ಸಿಲಿಂಡರ್‌ಗಾಗಿ ಗ್ರಾಹಕರ ಪರದಾಟ

7

ಸಿಲಿಂಡರ್‌ಗಾಗಿ ಗ್ರಾಹಕರ ಪರದಾಟ

Published:
Updated:

ಜಮಖಂಡಿ: ಸ್ಥಳೀಯ ಭಾರತ ಗ್ಯಾಸ್ ಡೀಲರ್‌ಮಳಿಗೆ ಎದುರು ಅಡುಗೆ ಅನಿಲ ಸಿಲಿಂಡರ್‌ಗಾಗಿ ಸುಮಾರು ಒಂದು ತಿಂಗಳಿನಿಂದ ಗ್ರಾಹಕರು ರಾತ್ರಿಯಿಡಿ  ಸರದಿಯಲ್ಲಿ ನಿಲ್ಲುವ ಮತ್ತು ಮಲಗುವ ಹಾಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಸಿಲಿಂಡರ್ ಕೊರತೆ ನಗರದ ಗ್ರಾಹಕರನ್ನು  ಕಂಗೆಡಿಸಿ ನಿದ್ದೆಗೆಡಿಸಿದೆ. ನಗರ ಹಾಗೂ ಗ್ರಾಮೀಣ ಭಾಗದ ಗ್ರಾಹಕರು ರಾತ್ರಿ 9 ಗಂಟೆಗೆ ಸರತಿಯಲ್ಲಿ ನಿಲ್ಲಲು ಆರಂಭಿಸುತ್ತಾರೆ. ಮಹಿಳೆಯರು, ವಯೋವೃದ್ಧರು ಸೇರಿದಂತೆ ಬಹುತೇಕ ಎಲ್ಲ ವಯೋಮಾನದವರು ಸರದಿಯಲ್ಲಿ ಕಾಣುತ್ತಾರೆ.ರಾತ್ರಿಯಿಡಿ ಸರದಿಯಲ್ಲಿಯೇ ಮಲಗುತ್ತಾರೆ. ಸಿಲಿಂಡರ್ ತುಂಬಿಕೊಂಡು ಲಾರಿ ಬಂದರೆ ಸರಿ. ಇಲ್ಲದಿದ್ದರೆ ಮನೆಗೆ ಮರಳಬೇಕು. ಈಗ ಮೊದಲಿನಂತೆ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತಿಲ್ಲ. ಏಕೆಂದರೆ ಗ್ರಾಮೀಣ ಭಾಗಕ್ಕೆ ವಾಹನ ಮೂಲಕ ತೆರಳಬೇಕಲ್ಲ. ಸಿಲಿಂಡರ್ ತುಂಬಿದ ಲಾರಿ ಬಂದರೂ ಕೂಡ ಎಲ್ಲರಿಗೂ ಸಿಲಿಂಡರ್ ಸಿಗುವುದಿಲ್ಲ.ಲಾರಿಯ ಒಂದು ಲೋಡ್‌ನಲ್ಲಿ 200 ಸಿಲಿಂಡರ್‌ಗಳು ಬರುತ್ತವೆ. ಆ ಪೈಕಿ  ಸರದಿಯಲ್ಲಿ ಕಾಯ್ದು ಕುಳಿತ 100 ಮಂದಿ ಗ್ರಾಹಕರಿಗೆ ಮಾತ್ರ ಸಿಲಿಂಡರ್‌ಗಳು ವಿತರಣೆ ಆಗುತ್ತವೆ. ಉಳಿದ 100 ಸಿಲಿಂಡರ್‌ಗಳು ನಗರದಲ್ಲಿ ಹೋಮ್ ಡೆಲಿವರಿಗಾಗಿ ಹೋಗುತ್ತವೆ. ಸಿಲಿಂಡರ್ ಅಲಭ್ಯತೆಗೆ ಮೂಲ ಕಾರಣ ತಿಳಿದು ಬಂದಿಲ್ಲ.

 

ಗ್ರಾಹಕ ಹಿತರಕ್ಷಣಾ ಕಾಯ್ದೆ ಉಲ್ಲಂಘನೆ ಆಗುತ್ತಿದೆ. ಇದಕ್ಕೆಲ್ಲ ಭಾರತ ಗ್ಯಾಸ್ ಕಂಪೆನಿ ಪರವಾಗಿ ಇಡೀ ತಾಲ್ಲೂಕಿಗೆ ಏಕೈಕ ವಿತರಕರು ಇದ್ದು, ಸಿಲಿಂಡರ್ ವಿತರಣೆಯಲ್ಲಿ ಏಕಸ್ವಾಮ್ಯವೇ ಕಾರಣ ಎಂದು ದೂರಲಾಗಿದೆ.

ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ಮಾರಾಟ ಮಾಡುತ್ತಿರಬಹುದು.     ಇಲ್ಲದಿದ್ದರೆ ಸಿಲಿಂಡರ್‌ಗಳನ್ನು ಬೇರೊಬ್ಬರಿಗೆ ಸಾಗಿಸಿ ಅಲ್ಲಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರಬಹುದು ಎಂದು ಸರದಿಯಲ್ಲಿ ನಿಂತ  ಗ್ರಾಹಕರು ದೂರಿದರು. ಗೋದಾಮಿನಲ್ಲಿ ಸಿಲಿಂಡರ್ ಸಂಗ್ರಹ ಬಹಳ ವಿದೆ. ಕೃತಕ ಅಭಾವ ಸೃಷ್ಟಿಸ ಲಾಗಿದೆ ಎಂಬ ಕೂಗು ಕೂಡ ಗ್ರಾಹಕರಿಂದ ಕೇಳಿ ಬರುತ್ತಿದೆ. ಒಂದು ತಿಂಗಳಿನಿಂದ ಯಾರೊಬ್ಬ ಅಧಿಕಾರಿ ಅಥವಾ ಜನಪ್ರತಿನಿಧಿ ಈ ಸಮಸ್ಯೆ ಬಗ್ಗೆ ಗಮನ ಹರಿಸದಿರುವುದು ಗ್ರಾಹಕರ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.ಈ ಕುರಿತು ಸರಕಾರದ ಹಿರಿಯ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಈಗಲಾದರೂ ಗಮನ ಹರಿಸಿ ಗ್ರಾಹಕರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.ಪ್ರತಿದಿನ 100 ಸಿಲಿಂಡರ್‌ಗಳನ್ನು ಮಾತ್ರ ಮಾರಾಟ ಮಾಡುವುದಾದರೆ ಅಷ್ಟೇ ಜನ ಗ್ರಾಹಕರಿಗೆ ಆದ್ಯತೆಯ ಮೇರೆಗೆ ಮೊದಲು ಬಂದವರಿಗೆ 1 ರಿಂದ 100 ರ ವರೆಗೆ ಕೂಪನ್ ವಿತರಿಸುವ ವ್ಯವಸ್ಥೆ ಮಾಡಿ ಕೂಪನ್ ಪಡೆದವರಿಗೆ ಮಾತ್ರ ಸಿಲಿಂಡರ್ ಮಾರಾಟ ಮಾಡುವ ವ್ಯವಸ್ಥೆಯಾದರೂ ಜಾರಿಯಾದರೆ ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸಬಹುದು ಎಂದು ಗ್ರಾಹಕರೇ ಸಲಹೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry