ಶನಿವಾರ, ಮೇ 15, 2021
24 °C

ಸಿಹಿ `ಕಡ್ಡಿಪುಡಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಕಡ್ಡಿಪುಡಿ' ಸಿಹಿಯಾಗಿದೆ. `ಸ್ವಯಂವರ' ಎಂಬ ಚಿತ್ರ ನಿರ್ಮಿಸಿ ತಮ್ಮ ಹೆಸರಿನೊಂದಿಗೆ ಅದನ್ನು ತಳಕುಹಾಕಿಕೊಂಡಿದ್ದ ಚಂದ್ರು ಇನ್ನು ಮುಂದೆ `ಕಡ್ಡಿಪುಡಿ' ಚಂದ್ರು ಆಗಿ ಬದಲಾಗಲಿದ್ದಾರೆ. `ಕಡ್ಡಿಪುಡಿ' ಚಿತ್ರದ ಗೆದ್ದಿದೆ ಎಂಬುದನ್ನು ಅವರ ಅರಳಿದ ಮುಖ ಹೇಳುತ್ತಿತ್ತು. ಹೂಡಿದ ಬಂಡವಾಳ ಕೈಗೆ ಬಂದಿದೆ. ಇನ್ನೇನಿದ್ದರೂ ಲಾಭದ ಮಾತು. ಆದರೆ ವಹಿವಾಟಿನ ಲೆಕ್ಕಾಚಾರವನ್ನು ಚಂದ್ರು ಬಿಟ್ಟುಕೊಡಲಿಲ್ಲ.ನಟ ಶಿವರಾಜ್‌ಕುಮಾರ್, ಅಂದು ನಟಿಸಿದ ಮೊದಲ ಚಿತ್ರವೇ ಗೆದ್ದ ನವನಟನಂತೆ ಖುಷಿಯಲ್ಲಿದ್ದರು. ಅವರಿಗೆ ವಿಶೇಷವೆನಿಸಿದ್ದು ಜನ ತಮ್ಮನ್ನು `ಕಡ್ಡಿಪುಡಿ' ಎಂದೇ ಗುರುತಿಸಲು ಪ್ರಾರಂಭಿಸಿರುವುದು. ಕೇವಲ 20 ನಿಮಿಷದಲ್ಲಿ ಕಥೆ ಕೇಳಿದ್ದ ಶಿವಣ್ಣ, ಯಾವ ಪೂರ್ವತಯಾರಿಯೂ ಇಲ್ಲದೆ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರಂತೆ.ತಮ್ಮ ಪಾತ್ರ ಮಾತ್ರವಲ್ಲ, ಇಡೀ ಚಿತ್ರದ ಕೆತ್ತನೆಯೇ ಅದ್ಭುತ ಎಂದು ಬಣ್ಣಿಸಿದವರು ಅವರು. ಸೂರಿ ನಿರ್ದೇಶನದ ಕೌಶಲ ಅವರನ್ನು ಮೋಡಿ ಮಾಡಿದೆ. ಸೂರಿ ಜೊತೆ ಮತ್ತೊಂದು ಚಿತ್ರವನ್ನು ಶೀಘ್ರವೇ ಮಾಡಬೇಕೆಂಬ ಇರಾದೆಯನ್ನು ಅವರು ವ್ಯಕ್ತಪಡಿಸಿದರು.ಎಲ್ಲವೂ ವಿಭಿನ್ನವಾಗಿರಬೇಕು ಎಂಬ ಸಾಹಸಕ್ಕೆ ಮುಂದಾಗುವಾಗ ಭಯವೂ ಇತ್ತು. ಏಕೆಂದರೆ ಸಿನಿಮಾದ ಧ್ವನಿಯೇ ಬೇರೆ. ಸಿನಿಮಾಗಳಲ್ಲಿ ಮೌನವೂ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂಬ ಸಂತಸದ ಮಾತು ಸೂರಿ ಅವರದು. ನಡೆಯಲು ಅಶಕ್ತರಾದ ಹಿರಿಯ ನಟ ರೇಣುಕಾ ಪ್ರಸಾದ್ ಅವರ ಪಾತ್ರಕ್ಕೋಸ್ಕರ ಮಾಡಿಕೊಂಡ ಬದಲಾವಣೆಗಳನ್ನು ಸೂರಿ ನೆನಪಿಸಿಕೊಂಡರು. ಚಿತ್ರರಂಗ ರೇಣುಕಾ ಪ್ರಸಾದ್‌ರಂಥ ಕಲಾವಿದರಿಗೆ ಪಾತ್ರಗಳನ್ನು ಹೆಣೆಯಲಿ ಎಂಬ ಆಶಯ ಚಿತ್ರತಂಡದ್ದು.ಚಿತ್ರ ಬಿಡುಗಡೆಯಾದ ದಿನ ಮೊಬೈಲ್ ಫೋನ್ ಸ್ವಿಚ್‌ಆಫ್ ಮಾಡಿ ಮನೆಯಲ್ಲಿಯೇ ಕುಳಿತಿದ್ದ ನಿರ್ಮಾಪಕ ಚಂದ್ರು, ಪ್ರತಿಕ್ರಿಯೆ ನೋಡಿ ಬೆರಗಾಗಿದ್ದಾರೆ. ಸಿನಿಮಾ ಕುರಿತ ಮೆಚ್ಚುಗೆಯ ಕರೆಗಳನ್ನು ಸ್ವೀಕರಿಸುವುದರಲ್ಲಿ ಅವರು ಮಗ್ನ.ಈ ಬಗೆಯ ಹಾಡುಗಳನ್ನೂ ಜನ ಇಷ್ಟಪಡುತ್ತಾರೆಯೇ ಎಂಬ ಅಚ್ಚರಿಯಿಂದ ಸಂಗೀತ ನಿರ್ದೇಶಕ ಹರಿಕೃಷ್ಣ ಇನ್ನೂ ಹೊರಬಂದಿಲ್ಲ. ರೀತಿ ರಿವಾಜುಗಳನ್ನು ಬದಿಗೊತ್ತಿ, ಅಬ್ಬರವಿಲ್ಲದೆ ಹೊಸೆದ ತಣ್ಣನೆ ಹಾಡುಗಳನ್ನು ಜನ ಮೆಚ್ಚಿದ ಬಗೆ ಅವರಲ್ಲಿ ಸೋಜಿಗ ಉಂಟುಮಾಡಿದೆ.ಶಿವಣ್ಣ ಜೊತೆ ಮತ್ತೊಂದು ಸಿನಿಮಾ ಮಾಡುವ ಆಸೆ ಖಂಡಿತಾ ಇದೆ. ಆದರೆ ಸದ್ಯಕ್ಕೆ ಅದು ಸಾಧ್ಯವಿಲ್ಲ ಎಂದರು ಸೂರಿ. `ಕಡ್ಡಿಪುಡಿ'ಯ ಮುಂದುವರಿದ ಭಾಗ ಮಾಡುವ ಉದ್ದೇಶವೂ ಅವರಿಗಿಲ್ಲ. `ಕೆಂಡಸಂಪಿಗೆ' ಚಿತ್ರದತ್ತ ಗಮನಹರಿಸಿರುವ ಸೂರಿ, ಅದರ ಬಳಿಕ ಇನ್ನೊಂದು ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಅದಕ್ಕಾಗಿ ಅವರು ಹೊಸ ಹುಡುಗರ ಅನ್ವೇಷಣೆಯಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.