ಸಿ.ಸಿ. ಪಾಟೀಲ ಕ್ಷಮೆ ಕೋರಲು ಆಗ್ರಹ

7

ಸಿ.ಸಿ. ಪಾಟೀಲ ಕ್ಷಮೆ ಕೋರಲು ಆಗ್ರಹ

Published:
Updated:

ಹುಬ್ಬಳ್ಳಿ: ಹೂಗಾರ ಸಮಾಜದ ಬಗೆಗೆ ಹಗುರವಾಗಿ ಮಾತನಾಡಿರುವ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ.ಪಾಟೀಲ ಕ್ಷಮೆ ಕೇಳಬೇಕೆಂದು ಅಖಿಲ ಕರ್ನಾಟಕ ರಾಜ್ಯ ಹೂಗಾರ, ಪೂಜಾರ, ಗುರುವ, ಬೀರ ಸಮಾಜ ಸೇವಾ ಸಂಘ ಆಗ್ರಹಿಸಿದೆ.



ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಸಂಘದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಹೂಗಾರ, “ಸತ್ತವರ ಮನೆಯಲ್ಲಿ ಸತ್ತವನ ಬಗ್ಗೆ ಅಳುತ್ತಿದ್ದರೆ, ಹೂ ಪತ್ರಿ ಮಾರುವವಳು ದುಡ್ಡಿಗಾಗಿ ಅಳುತ್ತಿದ್ದಳಂತೆ’ ಎಂಬ ನಾಣ್ಣುಡಿಯನ್ನು ಸಿ.ಸಿ.ಪಾಟೀಲ ವಿಧಾನಸಭೆ ಅಧಿವೇಶನದಲ್ಲಿ ಆಡಿದ್ದಾರೆ. ಹೂಗಾರ ಸಮಾಜದ ಬಗೆಗೆ ಇಷ್ಟೊಂದು ಹಗುರವಾಗಿ ಮಾತನಾಡಿರುವುದನ್ನು ಖಂಡಿಸುತ್ತೇವೆ. ಪಾಟೀಲರು ಹೇಳಿಕೆಯನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು” ಎಂದು ಒತ್ತಾಯಿಸಿದರು.



ನಮ್ಮ ಸಮಾಜ ಬಾಂಧವರ ಕುಲಕಸುಬು ಹೂ, ಪತ್ರಿಯನ್ನು ಮನೆಮನೆಗೆ ಹೋಗಿ ಕೊಡುವುದಾಗಿದೆ. ಹಣದಾಸೆಗಾಗಿ ನಾವು ಈ ಕೆಲಸ ಮಾಡುವುದಿಲ್ಲ. ಪೂಜೆಗೆ ಹೂ ಪತ್ರಿಯನ್ನು ಹೂಗಾರರೇ ಕೊಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಧಾರ್ಮಿಕ ಪರಂಪರೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.ಹೂಗಾರ, ಪೂಜಾರ, ಗುರವ, ಜೀರ ಪಂಗಡಗಳಿಂದ ಕೂಡಿರುವ ಹೂಗಾರ ಸಮಾಜ ಬಾಂಧವರು ಮುಂಬರುವ ಜನಗಣತಿಯಲ್ಲಿ ದಾಖಲಿಸುವಾಗ ಕಡ್ಡಾಯವಾಗಿ ಹಿಂದೂ ಹೂಗಾರ ಎಂದು ನಮೂದಿಸಬೇಕು ಎಂದು ಅವರು ಮನವಿ ಮಾಡಿದರು.



ಕರ್ನಾಟಕ ಸರ್ಕಾರವು ಹೂಗಾರ ಸಮಾಜವನ್ನು ‘ಪ್ರವರ್ಗ 2 ಅ’ ಎಂದು ಹಾಗೂ ಗುರವ ಎಂಬುದನ್ನು ಪ್ರವರ್ಗ 1ರಲ್ಲಿ ಸೇರಿಸಿ ಮೀಸಲಾತಿ ಒದಗಿಸಿದೆ. ಆದರೆ, ನಮ್ಮ ಶಾಲಾ ದಾಖಲಾತಿಗಳಲ್ಲಿ ‘ಲಿಂಗಾಯತ’ ಎಂದು ದಾಖಲಾಗಿರುವುದರಿಂದ ಪ್ರವರ್ಗ- 2 ಅ ಪ್ರಮಾಣಪತ್ರ ನೀಡಲು ಬರುವುದಿಲ್ಲ ಎಂದು ತಹಸೀಲ್ದಾರಗಳು ಹೇಳುತ್ತಾರೆ. ತಿಳಿಯದೆಯೇ ಶಾಲಾ ದಾಖಲಾತಿಗಳಲ್ಲಿ ಲಿಂಗಾಯತ ಎಂದು ನಮ್ಮ ಸಮಾಜದವರು ನೋಂದಾಯಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ನಮ್ಮ ಸಮಾಜಕ್ಕೆ ಪ್ರವರ್ಗ 2 ಅ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಫೆ. 14ರಂದು ಮುಖ್ಯಮಂತ್ರಿಗಳ ಬಳಿಗೆ ನಿಯೋಗವೊಂದನ್ನು ಕೊಂಡೊಯ್ದು ಈ ಕುರಿತು ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ನಾಗರಾಜ ಸಂಗಳಕರ, ರವಿ ಸಂಗಳಕರ, ಶಿವಪ್ಪ ಹೂಗಾರ, ಎಸ್.ಎಸ್. ಪೂಜಾರ  ಉಪಸ್ಥಿತರಿದ್ದರು.



 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry