಿದ್ದರು ಎಂದು ಗುಪ್ತಚರ ಮಾಹಿತಿ ಇರುವುದಾಗಿ ಅಮೆರಿಕ ಸರ್ಕಾರ ಹೇಳುತ್ತಿದ್ದರೂ ಪುರಾವೆ ದೊರಕಿರುವ ಬಗ್ಗೆ ಅಮೆರಿಕದ ಪ್ರಜೆಗಳು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.ಉಪಗ್ರಹ ಸೆರೆ ಹಿಡಿದಿರುವ ಛಾಯಾಚಿತ್ರಗಳಿಂದ ರಾಸಾಯನಿಕ ಶಸ್ತ್ರಾಸ್ತ್ರ ಬಳಸಲಾಗಿದೆ ಎಂಬುದು ಗೊತ್ತಾಗಿದೆ ಎಂದು ಅಮೆರಿಕದ ಸೇನಾ ಗುಪ್ತಚರ ವಿಭಾಗವು ಹೇಳುತ್ತಿದ್ದರೂ ಅಮೆರಿಕದ ಸಂಸದರು ಮತ್ತು ಪ್ರಜೆಗಳು ನಂಬುತ್ತಿಲ್ಲ. ಇದರಿಂದ ಅಧ್ಯಕ್ಷ ಬರಾಕ್ ಒಬಾಮ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry