ಸೀಡಿ ತಟ್ಟೆ ಯೋಧರು!

7

ಸೀಡಿ ತಟ್ಟೆ ಯೋಧರು!

Published:
Updated:
ಸೀಡಿ ತಟ್ಟೆ ಯೋಧರು!

ಎಡಗೈಲಿ ಗುಂಡಗಿನ ಸೀಡಿ ತಟ್ಟೆ ಕವರು. ಬಲಗೈಲಿ ನಕಲಿ ಕತ್ತಿ. ಆಡಿಯೋ ಬಿಡುಗಡೆ ಮಾಡಿದವರೆಲ್ಲಾ ಯುದ್ಧಕ್ಕೆ ಹೊರಟಂತೆ ಕಂಡರು. ಇದು ‘ಕೆಂಪೇಗೌಡ’ ಆಡಿಯೋ ಬಿಡುಗಡೆ ಸಮಾರಂಭವನ್ನು ಸುದೀಪ್ ‘ಭಿನ್ನ’ವಾಗಿ ಆಯೋಜಿಸಿದ್ದ ರೀತಿ.‘ಸಿಂಗಂ’ ಚಿತ್ರದ ರೀಮೇಕ್ ‘ಕೆಂಪೇಗೌಡ’. ಅಲ್ಲಿ ಸೂರ್ಯ ಮೀಸೆ ಹೇಗಿತ್ತೋ ಇಲ್ಲಿ ಸುದೀಪ್ ಮೀಸೆಯೂ ಹಾಗೆಯೇ ಇದೆ. ನಿರ್ಮಾಪಕ ಶಂಕರೇಗೌಡ ಮೂರು ವರ್ಷಗಳಿಂದ ಈ ಸಿನಿಮಾ ಮಾಡಬೇಕು ಎಂದುಕೊಂಡಿದ್ದರಂತೆ. ಈಗ ಆ ಬಯಕೆ ಈಡೇರಿತಲ್ಲ ಎಂಬ ಖುಷಿ ಅವರದ್ದು.ಶಿವರಾಜ್‌ಕುಮಾರ್, ಹಿರಿಯ ನಟ ಅಶೋಕ್, ನೈಸ್ ಕಂಪೆನಿಯ ಅಶೋಕ್ ಖೇಣಿ ಹಾಗೂ ಗೃಹ ಸಚಿವ ಅಶೋಕ್ ಆಡಿಯೋ ಬಿಡುಗಡೆ ಮಾಡಿದವರ ಸಾಲಿನಲ್ಲಿದ್ದರು. ಚಿತ್ರದಲ್ಲಿ ಗೃಹಮಂತ್ರಿಯ ಪಾತ್ರ ಮಾಡುವಂತೆ ಸಚಿವ ಅಶೋಕ್ ಅವರನ್ನು ಕೇಳಿಕೊಂಡಾಗ, ನಿಜ ಜೀವನದಲ್ಲೂ ಅವರು ಗೃಹ ಸಚಿವರಾದರಂತೆ! ಹಾಗಾಗಿ, ತಮ್ಮ ಪಾತ್ರವನ್ನು ನಿಜ ಜೀವನಕ್ಕೆ ಸೀಮಿತಗೊಳಿಸಿದ ಅವರಿಗೆ ಸಿನಿಮಾದಲ್ಲಿ ಪಾತ್ರ ನಿರ್ವಹಿಸಲು ಆಗಲಿಲ್ಲ. ಆ ಪಾತ್ರವನ್ನು ಅಶೋಕ್ ಖೇಣಿ ನಟಿಸಿದ್ದಾರೆ.ಡಬ್ಬಿಂಗ್, ರೀಮೇಕ್ ಬಗೆಗೆ ಪದೇಪದೇ ಸೊಲ್ಲೆತ್ತುವ ಹಿರಿಯ ನಟ ಅಶೋಕ್ ಈ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ. ಸುದೀಪ್ ಶ್ರದ್ಧೆಯಿಂದ ಸಿನಿಮಾ ಮಾಡುತ್ತಾರೆಂಬ ಏಕೈಕ ಕಾರಣಕ್ಕೆ ಈ ಚಿತ್ರದಲ್ಲಿ ನಟಿಸಿದ್ದಾಗಿ ಅವರು ಹೇಳಿಕೊಂಡರು. ಸುದೀಪ್ ತಂದೆಯ ಪಾತ್ರದಲ್ಲಿ ಅವರು ಅಭಿನಯಿಸಿದ್ದಾರೆ.ಸಮಾರಂಭದಲ್ಲಿ ಹಾಜರಿದ್ದ ಶಾಸಕ ರಾಜುಗೌಡ ಸುದೀಪ್ ಅವರನ್ನು ಆಲ್‌ರೌಂಡರ್ ಎಂದು ಬಣ್ಣಿಸಿದರು. ಚಿತ್ರ ಒಂದು ವರ್ಷ ಓಡಲಿ ಎಂದು ಉದಾರವಾಗಿ ಹಾರೈಸಿದ್ದು ಸಚಿವ ಆರ್.ಅಶೋಕ್. ಹಾಗಿದ್ದರೆ ಪೈರಸಿ ಹಾವಳಿಯನ್ನು ಸಂಪೂರ್ಣವಾಗಿ ಕಿತ್ತೊಗೆಯಬೇಕು ಎಂದು ಆನಂದ್ ಆಡಿಯೋದ ಮೋಹನ್ ‘ಟಾಂಟ್’ ಕೊಟ್ಟರು. ಸುದೀಪ್ ತಮ್ಮ ಮಾರ್ಗದರ್ಶಕ ಎಂದವರು ಸಂಗೀತ ನಿರ್ದೇಶಕ ಅರ್ಜುನ್. ಶಿವರಾಜ್‌ಕುಮಾರ್ ಸೇರಿದಂತೆ ನೆರೆದ ದೊಡ್ಡ ಸಂಖ್ಯೆಯ ಅತಿಥಿಗಳು ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದೇ ಹಾರೈಸಿದ್ದು. ಸುದೀಪ್ ಮಾತು ಕೂಡ ಎಲ್ಲರ ಧನ್ಯವಾದ ಅರ್ಪಣೆಗೇ ಮೀಸಲಾಯಿತು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry