ಗುರುವಾರ , ಜೂನ್ 17, 2021
23 °C

ಸಿಹಿ ಸಿಹಿ ಜೇನು

ಗಿರೀಶ್ ಎಸ್.ಆರ್ Updated:

ಅಕ್ಷರ ಗಾತ್ರ : | |

ಸಿಹಿ ಸಿಹಿ ಜೇನು

ಜೇನಿನ ಸವಿಯೇ ಸವಿ. ಸಜ್ಜನರ ಮಾತು ಹೆಜ್ಜೇನು ಸವಿದಂತೆ ಎಂದು ಕವಿ ಸರ್ವಜ್ಞ ಅನೇಕ ಶತಮಾನಗಳ ಹಿಂದೆಯೇ ಜೇನಿನ ರುಚಿಯನ್ನು ಬಣ್ಣಿಸಿದ್ದ. ಆಯುರ್ವೇದದಲ್ಲಿ ಜೇನು ತುಪ್ಪಕ್ಕೆ ಪ್ರಮುಖ ಸ್ಥಾನ. ಇದು ಶಕ್ತಿವರ್ಧಕ. ಔಷಧಗಳನ್ನು ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸಿದರೆ ಪರಿಣಾಮ ಹೆಚ್ಚಾಗುತ್ತದೆ.ಜೇನು ಎಷ್ಟು ಸವಿಯೋ ಅಷ್ಟೇ ಲಾಭಕಾರಿ ಕೂಡ. ಜೇನು ಕೃಷಿ ಕೈಗೊಳ್ಳಲು ಸಾಕಷ್ಟು ಜಮೀನು ಇರಬೇಕೆಂದಿಲ್ಲ. ಬಿತ್ತನೆ ಬೀಜ, ರಗೊಬ್ಬರ, ನೀರಾವರಿ ಸೌಲಭ್ಯ, ಕೀಟನಾಶಕ, ಕಳೆನಾಶಕ ಎಂಬಿತ್ಯಾದಿಯಾಗಿ ಹೆಚ್ಚು ಖರ್ಚು ಮಾಡಬೇಕಾದ ಅನಿವಾರ್ಯತೆಯಿಲ್ಲ. ಕಡಿಮೆ ಬಂಡವಾಳ ಹೂಡಿ ಹೆಚ್ಚು ಲಾಭ ಗಳಿಸಬಹುದು.ಮಹಿಳೆಯರೂ ಕೂಡ ಜೇನುಕೃಷಿಯನ್ನು ಸುಲಭವಾಗಿ ಕೈಗೊಳ್ಳಬಹುದು.

ಜೇನು ಹುಳುವಿನಲ್ಲಿ ಹಲವು ತಳಿಗಳಿದ್ದು ಭಾರತೀಯ ಮತ್ತು ಐರೋಪ್ಯ ಜೇನುಗಳು ಸಾಕಣೆಗೆ ಸೂಕ್ತವಾದುವು.ಸಾಮಾನ್ಯವಾಗಿ ಎಪಿಸ್ ಮೆಲಿಫ್ಹೆರಾ, ಎಪಿಸ್ ಇಂಡಿಕಾ ಎಂಬ ತಳಿಯ ಜೇನುಹುಳುಗಳನ್ನು ಸಾಕಣೆಗೆ ಬಳಸಲಾಗುತ್ತದೆ. ಕರ್ನಾಟಕವು ಜೇನುಕಷಿಗೆ ಪೂರಕವಾದ ಹವಾಗುಣವನ್ನು ಹೊಂದಿದೆ.ಜೇನು ಕೃಷಿಗೆ ಪ್ರಮುಖವಾಗಿ ಬೇಕಾಗಿರುವುದು ಜೇನು ಹುಳು ಕುಟುಂಬ, ಜೇನು ಪೆಟ್ಟಿಗೆ ಮತ್ತು ಪೆಟ್ಟಿಗೆಯನ್ನು ನಿಲ್ಲಿಸುವಂತಹ ಸ್ಟಾಂಡ್. ಜೇನು ಕುಟುಂಬಗಳು ಸುಮಾರು ಎರಡು ಸಾವಿರದಿಂದ ಎರಡುವರೆ ಸಾವಿರ ರೂಪಾಯಿಗೆ ದೊರೆಯುತ್ತವೆ. ಐಎಸ್‌ಐ ಪ್ರಮಾಣೀಕೃತ ಜೇನುಪೆಟ್ಟಿಗೆಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯ.ಜೇನು ಕೃಷಿ ಕೈಗೊಳ್ಳುವ ಜಾಗ ಇರುವೆ, ಗೊದ್ದ ಇತ್ಯಾದಿಗಳಿಂದ ಹಾನಿಗೊಳಗಾಗದಂತೆ ಇರಬೇಕು. ಜೇನು ಪೆಟ್ಟಿಗೆಯನ್ನು ಪೂರ್ವದಿಕ್ಕಿಗೆ ಮುಖ ಮಾಡಿ ನಿಲ್ಲಿಸಬೇಕು. ಜೇನು ಹುಳುಗಳಿಗೆ ಮಕರಂದ ಒದಗಿಸುವ ಪ್ರಮುಖ ಬೆಳೆಗಳೆಂದರೆ ಸೂರ್ಯಕಾಂತಿ, ಬಾಳೆ, ಹುಣಸೆ, ನುಗ್ಗೆ, ಮಾವು, ಅಡಿಕೆ ಇತ್ಯಾದಿ.ಜೇನುಹುಳುಗಳ ಸಂಖ್ಯೆ ದಿನೇ ದಿನೇ ವೃದ್ಧಿಯಾದಂತೆ ಸೂಕ್ಷ್ಮವಾಗಿ ಗಮನಿಸಿ ಕೃತಕವಾಗಿ ಎರಡು ಭಾಗ ಮಾಡಬೇಕು. ರಾಣಿ ಹುಳುವನ್ನು ತನ್ನ ಗುಂಪಿನೊಂದಿಗೆ ನಾಜೂಕಾಗಿ ಬೇರ್ಪಡಿಸಬೇಕು. ಇಲ್ಲದೇ ಹೋದಲ್ಲಿ ರಾಣಿ ಜೇನಾದಿಯಾಗಿ ಹುಳುಗಳು ತಪ್ಪಿಸಿಕೊಂಡು ಹೋಗುತ್ತವೆ.ಜೇನು ಕೃಷಿಯಲ್ಲಿ ಇಂದು ಹಲವಾರು ಬೆಳವಣಿಗೆಗಳಾಗಿದ್ದು ಇದರ ಪರಿಕರಗಳು ಅಗ್ಗದ ದರಕ್ಕೆ ಸಿಗುತ್ತಿವೆ. ಇದರಲ್ಲಿ ಕೃತಕ ಮೇಣದ ಹಾಳೆ ಮಹತ್ವದ್ದು. ಮೇಣದ ಹಾಳೆ ಬಳಸುವುರಿಂದ ವೇಗವಾಗಿ ಜೇನುತುಪ್ಪ ಉತ್ಪಾದಿಸಬಹುದು. ತುಪ್ಪವನ್ನು ಜೇನು ತೆಗೆಯುವ ಯಂತ್ರದಲ್ಲಿಯೇ ತೆಗೆಯುವುದು ಸೂಕ್ತ.ಒಂದು ಸಾಮಾನ್ಯ ಲೆಕ್ಕಾಚಾರದಂತೆ ಒಂದು ಜೇನು ಪೆಟ್ಟಿಗೆಯಿಂದ ಒಂದು ವರ್ಷಕ್ಕೆ ಐದು ಕಿಲೊ ಜೇನುತುಪ್ಪ ಉತ್ಪಾದನೆಯಾಗುತ್ತದೆ. ಸದ್ಯ ಮಾರುಕಟ್ಟೆ ದರ ಕಿಲೊಗೆ ಸುಮಾರು ನೂರೈವತ್ತರಿಂದ ಇನ್ನೂರು ರೂಪಾಯಿ ಇದೆ. ಒಬ್ಬ ಸಾಮಾನ್ಯ ರೈತ ಹತ್ತು ಪೆಟ್ಟಿಗೆಯಲ್ಲಿ ಜೇನು ಕೃಷಿ ಮಾಡಿದರೆ ವರ್ಷಕ್ಕೆ ಸರಿಸುಮಾರು 10 ರಿಂದ 30 ಸಾವಿರ ರೂಪಾಯಿ ಲಾಭ ಗಳಿಸಬಹುದು.ರೈತರಿಗೆ ಜೇನುತುಪ್ಪ, ಜೇನುಮೇಣ ಇತ್ಯಾದಿಗಳಿಂದ ಬರುವ ಲಾಭ ಒಂದೆಡೆಯಾದರೆ ಪರೋಕ್ಷವಾಗಿ ಆಗುವ ಲಾಭ ಬಹಳಷ್ಟು. ಬಹುಮುಖ್ಯವಾಗಿ ಬೆಳೆಗಳಲ್ಲಿ ಪರಾಗ ಸ್ಪರ್ಶ ಹೆಚ್ಚಾಗಿ ಇಳುವರಿ ವೃದ್ಧಿಸುತ್ತದೆ. ಗುರೆಳ್ಳು, ಸೌತೆಕಾಯಿ, ಕುಂಬಳ, ಕಲ್ಲಂಗಡಿ ಮುಂತಾದ ಬೆಳೆಗಳ ಇಳುವರಿಯು ಹೆಚ್ಚಾಗಿ ಅವಲಂಬಿತವಾಗಿರುವುದು ಪರಾಗ ಸ್ಪರ್ಶದಲ್ಲಿ.ಇಂತಹ ಬೆಳೆಯ ಹೊಲಗಳ ಸಮೀಪದಲ್ಲಿ ಜೇನು ಕೃಷಿ ಕೈಗೊಂಡರೆ ಇಳುವರಿ ಶೇ 100 ರಿಂದ 150 ರಷ್ಟು ಹೆಚ್ಚಾಗುವುದು ಈಗಾಗಲೇ ಸಾಬೀತಾಗಿದೆ. ಸೂರ್ಯಕಾಂತಿಯಲ್ಲಿ ಇಳುವರಿ ಶೇಕಡಾ 30 ರಿಂದ 40 ರಷ್ಟು ಹೆಚ್ಚಿದ ಉದಾಹರಣೆಯಿದೆ.ಸಾವಯವ ಕೃಷಿಗೆ ಹೆಚ್ಚು ಒತ್ತು ಸಿಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕಡಿಮೆ ಖರ್ಚಿನ ಜೇನು ಕೃಷಿಯು ಜನಪ್ರಿಯವಾಗುತ್ತಿರುವುದು ನಿಜಕ್ಕೂ ಒಂದು ಆಶಾದಾಯಕ ಬೆಳವಣಿಗೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.