ಸಿರಿಯಾ ಸರ್ವಾಧಿಕಾರಿ ಪತ್ನಿಯ ದ್ವಂದ್ವಗಳು...

7

ಸಿರಿಯಾ ಸರ್ವಾಧಿಕಾರಿ ಪತ್ನಿಯ ದ್ವಂದ್ವಗಳು...

Published:
Updated:

ತನ್ನ ಪತಿ ಸಿರಿಯಾ ಅಧ್ಯಕ್ಷ ಬಷರ್-ಅಲ್- ಅಸದ್ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಕ್ಕಾಗಿ ಅವರ ಪತ್ನಿ ಅಸ್ಮಾ ಅಲ್ ಅಸದ್ ಈಗ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ.ಸಿರಿಯಾದ ಪ್ರಮುಖ ನಗರ ಹೋಮ್ಸನಲ್ಲಿ ವಿರೋಧಿ ಬಣಗಳ ಮೇಲೆ ಸರ್ಕಾರಿ ಪಡೆಗಳ ಬರ್ಬರ ಹಿಂಸಾಚಾರ ಮುಂದುವರಿಯುತ್ತಿರುವಾಗಲೂ ಆಕೆ ನೀಡಿದ ಈ ಹೇಳಿಕೆ `ಸರ್ವಾಧಿಕಾರಿಯರ ಪತ್ನಿಯರು~ ಎಂದಾದರೂ ತಮ್ಮ ಗಂಡಂದಿರನ್ನು ಹತೋಟಿಯಲ್ಲಿಡುವ ಪ್ರಯತ್ನ ಮಾಡಿದ್ದಾರೆಯೇ, ಅವರಿಗೆ ಅಂತಹ ಶಕ್ತಿ ಇದೆಯೇ ಎಂಬ ಪ್ರಶ್ನೆ ಉದ್ಭವಿಸಲು ಕಾರಣವಾಗಿದೆ.ತಮ್ಮ ಕಚೇರಿಯಿಂದ ಲಂಡನ್‌ನ `ಟೈಮ್ಸ~ ಪತ್ರಿಕೆಗೆ ಇ-ಮೇಲ್ ಕಳುಹಿಸಿರುವ ಅಸ್ಮಾ ಅಲ್ ಅಸದ್, ಸಿರಿಯಾದಲ್ಲಿ ನಾಗರಿಕ ದಂಗೆ ಆರಂಭವಾಗಿ ವರ್ಷ ಉರುಳಿದ ನಂತರ ಇದೇ ಮೊದಲ ಬಾರಿ ಬಹಿರಂಗವಾಗಿ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.

 

ಈ ಪತ್ರದಲ್ಲಿ ತಮ್ಮ ಪತಿ ಅಧ್ಯಕ್ಷ ಬಷರ್-ಅಲ್- ಅಸದ್ ಅವರ ಬೆನ್ನಿಗೆ ನಿಂತಿರುವುದಾಗಿ ಹೇಳಿರುವ ಅಸ್ಮಾ, ಹಿಂಸಾಚಾರಕ್ಕೆ ಬಲಿಯಾದವರಿಗೆ ಸಾಂತ್ವನ ಹೇಳುತ್ತಿರುವುದಾಗಿಯೂ ತಿಳಿಸಿದ್ದಾರೆ.ಮಾನವ ಹಕ್ಕು ಕಾರ್ಯಕರ್ತರ ಪ್ರಕಾರ 2,000ರಷ್ಟು ಭದ್ರತಾ ಸಿಬ್ಬಂದಿ ಮತ್ತು ಸರ್ಕಾರಿ ಪಡೆಗಳ ಬಲ ಪ್ರಯೋಗದಿಂದ ಈವರೆಗೆ ಸಿರಿಯಾದಲ್ಲಿ 7,000 ಜನ ನಾಗರಿಕರು ಸತ್ತಿದ್ದಾರೆ. ಸರ್ವಾಧಿಕಾರಿ ಸರ್ಕಾರದ ವಿರೋಧಿ ಗುಂಪುಗಳು ಈಗ ಅಸ್ಮಾ ಅಸಾದ್ ಆಷಾಢಭೂತಿತನವನ್ನು ಖಂಡಿಸುತ್ತಿವೆ.ಲಂಡನ್‌ನ ಚಿಂತಕರ ಚಾವಡಿ ಕ್ಯಾಂಟಮ್ ಹೌಸ್‌ನಲ್ಲಿ ಸಹಾಯಕ ಫೆಲೊ ಆಗಿರುವ ರೈಮ್ ಅಲ್ಲಾಫ್ `ಇದರಲ್ಲಿ ಅಚ್ಚರಿಯೇನೂ ಇಲ್ಲ~ ಎಂದು ಹೇಳಿದ್ದಾರೆ.`ನಾವೇಕೆ ಆಕೆಯನ್ನು ಖಂಡಿಸಬೇಕು? ಆಕೆ ಏನು ಮಾಡಲೂ ಸಾಧ್ಯವಿಲ್ಲ.

ನಡೆಯುತ್ತಿರುವುದು ತಪ್ಪು ಎಂದು ಆಕೆಯ ಮಸ್ಸಿನಲ್ಲಿ ಅನ್ನಿಸುತ್ತಿದ್ದರೂ ಆಕೆ ಅಸಹಾಯಕಳು. `ಇದು ಸರಿಯಲ್ಲ. ಇದನ್ನು ನಾನು ಒಪ್ಪಿಕೊಳ್ಳುವುದಿಲ್ಲ~ ಎಂದು ನಾಲ್ಕು ಗೋಡೆಗಳ ಮಧ್ಯೆ ಆಕೆ ಹೇಳಿದರೂ ಅದು ನಮಗೆ ತಿಳಿಯದು~ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು~ ಎನ್ನುತ್ತಾರೆ ಅಲ್ಲಾಫ್. ಆದರೆ, ಸರ್ವಾಧಿಕಾರಿಗಳನ್ನು ಅವರ ಪತ್ನಿಯರು ಖಂಡಿಸಿದ ಉದಾಹರಣೆಗಳು ಇತಿಹಾಸದಲ್ಲಿ ಬೇಕಾದಷ್ಟಿವೆ.90ರ ದಶಕದ ಆರಂಭದಲ್ಲಿ ಪೆರು ಅಧ್ಯಕ್ಷ ಆಲ್ಬರ್ಟೊ ಫ್ಯುಜಿಮೊರಿಯನ್ನು ಆತನ ಪತ್ನಿ ಸುಸಾನಾ ಹಿಗುಚಿ `ನಿರಂಕುಶ ಸರ್ವಾಧಿಕಾರಿ~ ಎಂದು ಜರೆದಿದ್ದರು.. ಆಲ್ಬರ್ಟೊ ಆಕೆಗೆ ವಿಚ್ಛೇದನ ನೀಡಿ ತನ್ನ ಮಗಳಿಗೆ ದೇಶದ ಮೊದಲ ಮಹಿಳೆಯ ಪಟ್ಟ ನೀಡಿದ್ದರು.ಸೇನೆಯ ಸಹಾಯದಿಂದ ಆತ ದೇಶದ ಸಂಸತ್ತು ಮತ್ತು ನ್ಯಾಯಾಂಗವನ್ನು ವಜಾ ಮಾಡಿದ್ದರು. ಪತಿಯ ವಿರುದ್ಧ ರಾಜಕೀಯವಾಗಿ ಸೆಣಸಾಡುವಲ್ಲಿ ಹಿಗುಚಿ ವಿಫಲಳಾದಳು. ಆದರೆ, 2009ರಲ್ಲಿ ಮಾನವ ಹಕ್ಕು ದಮನಕ್ಕಾಗಿ ಆಲ್ಬರ್ಟೊವಿಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.ವಾಷಿಂಗ್ಟನ್‌ನ `ಅಮೆರಿಕ ಶಾಂತಿ ಸಂಸ್ಥೆ~ಯ ಪ್ರಾಧ್ಯಾಪಕಿ ಡಾ. ಜೆಲ್ಕೆ ಬೋಸ್ಟೆನ್ ಪ್ರಕಾರ `ಹಿಗುಚಿ ಎಲ್ಲ ಮಹಿಳೆಯರಿಗೆ ಸ್ಫೂರ್ತಿ. ಆಕೆಯದು ದಿಟ್ಟ ಹೆಜ್ಜೆ.ತಾತ್ಕಾಲಿಕವಾಗಿಯಾದರೂ ಆಕೆಯ ಹೆಜ್ಜೆ ಮಹತ್ವದ್ದಾಗಿತ್ತು. ಸೇನೆ ಹಾಗೂ ಜನರ ಬೆಂಬಲ ಎರಡೂ ಸರ್ವಾಧಿಕಾರಿ ಆಲ್ಬೋರ್ಟೊಗೆ ಇತ್ತು. ಆದರೆ, ಸಮಾಜದ ಸಣ್ಣ ಭಾಗವಾಗಿದ್ದ ಮಹಿಳಾ ಸಂಘಟನೆಗಳ ಬೆಂಬಲ ಮಾತ್ರ ಆಕೆಗೆ ದೊರಕಿತು~ ಎಂದು ಶ್ಲಾಘಿಸುತ್ತಾರೆ ಡಾ. ಜೆಲ್ಕೆ. `ಆಫ್ರಿಕಾದಲ್ಲಿ ಇದಕ್ಕಿಂತ ಭಿನ್ನವಾದ ಉದಾಹರಣೆಗಳು ದೊರಕುತ್ತವೆ~ ಎಂದು ಹೇಳುತ್ತಾರೆ `ರಾಯಲ್ ಆಫ್ರಿಕನ್ ಸೊಸೈಟಿ~ಯ ರಿಚರ್ಡ್ ಡೊಡೆನ್.ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆಯ ಮೊದಲ ಪತ್ನಿ ಸ್ಯಾಲಿ ಮುಗಾಬೆ ಸಂವೇದನಾಶೀಲ ಮಹಿಳೆಯಾಗಿದ್ದರು. ಪತಿಯ ಮೇಲೆ ಪ್ರಭಾವ ಹೊಂದಿದ್ದರು. ಆತ ಅಧಿಕಾರ ದುರ್ಬಳಕೆ ಮಾಡದಂತೆ, ಮುಗ್ಧರ ಮೇಲೆ ಬಲ ಪ್ರಯೋಗಿಸದಂತೆ ತಡೆ ಹಿಡಿದಿದ್ದರು.ಸ್ಯಾಲಿ ಮೃತಳಾದ ಮೇಲೆ ಮುಗಾಬೆ, ಗ್ರೇಸ್‌ಳನ್ನು ಮದುವೆಯಾದಾಗ ಎಲ್ಲವೂ ಬದಲಾಯಿತು ಅನ್ನುವವರೂ ಇದ್ದಾರೆ. ಗ್ರೇಸ್ ಬಹುತೇಕ ಸರ್ವಾಧಿಕಾರಿಗಳ ಪತ್ನಿಯರಂತೆ ವೈಭವೋಪೇತ ಜೀವನ ನಡೆಸತೊಡಗಿದಳು.ಆದರೆ, ಈಗ ಬಂಧನದಲ್ಲಿರುವ ಐವರಿ ಕೋಸ್ಟ್ ನಾಯಕ ಲಾರೆಂಟ್ ಗ್ಯಾಗ್ಬೊನ ಪತ್ನಿ ಸಿಮೋನ್ ಗ್ಯಾಗ್ಬೊಳಂತೆ, ಗ್ರೇಸ್ ರಾಜಕೀಯದ ಮೇಲೆ ಹಿಡಿತ ಹೊಂದಿರಲಿಲ್ಲ. ಮಾನವ ಹಕ್ಕುಗಳನ್ನು ದಮನ ಮಾಡಿದ್ದಕ್ಕಾಗಿ ಲಾರೆಂಟ್ ಗ್ಯಾಗ್ಬೊ ಮೇಲೆ ಗುರುತರ ಆರೋಪ ಮಾಡಲಾಗಿದ್ದು, ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನಲ್ಲಿ ವಿಚಾರಣೆಗೆ ಕಾಯುತ್ತಿದ್ದಾನೆ.ಸಿಮೋನ್, ಲಾರೆಂಟ್ ಗ್ಯಾಗ್ಬೊನ ಉಗ್ರ ರೂಪ ಎಂದು ಡೊಡೆನ್ ಹೇಳುತ್ತಾರೆ. ರಾಜಕಾರಣಿಯಾಗಿ ಆತ ಒಮ್ಮಮ್ಮೆ ಅತ್ತಿತ್ತ ನಿಲುವು ಸಡಿಲಿಸುತ್ತಿದ್ದರು. ಆಕೆ ಮಾತ್ರ ಉಗ್ರವಾದಿಯಾಗಿದ್ದಳು. ಗ್ಯಾಗ್ಬೊ ಸಹ  ಕಟುವಾದ ಭಾಷೆ ಬಳಸುತ್ತಿದ್ದಳು.ರಾಜಕಾರಣಿಯ ಹಾಗೂ ಅಧ್ಯಕ್ಷರ ಪತ್ನಿಯ ಎರಡೂ ಪಾತ್ರಗಳನ್ನು ನಿಭಾಯಿಸುತ್ತಿದ್ದಳು. ಪತ್ರಿಕೆಗಳಲ್ಲಿ ಸದಾ ಕಾಣಿಸಿಕೊಳ್ಳುತ್ತಿದ್ದ ಆಕೆ, ವಿದೇಶಿಗರ ಕುರಿತು ತೀವ್ರ ಅಸಹನೆ ಪ್ರದರ್ಶಿಸುತ್ತಿದ್ದಳು.ಪತ್ನಿಯರು ತಮ್ಮ ವರ್ತನೆಯಿಂದ ಅಧಿಕಾರದಲ್ಲಿರುವವರ ಹೆಸರು ಕೆಡಿಸಿದ ಸಾಕಷ್ಟು ಉದಾಹರಣೆಗಳಿವೆ. `ಮಾಡರ್ನ್ ಟೈರಂಟ್ಸ್: ದಿ ಪವರ್ ಆ್ಯಂಡ್ ಪ್ರಿವಲೆನ್ಸ್ ಆಫ್ ಇವಿಲ್ ಇನ್ ಅವರ್ ಏಜ್~ ಪುಸ್ತಕ ಬರೆದ ಡ್ಯಾನಿಯಲ್ ಚಿರಾಟ್ `ಬಹುತೇಕ ಪ್ರಕರಣಗಳಲ್ಲಿ ಹೀಗೆ ಹೇಳಲು ಸಾಧ್ಯವಿಲ್ಲ~ ಅನ್ನುತ್ತಾರೆ.`ಸರ್ವಾಧಿಕಾರಿಗಳ ಕೃತ್ಯಕ್ಕೆ ಪೂರ್ವಗ್ರಹಪೀಡಿತ ಭಾವನೆಯಿಂದಾಗಿ ಅವರ ಪತ್ನಿಯರನ್ನು ಹೊಣೆ ಮಾಡಲಾಗುತ್ತದೆ~ ಎಂದು ಡ್ಯಾನಿಯಲ್ ಅಭಿಪ್ರಾಯ ಪಡುತ್ತಾರೆ.

ಅಂಕಣಕಾರ್ತಿ ಯಾಸ್ಮಿನ್ ಅಲಿಭಾಯ್ ಬ್ರೌನ್ `ಮಹಿಳೆಯರನ್ನು ಕೆಲವೊಮ್ಮೆ ಅನವಶ್ಯಕವಾಗಿ ದೂರಲಾಗುತ್ತದೆ~ ಎಂದು ಒಪ್ಪಿಕೊಳ್ಳುತ್ತಾರೆ.ಆದರೆ, `ತನ್ನ ಅಧಿಕಾರದಿಂದ ದೇಶವನ್ನು ಕಟ್ಟುವ ಅಥವಾ ಮುರಿಯುವ ಬಲ ಹೊಂದಿರುವ ಅಪ್ರಾಮಾಣಿಕ ವ್ಯಕ್ತಿಯ ಜತೆ ನಿಂತವರೆಲ್ಲ ಈ ದೂರು ಕೇಳಲೇಬೇಕು~ ಎನ್ನುತ್ತಾರೆ ಅವರು.`ಚೀನಾದ ಸಾಂಸ್ಕೃತಿಕ ಕ್ರಾಂತಿಗೆ ಕಾರಣವಾದ ಮೇಡಂ ಮಾವೊ ತರಹದ ಲೇಡಿ ಮ್ಯಾಕ್‌ಬೆತ್‌ಗಳು, ಯುಗೋಸ್ಲಾವಿಯಾದ ಸ್ಲೊಬೊಡನ್ ಮಿಲೊಸೆವಿಕ್ ಬೆನ್ನ ಹಿಂದೆ ನಿಂತಿದ್ದ ಎಡಪಂಥೀಯ ಮಿರಾ ಮಾರ್ಕೊವಿಕ್ ತರಹದ ಪ್ರಭಾವಿ ಮಹಿಳೆಯರು ಇದ್ದೇ ಇರುತ್ತಾರೆ. ಆದರೆ, `ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುವ ಪತ್ನಿಯರನ್ನು ಖಂಡಿಸಲೇಬೇಕಿದೆ~ ಎನ್ನುತ್ತಾರೆ ಯಾಸ್ಮಿನ್ ಬ್ರೌನ್.`ಅವರೂ ಬಲಿಪಶುಗಳೇ ಎಂಬುದು ನಮಗೆ ತಿಳಿದಿಲ್ಲ. ಅವರಿಗೂ ಕಷ್ಟಗಳಿವೆ ಎಂಬುದು ನನಗೆ ಅರ್ಥವಾಗುತ್ತದೆ. ಆದರೆ, ಸಿರಿಯಾದಲ್ಲಿ ಆಗುತ್ತಿರುವಂತೆ ಆಗುತ್ತಿದ್ದಲ್ಲಿ ಅದನ್ನು ಕ್ಷಮಿಸಲು ನನಗೆ ಸಾಧ್ಯವಿಲ್ಲ. ಅಸ್ಮಾ ಅತಿಯಾದ ಒತ್ತಡದಲ್ಲಿ ಇರಬಹುದು. `ಹಾಗೆ ಹೇಳಿಕೆ ನೀಡದಿದ್ದಲ್ಲಿ ನಿನಗೆ ಕಷ್ಟವಾಗಲಿದೆ~ ಎಂಬ ಬೆದರಿಕೆಯೂ ಇರಬಹುದು. ಆದರೆ, ಸುಸಾನ್ ಮುಬಾರಕ್ (ಈಜಿಪ್ಟ್‌ನ ಹೋಸ್ನಿ ಮುಬಾರಕ್ ಪತ್ನಿ) ಹಾಗೂ ಅಸ್ಮಾ ಇಬ್ಬರೂ ಪ್ರಭಾವಿ ಮಹಿಳೆಯರು. ಅವರು ದುರ್ಬಲ ಅಥವಾ ದಮನಿತ ಮಹಿಳೆಯರಲ್ಲ.~

`ಇವರೆಲ್ಲ ಲಿಬಿಯಾದ ಮಾಜಿ ನಾಯಕ ಮುಹಮ್ಮರ್ ಗಢಾಪಿ ಪತ್ನಿಯರಂತೆ ಅಲ್ಲ. ಇವರು ತಾವು ಆಧುನಿಕ ಅರಬ್ ಮಹಿಳೆಯರು ಎಂದು ತೋರಿಸಿಕೊಂಡವರು. ಆದರೆ, ನಿಜವಾಗಿ ಮಾತನಾಡಬೇಕಾದ, ಕೆಲಸಮಾಡಬೇಕಾದ ಹೊತ್ತಿನಲ್ಲಿ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ.~`ಒಟ್ಟೊಮನ್ ಸಾಮ್ರಾಜ್ಯದ ದೊಡ್ಡ ಚಕ್ರವರ್ತಿಗಳೆಲ್ಲ ತಮ್ಮ ತಾಯಿ ಅಥವಾ ಪತ್ನಿಯ ಆಣತಿಯಂತೆ ನಡೆದುಕೊಳ್ಳುತ್ತಿದ್ದರು. ಹಾಗಾಗಿ ಅಲ್ಲಿ ಮಹಿಳೆಯರು ರಾಜಕೀಯದಲ್ಲಿ ಭಾಗಿಯಾಗಲು ಸಾಧ್ಯವಿದೆ. ಆದರೆ, ಅವರೀಗ ತಮ್ಮ ಕಾಲಕ್ಕಿಂತ ಹಿಂದೆ ಉಳಿದಿದ್ದಾರೆ. ಇವತ್ತು ಅದು ಸಾಧ್ಯವಿಲ್ಲ. ಅವರೆಲ್ಲ ದಮನಿತರು~ ಎಂದು ವಿಷಾದಿಸುತ್ತಾರೆ ಯಾಸ್ಮಿನ್ ಬ್ರೌನ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry