ಮಂಗಳವಾರ, ಮೇ 11, 2021
26 °C

ಸೀಟು ಅಕ್ರಮ ಮಾರಾಟ: ತನಿಖೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಹಲವು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಸೀಟುಗಳು ಅಕ್ರಮವಾಗಿ ಮಾರಾಟವಾಗಿರುವ ಪ್ರಕರಣದ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತೀರ್ಮಾನಿಸಿದೆ.

2011-12ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೌನ್ಸೆಲಿಂಗ್ ಮೂಲಕ ಹಂಚಿಕೆ ಮಾಡಿದ್ದ ಸರ್ಕಾರಿ ಕೋಟಾದ 802 ಎಂಜಿನಿಯರಿಂಗ್ ಸೀಟುಗಳನ್ನು ವಾಮಮಾರ್ಗದ ಮೂಲಕ ಆಡಳಿತ ಮಂಡಳಿ ಕೋಟಾದ ಸೀಟುಗಳನ್ನಾಗಿ ಪರಿವರ್ತನೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ವಿ.ವಿ.ಕುಲಪತಿ ಡಾ.ಎಚ್.ಮಹೇಶಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

 ಸರ್ಕಾರಿ ಕೋಟಾದ ಎಂಜಿನಿಯರಿಂಗ್ ಸೀಟುಗಳು ಅಕ್ರಮವಾಗಿ ಮಾರಾಟವಾಗಿರುವ ವಿಷಯ ವಿ.ವಿ ಗಮನಕ್ಕೆ ಬಂದಿದೆ. ಇದು ಹೇಗೆ ಆಗಿದೆ? ಯಾವ ಹಂತದಲ್ಲಿ ಆಗಿದೆ? ಕಾಲೇಜುಗಳ ಆಡಳಿತ ಮಂಡಳಿಯವರು ಇದರಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಹೆಚ್ಚಿನ ವಿವರಗಳ ಅಗತ್ಯವಿದೆ. ಆದ್ದರಿಂದ ಈ ವಿಷಯವನ್ನು ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿಯ ಗಮನಕ್ಕೆ ತಂದು ಮುಂದಿನ ವಾರ ತನಿಖೆಗೆ ಆದೇಶಿಸಲಾಗುವುದು ಎಂದರು.

ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗುವುದು. ಸಮಿತಿಯಲ್ಲಿ ಕಾನೂನು ತಜ್ಞರು, ಚಾರ್ಟರ್ಡ್ ಅಕೌಂಟೆಂಟ್, ವಿಷಯ ತಜ್ಞರು ಇರುತ್ತಾರೆ. ಸಮಿತಿಯು ಅಕ್ರಮಗಳು ನಡೆದಿರುವ ಕಾಲೇಜುಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಿದೆ. ಬಳಿಕ ವರದಿ ನೀಡಲಿದೆ. ಎಷ್ಟು ತಿಂಗಳ ಒಳಗೆ ವರದಿ ನೀಡಬೇಕು ಎಂಬುದನ್ನು ಆದೇಶದಲ್ಲಿ ತಿಳಿಸಲಾಗುವುದು ಎಂದು ವಿವರಿಸಿದರು.

ಸರ್ಕಾರಿ ಸೀಟುಗಳ ಮಾರಾಟದ ಹಿಂದೆ ವ್ಯವಸ್ಥಿತವಾದ ಜಾಲವಿದೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಸಮಿತಿಯು ವರದಿ ನೀಡಿದ ನಂತರ ತಪ್ಪಿತಸ್ಥ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಗರದ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ 52 ಮತ್ತು ಗುಲ್ಬರ್ಗದ ದೊಡ್ಡಪ್ಪ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ 61 ಸೀಟುಗಳು ಸೇರಿದಂತೆ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳು ಅಕ್ರಮವಾಗಿ ಮಾರಾಟವಾಗಿರುವ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸರ್ಕಾರಕ್ಕೆ ವರದಿ ನೀಡಿದೆ. ಅದರಲ್ಲಿ ಸಿಐಡಿ ತನಿಖೆಗೆ ಶಿಫಾರಸು ಮಾಡಲಾಗಿದೆ.

ಸಿಐಡಿ ತನಿಖೆ ಸಂಭವ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿರುವ ವರದಿಯನ್ನು ಆಧರಿಸಿ, ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಈ ಸಂಬಂಧ ವಿವರಣೆ ನೀಡುವಂತೆ ಸೂಚಿಸಲಾಗಿದೆ. ಅವರಿಂದ ವಿವರಣೆ ಬಂದ ನಂತರ ಮುಖ್ಯಮಂತ್ರಿಗಳಿಗೆ ವರದಿ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಸಿಐಡಿ ತನಿಖೆಗೆ ಆದೇಶಿಸುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಚಾರ. ಪ್ರಾಧಿಕಾರದ ವರದಿಯಲ್ಲಿ ಸಿಐಡಿ ತನಿಖೆ ನಡೆಸುವ ಅಗತ್ಯವಿದೆ ಎಂದು ಶಿಫಾರಸು ಮಾಡಲಾಗಿದೆ. ಆ ಶಿಫಾರಸನ್ನು ಸರ್ಕಾರ ಒಪ್ಪುವ ಸಾಧ್ಯತೆ ಇದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.