ಸಿವಿಸಿ ನೇಮಕಾತಿ ಅಟಾರ್ನಿ ಜನರಲ್ ಸಮರ್ಥನೆ

7

ಸಿವಿಸಿ ನೇಮಕಾತಿ ಅಟಾರ್ನಿ ಜನರಲ್ ಸಮರ್ಥನೆ

Published:
Updated:ನವದೆಹಲಿ: ಕೇಂದ್ರ ಜಾಗೃತ ಆಯುಕ್ತ ಪಿ.ಜೆ. ಥಾಮಸ್ ಅವರ ವಿರುದ್ಧ ಆರೋಪಪಟ್ಟಿ ದಾಖಲಾದರೆ ಅದೇನು ‘ಕಳಂಕ ಅಲ್ಲ’ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿರುವ ಅಟಾರ್ನಿ ಜನರಲ್ ಜಿ.ಇ. ವಹನ್ವತಿ, ಅವರ ನೇಮಕಾತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.ಪಾಮೋಲಿನ್ ಹಗರಣದಲ್ಲಿ ‘ಭಾಗಿಯಾಗಿರುವ’ ಥಾಮಸ್ ಅವರನ್ನು ಕೇಂದ್ರ ಜಾಗೃತ ಆಯುಕ್ತರಾಗಿ (ಸಿವಿಸಿ) ನೇಮಕ ಮಾಡಿರುವುದನ್ನು  ಪ್ರಶ್ನಿಸಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಗುರುವಾರ, ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ನೇತೃತ್ವದ ಏಕ ಸದಸ್ಯ ಪೀಠದ ಮುಂದೆ ವಹನ್ವತಿ ಈ ಮಾತು ಹೇಳಿದರು.ಸಿವಿಸಿ ಹುದ್ದೆಯ ಅಭ್ಯರ್ಥಿ ಕಳಂಕರಹಿತನಾಗಿರಬೇಕು ಎಂಬುದೇ  ಸರ್ಕಾರದ ನಿಲುವು ಎಂದು ವಹನ್ವತಿ ಪೀಠಕ್ಕೆ ತಿಳಿಸಿದರು. ಸಿವಿಸಿ ಹುದ್ದೆಗೆ ಸಚ್ಚಾರಿತ್ರ್ಯದ ವ್ಯಕ್ತಿಯನ್ನೇ ಆರಿಸಲಾಗಿದೆ. ಅವರಿಗೆ 2007ರಲ್ಲಿ ನೀಡಲಾಗಿದ್ದ ಪ್ರಮಾಣ ಪತ್ರವನ್ನು ಯಾರೂ ಪ್ರಶ್ನಿಸಿರಲಿಲ್ಲ ಎಂದು ವಹನ್ವತಿ ಈ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಹಾಗಿದ್ದಲ್ಲಿ  ಸಿಬ್ಬಂದಿ-ತರಬೇತಿ ಇಲಾಖೆ ಥಾಮಸ್ ಅವರ ‘ತನಿಖೆಯನ್ನು ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಥಾಮಸ್ ಅವರ ವೃತ್ತಿಪರ ಕಳಂಕ ರಹಿತತೆ ಬಗ್ಗೆ ಮಾತ್ರ  ಪ್ರಶ್ನೆ ಎದ್ದಿದೆ. ಅಲ್ಲದೆ ಅವರ ಅರ್ಹತೆ, ಸೇವೆಯಲ್ಲಿ ಕಾರ್ಯಕ್ಷಮತೆಯನ್ನು ನ್ಯಾಯಾಲಯದಲ್ಲಿ ಯಾರೂ ಪ್ರಶ್ನಿಸಿಲ್ಲ ಎಂದು ವಹನ್ವತಿ ಹೇಳಿದರು. ಹೆಚ್ಚಿನ ಎಲ್ಲಾ ಆರೋಪಗಳೂ ಇತ್ಯರ್ಥವಾಗಿವೆ ಎಂದು ವಹನ್ವತಿ ಉತ್ತರ ನೀಡಿದರು. ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ಆರೋಪಗಳ ವಿರುದ್ಧ  ಥಾಮಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿಲ್ಲ ಎಂದು ಕೂಡ  ಅಟಾರ್ನಿ ಜನರಲ್  ತಿಳಿಸಿದರು.ಪ್ರಮಾಣ ಪತ್ರ  ನೀಡಿದ್ದರೇ?: ಥಾಮಸ್ ಅವರಿಗೆ ಹಿಂದಿನ ಸಿವಿಸಿ ‘ಕಳಂಕ ರಹಿತ’ ಎನ್ನುವ ಪ್ರಮಾಣ ಪತ್ರ ನೀಡಿದ್ದರೇ ಎಂಬುದಾಗಿ  ಕಪಾಡಿಯ ಪ್ರಶ್ನಿಸಿದರು.ಕೇಂದ್ರ ಜಾಗೃತ ಆಯುಕ್ತರ ಆಯ್ಕೆಗೆ ಸಮಿತಿಯನ್ನು ನೇಮಕಮಾಡಿರುವುದು ಅಭ್ಯರ್ಥಿಗಳ ಸೇವಾ ದಾಖಲೆಗಳ ಪರಿಶೀಲನೆಗಾಗಿಯೇ ಅಥವಾ ವೆಬ್‌ಸೈಟ್‌ನಲ್ಲಿ ಇರುವ ಖಾಸಗಿ ವಿವರ ದಾಖಲಾತಿಗಳನ್ನು ಬಟ್ಟಿಇಳಿಸುವ (ಡೌನ್‌ಲೋಡ್) ಕಾರ್ಯಕ್ಕಾಗಿಯೇ ಎಂದು ಸುಪ್ರೀಂ ಕೋರ್ಟ್ ಕಟುವಾಗಿ ಪ್ರಶ್ನಿಸಿದೆ.ಪ್ರಮಾಣ ಪತ್ರಬೇಕಿಲ್ಲ:  ಕೇಂದ್ರ ಜಾಗೃತ ಆಯೋಗದ ಪ್ರಮಾಣ ಪತ್ರ ಪಡೆದ ಬಳಿಕ ಮಾತ್ರ ಅಧಿಕಾರಿಯೊಬ್ಬ ಸರ್ಕಾರದ ಕಾರ್ಯದರ್ಶಿ ಆಗುತ್ತಾನೆ. ಥಾಮಸ್ ಕಾರ್ಯದರ್ಶಿಯಾಗಿದ್ದವರು. ಹಾಗಾಗಿ ಸಿವಿಸಿ ಹುದ್ದೆಗೆ ಮತ್ತೊಮ್ಮೆ ಪ್ರಮಾಣ ಪತ್ರ ಬೇಕೆಂದಿಲ್ಲ ಎಂದು ವಹನ್ವತಿ  ತಿಳಿಸಿದರು.ನಿಯಮಾವಳಿ ಇಲ್ಲ: ಸಿವಿಸಿ ನೇಮಕಕ್ಕೆ ನಿರ್ದಿಷ್ಟ ಮಾರ್ಗಸೂಚಿ ಅಥವಾ ನಿಯಮಾವಳಿ ಇಲ್ಲ  ಎಂಬುದನ್ನು ಒಪ್ಪದ ನ್ಯಾಯಮೂರ್ತಿ, ‘ಮುಂದಿನ ದಿನಗಳಲ್ಲಿ ನಿರ್ದಿಷ್ಟ ನೀತಿ-ನಿಯಮಾವಳಿಗಳ ರಚಿಸಬೇಕಿದೆ. ಅದರಂತೆ ಸರ್ಕಾರ ನೇಮಕಾತಿಗಳು ನಡೆಯಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry