ಸೀಬಿ ಅರಣ್ಯದಲ್ಲಿ ಘನತ್ಯಾಜ್ಯ: ತೀವ್ರ ವಿರೋಧ

ಶುಕ್ರವಾರ, ಜೂಲೈ 19, 2019
26 °C

ಸೀಬಿ ಅರಣ್ಯದಲ್ಲಿ ಘನತ್ಯಾಜ್ಯ: ತೀವ್ರ ವಿರೋಧ

Published:
Updated:

ಶಿರಾ: ತಾಲ್ಲೂಕಿನ ಸೀಬಿ ಅರಣ್ಯ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ವಿದ್ಯುತ್ ಘಟಕ ಸ್ಥಾಪಿಸಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮಕ್ಕೆ ಮಾಜಿ ಸಚಿವ ಬಿ.ಸತ್ಯನಾರಾಯಣ ಸೇರಿದಂತೆ ಆ ಭಾಗದ ಜನಪ್ರತಿನಿಧಿಗಳು ಹಾಗೂ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಸತ್ಯನಾರಾಯಣ, ಸೀಬಿ ಮತ್ತು ಸೀಬಿ ಅಗ್ರಹಾರಕ್ಕೆ ಸೇರಿದ ಸರ್ವೆ ನಂ.68 ಹಾಗೂ 59ರಲ್ಲಿ ಉದ್ದೇಶಿತ 150 ಎಕರೆಯಲ್ಲಿ ತುಮಕೂರು ನಗರಸಭೆ ಮತ್ತು ಇತರೆ ಪುರಸಭೆಗಳ ಘನತ್ಯಾಜ್ಯ ವಿಲೇವಾರಿ ವಿದ್ಯುತ್ ಘಟಕ ಸ್ಥಾಪಿಸಿದರೆ ತಾಲ್ಲೂಕಿನ ಜನತೆ ಕುಡಿಯಲು ಬಳಸುವ ಹೇಮಾವತಿ ನೀರಿಗೆ ವಿಷ ಬೆರೆಸಿದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಉದ್ದೇಶಿತ ಘನತ್ಯಾಜ್ಯ ವಿದ್ಯುತ್ ಘಟಕದಿಂದ ಕೇವಲ 200 ಮೀಟರ್ ದೂರದ ಕೆಳಭಾಗದಲ್ಲಿ ಹೇಮಾವತಿ ನೀರಿನ ಹಳ್ಳ ಹರಿಯುತ್ತಿದ್ದು, ಸಹಜವಾಗಿಯೇ ಘನತ್ಯಾಜ್ಯ ವಸ್ತುವಿನ ಅನಾರೋಗ್ಯಕರ ಲವಣಾಂಶ ಇತ್ಯಾದಿ ನೀರು ಸೇರಿ  ಸಂಪೂರ್ಣ ಕಲುಷಿತಗೊಂಡು ಹೇಮಾವತಿ ನೀರು ಕುಡಿಯುವ ಶಿರಾ ನಗರ ಮತ್ತು ತಾಲ್ಲೂಕಿನ ಜನ, ಜಾನುವಾರು ಆರೋಗ್ಯದ ಮೇಲೆ ಘೋರ ಪರಿಣಾಮ ಉಂಟಾಗಲಿದೆ ಎಂದರು.ಇದರ ಜತೆ ಘನತಾಜ್ಯ ವಿದ್ಯುತ್ ಘಟಕ ಸ್ಥಾಪಿಸಲು ಮುಂದಾಗಿರುವ 150 ಎಕರೆ ಜಮೀನು ಸಂರಕ್ಷಿತ ಸೀಬಿ ಅರಣ್ಯ ಪ್ರದೇಶದಲ್ಲಿದ್ದು, ಅರಣ್ಯ ಇಲಾಖೆಗೆ ಸೇರಿದೆ. ಅಲ್ಲಿಯ ರೈತರು ಭೂಮಿ ಒತ್ತುವರಿ ಮಾಡಿ ಕೃಷಿ ಮಾಡುತ್ತಿರುವ ಬಗ್ಗೆ ಇಲಾಖೆಗೂ ರೈತರಿಗೂ ಘರ್ಷಣೆ ನಡೆದಿವೆ.

 

ಹೀಗಿದ್ದರೂ ಆ ಜಮೀನನ್ನು ಕಂದಾಯ ಇಲಾಖೆಗೆ ಸೇರಿದ್ದು, ಎಂಬ ರೀತಿಯ ವರದಿಗಳನ್ನು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿ ತರಿಸಿಕೊಂಡು ಈಗಾಗಲೇ ಫಾರಂ ನಂ.4ರಲ್ಲಿ ಡಿನೋಟಿಫೈಗೆ ಮುಂದಾಗಿರುವುದು ಆಶ್ಚರ್ಯಕರ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಲಿತಮ್ಮ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಸದಸ್ಯ ಉದಯಶಂಕರ್, ಶೀಬಿ ಅಗ್ರಹಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಶೀಬಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಣ್ಣ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ನಗರಸಭೆ ಸದಸ್ಯ ಆರ್.ರಾಮು, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಎಂ.ಹೆಂಜಾರಪ್ಪ ಮತ್ತಿತರರು ಇದ್ದರು.ಶಾಸಕರ ವಿರುದ್ಧವೂ ಪ್ರತಿಭಟನೆ

ಹೇಮಾವತಿ ಕುಡಿಯುವ ನೀರು ಕಲುಷಿತಗೊಳಿಸುವ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ವಿದ್ಯುತ್ ಘಟಕ ಸ್ಥಾಪಿಸಲು ಮುಂದಾಗಿರುವ ಕ್ರಮದ ಬಗ್ಗೆ ಯಾವುದೇ ಪ್ರತಿರೋಧ ವ್ಯಕ್ತಪಡಿಸದ ಶಾಸಕ ಟಿ.ಬಿ.ಜಯಚಂದ್ರ ನಿಲುವಿನ ಬಗ್ಗೆ ಮಾಜಿ ಸಚಿವ ಬಿ.ಸತ್ಯನಾರಾಯಣ ಆಶ್ಚರ್ಯ ವ್ಯಕ್ತಪಡಿಸಿದರು.ಒಂದೆಡೆ ಹೇಮಾವತಿ ನೀರು ನಾನೇ ತಂದೆ ಎಂದು ಹೇಳುವ ಜಯಚಂದ್ರ ಮತ್ತೊಂದೆಡೆ ಆ ನೀರಿಗೆ ವಿಷ ಬೆರೆಸಲು ಮುಂದಾಗಿದ್ದರೂ; ಸುಮ್ಮನಿರುವುದು ಅರ್ಥವಾಗುತ್ತಿಲ್ಲ. ಶಾಸಕರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೇ ಅವರ ವಿರುದ್ದವೂ ಪ್ರತಿಭಟಿಸಬೇಕಾದೀತು ಎಂದು ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry