ಸೀಮೆಎಣ್ಣೆ, ರಸಗೊಬ್ಬರಕ್ಕೆ ನೇರ ನಗದು ಸಬ್ಸಿಡಿ

7

ಸೀಮೆಎಣ್ಣೆ, ರಸಗೊಬ್ಬರಕ್ಕೆ ನೇರ ನಗದು ಸಬ್ಸಿಡಿ

Published:
Updated:

ನವದೆಹಲಿ (ಪಿಟಿಐ): ವಿವಿಧ ಯೋಜನೆಗಳಡಿಯಲ್ಲಿ ಒದಗಿಸಿರುವ ಸಬ್ಸಿಡಿಗಳ ದುರ್ಬಳಕೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಮುಂದಿನ ವರ್ಷದ ಮಾರ್ಚ್‌ನಿಂದ ಬಡವರಿಗೆ ಸೀಮೆಎಣ್ಣೆ ಮತ್ತು ರಸಗೊಬ್ಬರಗಳಿಗೆ ಸರ್ಕಾರವೇ ನೇರವಾಗಿ ನಗದು ಸಬ್ಸಿಡಿ ನೀಡಲಿದೆ ಎಂದು ಪ್ರಕಟಿಸಿದರು.‘ಸೀಮೆಎಣ್ಣೆ ಮತ್ತು ರಸಗೊಬ್ಬರಗಳ ಉತ್ತಮ ಸರಬರಾಜು ಮತ್ತು ವೆಚ್ಚದಲ್ಲಿನ ಹೆಚ್ಚಿನ ದಕ್ಷತೆಗಾಗಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಜನರಿಗೆ ಸರ್ಕಾರವೇ ವಿವಿಧ ಹಂತಹಂತವಾಗಿ ನೇರ ನಗದು ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ. ಇದು 2012ರ ಮಾರ್ಚ್‌ನಿಂದ ಜಾರಿಗೆ ಬರಲಿದೆ’ ಎಂದು ಅವರು ಬಜೆಟ್ ಮಂಡನೆ ವೇಳೆ ತಿಳಿಸಿದರು.‘ಈ ಉದ್ದೇಶಿತ ಯೋಜನೆಯ ಕಾರ್ಯವೈಖರಿಯ ಕ್ರಮವನ್ನು ನಂದನ್ ನಿಲೇಕಣಿ ಅವರ ನೇತೃತ್ವದ ಕಾರ್ಯಪಡೆ ಸಿದ್ಧಪಡಿಸುತ್ತಿದ್ದು, ಈ ತಂಡ ಪ್ರಸಕ್ತ ವರ್ಷದ ಜೂನ್ ತಿಂಗಳಿನಲ್ಲಿ ಮಧ್ಯಂತರ ವರದಿ ನೀಡುವ ನಿರೀಕ್ಷೆಯಿದೆ’ ಎಂದು ಹೇಳಿದರು.ಪ್ರಸ್ತುತ ಬಿಪಿಎಲ್ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್) ಮೂಲಕ ಸೀಮೆಎಣ್ಣೆ ಮತ್ತು ಅಡುಗೆ ಅನಿಲಗಳನ್ನು ಒದಗಿಸಲಾಗುತ್ತಿದೆ. ಯೂರಿಯಾ, ಆಮದು ರಸಗೊಬ್ಬರಗಳು ಸೇರಿದಂತೆ ವಿವಿಧ ರಸಗೊಬ್ಬರಗಳನ್ನು ರೈತರಿಗೆ ಕಡಿಮೆ ಬೆಲೆಯಲ್ಲಿ ಪೂರೈಸಲು ಸರ್ಕಾರ ಕಂಪೆನಿಗಳಿಗೆ ಸಬ್ಸಿಡಿ ಒದಗಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry