ಭಾನುವಾರ, ಏಪ್ರಿಲ್ 11, 2021
21 °C

ಸಿಲ್ಕ್ ಸಿಟಿಯಲ್ಲಿ ದೇವವನ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ದೇವವನ ಹಾಗೂ ವೃಕ್ಷವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಅಂದಾಜು 150 ಕೋಟಿ ಅನುದಾನ ಮೀಸಲಿರಿಸಲಾಗಿದೆ ಎಂದು ಬೆಂಗಳೂರು ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ತಿಳಿಸಿದರು.‘ಸಿಲ್ಕ್ ಸಿಟಿ’ ಖ್ಯಾತಿಯ ರಾಮನಗರದಲ್ಲಿ ಅರಣ್ಯ ಇಲಾಖೆ ನಿರ್ಮಿಸಲು ಉದ್ದೇಶಿಸಿರುವ ‘ದೇವವನ’ ಮತ್ತು ‘ವೃಕ್ಷವನ’ ಪ್ರದೇಶದ ಸ್ಥಳ ಪರಿಶೀಲನೆ ನಡೆಸಿದ ಅವರು ನಂತರ ಸುದ್ದಿಗಾರರ ಜತೆ ಮಾತನಾಡಿದರು.ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಈ ಎರಡೂ ಬಗೆಯ ವನಗಳು ಇರಬೇಕು ಎಂಬುದು ಅರಣ್ಯ ಸಚಿವ ಸಿ.ಎಚ್.ವಿಜಯ್ ಶಂಕರ್ ಅವರ ಚಿಂತನೆಯಾಗಿದೆ. ಈ ಸಂಬಂಧ ಈಗಾಗಲೇ ರಾಮನಗರ ಮತ್ತು ಕೋಲಾರದಲ್ಲಿ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಅವರು ವಿವರಿಸಿದರು.ತಿರುಪತಿ ಮಾದರಿಯಲ್ಲಿ ಹಸಿರೀಕರಣ: ರಾಮನಗರದ ಇತಿಹಾಸ ಪ್ರಸಿದ್ಧ ಶ್ರೀರಾಮದೇವರ ಬೆಟ್ಟದಲ್ಲಿ ದೇವವನ ನಿರ್ಮಿಸಲಾಗುವುದು. ಇಲ್ಲಿರುವ 850 ಎಕರೆ ಅರಣ್ಯ ಭೂಮಿಯನ್ನು ಬಳಸಿಕೊಂಡು ರಾಮದೇವರ ಬೆಟ್ಟವನ್ನು ತಿರುಪತಿಯ ಬೆಟ್ಟಗಳ ಮಾದರಿಯಂತೆ ಹಸಿರೀಕರಣ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.ರಾಮದೇವರ ಬೆಟ್ಟವನ್ನು ಹತ್ತಿ ಶ್ರೀರಾಮ ದೇವರ ದರ್ಶನ ಪಡೆದ ಅವರು ಬೆಟ್ಟದ ಮೇಲಿನಿಂದ ರಮಣೀಯವಾದ ಪ್ರಕೃತಿ ಸೌಂದರ್ಯವನ್ನು ಸವಿದರು. ಈ ಭಾಗದಲ್ಲಿನ ಪ್ರಾಣಿ ಮತ್ತು ಪಕ್ಷಿ ಸಂಕುಲಕ್ಕೆ ಯಾವುದೇ ರೀತಿಯಲ್ಲಿಯೂ ಧಕ್ಕೆಯಾಗದಂತೆ ಎಚ್ಚರವಹಿಸಲಾಗುವುದು. ಅಲ್ಲದೆ ಪ್ರಾಣಿ- ಪಕ್ಷಿಗಳಿಗೆ ಆಹಾರ ನೀಡಬಹುದಾದ ಹಣ್ಣು ಹಂಪಲಿನ ಗಿಡ ಮರಗಳನ್ನು ಬೆಟ್ಟದ ಸುತ್ತ ನೆಡಲಾಗುವುದು ಎಂದು ಅವರು ಹೇಳಿದರು.ಈ ಭಾಗದಲ್ಲಿ ಬೀಳುವ ಮಳೆ ನೀರು ವ್ಯರ್ಥವಾಗಿ ಹರಿದು ಹೋಗದಂತೆ ನೋಡಿಕೊಳ್ಳಲಾಗುವುದು. ಅದಕ್ಕಾಗಿ ಮಳೆ ನೀರು ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಪ್ರಾಣಿ ಪಕ್ಷಿಗಳಿಗೆ ಕಾಡಿನಲ್ಲಿ ನೀರು ದೊರೆಯುವಂತೆ ಮಾಡಲು ಕೃತಕ ಹೊಂಡಗಳನ್ನು ನಿರ್ಮಿಸಲಾಗುವುದು ಎಂದರು.ರಾಮನಗರದ ಸುತ್ತಲಿನ ಬೆಟ್ಟ ಗುಡ್ಡಗಳ ರೀತಿಯಲ್ಲಿಯೇ 20 ವರ್ಷದ ಹಿಂದೆ ತಿರುಪತಿ ಬೆಟ್ಟಗುಡ್ಡಗಳು ಇದ್ದವು. ಆದರೆ ಅಲ್ಲಿನ ಸರ್ಕಾರ, ತಿರುಪತಿ ತಿರುಮಲ ದೇವಾಲಯ ಟ್ರಸ್ಟ್ ಹಾಗೂ ಟ್ರಸ್ಟ್‌ನ ಅರಣ್ಯ ಇಲಾಖೆ ಕೈಗೊಂಡ ಕ್ರಮಗಳಿಂದಾಗಿ ಇಂದು ತಿರುಪತಿ ಬೆಟ್ಟ ಹಸಿರಿನಿಂದ ಕಂಗೊಳಿಸುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಒಂದೊಂದು ದೇವವನವನ್ನು ನಿರ್ಮಿಸುವ ಆಶಯ ಸಚಿವರದ್ದಾಗಿದೆ ಎಂದು ಅವರು ತಿಳಿಸಿದರು.ತಿರುಪತಿಯಲ್ಲಿ ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ವಿಷಯ ತಿಳಿದುಕೊಂಡು ಬರಲು ಶೀಘ್ರದಲ್ಲಿಯೇ ರಾಜ್ಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ತಿರುಪತಿಗೆ ಭೇಟಿ ನೀಡಲಿದ್ದು, ಸಂಬಂಧಿಸಿದವರಿಂದ ಸೂಕ್ತ ಮಾಹಿತಿ ಪಡೆದುಕೊಂಡು ಬರಲಿದೆ ಎಂದು ಅವರು ಹೇಳಿದರು.ರಾಮನಗರದ ಕೆಂಗಲ್ ಬಳಿ ಇರುವ ಚಿಕ್ಕಮಣ್ಣುಗುಡ್ಡೆಯ 300 ಎಕರೆ ಜಾಗದಲ್ಲಿ ವೃಕ್ಷವನ ನಿರ್ಮಿಸಲು ನಿರ್ಧರಿಸಲಾಗಿದೆ ಎಂದರು.ಒಂದೂವರೆ ತಿಂಗಳಲ್ಲಿ ಚಾಲನೆ: ದೇವವನ ಮತ್ತು ವೃಕ್ಷವನಗಳಿಗೆ ಸಂಬಂಧಿಸಿದಂತೆ 15ರಿಂದ 20 ದಿನದಲ್ಲಿ ನೀಲನಕಾಶೆ ಸಿದ್ಧಪಡಿಸಲಾಗುವುದು. ನಂತರ ಒಂದೂವರೆ ತಿಂಗಳಲ್ಲಿ ಈ ಎರಡೂ ಬಗೆಯ ವನಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಎರಡು ಮೂರು ವರ್ಷಗಳಲ್ಲಿ ವನ ನಿರ್ಮಿಸಲಾಗುವುದು. ಈ ವನಗಳ ಲಾಲನೆ, ಪೋಷಣೆ ಮತ್ತು ಸಂರಕ್ಷಣೆಯ ಜವಾಬ್ದಾರಿಯನ್ನು ದೇವಾಲಯಗಳ ಟ್ರಸ್ಟ್, ಸ್ಥಳೀಯರು ಹಾಗೂ ಪರಿಸರ ತಜ್ಞರ ಸಮಿತಿಯೊಂದಕ್ಕೆ ನೀಡಲಾಗುವುದು ಎಂದು ಅವರು ತಿಳಿಸಿದರು.ರಾಮದೇವರ ಬೆಟ್ಟದಲ್ಲಿ ಅಪರೂಪದ ರಣ ಹದ್ದುಗಳು ಇವೆ. ದೇವವನ ನಿರ್ಮಾಣದಿಂದ ಅವುಗಳಿಗೆ ಹೆಚ್ಚಿನ ಅನುಕೂಲ ಆಗುತ್ತದೆ ಎಂಬ ನಿರೀಕ್ಷೆ ಇದೆ. ಅಲ್ಲದೆ ಈ ಬೆಟ್ಟವನ್ನು ರಣಹದ್ದು ಸಂರಕ್ಷಣಾ ವಲಯ ಹಾಗೂ ಹಂದಿ ಗುಂದಿ ಬೆಟ್ಟವನ್ನು ಕರಡಿ ಅಭಯಾರಣ್ಯ ಮಾಡಬೇಕು ಎಂಬ ಪ್ರಸ್ತಾವನೆ ಇದೆ. ಅದು ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಂತರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು ಎಂದು ಅವರು ಹೇಳಿದರು.ಪ್ರಸ್ತುತ ರಾಜ್ಯದಲ್ಲಿ ಶೇ 20ರಷ್ಟು ಅರಣ್ಯ ಪ್ರದೇಶ ಇದೆ. ಎಲ್ಲ ಜಿಲ್ಲೆಗಳಲ್ಲಿಯೂ ದೇವವನ ಮತ್ತು ವೃಕ್ಷವನ ನಿರ್ಮಿಸುವುದರಿಂದ ಜನರಿಗೆ, ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುವುದರ ಜತೆಗೆ ರಾಜ್ಯದ ಅರಣ್ಯ ಪ್ರದೇಶದ ವ್ಯಾಪ್ತಿಯೂ ವಿಸ್ತಾರವಾಗಲಿದೆ ಎಂದು ಅವರು ತಿಳಿಸಿದರು.ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಗೀತಾಂಜಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸತ್ಯನಾರಾಯಣ, ಶ್ರೀನಿವಾಸ್, ವಲಯ ಅರಣ್ಯಾಧಿಕಾರಿ ತಿಮ್ಮರಾಯಪ್ಪ, ವನ ರಕ್ಷಕ ಗೋವಿಂದಯ್ಯ, ಅರಣ್ಯ ಸರ್ವೇ ಅಧಿಕಾರಿ ದೇವರಾಜ್ ಮೊದಲಾದವರು ಸ್ಥಳ ಪರಿಶೀಲನೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.