ಸಿಲ್ಕ್ ಸೊಬಗು

7

ಸಿಲ್ಕ್ ಸೊಬಗು

Published:
Updated:

ಗಿಜಿಗುಡುತ್ತಿದ್ದ ವಾತಾವರಣದಲ್ಲಿ ಸಣ್ಣಗೆ ಹಾಡು ಕೇಳಿಬರುತ್ತಿತ್ತು. ವೇದಿಕೆಯ ಹತ್ತಿರವಿದ್ದ ಬಣ್ಣಬಣ್ಣದ ದೀಪ ಮಿನುಗಲು ಶುರುವಾದಾಗ ಅಲ್ಲಿದ್ದವರ ಮಾತು ನಿಂತಿತು. ಗುಲಾಬಿ ಬಣ್ಣದ, ಅಂಚಿನಲ್ಲಿ ಹರಳಿನ ವಿನ್ಯಾಸ ಇರುವ ಸೀರೆ ತೊಟ್ಟು ತುಸು ನಡು ಬಳುಕಿಸಿತ್ತಾ ಬಂದಳು ಬೆಡಗಿ. ಅವಳ ಸೀರೆಯ ರಂಗು ಅಲ್ಲಿದ್ದವರ ಕಣ್ಸೆಳೆಯಿತು. ತುಸು ಮುಂದೆ ಬಂದ ಅವಳು ಕಣ್ಣು ಮಿಟುಕಿಸಿದಾಗ ಅವಳ ಕಣ್ಣಂಚಿನಲ್ಲೂ ಗುಲಾಬಿ ರಂಗು.ಯಾವ ಮದುಮಗಳಿಗೂ ಕಡಿಮೆ ಇಲ್ಲವೆಂಬಂತೆ ಇದ್ದ ಅವಳೊಂದಿಗೆ ಕಡುಗೆಂಪು ಬಣ್ಣದ ಶರ್ಟ್- ಬಿಳಿಬಣ್ಣದ ಪಂಚೆಯಲ್ಲಿ ಹುಡುಗನೊಬ್ಬ ಬಂದಾಗ ಅವರಿಬ್ಬರ ಜೋಡಿಗಿಂತ ಅವರಿಬ್ಬರು ಧರಿಸಿದ ಉಡುಗೆಯ ಮೇಲೆ ಎಲ್ಲರ ಕಣ್ಣಿತ್ತು. ಹುಡುಗ ಕೇರಳದ ಸ್ಟೈಲ್‌ನಲ್ಲಿ ಇದ್ದ.ಈ ಜೋಡಿ ಕಂಡುಬಂದದ್ದು ಲಲಿತ್ ಅಶೋಕ್ ಹೋಟೆಲ್‌ನಲ್ಲಿ. `ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ಆಫ್ ಇಂಡಿಯಾ' ಆಯೋಜಿಸಿದ `ಸಿಲ್ಕ್ ಮಾರ್ಕ್ ಎಕ್ಸ್‌ಪೋ 2012' ಫ್ಯಾಷನ್ ಶೋನಲ್ಲಿ ರೂಪದರ್ಶಿಗಳೆಲ್ಲಾ ರೂಪಂ ಸಿಲ್ಕ್ಸ್ ಅಂತರರಾಷ್ಟ್ರೀಯ ಮದುವೆ ಸಂಗ್ರಹದ ಸೀರೆ ಉಟ್ಟು ಮಿಂಚುತ್ತಿದ್ದರು.ಒಂದು ಜೋಡಿ ಬಂದು ವೇದಿಕೆಯ ಮೇಲೆ ಸೀರೆಯ ರಂಗು ಪ್ರದರ್ಶಿಸಿ ಹೋದಾಗ, ಇನ್ನೊಂದು ಜೋಡಿ ಯಾವಾಗ ಬರುವುದೋ ಎಂದು ಕಾತರದಿಂದ ಕಾಯುತ್ತಿದ್ದರು. ಒಬ್ಬರ ನಂತರ ಒಬ್ಬರು ಒಂದೊಂದು ನೂತನ ಶೈಲಿಯಲ್ಲಿ ವೇದಿಕೆಯ ಮೇಲೆ ಕಾಣಿಸಿಕೊಂಡಾಗ `ಅವಳ ಸೀರೆ ನೋಡು', `ಆ ಸೆರಗಿನ ಅಂಚು ಚೆನ್ನಾಗಿದೆ', `ನೆಟ್ಟೆಡ್ ರವಿಕೆ ಅದಕ್ಕೆ ಚೆನ್ನಾಗಿ ಒಪ್ಪುತ್ತದೆ' ಎಂಬಿತ್ಯಾದಿ ಪ್ರತಿಕ್ರಿಯೆಗಳು ಕುಳಿತವರಿಂದ ಬಂದವು.ಮುಡಿಗೆ ಕನಕಾಂಬರ, ನಾಭಿಯಿಂದ ಕೆಳಗೆ ಸುತ್ತಿದ್ದ ಸೀರೆ ಉಟ್ಟಿದ ಆ ರೂಪದರ್ಶಿಯ ಬಳುಕುವ ನಡುವನ್ನು ಹಿಡಿದು ಹುಡುಗನು ಕ್ಯಾಟ್‌ವಾಕ್ ಮಾಡಿದಾಗ ಚಪ್ಪಾಳೆಯ ಸದ್ದು. ವೇದಿಕೆಯ ಮೇಲೆ ಅವರಿಬ್ಬರು ಬಂದು ಹೋದಾಗ ಕ್ಯಾಮೆರಾಗಳಿಂದ ಮಿಂಚು ಮೂಡಲಾರಂಭಿಸಿತು. ಅವಳ ಕಪೋಲದ ರಂಗು ಅಲ್ಲಿಯ ದೀಪದಿಂದ ಮತ್ತಷ್ಟೂ ಮೋಹಕವಾಗಿ ಕಾಣುತ್ತಿತ್ತು. ಅರೆಬಿರಿದ ಮಲ್ಲಿಗೆಯ ಹೂವಿನಂತೆ ಅವಳು ತುಸು ನಕ್ಕಾಗ ಮುದ್ದಾಗಿ ಕಾಣುತ್ತಿದ್ದಳು.ರೂಪದರ್ಶಿಗಳಿಂದ ಸೀರೆ ಪ್ರದರ್ಶನ ಸರದಿ ಮುಗಿದಾಗ ವೇದಿಕೆ ಮತ್ತೆ ಖಾಲಿಯಾಗಿತ್ತು. ಅಷ್ಟು ಹೊತ್ತು ಆ ಸುಂದರಿಯರ ತಾಣವಾಗಿದ್ದ ವೇದಿಕೆ ಮತ್ತೊಬ್ಬ ಸುಂದರಿಯ ಬೆಕ್ಕಿನ ನಡಿಗೆಗೆ ತಯಾರಾಗಿತ್ತು. ಹಿನ್ನೆಲೆ ಸಂಗೀತ ನಿಧಾನವಾಗಿ ಶುರುವಾದಾಗ ಮೆಲ್ಲನೆ ವೇದಿಕೆಯನ್ನು ಜೋಡಿಯೊಂದು ಆವರಿಸಿಕೊಂಡಿತು. ನಟಿ ಹರಿಪ್ರಿಯಾ ಮತ್ತು ನಟ ಪ್ರದೀಪ್ ಮದುಮಕ್ಕಳ ಗೆಟಪ್‌ನಲ್ಲಿ ಬಂದಾಗ ಎಲ್ಲರೂ ಕಣ್ಣು ಮಿಟುಕಿಸದೇ ನೋಡುತ್ತಿದ್ದರು.ಕಡುಗೆಂಪು ಬಣ್ಣದ ರೇಷ್ಮೆ ಸೀರೆ, ಕೊರಳಿಗೆ ಹೂವಿನ ಮಾಲೆ ಹಾಕಿಕೊಂಡಿದ್ದ ಹರಿಪ್ರಿಯಾ ಸುಂದರವಾಗಿ ಕಾಣುತ್ತಿದ್ದರು. ಪ್ರದೀಪ್ ಕೂಡ ಮದುಮಗನಂತೆ ಸಿಂಗರಿಸಿಕೊಂಡು ಗಂಭೀರವದನರಾಗಿ ನಿಂತಿದ್ದರು. ಇವರಿಬ್ಬರು ವೇದಿಕೆಯ ಮೇಲೆ ಬಂದು ನಿಂತಾಗ ಉಳಿದ ರೂಪದರ್ಶಿಗಳು ಅವರನ್ನು ಸುತ್ತುವರಿದರು. ಅಲ್ಲಿರುವ ಹೆಂಗಳೆಯರ ಕಣ್ಣು ಮಾತ್ರ ರೂಪದರ್ಶಿಯರು ಧರಿಸಿದ್ದ ಸೀರೆಯ ಮೇಲಿತ್ತು.ಸೀರೆಯ ನೆರಿಗೆಯನ್ನು ಸರಿಮಾಡಿಕೊಳ್ಳುತ್ತಾ ಮಾತಿಗಿಳಿದರು ಹರಿಪ್ರಿಯಾ. `ನಾನು ಧರಿಸಿದ ಸೀರೆ ರೂಪಂ ಸಿಲ್ಕ್ಸ್‌ನ ಮದುವೆ ಸೀರೆ. ನನಗೆ ಆಕಾಶ ನೀಲಿ ಬಣ್ಣದ ಸೀರೆ ತುಂಬಾ ಇಷ್ಟ. ಆದರೆ ಮದುವೆ ಕಾರ್ಯಕ್ರಮಕ್ಕೆ ಕಡುಗೆಂಪು, ಹಸಿರು ಬಣ್ಣದ ಸೀರೆ ಚೆನ್ನಾಗಿರುತ್ತದೆ. ರೇಷ್ಮೆ ಸೀರೆಗಳು ಯಾವಾಗಲೂ ಸುಂದರವಾಗಿರುತ್ತದೆ. ನನಗೆ ಸೀರೆ ಎಂದರೆ ತುಂಬಾ ಇಷ್ಟ ಎಂದು ನಗು ಸೂಸಿದರು.`ರಣತಂತ್ರ', `ಮಂಜಿನ ಹನಿ', `ನಂದೇ' ಸಿನಿಮಾಗಳು ಸದ್ಯಕ್ಕೆ ಬಿಡುಗಡೆಯಾಗಲಿವೆ. ಹೊಸವರ್ಷ ಎಲ್ಲರ ಜೀವನದಲ್ಲೂ ನಗು ಮೂಡಿಸಲಿ. ದೇವರು ಎಲ್ಲರಿಗೂ ಒಳ್ಳೆಯ ಆರೋಗ್ಯ ನೀಡಲಿ. ನನಗೂ ಕೂಡ ಒಳ್ಳೆಯ ನಿರ್ದೇಶಕರ ಜತೆ ಕೆಲಸ ಮಾಡುವ ಜತೆಗೆ ಉತ್ತಮ ಸಿನಿಮಾ ಅವಕಾಶಗಳು ದೊರಕಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ' ಎಂದು ನಕ್ಕರು.` ಮದುಮಗನ ದಿರಿಸಿನಲ್ಲಿ ನಾನು ನನ್ನ ಭವಿಷ್ಯವನ್ನು ನೋಡುತ್ತಿದ್ದೇನೆ' ಎಂದು ಮೆಲು ದನಿಯಲ್ಲಿ ಮಾತಿಗಿಳಿದರು ಪ್ರದೀಪ್. `ಸಿಲ್ಕ್ಸ್ ಸಂಗ್ರಹ ತುಂಬಾ ಚೆನ್ನಾಗಿದೆ. ಜನವರಿಯಲ್ಲಿ `ಹುಬ್ಬಳ್ಳಿ ಹುಡುಗರು' ಸಿನಿಮಾ ಬಿಡುಗಡೆಯಾಗಲಿದೆ' ಎಂದು ಹೇಳಿದರು.ಅಶೋಕ ಹೋಟೆಲ್‌ನಲ್ಲಿ ಇದೇ 20ರಿಂದ 24ರವರೆಗೆ ಸಿಲ್ಕ್ಸ್ ಉತ್ಸವ ನಡೆಯಲಿದೆ. ಸಲ್ವಾರ್ ಕಮೀಜ್, ಕಸೂತಿ ಸೀರೆಗಳು, ವಿವಿಧ ವಿನ್ಯಾಸದ ದಿರಿಸುಗಳು ಈ ಸಂಗ್ರಹದಲ್ಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry