ಗುರುವಾರ , ಜೂನ್ 24, 2021
28 °C

ಸೀಬರ್ಡ್ ನೌಕಾನೆಲೆ ನಿರಾಶ್ರಿತರಿಗೆ 25 ವರ್ಷವಾದರೂ ಬಾರದ ಪರಿಹಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಇನ್ನೊಂದು ಹಂತ ಮುಗಿದರೆ `ಕದಂಬ~ (ಸೀಬರ್ಡ್) ನೌಕಾನೆಲೆ ಏಷ್ಯಾದಲ್ಲಿಯೇ ಅತಿ ದೊಡ್ಡ ನೌಕಾನೆಲೆಯಾಗಿ ರೂಪುಗೊಳ್ಳಲಿದೆ. ಈ ಕೀರ್ತಿಯ ಜೊತೆಗೆ ರಕ್ಷಣಾ ವಿಷಯದಲ್ಲಿ ದೇಶದ ಪ್ರತಿಷ್ಠೆಯೂ ಹೆಚ್ಚಲಿದೆ. ಆದರೆ ನೋವಿನ ಸಂಗತಿ ಎಂದರೆ ನೌಕಾನೆಲೆಗೆ ಭೂಮಿದಾನ ಮಾಡಿದ ಕುಟುಂಬಗಳಿಗೆ 25 ವರ್ಷ ಕಳೆದರೂ ಯೋಗ್ಯ ಪರಿಹಾರ ದೊರಕಿಲ್ಲ.`ನಿರಾಶ್ರಿತರ ಕಣ್ಣಿನಲ್ಲಿ ಒಂದು ಹನಿ ನೀರು ಬರದಂತೆ ನೋಡಿಕೊಳ್ಳ ಲಾಗುವುದು~ ಇದು ನೌಕಾನೆಲೆಗೆ ಅಡಿಗಲ್ಲು ಇಡಲು 1986ರಲ್ಲಿ ಕಾರವಾರಕ್ಕೆ ಆಗಮಿಸಿದ್ದ ಮಾಜಿ ಪ್ರಧಾನಿ ದಿ. ರಾಜೀವ ಗಾಂಧಿ ಹೇಳಿದ ಮಾತು. ಒಂದು ಹನಿಯಲ್ಲ ಕಣ್ಣೀರ ಕೋಡಿಯೇ ಹರಿದರೂ ನಿರಾಶ್ರಿತರ ಗೋಳು ಕೇಳುವವರಿಲ್ಲ. ವಿಶೇಷ ಭೂಸ್ವಾಧೀನಾಧಿಕಾರಿಗಳ, ಡಿಫೆನ್ಸ್ ಎಸ್ಟೇಟ್ ಆಫೀಸರ್ ಅವರ ನಿರ್ಲಕ್ಷ್ಯ ಧೋರಣೆಯಿಂದಾಗಿ ನಿರಾಶ್ರಿತರು ತೊಂದರೆಗೆ ಸಿಲುಕಿದ್ದಾರೆ.ನೌಕಾನೆಲೆಗಾಗಿ 1986-87ರಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭ ವಾಯಿತು. ತಾಲ್ಲೂಕಿನ ಬಿಣಗಾದಿಂದ ಅಂಕೋಲಾ ತಾಲ್ಲೂಕಿನ ಬಾವಿಕೇರಿ ವರೆಗಿನ ಭೂಮಿಯನ್ನು ನೌಕಾನೆಲೆ ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಗುಂಟೆಗೆ ರೂ. 150ರಂತೆ ದರ ನಿಗದಿ ಮಾಡಿ ಸರ್ಕಾರ ಜಮೀನು ಖರೀದಿಸಿತ್ತು. ಈ ದರ ಕಡಿಮೆ ಆಯಿತು ಎಂದು ನಿರಾಶ್ರಿತರು ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ಭೂಸ್ವಾಧೀನ ಕಲಂ 18(1)ರ ಅಡಿ ನ್ಯಾಯಾಲಯದ ಮೊರೆ ಹೋದರು.ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಗೀತಾ ನಾಯ್ಕ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ 2002ರಲ್ಲಿ ತೀರ್ಪು ನೀಡಿತು. ಕೃಷಿಯೇತರ ಜಮೀನಾಗಿದ್ದರಿಂದ ಗುಂಟೆಗೆ ರೂ. 5000 ಸಾವಿರ ಕೊಡಬೇಕು ಎಂದು ತಿಳಿಸಿತು. ಈ ತೀರ್ಪಿನ ವಿರುದ್ಧ ವಿಶೇಷ ಭೂಸ್ವಾಧೀನಾಧಿಕಾರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಹೈಕೋರ್ಟ್ ಮೇಲ್ಮನವಿಯನ್ನು ತಳ್ಳಿಹಾಕಿ ಗುಂಟೆಗೆ ರೂ. 11,500 ನೀಡಬೇಕು ಎಂದು ಆದೇಶ ನೀಡಿತು.ಈ ತೀರ್ಪಿನ ವಿರುದ್ಧ ಡಿಪೆನ್ಸ್ ಎಸ್ಟೇಟ್ ಆಫೀಸರ್ ಮತ್ತು ವಿಶೇಷ ಭೂಸ್ವಾಧಿನಾಧಿಕಾರಿ 2004ರಲ್ಲಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು (ಅಪೀಲು ಸಂಖ್ಯೆ-23379/2004). ಈ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 28, 2005ರಲ್ಲಿ ವಜಾಗೊಳಿಸಿ ಹೈಕೋರ್ಟ್ ಆದೇಶ ಎತ್ತಿ ಹಿಡಿಯಿತು. ಈ ತೀರ್ಪನ್ನೇ ಆಧಾರವಾಗಿಟ್ಟುಕೊಂಡು ಜಿಲ್ಲಾ ನ್ಯಾಯಾಲಯ ಪರಿಹಾರಕ್ಕೆ ಸಂಬಂಧಿಸಿದ ನೂರಾರು ಪ್ರಕರಣಗಳಿಗೆ ತೀರ್ಪು ನೀಡಿದೆ.ಈ ತೀರ್ಪಿನ ವಿರುದ್ಧ ವಿಶೇಷ ಭೂಸ್ವಾಧೀನಾಧಿಕಾರಿಗಳು ಡಿಫೆನ್ಸ್ ಎಸ್ಟೇಟ್ ಆಫೀಸರ್ ಅವರನ್ನು ವಾದಿಯನ್ನಾಗಿ ಮಾಡಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಮೇಲ್ಮನವಿಯನ್ನು ಹೈಕೋರ್ಟ್ ತಳ್ಳಿಹಾಕಿ ಕೆಳ ನ್ಯಾಯಾಲಯ ನೀಡಿದ ತೀರ್ಪನ್ನೆ ಎತ್ತಿ ಹಿಡಿದಿದೆ.

 

ಈ ಆದೇಶದ ವಿರುದ್ಧ ಪುನಃ ವಿಶೇಷ ಭೂಸ್ವಾಧೀನಾಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಮಾಡಿಕೊಂಡರು. ಇಂತಹ ಒಟ್ಟು 37 ಪ್ರಕರಣಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಫೆ. 9, 2009ರಂದು ಎಲ್ಲ ಮೇಲ್ಮನವಿಗಳನ್ನು ವಜಾ ಮಾಡಿತು.ಹೀಗೆ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ವಿಶೇಷ ಭೂಸ್ವಾಧೀನಾಧಿಕಾರಿಗಳು ಸಲ್ಲಿಸುತ್ತಿರುವ ಮೇಲ್ಮನವಿಗಳು ಮೇಲಿಂದ ಮೇಲೆ ವಜಾ ಆಗುತ್ತಿದ್ದರೂ ಪ್ರಕರಣಕ್ಕೆ ಅಂತ್ಯ ಹಾಡುವ ಬದಲು ಕೊಕ್ಕೆ ಹಾಕಲು ದಾರಿ ಹುಡುಕುತ್ತಲೇ ಇದ್ದಾರೆ.`ಪರಿಹಾರ ನೀಡಲು ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ನಿರಾಶ್ರಿತರು ತೊಂದರೆ ಅನುಭವಿಸಿದ್ದಾರೆ. ನೋವಿನ ಸಂಗತಿ ಎಂದರೆ ಪರಿಹಾರದ ನಿರೀಕ್ಷೆಯಲ್ಲಿದ್ದ ನಿರಾಶ್ರಿತರ ಪೈಕಿ ಕೆಲವರು ಇಹಲೋಕ ತ್ಯಜಿಸಿದ್ದಾರೆ. ಮತ್ತೆ ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನಿರಾಶ್ರಿತರು ತಾಳ್ಮೆ ಕಳೆದುಕೊಳ್ಳುವ ಹಂತ ತಲುಪಿದ್ದಾರೆ~ ಎನ್ನುತ್ತಾರೆ ವಕೀಲ ಲೋಬೊ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.