ಸಿಹಿ ಜಾಮೂನು

7

ಸಿಹಿ ಜಾಮೂನು

Published:
Updated:
ಸಿಹಿ ಜಾಮೂನು

ಚಿತ್ರ : ಜಾನು

ನಿರ್ಮಾಪಕ : ಜಯಣ್ಣ, ಭೋಗೇಂದ್ರ

ನಿರ್ದೇಶನ : ಪ್ರೀತಂ ಗುಬ್ಬಿ

ತಾರಾಗಣ : ಯಶ್, ದೀಪಾ ಸನ್ನಿಧಿ, ಶೋಭರಾಜ್, ರಂಗಾಯಣ ರಘು, ಸಾಧು ಕೋಕಿಲ ಮತ್ತಿತರರು.

ಅಪ್ಪ ಅಮ್ಮನಿಗೆ ಹೇಳದಂತೆ ಮನೆ ಬಿಟ್ಟು ಬರುವವರನ್ನು ಹಾದಿ ತಪ್ಪಿದವರು ಎನ್ನಬಹುದಷ್ಟೇ. ಹೀಗೆ ಹಾದಿ ತಪ್ಪಿ ಬರುವ ರುಕ್ಮಿಣಿ ಎನ್ನುವ ತಿಂಡಿಪೋತಿ ಚೆಲುವೆಯನ್ನು ತರುಣನೊಬ್ಬ ಸುರಕ್ಷಿತವಾಗಿ ಮನೆ ಸೇರಿಸುವುದು `ಜಾನು~ ಚಿತ್ರದ ಕಥೆ. ಈ ಮನೆ ಸೇರಿಸುವ ಪಯಣದಲ್ಲಿ ಬಸ್ಸು ತಪ್ಪುವುದು, ಮನೆ ಸೇರಿದ ಮೇಲೆ ಮನಸ್ಸು ಪ್ರೇಮರಾಗ ಹಾಡುವುದು, ಕೊನೆಗೆ ಎಲ್ಲವೂ ಹಳಿ ಸೇರುವುದು ಸಿನಿಮಾಗಳಲ್ಲಿ ಮಾಮೂಲು. ಇದಕ್ಕೆ `ಜಾನು~ ಕೂಡ ಹೊರತಲ್ಲ.ಮೇಲಿನ `ಜಾನು~ ಚಿತ್ರದ ಕಥೆಯನ್ನು ಸಿನಿಮಾ ಕುರಿತಾದ ವಿಮರ್ಶೆ ಎಂತಲೂ ಭಾವಿಸಬಹುದು. ಚಿತ್ರದ ಆರಂಭದಲ್ಲೇ ದಾರಿ ತಪ್ಪಿದಂತೆ ಕಾಣಿಸುವ ನಿರ್ದೇಶಕರು,

ಪಡಿಪಾಟಲುಗಳ ನಡುವೆ ಕೊನೆಗೂ ಸರಿಯಾದ ದಾರಿಯನ್ನು ಕಂಡುಕೊಳ್ಳುತ್ತಾರೆ. `ಶುಭಂ~ ಎನ್ನುವುದು `ಜಾನು~ ಮಟ್ಟಿಗೆ ಅಕ್ಷರಶಃ ಸತ್ಯ.ಯಡವಟ್ಟು ದಾರಿಗಳ ಹೊರತಾಗಿ, `ಜಾನು~ ಇಷ್ಟವಾಗಲಿಕ್ಕೆ ಎರಡು ಕಾರಣಗಳಿವೆ- ನಾಯಕಿ ದೀಪಾ ಸನ್ನಿಧಿ ಹಾಗೂ ಚಿತ್ರದ ಸಾತ್ವಿಕ ಕ್ಲೈಮ್ಯಾಕ್ಸ್. ದೀಪಾ ಕೆಂಡಸಂಪಿಗೆಯಂಥ ಚೆಲುವೆ. ನೋಡಲಿಕ್ಕೆ ಅಷ್ಟೇನೂ ಆಕರ್ಷಕವಲ್ಲದಿದ್ದರೂ, ತನ್ನ ಘಮದಿಂದಲೇ ಇಷ್ಟವಾಗುವ ಹೂ ಸಂಪಿಗೆ. ಮಾಟವಾದ ಸೌಂದರ್ಯ ಅಲ್ಲದಿದ್ದರೂ ಮಾದಕ ಸೌಂದರ್ಯ ಆಕೆಯದು. ಉಣ್ಣುವುದರಲ್ಲಿ, ಉಡಾಫೆಯಲ್ಲಿ, ಬಿಡುಬೀಸಾಗಿ ಕುಣಿಯುವುದರಲ್ಲಿ, ಅಮಾಯಕತೆಯ ನಟನೆಯಲ್ಲಿ, ಕಣ್ಣಲ್ಲೇ ಮಾತನಾಡುವುದರಲ್ಲಿ- ಎಲ್ಲದರಲ್ಲೂ ದೀಪಾ ಪರಿಣಾಮಕಾರಿ. ಶೀರ್ಷಿಕೆಗೆ ಅನುಗುಣವಾಗಿ ಇಡೀ ಚಿತ್ರ ನಾಯಕಿಪ್ರಧಾನ ಎನ್ನಿಸಿಬಿಡುವಷ್ಟು ಆಕೆಯ ಪಾತ್ರ ನಿರ್ವಹಣೆ ಸೊಗಸಾಗಿದೆ. ಉತ್ತರ ಕರ್ನಾಟಕದ ಮಾತುಗಳೂ ಪಾತ್ರದ ಸೊಗಸು ಹೆಚ್ಚಲು ಕಾರಣವಾಗಿವೆ.ಸಿನಿಮಾದ ಮತ್ತೊಂದು ವಿಶೇಷ ಕ್ಲೈಮ್ಯಾಕ್ಸ್. ಪ್ರೇಮಿಗಳು ಮತ್ತು ಪೋಷಕರು ಇಬ್ಬರೂ ಗೆಲ್ಲುವ ಆರೋಗ್ಯಕರ ಹಾಗೂ ರಕ್ತರಹಿತ ಕ್ಲೈಮ್ಯಾಕ್ಸ್ ಇದು. ಈ ಸಾತ್ವಿಕ ಕ್ಲೈಮ್ಯಾಕ್ಸ್ ಕಾರಣದಿಂದಾಗಿ ಆವರೆಗಿನ ಅಡ್ಡಾದಿಡ್ಡಿ ಹಾದಿಯ `ಜಾನು~ ಪಯಣ ಒಮ್ಮೆಗೇ ಸಹನೀಯ ಅನ್ನಿಸಿಬಿಡುತ್ತದೆ.ಎರಡು ಗೀತೆಗಳ ಕುರಿತು ಹೇಳದಿದ್ದರೆ `ಜಾನು~ ಕುರಿತ ಮಾತು ಅಪೂರ್ಣ. `ಸ್ವಲ್ಪ ಬಿಟ್ಕೊಂಡು~ ಎನ್ನುವ ರಾಮರಸದ ಗೀತೆಯಲ್ಲಿ, `ಸ್ವಲ್ಪ ಬಿಟ್ಕೊಳ್ಳುವ~ ಪ್ರಕ್ರಿಯೆ ಪ್ರೇಕ್ಷಕರಿಗೂ ವರ್ಗಾವಣೆಯಾಗುವಂತೆ ನಾಯಕಿಯ ಬಿಡುಬೀಸು ಕುಣಿತವಿದೆ. ಆ ಕುಣಿತ ಮಣಿತವನ್ನು ಬೆರಗಿನಿಂದ ನೋಡುತ್ತಿರುವಾಗಲೇ, ನಿರ್ದೇಶಕರು ಹಾಗೂ ನೃತ್ಯ ಸಂಯೋಜಕರ ಅಭಿರುಚಿ ಕೊಂಚ ಮೇರೆ ಮೀರಿತಾ ಎನ್ನುವ ಪ್ರಶ್ನೆಯೂ ಉಂಟಾಗುತ್ತದೆ. `ಕಣ್ ಮುಚ್ರೋ ಕಣ್ ಮುಚ್ರಿ~ ಎನ್ನುವ ಅಪ್ಪಟ ಮಸಾಲೆ ಗೀತೆ ಸಾಹಿತ್ಯದಿಂದಾಗಿ ಗಮನಸೆಳೆಯುತ್ತದೆ. `ಹುಡುಗರು~ ಚಿತ್ರದ ಪಂಕಜಳ ತಂಗಿಯಂತೆ ಕಾಣಿಸುವ ಪೋಲಿಗೀತೆಯಿದು (ಸಾಹಿತ್ಯ: ಯೋಗರಾಜ ಭಟ್).ದೀಪಕ್ಕೆ ಸಿಕ್ಕ ಪತಂಗದಂತೆ ಕಾಣಿಸುವ ನಾಯಕ ಯಶ್ ನಟನೆಯಲ್ಲಿ ನಾಯಕಿಯ ಬೆನ್ನಿಗೇ ಇದ್ದಾರೆ. ಹುಡುಗಿಯ ಬಗ್ಗೆ ಮುನಿಸಿಕೊಳ್ಳುತ್ತಲೇ ಪ್ರೇಮಿಸುವ ಅವರು ಹೊಡೆದಾಟದಲ್ಲೂ ಉತ್ಸಾಹಿ. ಉಳಿದಂತೆ ಹುಡುಗಿಯ ಅಪ್ಪನಾಗಿ ಶೋಭರಾಜ್, ಹುಡುಗನ ಪೋಷಕನಾಗಿ ರಂಗಾಯಣ ರಘು ತಂತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸಾಧು ಕೋಕಿಲ ಪಾತ್ರ ಪೋಷಣೆ ಚೆನ್ನಾಗಿದೆ.ಮೊದಲ ಭಾಗದಲ್ಲಿ ಲವಲವಿಕೆಯಿಂದ ಕೂಡಿದ್ದು, ಎರಡನೇ ಭಾಗದಲ್ಲಿ ಕುಸಿಯುವ ಸಿನಿಮಾಗಳ ಉದಾಹರಣೆಗಳು ಸಾಕಷ್ಟಿವೆ. ಈ ಸಂಪ್ರದಾಯಕ್ಕೆ `ಜಾನು~ ಅಪವಾದ. ಇಲ್ಲಿ ಚಿತ್ರದ ಮೊದಲ ಭಾಗ ಉತ್ಸಾಹ ಹುಟ್ಟಿಸುವುದಿಲ್ಲ ಹಾಗೂ ಈ ಅವಧಿಯಲ್ಲಿ ಪ್ರೇಕ್ಷಕರ ನಿರೀಕ್ಷೆಗಳನ್ನು ಮೀರಿ ಯಾವ ಘಟನೆಗಳೂ ನಡೆಯುವುದಿಲ್ಲ. ಆದರೆ, ಚಿತ್ರದ ಉತ್ತರಾರ್ಧ ಮೊದಲ ಭಾಗಕ್ಕಿಂತಲೂ ಹೆಚ್ಚು ಆಕರ್ಷಕವಾಗಿದೆ.ಪಯಣದ ಮೂಲಕ ಪ್ರೇಮಕಥೆಯೊಂದನ್ನು ನಿರೂಪಿಸುವ ಪ್ರೀತಂರ ಪ್ರಯತ್ನದಲ್ಲಿ ಮಹತ್ವಾಕಾಂಕ್ಷೆ ಕಾಣಿಸುವುದಿಲ್ಲ. ಸಿದ್ಧಸೂತ್ರಗಳ ಜಾಡಿನಲ್ಲೇ ಪ್ರೀತಂ ಪಯಣವಿದೆ.

ತೆಲುಗು ಸಿನಿಮಾಗಳ ಕೊಡುಗೆಯಾದ ಬಯಲುಸೀಮೆ, ಪಾಳೇಗಾರರನ್ನು ನೆನಪಿಸುವ ಜಮೀನ್ದಾರ ಹಾಗೂ ಆತನ ಬೆನ್ನಹಿಂದೆ ಬಿಳಿಬಟ್ಟೆ ತೊಟ್ಟು ಕೈಯಲ್ಲಿ ಮಾರಕಾಸ್ತ್ರ ಹಿಡಿದವರ ದಂಡು ಈ ಚಿತ್ರದಲ್ಲೂ ಇದೆ. ಇವೆಲ್ಲವನ್ನೂ ಒಂದು ಆರ್ದ್ರ ಕ್ಲೈಮ್ಯಾಕ್ಸ್‌ನ ಮೂಲಕ ಹತ್ತಿಕ್ಕುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಆ ಪ್ರಯತ್ನ ಚಿತ್ರದುದ್ದಕ್ಕೂ ಇದ್ದಲ್ಲಿ `ಜಾನು~ ಭಿನ್ನ ಚಿತ್ರವಾಗುತ್ತಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry