ಸೋಮವಾರ, ಏಪ್ರಿಲ್ 19, 2021
33 °C

ಸಿರಿವಂತರ ಕಾರಿನ ಸನ್‌ಫಿಲ್ಮ್‌ನ್ನೂ ತೆಗೆಸಿ: ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಕಾರುಗಳ ಸನ್‌ಫಿಲ್ಮ್ ತೆಗೆಸುವಲ್ಲಿ ದೆಹಲಿ ಪೊಲೀಸರು ತಾರತಮ್ಯ ಮಾಡುತ್ತಿದ್ದಾರೆ. ಸಿರಿವಂತರ ಕಾರುಗಳಿಂದ ಸನ್‌ಫಿಲ್ಮ್ ತೆಗೆಸಲು ಒತ್ತಾಯಿಸುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಈ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

`ನಿಜವಾಗಿಯೂ ತೊಂದರೆಗೆ ಒಳಗಾಗುತ್ತಿರುವವರು ಮಧ್ಯಮವರ್ಗದ ಜನ. ಅಪಘಾತ ಮಾಡಿದ ಸಿರಿವಂತರ ಕಾರುಗಳಲ್ಲಿ ಸನ್‌ಫಿಲ್ಮ್ ಹಾಗೆಯೇ ಇದೆ~ ಎಂದು ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್, ಸ್ವತಂತ್ರಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

`ಕೋರ್ಟ್ ಆದೇಶವನ್ನು ಸರಿಯಾಗಿ ಪಾಲಿಸುವಂತೆ ನಿಮ್ಮ ಪೊಲೀಸರಿಗೆ ಹೇಳಿ~ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಗೌರವ್ ಬ್ಯಾನರ್ಜಿ ಅವರಿಗೆ ನ್ಯಾಯಪೀಠ ಸೂಚಿಸಿತು.

ದೇಶದಾದ್ಯಂತ ಕಾರು ಮತ್ತು ಇತರ ವಾಹನಗಳ ಕಿಟಕಿ, ಹಿಂಭಾಗಕ್ಕೆ ಅಳವಡಿಸಲಾದ ಸನ್‌ಫಿಲ್ಮ್ ತೆಗೆಸುವಂತೆ ಏಪ್ರಿಲ್ 27ರಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಆದೇಶ ಮಾರ್ಪಡಿಸುವಂತೆ ಹಾಗೂ ಅದರಲ್ಲಿರುವ ಕೆಲ ಗೊಂದಲಕಾರಿ ಅಂಶಗಳಿಗೆ ಸ್ಪಷ್ಟನೆ ನೀಡುವಂತೆ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಪೀಠ ತನ್ನ ಆದೇಶ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿತು.

ಸನ್‌ಫಿಲ್ಮ್ ತಯಾರಿಕಾ ಕಂಪೆನಿಗಳು ಸಲ್ಲಿಸಿರುವ ಅರ್ಜಿಗಳ ಕುರಿತಾದ ಆದೇಶವನ್ನು ಕಾಯ್ದಿಟ್ಟ ನ್ಯಾಯಪೀಠ, ಮೋಟಾರು ವಾಹನ ಕಾಯ್ದೆಯ ಪ್ರಕಾರ ವಾಹನಗಳಿಗೆ ಕೇವಲ ಗಾಜು ಇರಬೇಕು ಎಂದು ಹೇಳಲಾಗಿದೆ. ಅಲ್ಲಿ ಮತ್ತೇನೂ ಇರುವಂತಿಲ್ಲ ಎಂದು ಸ್ಪಷ್ಟಪಡಿಸಿತು.

ಸನ್‌ಫಿಲ್ಮ್ ತಯಾರಿಕಾ ಕಂಪೆನಿಗಳು ತಮ್ಮ ವಾದ ಆಲಿಸದೇ ಕೋರ್ಟ್ ಈ ಆದೇಶ ಹೊರಡಿಸಿದೆ. ಇದರಿಂದ ತಮ್ಮ ವ್ಯವಹಾರಕ್ಕೆ ನಷ್ಟವಾಗುತ್ತದೆ ಎಂದು ಮನವಿ ಸಲ್ಲಿಸಿದ್ದವು.

`1988ರ ಮೋಟಾರು ವಾಹನ ಕಾಯ್ದೆಯ 100 (2)ನೇ ಕಲಂ ಪ್ರಕಾರ ಮುಂಭಾಗ ಹಾಗೂ ಹಿಂಭಾಗದ ಗಾಜಿನಲ್ಲಿ ಶೇ 70ರಷ್ಟು ಬೆಳಕು ಹಾಯುವಂತಿರಬೇಕು. ಕಿಟಕಿ ಗಾಜಿನಲ್ಲಿ ಶೇ 50ರಷ್ಟು ಬೆಳಕು ಹಾಯುವಂತಿರಬೇಕು. ನಾವು ಕಾಯ್ದೆಯನ್ನು ಬದಲಾಯಿಸಿಲ್ಲ. ಅದಕ್ಕೆ ಅರ್ಥವಿವರಣೆ ನೀಡಿದ್ದೇವೆ ಅಷ್ಟೇ. ಕಾಯ್ದೆ ಬದಲಿಸಬೇಕು ಎಂದಾದಲ್ಲಿ ನೀವು ಶಾಸಕಾಂಗದ ಬಳಿ ಹೋಗಬೇಕು~ ಎಂದು ಅರ್ಜಿದಾರರಿಗೆ ಕೋರ್ಟ್ ಸೂಚಿಸಿತು.

ಸನ್‌ಫಿಲ್ಮ್  ಉತ್ಪಾದಕರಾದ ಗರ್ವಾರೆ ಪಾಲಿಯೆಸ್ಟರ್ ಪರವಾಗಿ ಹಿರಿಯ ವಕೀಲ ಸೋಲಿ ಸೋರಾಬ್ಜಿ ವಾದಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.