ಸಿರಿವಂತ ಸಾಹಿತಿಯ ಸ್ಮಾರಕದ ದುಸ್ಥಿತಿ

7

ಸಿರಿವಂತ ಸಾಹಿತಿಯ ಸ್ಮಾರಕದ ದುಸ್ಥಿತಿ

Published:
Updated:
ಸಿರಿವಂತ ಸಾಹಿತಿಯ ಸ್ಮಾರಕದ ದುಸ್ಥಿತಿ

ಜಯದೇವಿತಾಯಿ ಲಿಗಾಡೆ ಕನ್ನಡದ ಪ್ರಸಿದ್ಧ ಕವಯಿತ್ರಿ, ಹೋರಾಟಗಾರ್ತಿ. 1974 ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದರು.ಇದೇ 23ಕ್ಕೆ ಅವರು ಜನಿಸಿ  (ಜನನ 1912 ರ ಜೂನ್ 23) ನೂರು ವರ್ಷ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಅವರ ಸಮಾಧಿ ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ತೀರಾ ದುಸ್ಥಿತಿಯಲ್ಲಿದೆ. ಮೇಲ್ವಿಚಾರಣೆ ಇಲ್ಲದೆ, ಗಿಡಗಂಟೆಗಳಲ್ಲಿ ಮುಚ್ಚಿಹೋಗಿ ಅನಾದರಕ್ಕೆ ಒಳಗಾಗಿದೆ.ಲಿಗಾಡೆಯವರು ಜನಿಸಿದ್ದು ಮಹಾರಾಷ್ಟ್ರದ ಸೊಲ್ಲಾಪುರದ ಶ್ರೀಮಂತ ಮನೆತನದಲ್ಲಿ. ಅರಮನೆಯಂಥ ಮನೆ `ಇಂದ್ರಭುವನ~ದಲ್ಲಿ ವಾಸಿಸುತ್ತಿದ್ದರು. ಅದು ಈಗ ಅಲ್ಲಿ ಮಹಾನಗರ ಪಾಲಿಕೆಯ ಕಚೇರಿಯಾಗಿದೆ. ಕೊನೆಗಾಲದಲ್ಲಿ ವಾಸಿಸಿದ್ದ ಬಸವಕಲ್ಯಾಣದಲ್ಲಿನ ಮನೆ `ಭಕ್ತಿಭವನ~ ಸಹ ಬೇರೆಯವರ ಅಧೀನದಲ್ಲಿದೆ.

 

ಹೀಗೆ ಎರಡೂ ಸ್ಥಳದಲ್ಲಿ ಅವರದ್ದು ಎನ್ನುವ ಕುರುಹು ಇಲ್ಲದಂತಾಗಿದೆ.

ಹಾಗೆ ನೋಡಿದರೆ, ಕನ್ನಡ ಮತ್ತು ಮರಾಠಿಯಲ್ಲಿ ಸಾಹಿತ್ಯ ರಚಿಸಿ ಎರಡೂ ಭಾಷಿಕರ ಮಧ್ಯೆ ಅವರು ಸೇತುವೆಯಾಗಿ ನಿಂತಿದ್ದರು. ಆದರೂ ಯಾರೂ ಅವರನ್ನು ತಮ್ಮವರೆಂದು ಭಾವಿಸಲಿಲ್ಲ ಎನ್ನುವುದು ವಿಪರ್ಯಾಸದ ಸಂಗತಿ.ಮಹಾರಾಷ್ಟ್ರದವರು ಇವರನ್ನು ಕನ್ನಡದ ಬರಹಗಾರ್ತಿ ಎಂದೇ ಗುರುತಿಸುತ್ತಾರೆ. ಹೀಗಿದ್ದಾಗ ಕರ್ನಾಟಕ ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ಕನ್ನಡ ಸಂಘಟನೆಗಳು ಏನಾದರೂ ಮಾಡಬಹುದಾಗಿತ್ತು. ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ಮಹಿಳಾ ಅಧ್ಯಕ್ಷರಾಗಿದ್ದವರ ಜನ್ಮ ಶತಮಾನೋತ್ಸವದ ನೆನಪೇ ಯಾರಿಗೂ ಇಲ್ಲದಂತಾಗಿದೆ.ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ನಡೆಸಿದ್ದ ಈ ಧೀಮಂತ ಮಹಿಳೆ ಶಿಕ್ಷಣ ಮತ್ತು ಆಡಳಿತದಲ್ಲಿ ಕನ್ನಡ ಭಾಷೆಯ ಅನುಷ್ಠಾನ, ಸೊಲ್ಲಾಪುರ ಮತ್ತು ಇತರೆ ಕನ್ನಡ ಭಾಷಿಕರ ಪ್ರದೇಶಗಳು ಕರ್ನಾಟಕಕ್ಕೆ ಸೇರಲೇಬೇಕು ಎಂದು ಹಟ ಹಿಡಿದು ಕುಳಿತಿದ್ದರು. ಅಪ್ಪಟ ಕನ್ನಡಾಭಿಮಾನಿ ಆಗಿರುವಂತೆಯೇ ಶರಣ ತತ್ವನಿಷ್ಠರೂ ಆಗಿದ್ದರು.

ತ್ರಿಪದಿಯಲ್ಲಿ `ಸಿದ್ಧರಾಮ ಪುರಾಣ~ ಬರೆದರು. `ಜಯಗೀತ~ `ಸಾವಿರದ ಪದಗಳು~ `ತಾರಕ ತಂಬೂರಿ~ ಮುಂತಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಬಸವಣ್ಣ, ಸಿದ್ಧರಾಮ ಮತ್ತು ಇತರೆ ಶರಣರ ವಚನಗಳನ್ನು ಮರಾಠಿಗೆ ಅನುವಾದಿಸಿದರು. ಕನ್ನಡ ಸಾಹಿತ್ಯದ ಪ್ರಕಟಣೆಗಾಗಿ `ಕನ್ನಡ ಕೋಟೆ~ ಎನ್ನುವ ಪ್ರಕಾಶನ ಸಂಸ್ಥೆ ಸ್ಥಾಪಿಸಿದರು. ಹೀಗೆ ಕನ್ನಡಕ್ಕಾಗಿ ಏನೆಲ್ಲ ಮಾಡಿದ ಅವರು ಸೊಲ್ಲಾಪುರ ಕರ್ನಾಟಕಕ್ಕೆ ಸೇರುವುದಿಲ್ಲ ಎಂಬುದು ಗೊತ್ತಾದಾಗ 1982 ರಲ್ಲಿ ಬಸವಕಲ್ಯಾಣಕ್ಕೆ ಬಂದು ಕೊನೆಯುಸಿರಿನವರೆಗೂ ಇಲ್ಲಿಯೇ ಇದ್ದರು.1986 ರ ಜುಲೈ 25 ರಂದು ನಿಧನರಾದರು. ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು.ಅವರು ವಾಸವಾಗಿದ್ದ ಮನೆಯ ಹಿಂದುಗಡೆಯೇ ಅವರ ಸಮಾಧಿ `ಸಿದ್ಧಶೈಲ~ ಕಟ್ಟಲಾಯಿತು. ತ್ರಿಪುರಾಂತ ಕೆರೆಯ ದಂಡೆಯಲ್ಲಿನ ಪ್ರಶಾಂತ ವಾತಾವರಣದಲ್ಲಿ ನೂತನ ಅನುಭವ ಮಂಟಪದ ರಸ್ತೆಯಲ್ಲಿ ಇದನ್ನು ಕಾಣಬಹುದು.ಹಾಗೆಂದು ಇಲ್ಲಿ ಯಾವುದೇ ನಾಮಫಲಕ ಇಲ್ಲ. ಇದರ ಸುತ್ತ ಗಿಡಗಂಟಿಗಳು ಬೆಳೆದಿವೆ, ಕಸ ಕಡ್ಡಿ ತುಂಬಿಕೊಂಡಿದೆ. ಮನೆಯನ್ನು ಬೇರೆಯವರು ಖರೀದಿಸಿ ವಾಸಿಸುತ್ತಿದ್ದಾರೆ. ಈ ಸ್ಥಳಕ್ಕೆ ಯಾರಾದರೂ ಬಂದರೆ ಇದೇ ಲಿಗಾಡೆಯವರ ಮನೆ ಎಂದು ಗುರುತು ಹಿಡಿಯುವುದು ಸಹ ಕಷ್ಟವಾಗಿದೆ.ಅವರ ಮನೆ ಬರೀ ಮನೆ ಆಗಿರಲಿಲ್ಲ. ಗ್ರಂಥಾಲಯವಾಗಿತ್ತು. ಕನ್ನಡ ಮತ್ತು ಮರಾಠಿಯ ಅನೇಕ ಮಹತ್ವದ ಕೃತಿಗಳನ್ನು ಅವರು ಸಂಗ್ರಹಿಸಿ ಇಟ್ಟಿದ್ದರು. ಸಂಶೋಧಕರು ಮತ್ತು ಬರಹಗಾರರು ಇದಕ್ಕಾಗಿ ಅವರ ಮನೆಗೆ ಭೇಟಿ ಕೊಡುತ್ತಿದ್ದರು. ಪಟ್ಟಣದಿಂದ ದೂರದಲ್ಲಿದ್ದ ಅವರ ಸುಂದರವಾದ ಪುಟ್ಟ ಮನೆ ಪ್ರವಾಸಿ ತಾಣವೇ ಆಗಿತ್ತು.ಆದರೆ ಬರಬರುತ್ತ ಆ ಮನೆ ಜಯದೇವಿತಾಯಿ ಅವರದ್ದು ಎಂಬುದನ್ನೇ ಜನರು ಮರೆತು ಹೋಗುವಂತಾಗಿದೆ. ಅಲ್ಲಿನ ಗ್ರಂಥಗಳು ಎಲ್ಲಿವೆಯೋ ಯಾರಿಗೂ ಗೊತ್ತಿಲ್ಲ.

ತಾನು ಕನ್ನಡತಿ, ಕನ್ನಡಿಗರು ತನ್ನ ಬಂಧುಗಳು ಎಂದು ಭಾವಿಸಿ ಅವರು ಈ ನಾಡಿಗೆ ಬಂದು ನೆಲೆಸಿದರು. ನಾಡು ನುಡಿಗೆ ಸೇವೆ ಸಲ್ಲಿಸಿದರು. ಅಂಥವರಿಗಾಗಿ ಸ್ಥಳೀಯರಾಗಲಿ, ಸರ್ಕಾರವಾಗಲಿ ಒಂದು ಸಣ್ಣ ಸ್ಮಾರಕವನ್ನೂ  ನಿರ್ಮಿಸಿಲ್ಲ. ಅವರ ಮನೆ ಮತ್ತು ಸಮಾಧಿ ಸ್ಥಳದ ಸಂರಕ್ಷಣೆಗೂ ಯಾರೂ ಪ್ರಯತ್ನಿಸಿಲ್ಲ. ಒಂದು ವೃತ್ತ ಇಲ್ಲವೆ ಭವನಕ್ಕೆ ಹೆಸರೂ ಇಟ್ಟಿಲ್ಲ. ಒಟ್ಟಾರೆ ಅವರನ್ನು ಎಲ್ಲರೂ ಮರೆತೇ ಬಿಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry