ಸಿಲ್‌ಸಿಲಾದಲ್ಲಿ ಸ್ಮಿತಾ ನಟಿಸಬೇಕಿತ್ತು

7

ಸಿಲ್‌ಸಿಲಾದಲ್ಲಿ ಸ್ಮಿತಾ ನಟಿಸಬೇಕಿತ್ತು

Published:
Updated:

ಯಶ್ ಚೋಪ್ರಾ ಅವರ ಖ್ಯಾತ ಚಿತ್ರ `ಸಿಲ್‌ಸಿಲಾ~ದಲ್ಲಿ ಸ್ಮಿತಾ ಪಾಟೀಲ್ ಮತ್ತು ಪರ್ವೀನ್ ಬಾಬಿ ಅವರನ್ನು ಆಯ್ಕೆ ಮಾಡಲಾಗಿತ್ತು. ಅವರೂ ಈ ಚಿತ್ರಕ್ಕೆ ಒಪ್ಪಿಕೊಂಡಿದ್ದರು.

ಇನ್ನೇನು ಚಿತ್ರೀಕರಣ ಆರಂಭವಾಗಬೇಕು ಎನ್ನುವಾಗ ಈ ಪಾತ್ರಗಳು ಬದಲಾದವು ಎಂದು ನಿರ್ದೇಶಕ ಯಶ್ ಚೋಪ್ರಾ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.

“

ಅಮಿತಾಬ್ ಚಿತ್ರದ ಕತೆಯ ಬಗ್ಗೆ ಚರ್ಚಿಸುವಾಗ, ಪಾತ್ರಗಳು ಸಮಾಧಾನ ತಂದಿವೆಯೇ ಎಂದು ಕೇಳಿದ್ದರು. ಆಗ ಅಮಿತಾಬ್‌ಗೆ, ಜಯಾಬಚ್ಚನ್ ಹಾಗೂ ರೇಖಾ ನನ್ನ ಆಯ್ಕೆಯಾಗಿದ್ದರು ಎಂದು ತಿಳಿಸಿದ್ದೆ.

ಅಮಿತ್‌ಜೀ ಆಗ ಒಂದೆರಡು ಗಳಿಗೆ ಸುಮ್ಮನಾಗಿದ್ದರು. ನಂತರ ತಾವೇ ಮೌನ ಮುರಿಯುತ್ತ, ಒಂದು ವೇಳೆ ಸಹನಟಿಯರು ಒಪ್ಪಿದಲ್ಲಿ ತಮ್ಮ ಅಭ್ಯಂತರವೇನೂ ಇಲ್ಲ ಎಂದರು. ಅರ್ಧ ಕೆಲಸ ಮುಗಿದಂತಾಗಿತ್ತು.

ರೇಖಾ ಮತ್ತು ಜಯಾ ಬಚ್ಚನ್ ಬಳಿ ಮಾತನಾಡಿದೆ. ಅವರಿಗೆ ಸೆಟ್ ಮೇಲೆ ಏನೂ `ಗಡ್‌ಬಡ್~ ಆಗುವುದಿಲ್ಲ ಎಂಬ ಭರವಸೆಯನ್ನೂ ನೀಡಿದ್ದೆ. ಅವರಿಬ್ಬರನ್ನೂ ಒಪ್ಪಿಸಿದ ನಂತರ ಈ ಬದಲಾವಣೆಯ ಬಗ್ಗೆ ಪರ್ವೀನ್ ಬಾಬಿ ಬಳಿ ತಿಳಿಸಿದೆ.

ಅವರು ಸಹಜವಾಗಿಯೇ ಅದನ್ನು ಸ್ವೀಕರಿಸಿದರು. ಆದರೆ ಜಯಾ ಪಾತ್ರ ನಿರ್ವಹಿಸಬೇಕಿದ್ದ ಸ್ಮಿತಾಗೆ ಮಾತ್ರ ನೋವುಂಟಾಗಿತ್ತು. ಸ್ಮಿತಾ ಪಾಟೀಲ್‌ಗೆ ಈ ಬದಲಾವಣೆಯ ಬಗ್ಗೆ ಅವರ ಸ್ನೇಹಿತ ಶಶಿಕಪೂರ್ ಮೂಲಕ ತಿಳಿಸಿದ್ದೆ” ಎಂದು ನೆನಪಿಸಿಕೊಂಡಿದ್ದಾರೆ.ಇತ್ತೀಚೆಗೆ ಯಶ್‌ಚೋಪ್ರಾ ಅವರಿಗೆ 80 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ವಿಶೇಷ ಸಂದರ್ಶನವನ್ನು ಶಾರುಖ್ ಖಾನ್ ನಡೆಸಿಕೊಟ್ಟಿದ್ದರು. ಸಂದರ್ಶನದಲ್ಲಿ `ವಕ್ತ್~ ಚಿತ್ರದ `ಯೇ ಮೇರಿ ಜೊಹರ್ ಜಬೀನ್~ ಹಾಡನ್ನೂ ಯಶ್‌ಜೀ ಹಾಡಿದರು.

ಈ ವರ್ಷ ತೆರೆಕಾಣಲಿರುವ `ಜಬ್ ತಕ್ ಹೈ ಜಾನ್~ ಚಿತ್ರದ ನಂತರ ತಾವಿನ್ನು ನಿರ್ದೇಶನಕ್ಕಿಳಿಯುವುದಿಲ್ಲ. ನಿರ್ದೇಶಕನಾಗಿ ಇದೇ ತಮ್ಮ ಕೊನೆಯ ಚಿತ್ರ ಎಂದೂ ಯಶ್ ತಿಳಿಸಿದರು.ಚೋಪ್ರಾ ಕುಟುಂಬದವರು ಯಶ್ ಎಂಜಿನಿಯರ್ ಆಗಬೇಕೆಂದು ಬಯಸಿದ್ದರು. ಆದರೆ ಸಿನಿಮಾ ನಿರ್ದೇಶನವೇ ತಮ್ಮ ಭವಿಷ್ಯವೆಂದು ಯಶ್ ದೃಢವಾಗಿ ನಂಬಿದ್ದರಂತೆ. ಆಗ `ಅಮ್ಮ ಮಾತ್ರ 200 ರೂಪಾಯಿಗಳನ್ನು ಕೈಗಿತ್ತು, ನಿನ್ನ ಹೃದಯದ ಮಾತು ಕೇಳು ಎಂದು ಹರಸಿ ಮುನ್ನಡೆಯಲು ಪ್ರೋತ್ಸಾಹಿಸಿದ್ದರು~ ಎಂದು ತಮ್ಮ ಸಿನಿಮಾ ನಿರ್ದೇಶನದ ನಿರ್ಧಾರದ ಬಗ್ಗೆಯೂ ಹೇಳಿಕೊಂಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry