ಭಾನುವಾರ, ಏಪ್ರಿಲ್ 18, 2021
32 °C

ಸೀಮಾ ಸುಂಕ ಇಲಾಖೆ ನೌಕರರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಸೀಮಾಸುಂಕ ಇಲಾಖೆಯಲ್ಲಿ ತರಬೇತಿ ಪಡೆದು ಹಾಲಿ ಕೆಲಸ ನಿರ್ವಹಿಸುತ್ತಿರುವ ಎಚ್(ಎ)ಗ್ರೂಪ್ ನೌಕರರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯುವಂತೆ  ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ನೌಕರರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ವಿಲೇಜ್ ಒಳಾಂಗಣದಲ್ಲಿ ಬುಧವಾರ ಧರಣಿ ನಡೆಸಿದರು.‘ಸೀಮಾಸುಂಕ ಇಲಾಖೆಯಲ್ಲಿ ಮೂರು ಸಾವಿರ ಮಂದಿ ಇದ್ದಾರೆ. ಅದರಲ್ಲಿ ಶೇ.75ರಷ್ಟು ಎಚ್ (ಎ) ಗ್ರೂಪ್, ಶೇ.20 ರಷ್ಟು ಜಿ (ಎ) ಗ್ರೂಪ್, ಶೇ.5 ರಷ್ಟು ಎಫ್ (ಊ) ಗ್ರೂಪ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲಾಖೆ ನಿಯಮದಂತೆ ಪದವಿ, ತರಬೇತಿ ಪಡೆದು ಕೆಲಸ ಮಾಡುತ್ತಿದ್ದಾರೆ. ಹೀಗಿದ್ದೂ, ಮತ್ತೊಮ್ಮೆ ಪರೀಕ್ಷೆ ಏಕೆ ಬರೆಯಬೇಕು?, ದೇಶದಲ್ಲಿನ ಯಾವುದೇ ವಿಮಾನ ನಿಲ್ದಾಣದಲ್ಲಿ ಇಂಥವ್ಯವಸ್ಥೆ ಇಲ್ಲ’ ಎಂದು ಸೀಮಾಸುಂಕ ಇಲಾಖೆ ಕಾರ್ಯನಿರತ ನೌಕರರ ಸಂಘದ ಅಧ್ಯಕ್ಷ ದೇಶಿಕನ್ ಆಕ್ರೋಶ ವ್ಯಕ್ತಪಡಿಸಿದರು.ಇಲಾಖೆಯ ಈ ಧೋರಣೆಯಿಂದ ಎಚ್(ಎ) ಗ್ರೂಪ್ ನೌಕರರ 2250 ಕುಟುಂಬಗಳು ಬೀದಿಪಾಲಾಗಲಿವೆ. ನೌಕರರನ್ನು ಇಲಾಖೆಯಿಂದ ಹೊರಹಾಕುವ ಈ ಕ್ರಮ ಒಂದು ವ್ಯವಸ್ಥಿತ ಸಂಚು ಎಂದು ನೌಕರರು ಆರೋಪಿಸಿದ್ದಾರೆ. ಕೂಡಲೇ ಇಲಾಖೆಯು ಪರೀಕ್ಷಾ ನೋಟಿಸ್ ರದ್ದುಗೊಳಿಸಿ ಯಥಾಸ್ಥಿತಿ ಕಾಯ್ದುಕೊಂಡು ನೌಕರಿಯಲ್ಲಿ ಮುಂದುವರಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಂಘದ ಕಾರ್ಯದರ್ಶಿ ಶಶಿಶೇಖರ್ ತಿಳಿಸಿದ್ದಾರೆ.5 ದಿನಗಳಿಂದ 500ಕೋಟಿ ನಷ್ಟ : ಫೆ.26ರಿಂದ ನಡೆಯುತ್ತಿರುವ ಮುಷ್ಕರದಿಂದಾಗಿ ದಿನವೊಂದಕ್ಕೆ ಅಂದಾಜು 100ಕೋಟಿ ರೂ ಆಮದು ಮತ್ತು ರಫ್ತು ಸುಂಕ ನಷ್ಟವಾಗುತ್ತಿದೆ. ಆ ಪ್ರಕಾರ 5 ದಿನಗಳಲ್ಲಿ 500ಕೋಟಿ ರೂ. ವರೆಗೂ ನಷ್ಟವಾಗಿರುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ತಿಳಿಸಿದರು.ಬೆಂಗಳೂರಿಗೆ ಕೆಟ್ಟ ಹೆಸರು: ಇಲ್ಲಿ ಬರುವ ಅಮದು ಸರಕುಗಳನ್ನು ಸಮಯಕ್ಕೆ ಸರಿಯಾಗಿ ಸಾಗಾಣಿಕೆ ಮಾಡದೆ ಚೆನೈಗೆ ಕಳುಹಿಸಲಾಗುತ್ತಿದೆ. ಇದರ ಹಿಂದೆ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳ ಕುತಂತ್ರ ಅಡಗಿದೆ. ಇದರಿಂದ ಆರ್ಥಿಕ ನಷ್ಟದ ಜೊತೆಗೆ ಬೆಂಗಳೂರು ವಿಮಾನ ನಿಲ್ದಾಣವನ್ನು ಎಲ್ಲಾ ರೀತಿಯಿಂದ ಅವ್ಯವಸ್ಥೆಯ ತಾಣ ಎಂದು ಬಿಂಬಿಸಿ, ಬೆಂಗಳೂರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.