ಸೀಮಾಂಧ್ರ-ತೆಲಂಗಾಣ ವಕೀಲರ ಸಂಘರ್ಷ

7
ಆಂಧ್ರ ಹೈಕೋರ್ಟ್ ಆವರಣದಲ್ಲಿ ಜಟಾಪಟಿ

ಸೀಮಾಂಧ್ರ-ತೆಲಂಗಾಣ ವಕೀಲರ ಸಂಘರ್ಷ

Published:
Updated:

ಹೈದರಾಬಾದ್(ಐಎಎನ್‌ಎಸ್):  ಆಂಧ್ರ ವಿಭಜನೆ ವಿಚಾರಕ್ಕೆ ಸಂಬಂಧಿಸಿ ಸೀಮಾಂಧ್ರ ಹಾಗೂ ತೆಲಂಗಾಣ ಭಾಗದ ವಕೀಲರ ನಡುವೆ ಆಂಧ್ರಪ್ರದೇಶ ಹೈಕೋರ್ಟ್ ಆವರಣದಲ್ಲಿ ಶುಕ್ರವಾರ ಸಂಘರ್ಷ ನಡೆಯಿತು.ಘಟನೆಯಲ್ಲಿ ನಾಲ್ವರು ವಕೀಲರಿಗೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯಿಂದಾಗಿ ಹೈಕೋರ್ಟ್ ಹಾಗೂ ಸುತ್ತಲಿನ ಆವರಣದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು.ಪ್ರತ್ಯೇಕ ರಾಜ್ಯ ರಚನೆಯ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ತ್ವರಿತಗೊಳಿಸುವಂತೆ ಒತ್ತಾಯಿಸಿ ತೆಲಂಗಾಣ ಭಾಗದ ವಕೀಲರು `ಹೈಕೋರ್ಟ್ ಚಲೋ' ಹಮ್ಮಿಕೊಂಡಿದ್ದರು.ಇದೇ ಸಂದರ್ಭದಲ್ಲಿ ರಾಯಲಸೀಮಾ ಭಾಗದ ವಕೀಲರು ಬಾರ್ ಕೌನ್ಸಿಲ್ ಕಚೇರಿ ಸಮೀಪ ಮಾನವ ಸರಪಳಿ ನಿರ್ಮಿಸಿ ಆಂಧ್ರಪ್ರದೇಶ ವಿಭಜಿಸುವ ಕಾಂಗ್ರೆಸ್ ತೀರ್ಮಾನವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ತೆಲಂಗಾಣ ಭಾಗದ ವಕೀಲರು ಸೀಮಾಂಧ್ರ ಮತ್ತು ಕರಾವಳಿ ಆಂಧ್ರ ಭಾಗದ ವಕೀಲರನ್ನು ತಡೆದರು ಎಂಬುದೇ ಗಲಾಟೆಗೆ ಕಾರಣವಾಯಿತು.ಎರಡೂ ಕಡೆಯ ವಕೀಲರು ಘೋಷಣೆಗಳನ್ನು ಕೂಗಿ ಪರಸ್ಪರ ಕಾದಾಟ ನಡೆಸಿದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಲು ಎರಡೂ ಕಡೆಯ ವಕೀಲರನ್ನು ಬಂಧಿಸಿದರು. ಘರ್ಷಣೆ ಸಂಬಂಧ ಮುಖ್ಯನ್ಯಾಯಮೂರ್ತಿ ಕಲ್ಯಾಣ್ ಜ್ಯೋತಿ ಸೇನ್‌ಗುಪ್ತಾ ಅವರಿಗೆ ಪತ್ರ ನೀಡಿರುವ ವಕೀಲರು ಪರಸ್ಪರರ ಗುಂಪನ್ನು ದೂರಿದ್ದಾರೆ.ತೆಲಂಗಾಣ ರಾಜ್ಯ ರಚನೆ ವಿರುದ್ಧ ಅಸಹನೆ ತೋರುತ್ತಿರುವ ಸೀಮಾಂಧ್ರ ಭಾಗದವರಿಗೆ ಪ್ರತಿಭಟನೆ ಮಾಡಲು ಅವಕಾಶ ನೀಡುತ್ತಿರುವ ರಾಜ್ಯ ಸರ್ಕಾರ ಅವರಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿ ತೆಲಂಗಾಣ ಪರ ಸಂಘಟನೆಗಳು ಶುಕ್ರವಾರ ಮಧ್ಯರಾತ್ರಿಯಿಂದ 24 ಗಂಟೆಗಳ ತೆಲಂಗಾಣ ಬಂದ್‌ಗೆ ಕರೆ ನೀಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry