ಸಿಲಿಂಡರ್ ಪಡೆಯಲು ಜನರ ಪರದಾಟ

7

ಸಿಲಿಂಡರ್ ಪಡೆಯಲು ಜನರ ಪರದಾಟ

Published:
Updated:

ಮುಂಡರಗಿ: ನಿಗದಿತ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ದೊರೆಯದೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಸಾವಿರಾರು ಎಚ್‌ಪಿ ಗ್ಯಾಸ್ ಗ್ರಾಹಕರು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದು, ವಿತರಕರಿಗೂ, ಸಂಬಂದಪಟ್ಟ ಅಧಿಕಾರಿಗಳಿಗೂ ಹಾಗೂ  ಸರ್ಕಾರಕ್ಕೂ ಜನತೆ ಶಾಪ ಹಾಕುತ್ತಿದ್ದಾರೆ.

 

ಸಿಲಿಂಡರ್ ಪಡೆದುಕೊಳ್ಳಲು ಗ್ರಾಹಕರು ಒಂದು ತಿಂಗಳು ಅಥವಾ 15 ದಿನ ಮೊದಲೇ ಸಿಲಿಂಡರ್ ಬುಕ್ ಮಾಡಬೇಕು.

 

ಬುಕ್ ಮಾಡಿದ ನಂತರ  ವಾರ ಪೂರ್ತಿ ಸಿಲಿಂಡರ್ ವಾಹನ ಬರುವುದನ್ನು ಚಾತಕ ಪಕ್ಷಿಯಂತೆ ಕಾಯುತ್ತಾ ಕುಳಿತುಕೊಂಡು ವಾಹನ ಬಂದ ನಂತರ ಸರದಿಯಲ್ಲಿ ಖಾಲಿ ಸಿಲಿಂಡರ್ ಹಿಡಿದುಕೊಂಡು ನಿಲ್ಲಬೇಕು ಅಥವಾ ಗುಂಪಿನಲ್ಲಿ ಹೋರಾಡಿ ಸಿಲಿಂಡರ್ ಪಡೆದುಕೊಳ್ಳಬೇಕು. ಅಷ್ಟಾದರೂ ಗ್ರಾಹಕರಿಗೆ ಸಿಲಿಂಡರ್ ದೊರೆತರೆ ದೊರೆಯಿತು ಇಲ್ಲದಿದ್ದರೆ ಇಲ್ಲ!.  ಗ್ರಾಹಕರಿಗೆ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮೊಬೈಲ್ ಅಥವಾ ಆನ್‌ಲೈನ್‌ನಲ್ಲಿ ಸಿಲಿಂಡರ್ ಬುಕ್ ಮಾಡಿ, ಮನೆ ಬಾಗಿಲಿಗೆ ಸಿಲಿಂಡರ್ ತರಿಸಿಕೊಳ್ಳಬಹುದು ಎಂದು ಹೇಳುತ್ತಿದೆ. ಕಳೆದ ಹಲವು ವರ್ಷಗಳಿಂದ ಮುಂಡರಗಿ ತಾಲ್ಲೂಕಿನಲ್ಲಿ ಮಾತ್ರ ಹೋರಾಟ ಮಾಡದೆ ಸಿಲಿಂಡರ್ ದೊರೆಯುವುದಿಲ್ಲ ಎನ್ನುವುದು ಎಲ್ಲ ಗ್ರಾಹಕರಿಗೂ ಖಾತ್ರಿಯಾಗಿದೆ.ಗದಗ, ಶಿರಹಟ್ಟಿ, ಬೆಳ್ಳಟ್ಟಿ, ಕೊಪ್ಪಳ, ಹೂವಿನಹಡಗಲಿ ಮೊದಲಾದ ಅಕ್ಕಪಕ್ಕದ ನಗರಗಳಲ್ಲಿ ಗ್ರಾಹಕರು ಬೇಕೆಂದಾಗ ಬೇಕಾದಷ್ಟು ಸಿಲಿಂಡರ್‌ಗಳನ್ನು ಪಡೆದುಕೊಳ್ಳಬಹುದಾಗಿದ್ದು, ತಾಲ್ಲೂಕಿನ ಗ್ರಾಹಕರು ಮಾತ್ರ ಸಿಲಿಂಡರ್ ಸಹವಾಸವೇ ಸಾಕೆಂದು ಸ್ಟೋವ್ ಮತ್ತು ಕಟ್ಟಿಗೆ ಒಲೆಗಳ ಮೊರೆ ಹೋಗಿದ್ದಾರೆ.  ಪ್ರತಿಬಾರಿ ಸಿಲಿಂಡರ್ ವಾಹನ ಬಂದಾಗಲೆಲ್ಲ ಪಟ್ಟಣದಲ್ಲಿ ಗ್ರಾಹಕರ ನಡುವೆ ಗಲಾಟೆ ಉಂಟಾಗುತ್ತಿದ್ದು, ಒಂದು ಸಿಲಿಂಡರ್ ಪಡೆದುಕೊಳ್ಳಲು ಗ್ರಾಹಕರೂ ವಾರ ಪೂರ್ತಿ ಕಾಯಬೇಕಾಗಿದೆ. ಸರಕಾರಿ ಉದ್ಯೋಗಿ ಗಳನ್ನು ಒಳಗೊಂಡಂತೆ ದಿನನಿತ್ಯ ಹೊರಗಡೆ ಕೆಲಸಕ್ಕೆ ತೆರಳುವವರಿಗೆ ಇದರಿಂದ ತುಂಬಾ ತೊಂದರೆಯಾಗಿದೆ.ಸಿಲಿಂಡರ್ ಸಹವಾಸವೇ ಬೇಡವೆನಿಸ ತೊಡಗಿದೆ. ಅಸಮರ್ಪಕ ಸಿಲಿಂಡರ್ ಪೂರೈಕೆ ಕುರಿತಂತೆ ಸಾರ್ವಜನಿಕರು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ದಿಢೀರ್ ಪ್ರತಿಭಟನೆ ನಡೆಸಿ ಮನವಿ ಮಾಡಿಕೊಂಡಿದ್ದು, ಇದುವರೆಗೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.   ಈ ಕುರಿತು ಭಾನುವಾರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ತಹಶೀಲ್ದಾರ ರಮೇಶ ಕೋನರಡ್ಡಿ `ಸಿಲಿಂಡರ್ ಪೂರೈಕೆ ಹಾಗೂ ವಿತರಣೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸ್ಥಳೀಯ ಎಚ್‌ಪಿ ಗ್ಯಾಸ್ ಏಜಂಟರಿಗೆ ಹಲವಾರು ಬಾರಿ ತಿಳಿಸಿ ಆ ಕುರಿತಂತೆ  ನೋಟಿಸ್‌ಗಳನ್ನು ನೀಡಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಸಿಲಿಂಡರ್ ಪೂರೈಕೆಯ ಸಮಸ್ಯೆ ಕುರಿತಂತೆ ಚರ್ಚಿಸಲು ಹುಬ್ಬಳ್ಳಿಯ ಮಾರಾಟ ಪ್ರತಿನಿಧಿಯವರು ಪಟ್ಟಣಕ್ಕೆ ಭೇಟಿ ನೀಡಿದ್ದರು.ಎಲ್ಲವನ್ನೂ ಪರಿಸೀಲಿಸಿದ ನಂತರ ಹತ್ತು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಹೋದವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ನಂತರ ಸಿಲಿಂಡರ್ ವಿತರಣೆ ಹಾಗೂ ಪೂರೈಕೆಯನ್ನು ಸರಿಪಡಿಸುವ ಕುರಿತಂತೆ ಬೆಳಗಾವಿ ವಲಯ ಅಧಿಕಾರಿಗಳಿಗೆ, ಸಂಸದರಿಗೆ, ಕಮಿಷನರ್ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಅವರ ಉತ್ತರವನ್ನು ನೋಡಿಕೊಂಡು ಕೊನೆಯದಾಗಿ ಕೇಂದ್ರ ಇಂಧನ ಸಚಿವರಿಗೆ ಪತ್ರ ಬರೆಯಲಾಗುವುದು~ ಎಂದು ತಿಳಿಸಿದರು.                                                           

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry