ಸಿ ವರ್ಗದ ಗಣಿ ಉಕ್ಕು ಉದ್ದಿಮೆಗೆ

7

ಸಿ ವರ್ಗದ ಗಣಿ ಉಕ್ಕು ಉದ್ದಿಮೆಗೆ

Published:
Updated:

ನವದೆಹಲಿ: ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ವ್ಯಾಪಕ ಅಕ್ರಮವೆಸಗಿ `ನಿಷೇಧ~ದ ದಂಡನೆಗೊಳಗಾಗಿರುವ 41 `ಸಿ~ ವರ್ಗದ ಗಣಿಗಳನ್ನು ಕರ್ನಾಟಕ ಮತ್ತು ನೆರೆಹೊರೆ ರಾಜ್ಯಗಳಲ್ಲಿ ಉಕ್ಕು ಅಥವಾ ಪೂರಕ ಉದ್ಯಮಗಳನ್ನು ಹೊಂದಿದವರಿಗೆ ಮಾತ್ರ `ಪಾರದರ್ಶಕ ಹರಾಜು ಪ್ರಕ್ರಿಯೆ~ ಮೂಲಕ ಹಂಚಿಕೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ನೇತೃತ್ವದ `ಕೇಂದ್ರ ಉನ್ನತಾಧಿಕಾರ ಸಮಿತಿ~ (ಸಿಇಸಿ) ಶಿಫಾರಸು ಮಾಡಿದೆ.`ಸಿ~ ವರ್ಗದ ಗಣಿಗಳನ್ನು `ಪಾರದರ್ಶಕ ಹರಾಜು ಪ್ರಕ್ರಿಯೆ~ ಮೂಲಕ ಹಂಚಿಕೆ ಮಾಡುವ ಮುನ್ನ `ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕಾರ್ಯಸಾಧುವೇ?~ ಎಂದು ಪರಿಶೀಲಿಸಬೇಕು. ಪ್ರತಿ ಗುತ್ತಿಗೆ ಪ್ರದೇಶಕ್ಕೂ `ಅರಣ್ಯ ಪುನರುಜ್ಜೀವನ ಹಾಗೂ ಪುನರ್‌ವಸತಿ ಯೋಜನೆ~ (ಆರ್ ಅಂಡ್ ಆರ್) ಸಿದ್ಧಪಡಿಸಬೇಕೆಂದು ಪಿ.ವಿ. ಜಯಕೃಷ್ಣ ನೇತೃತ್ವದ ಕೇಂದ್ರ ಉನ್ನತಾಧಿಕಾರ ಸಮಿತಿ ಸುಪ್ರೀಂ ಕೋರ್ಟ್‌ಗೆ ಈಚೆಗಷ್ಟೇ ಸಲ್ಲಿಸಿದ ವರದಿಯಲ್ಲಿ ಹೇಳಿದೆ.`ಗಣಿಗಾರಿಕೆಯಿಂದ ಪರಿಸರಕ್ಕೆ ಧಕ್ಕೆಯಿಲ್ಲ~ ಎಂದು ಕಂಡುಬಂದರೆ ಗುತ್ತಿಗೆಗಳನ್ನು ಬಿಡಿಯಾಗಿ ಇಲ್ಲವೇ ಒಟ್ಟುಗೂಡಿಸಿ ಹಂಚಿಕೆ ಮಾಡಬಹುದು. ಈ ಗಣಿಗಳಲ್ಲಿ 50 ಲಕ್ಷ ಟನ್‌ಗೆ ಕಡಿಮೆ ಇಲ್ಲದಂತೆ ಅದಿರು ಹೊರತೆಗೆಯಬೇಕು. ಸುಪ್ರೀಂ ಕೋರ್ಟ್ `ಸಿ~ ವರ್ಗದ ಗಣಿ ಗುತ್ತಿಗೆಗಳನ್ನು ರದ್ದು ಮಾಡಬೇಕೆಂಬ ತನ್ನ ವರದಿ ಅಂಗೀಕರಿಸಿ, ಮಾರುಕಟ್ಟೆ ದರದ ಆಧಾರದಲ್ಲಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬಹುದು ಎಂದು ಸಿಇಸಿ ಸಲಹೆ ಮಾಡಿದೆ.ಕರ್ನಾಟಕದ ಅದಿರನ್ನು ಬಳಸುತ್ತಿರುವ ರಾಜ್ಯ- ನೆರೆಹೊರೆ ರಾಜ್ಯಗಳ ಉಕ್ಕು ಹಾಗೂ ಪೂರಕ ಉದ್ಯಮಗಳು `ಹರಾಜು ಪ್ರಕ್ರಿಯೆ~ಯಲ್ಲಿ ಪಾಲ್ಗೊಳ್ಳಲು ಆದ್ಯತೆ ಇರಬೇಕು. ವಾರ್ಷಿಕ ಉತ್ಪಾದನೆ ಗುರಿ ನಿಗದಿಯಾದ ಬಳಿಕ ಗಣಿಗಳ ಹರಾಜು ನಡೆಯಬೇಕು.ಗಣಿಗಳಲ್ಲಿ ಸಿಗುವ ಅದಿರು ಗುಣಮಟ್ಟದ ಆಧಾರದಲ್ಲಿ ದರ ತೀರ್ಮಾನವಾಗಬೇಕು. ಹರಾಜಿನಲ್ಲಿ ಭಾಗವಹಿಸುವ ಅರ್ಹತೆ ಪಡೆದ ಉದ್ಯಮಗಳೇ ದರ ಸೂಚಿಸಬೇಕು. ಪ್ರತಿ ವರ್ಷ ದರ ನಿಗದಿಯಾಗಬೇಕು. ರಾಜಧನ, ಅರಣ್ಯ ಅಭಿವೃದ್ಧಿ ತೆರಿಗೆ ಮತ್ತಿತರ ತೆರಿಗೆಗಳನ್ನು ಗುತ್ತಿಗೆದಾರರೇ ಪಾವತಿಸಬೇಕು.ಗಣಿ ಗುತ್ತಿಗೆ ಪಡೆಯುವ ಉದ್ಯಮಗಳು ವಾರ್ಷಿಕ ಉತ್ಪಾದನೆ ಆಧರಿಸಿ ನಿಗದಿ ಮಾಡುವ ದರದ ಐದರಷ್ಟು ಹಣವನ್ನು ಠೇವಣಿ ಇಡಬೇಕು. ಬಡ್ಡಿ ರಹಿತ ಠೇವಣಿಯನ್ನು ಗಣಿ ಗುತ್ತಿಗೆ ಮುಗಿದ ಬಳಿಕ ಹಿಂತಿರುಗಿಸಬೇಕು. `ಸಿ~ ವರ್ಗದ ಗಣಿ ಗುತ್ತಿಗೆ ರದ್ದು, ಆರ್ ಅಂಡ್ ಆರ್ ಯೋಜನೆ ಸಿದ್ಧತೆ, ಮರು ಹರಾಜು, ಒಡಂಬಡಿಕೆ/ ಒಪ್ಪಂದ ಎಲ್ಲ ಪ್ರಕ್ರಿಯೆಗಳು ಎರಡು ವರ್ಷದಲ್ಲಿ ಅಂದರೆ 2015ರ ಮಾರ್ಚ್ 31ರೊಳಗೆ ಪೂರ್ಣಗೊಳ್ಳಬೇಕು.ರಾಜಧನ, ತೆರಿಗೆ ಮತ್ತಿತರ ಲೆವಿ ಹೆಚ್ಚಳವಾದರೆ ಗುತ್ತಿಗೆದಾರರು ಪಾವತಿಸುವಂತಿಲ್ಲ. ಹರಾಜು ಮೂಲಕ ಗುತ್ತಿಗೆ ಹಂಚಿಕೆ ಮಾಡಿದ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೇ ಭರಿಸಬೇಕು. ಆದರೆ, ಪ್ರತಿ ಟನ್ ಅದಿರಿಗೆ ಕನಿಷ್ಠ ಒಂದು ಸಾವಿರ ರೂಪಾಯಿಗೆ ಕಡಿಮೆ ಇಲ್ಲದಂತೆ ದರ ಸೂಚಿಸಬೇಕು. `ಸಿ~ ವರ್ಗದ ಗಣಿಗಳಿಂದ ಬರುವ ಸಂಪೂರ್ಣ ಆದಾಯವನ್ನು ಪರಿಸರ ಸಂರಕ್ಷಣೆ ದೃಷ್ಟಿಯಿಂದ ರೂಪಿಸಲಾಗುವ `ಅರಣ್ಯ ಪುನರುಜ್ಜೀವನ ಹಾಗೂ ಪುನರ್ ವಸತಿ ಯೋಜನೆ~ಗೆ ಖರ್ಚು ಮಾಡಬೇಕು.ಪರಿಸರ ಪುನರ್ ರೂಪಿಸುವ ಉದ್ದೇಶಕ್ಕಾಗಿ ಸ್ಥಾಪಿಸಲಾಗುವ ಮುಖ್ಯ ಕಾರ್ಯದರ್ಶಿ ನೇತೃತ್ವದ `ವಿಶೇಷ ಸಂಸ್ಥೆ~ಗೆ (ಎಸ್‌ಪಿವಿ) `ಸಿ~ ಗಣಿಗಳಿಂದ ಬರುವ ಸಂಪೂರ್ಣ ಆದಾಯವನ್ನು ವರ್ಗಾವಣೆ ಮಾಡಬೇಕು. ಯಾವ್ಯಾವ ವರ್ಷದಲ್ಲಿ ಎಷ್ಟು ಆದಾಯ ಬರಲಿದೆ ಎಂಬ ವಿವರಗಳನ್ನು ಸಿಇಸಿ ಪಟ್ಟಿ ಮಾಡಿದ್ದು, 30 ವರ್ಷದ ಅವಧಿಗೆ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿ ಸಿಗಲಿದೆ ಎಂದು ಸಿಇಸಿ ಅಂದಾಜು ಮಾಡಿದೆ.ಅಕ್ರಮ ಗಣಿಗಾರಿಕೆ ನಡೆದಿರುವ ಮೂರು ಜಿಲ್ಲೆಗಳಲ್ಲಿ ಪರಿಸರ ಪುನರ್‌ರೂಪಿಸುವ ಉದ್ದೇಶಕ್ಕೆ 30 ಸಾವಿರ ಕೋಟಿ ಯೋಜನೆ ಸಿದ್ಧಪಡಿಸಲು ಸಿಇಸಿ ಸಲಹೆ ಮಾಡಿದೆ. ಯೋಜನೆ ಜಾರಿಗೆ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ಸಂಸ್ಥೆ ಸ್ಥಾಪಿಸಲು ಸಿಇಸಿ ಮಾಡಿರುವ ಸಲಹೆಯನ್ನು ಈಗಾಗಲೇ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.ಕನಿಷ್ಠ ಪ್ರಮಾಣದ ಅಕ್ರಮ ನಡೆದಿರುವ `ಎ~ ವರ್ಗದ ಗಣಿಗಳಿಂದ ಬರುವ ಶೇ 10ರಷ್ಟು ಮತ್ತು ಶೇ 10ರಷ್ಟು ಅಕ್ರಮ ಎಸಗಿರುವ `ಬಿ~ ವರ್ಗದ ಗಣಿಗಳ ಆದಾಯದ ಶೇ 15ರಷ್ಟನ್ನು `ವಿಶೇಷ ಸಂಸ್ಥೆ~ಗೆ ವರ್ಗಾಯಿಸುವಂತೆ ಈಗಾಗಲೇ ಶಿಫಾರಸು ಮಾಡಲಾಗಿದೆ. `ಸಿ~ ವರ್ಗದ ಗಣಿಗಳ ಹರಾಜು ಪ್ರಕ್ರಿಯೆಯಿಂದ ಸುಮಾರು 3,800 ಕೋಟಿ ಆದಾಯ ರಾಜ್ಯ      ಸರ್ಕಾರಕ್ಕೆ ಬರುವ ಸಾಧ್ಯತೆಯಿದೆ.`ಎ~ ವರ್ಗದ ಗಣಿಗಳ ಹರಾಜಿನಿಂದ 3,355ಕೋಟಿ ಆದಾಯ ಸರ್ಕಾರಕ್ಕೆ ಬಂದಿದೆ. ಇನ್ನೂ ಕಡಿಮೆ ಗುಣಮಟ್ಟದ ಅದಿರು ಮಾರಾಟವಾಗಬೇಕಿದ್ದು ಇದರಿಂದ 320 ಕೋಟಿಗೂ ಅಧಿಕ ಆದಾಯ ಬರುವ ಅಂದಾಜಿದೆ. ಇದೇ ಆಧಾರದಲ್ಲಿ `ಸಿ~ ವರ್ಗದ ಗಣಿಗಳಿಂದ ಬರುವ ಆದಾಯವನ್ನು ಅಂದಾಜು ಮಾಡಲಾಗಿದೆ. ಈಗ `ಸಿ~ ವರ್ಗದ ಗಣಿ ಗುತ್ತಿಗೆ ಪಡೆದವರು ಹರಾಜಿನಲ್ಲಿ ಭಾಗವಹಿಸಲು ಅನರ್ಹರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry