ಸೋಮವಾರ, ಜನವರಿ 27, 2020
26 °C
ಶಿಕ್ಷಕರೊಬ್ಬರ ಶ್ರಮದ ಫಲ

ಸಿಸಿಇಗೆ ಔಷಧಿಯಾಗಿ ‘ಸಂಜೀವಿನಿ’

ಪ್ರಜಾವಾಣಿ ವಾರ್ತೆ / ಸಂಧ್ಯಾ ಹೆಗಡೆ ಆಲ್ಮನೆ Updated:

ಅಕ್ಷರ ಗಾತ್ರ : | |

ಸಿಸಿಇಗೆ ಔಷಧಿಯಾಗಿ ‘ಸಂಜೀವಿನಿ’

ಶಿರಸಿ: ಮಕ್ಕಳ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ದಾಖಲೀಕರಣಕ್ಕೆ ಶಿಕ್ಷಕರು ಇನ್ನು ದಿನವಿಡೀ ಹೆಣಗಾಡಬೇಕಿಲ್ಲ. ಸರಳ ತಂತ್ರಾಂಶವನ್ನು ಕಂಪ್ಯೂಟರ್‌ಗೆ ಅಳವಡಿಸಿಕೊಂಡು ಕಡಿಮೆ ವೇಳೆಯಲ್ಲಿ ಈ ಕೆಲಸ ಪೂರ್ಣಗೊಳಿಸಿ ನಿರಾಳವಾಗಬಹುದು! ಇಂತಹ ತಂತ್ರಾಂಶ ‘ಸಂಜೀವಿನಿ’ಯನ್ನು ಮುಂಡಗೋಡ ತಾಲ್ಲೂಕು ಅಂದಲಗಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸತ್ಯನಾರಾಯಣ ಹೆಗಡೆ ಅಭಿವೃದ್ಧಿಪಡಿಸಿದ್ದಾರೆ. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ(ಸಿಸಿಇ)ದ ಅಡಿಯಲ್ಲಿ ಮಕ್ಕಳ ಫಲಿತಾಂಶ, ದಾಖಲೆ ನಿರ್ವಹಣೆಯನ್ನು ಈ ಹೊಸ ಮಾದರಿ ಸರಳಗೊಳಿಸಿದೆ.ಕೇಂದ್ರ ಪಠ್ಯಕ್ರಮದಲ್ಲಿ ಮೂರು ವರ್ಷಗಳ ಹಿಂದೆ, ರಾಜ್ಯ ಪಠ್ಯಕ್ರಮದಲ್ಲಿ ಹಿಂದಿನ ವರ್ಷ ಅನುಷ್ಠಾನಗೊಂಡಿರುವ ಸಿಸಿಇ ಕಾರ್ಯ ಶಿಕ್ಷಕರಿಗೆ ದೊಡ್ಡ ಹೊರೆಯಾಗಿದೆ. 5ರಿಂದ 9ನೇ ತರಗತಿಗೆ ಒಂದು ವರ್ಷದಲ್ಲಿ ಸುಮಾರು 18 ಘಟಕ ಪರೀಕ್ಷೆ ನಡೆಸಿ ಪ್ರತಿ ಮಗುವಿನ ಶೇಕಡಾವಾರು ಅಂಕ ಲೆಕ್ಕ ಹಾಕಿ ಅದನ್ನು ಗ್ರೇಡ್‌ ಆಗಿ ಪರಿವರ್ತಿಸಬೇಕು.

ಶೈಕ್ಷಣಿಕ ವರ್ಷದ ಒಂದು ಮತ್ತು ಎರಡನೇ ಅವಧಿಯಲ್ಲಿ ಇದೇ ಕೆಲಸ ಪುನರಾವರ್ತನೆಯಾಗುತ್ತದೆ. ಇಲಾಖೆಯ ನಿಯಮದಂತೆ ದಾಖಲೆ ಕ್ರೋಢೀಕರಣದಲ್ಲಿ ಹೈರಾಣಾಗುವ ಶಿಕ್ಷಕರಿಗೆ ಕೆಲವೊಮ್ಮೆ ಕಲಿಕಾ ಸಮಯವನ್ನು ಇದಕ್ಕಾಗಿ ಬಳಸಿಕೊಳ್ಳುವ ಅನಿವಾರ್ಯತೆ. ಈ ನಡುವೆ ಕಲಿಕೆಗೆ ಒತ್ತುಕೊಡಲಾಗದೆ ಶೈಕ್ಷಣಿಕ ಗುಣಮಟ್ಟ ಕುಸಿತವಾಗುವ ಭೀತಿ ಶಿಕ್ಷಕ ವಲಯದಲ್ಲಿ ಆಂತರಿಕವಾಗಿ ಚರ್ಚಿತವಾಗುವ ಸಂಗತಿಯಾಗಿತ್ತು.ಪ್ರತಿ ದಿನ ಐದು ತಾಸು ಬಸ್‌ನಲ್ಲಿ ಕಳೆದು ಶಾಲೆ ತಲುಪುವ ಸತ್ಯನಾರಾಯಣ ಹೆಗಡೆ ಅವರಿಗೆ ಸಿಸಿಇ ದಾಖಲೀಕರಣಕ್ಕೆ ವೇಳೆ ಸಿಗುತ್ತಿರಲಿಲ್ಲ. ಹೀಗಾಗಿ ಸಮಸ್ಯೆಗೆ ಪರಿಹಾರ ಹುಡುಕಹೊರಟ ಅವರು ಹಿಂದಿನ ವರ್ಷ ಅರ್ಧದಷ್ಟು ಮಾತ್ರ ಯಶಸ್ವಿಯಾದರು. ಈ ಮಧ್ಯೆ ಸಿಸಿಇ ನಿಯಮದಲ್ಲಿ ಶಿಕ್ಷಣ ಇಲಾಖೆ ಕೆಲ ಬದಲಾವಣೆ ತಂದಿತು. ಇದನ್ನು ಅಳವಡಿಸಿಕೊಂಡ ಅವರು ಅಕ್ಟೋಬರ್ ವೇಳೆಗೆ ತ್ವರಿತ ದಾಖಲೀಕರಣದ ಸರಳ ಸೂತ್ರವನ್ನು ಕಂಡುಕೊಳ್ಳುವಲ್ಲಿ ಸಫಲರಾದರು.‘ಸಿಸಿಇ ಕುರಿತು ಸಿದ್ಧಪಡಿಸಿರುವ ಸಂಜೀವಿನಿ ಸಿಡಿಯಲ್ಲಿರುವ ಮಾದರಿಯಲ್ಲಿ ದಾಖಲೀಕರಣ ಮಾಡಿದರೆ ಒಬ್ಬ ವಿದ್ಯಾರ್ಥಿಯ ಎಲ್ಲ ಮಾಹಿತಿ ದಾಖಲಿಸಲು 30 ಸೆಕೆಂಡ್‌ ಸಾಕಾಗುತ್ತದೆ. ಶಾಲೆಯ ಎಲ್ಲ ವಿವರಗಳನ್ನು ಒಮ್ಮೆ ಟೈಪ್‌ ಮಾಡಿದರೆ ಎಲ್ಲ ನಮೂನೆಗಳಲ್ಲಿ ಸ್ವಯಂಚಾಲಿತವಾಗಿ ದಾಖಲಾ ಗುತ್ತದೆ.  ಪ್ರತಿ ಮಗುವಿನ ಘಟಕ ಪರೀಕ್ಷೆಗಳ ಅಂಕವನ್ನು ಶಿಕ್ಷಕರು ದಾಖಲಿಸಿದರೆ ಶೇಕಡಾವಾರು ಲೆಕ್ಕಕ್ಕೆ ಇಳಿಸುವ ಕಾರ್ಯ ತಂತ್ರಾಂಶದ ಮೂಲಕವೇ ಆಗುತ್ತದೆ’ ಎನ್ನುತ್ತಾರೆ ಸತ್ಯನಾರಾಯಣ ಹೆಗಡೆ.‘ಸಂಜೀವಿನಿ ಒಂದು ವರ್ಷದಲ್ಲಿ ಒಬ್ಬ ಶಿಕ್ಷಕನ 100 ತಾಸು ಸಮಯವನ್ನು ಉಳಿತಾಯ ಮಾಡುತ್ತದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಈ ವ್ಯವಸ್ಥೆವನ್ನು ಮಾನ್ಯ ಮಾಡಿದ್ದಾರೆ. 100ಕ್ಕೂ ಹೆಚ್ಚು ಶಿಕ್ಷಕರಿಗೆ ಈ ತಂತ್ರಾಂಶ ಬಳಕೆಯ ತರಬೇತಿ ನೀಡಲಾಗಿದೆ. ಸಿಸಿಇ ಸುಲಭಗೊಳಿಸಲು ಅನೇಕ ಹೊಸ ಮಾದರಿಗಳು ಪರಿಚಯವಾಗಿದ್ದರೂ ಈ ಮಾದರಿ ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿದೆ’ ಎಂಬುದು ಅವರ ಅಭಿಪ್ರಾಯ.‘ಪ್ರತಿ ವಿದ್ಯಾರ್ಥಿಯ ರೂಪಣಾತ್ಮಕ, ಸಂಕಲನಾತ್ಮಕ ಮೌಲ್ಯಮಾಪನದ ದಾಖಲೀಕರಣಕ್ಕೆ ಶಿಕ್ಷಕರ ಹೆಚ್ಚಿನ ಸಮಯ ವ್ಯಯವಾಗುತ್ತಿತ್ತು. ಆದರೆ ‘ಸಂಜೀವಿನಿ’ ವಿಷಯ ಶಿಕ್ಷಕರು, ತರಗತಿ ಶಿಕ್ಷಕರ ಕೆಲಸ ಸುಲಭಗೊಳಿಸಿದೆ. ಐದು ತಾಸಿನ ಕೆಲಸವನ್ನು 10 ನಿಮಿಷಗಳಲ್ಲಿ ಪೂರ್ಣಗೊಳಿಸುವ ಅನುಕೂಲತೆ ಇದರಲ್ಲಿದೆ’ ಎನ್ನುತ್ತಾರೆ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕರ ಸಂಘದ ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ ನಾಯ್ಕ.

ಪ್ರತಿಕ್ರಿಯಿಸಿ (+)