ಶನಿವಾರ, ಏಪ್ರಿಲ್ 10, 2021
32 °C

ಸೀರೆ ಮೋಹದ ತಾರೆ

ಎಚ್.ಎಸ್.ರೋಹಿಣಿ Updated:

ಅಕ್ಷರ ಗಾತ್ರ : | |

ತರಾವರಿ ಬಣ್ಣದ, ವಿವಿಧ ವಿನ್ಯಾಸದ, ಅಪರೂಪದ ಸೀರೆಗಳ ಒಡತಿ ನಟಿ ಶ್ರೀಮತಿ. ತಾವು ನಟಿಸುವ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ತಮ್ಮದೇ ಸೀರೆಯುಡುವ ಅವರ ಬಳಿ ಸಾವಿರಕ್ಕೂ ಮೀರಿದ ಸೀರೆಗಳಿವೆ. ಅವು ಯಾರ ಬಳಿಯೂ ಇರದಂಥ ಅಪರೂಪದ ಸೀರೆಗಳು.ಯಾವಾಗಲೂ ಅನನ್ಯ ಎನಿಸುವಂಥ ಸೀರೆಗಳತ್ತಲೇ ತಿರುಗಿ ನೋಡುವ ಶ್ರೀಮತಿ, ಅದರಲ್ಲಿಯೇ ಖುಷಿ ಕಂಡುಕೊಂಡವರು.`ಸೀರೆ ಸಂಗ್ರಹ ನನಗೊಂದು ಪ್ಯಾಶನ್. ತುಂಬಾ ಖುಷಿ ನೀಡುವ ಹವ್ಯಾಸ' ಎನ್ನುವ ಶ್ರೀಮತಿ ಅವರ ಬಳಿ ಕಂಚಿ, ಮೈಸೂರು ರೇಷಿಮೆ, ಡಿಸೈನರ್ ಸೀರೆಗಳು, ಕಸೂತಿ ಸೀರೆಗಳು, ಪ್ಲೇನ್ ಸೀರೆಗಳು, ಕಾಟನ್ ಸೀರೆಗಳು ಹೀಗೆ ಎಲ್ಲಾ ರೀತಿಯ ಸೀರೆಗಳಿವೆ. ಸಿಂಗಾಪುರಕ್ಕೆ ಹೋದಾಗ ಅಲ್ಲಿನ ರೇಷಿಮೆ ಸೀರೆಯನ್ನು ಕೊಂಡು ತಂದಿರುವ ಅವರಿಗೆ ಸೀರೆ ಖರೀದಿಸುವುದು ಎಂದೂ ಬೇಸರ ಹುಟ್ಟಿಸಿಲ್ಲವಂತೆ.ಹುಟ್ಟೂರು ಮೈಸೂರು ಆದರೂ ಶ್ರೀಮತಿ ಬೆಳೆದಿದ್ದು, ಓದಿದ್ದು ಎಲ್ಲಾ ಬೆಂಗಳೂರಿನಲ್ಲೇ. ನಾಟಕದಲ್ಲಿ ಡಿಪ್ಲೊಮಾ ಮುಗಿಸಿರುವ, ಪಿಎಚ್‌ಡಿ ಪದವಿಧರೆ. ಆದರೆ ಡಾ.ಶ್ರೀಮತಿ ಎನಿಸಿಕೊಳ್ಳುವುದಕ್ಕಿಂತ ಕಲಾವಿದೆ ಶ್ರೀಮತಿ ಎನಿಸಿಕೊಳ್ಳುವುದೇ ಅವರಿಗಿಷ್ಟ.ದೂರದರ್ಶನದಲ್ಲಿ ಧಾರಾವಾಹಿಗಳ ಪ್ರಸಾರ ಆರಂಭವಾದ ದಿನಗಳಿಂದ ನಟಿಸುತ್ತಿರುವ ಶ್ರೀಮತಿ, ಆರಂಭದಲ್ಲಿ ಮೃದು ಪಾತ್ರಗಳಲ್ಲಿ ಮಿಂಚಿದವರು. ಆದರೆ `ಮಾಯಾಮೃಗ' ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರ ದೊರಕಿದ ನಂತರ ಅವರಿಗೆ ಅಂಥದೇ ಪಾತ್ರಗಳು ಹುಡುಕಿ ಬರುತ್ತಿವೆ. ಪ್ರಸ್ತುತ `ಚಿತ್ರಲೇಖ' ಧಾರಾವಾಹಿಯಲ್ಲಿ ಅಹಲ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. `ನಟಿಯಾಗಿ ನನಗೆ ತೃಪ್ತಿ ಸಿಕ್ಕಿಲ್ಲ. ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಬೇಕೆಂಬ ಆಸೆ ಇದ್ದೂ ನೆಗೆಟಿವ್ ಪಾತ್ರಗಳಿಗೆ ಮಾತ್ರ ಕರೆ ಬರುತ್ತಿದೆ' ಎಂದು ಬೇಸರ ವ್ಯಕ್ತಪಡಿಸುತ್ತಾರೆ.ಈ ಬೇಸರವನ್ನು ಮರೆಯಲೋ ಎಂಬಂತೆ ಸೀರೆಗಳ ಸಂಗ್ರಹದ ಮೊರೆಹೋಗಿರುವ ಶ್ರೀಮತಿ, ಬೇರೆಯವರ ಸೀರೆಯನ್ನು ಉಡುವುದೂ ಇಲ್ಲ. ತಮ್ಮ ಸೀರೆಯನ್ನು ಬೇರೆ ಯಾರಿಗೂ ಕೊಡುವುದೂ ಇಲ್ಲ ಎಂಬ ಕಟ್ಟುನಿಟ್ಟು ನಿಯಮಕ್ಕೆ ಬದ್ಧರಾದವರು. `ನಂಜನಗೂಡು ನಂಜುಂಡ', `ಪಾರ್ಥ', `ಸಚ್ಚಿ' ಮುಂತಾದ ಸಿನಿಮಾಗಳಲ್ಲೂ ನಟಿಸಿರುವ ಅವರು ಅದರಲ್ಲೂ ತಮ್ಮದೇ ಸೀರೆಗಳನ್ನುಟ್ಟು ನಟಿಸಿದವರು.

ಪುನರಾವರ್ತನೆಯಾಗಿಲ್ಲ!ಎರಡು ವರ್ಷಗಳಿಂದ ಪ್ರಸಾರವಾಗುತ್ತಿರುವ`ಚಿತ್ರಲೇಖ' ಧಾರಾವಾಹಿಯಲ್ಲಿ ಅವರು ಒಂದು ಸಲವೂ ಪುನರಾವರ್ತನೆಯಾಗದಂತೆ ಹೊಸ ಹೊಸ ಸೀರೆಯನ್ನೇ ಉಟ್ಟಿರುವುದು ಬಹುಶಃ ಒಂದು ದಾಖಲೆಯೇ ಇರಬೇಕು.

`ಧಾರಾವಾಹಿಗಳಲ್ಲಿ ಪಾತ್ರಧಾರಿಗಳಿಗೆ ಸೀರೆ ಕೊಡುವುದಿಲ್ಲ. ಅದರಿಂದ ನನ್ನದೇ ಸೀರೆ ಉಡುತ್ತೇನೆ. ಇನ್ನು ಸಿನಿಮಾಗಳಲ್ಲೂ ಪ್ರಧಾನ ಪಾತ್ರಗಳನ್ನು ಹೊರತುಪಡಿಸಿ ಬೇರೆಯವರಿಗೆ ಉಡುಪು ನೀಡುವುದಿಲ್ಲ. ಅದರಿಂದ ನನ್ನದನ್ನೇ ಬಳಸಿದೆ. ನನಗೆ ಅದೇ ಖುಷಿ. ನನ್ನ ಬಳಿ ಇರುವ ಎಲ್ಲಾ ಸೀರೆಯ ಬಣ್ಣಕ್ಕೂ ಹೊಂದುವ ಆಲಂಕಾರಿಕ ಸಾಮಗ್ರಿಗಳು ನನ್ನ ಬಳಿ ಇವೆ. ಅವುಗಳನ್ನೂ ತೊಟ್ಟು ನಟಿಸುತ್ತೇನೆ' ಎನ್ನುತ್ತಾರೆ.ಗೃಹಿಣಿ ಪಾತ್ರಕ್ಕೆ ಮಾಮೂಲು ವಿನ್ಯಾಸದ, ಶ್ರೀಮಂತರ ಪಾತ್ರಕ್ಕೆ ತಕ್ಕುದಾದ ವಿನ್ಯಾಸದ ಸೀರೆಗಳ ಸಂಗ್ರಹ ಅವರ ಬಳಿ ಇದೆ. ಅಂದರೆ 500 ರೂಪಾಯಿಯಿಂದ ಆರಂಭವಾಗಿ 25 ಸಾವಿರ ರೂಪಾಯಿವರೆಗಿನ ಸೀರೆಗಳ ಸಂಗ್ರಹ ಅದು. `ಕಂಟಿನ್ಯೂಟಿ ಶಾಟ್ ಇದ್ದಾಗ ಮಾತ್ರ ಅದೇ ಸೀರೆ ಬಳಸಿರುವೆ. ಅದನ್ನು ಹೊರತುಪಡಿಸಿ ಒಂದು ಸೀರೆ ಇನ್ನೊಂದು ಬಾರಿ ರಿಪೀಟ್ ಆಗಿಲ್ಲ. ಉಟ್ಟ ಸೀರೆಗಳನ್ನು ಬೇರೆ ಕಡೆ ಜೋಡಿಸುತ್ತಾ ಹೋಗುವುದರಿಂದ ಗೊಂದಲವಾಗಿಲ್ಲ' ಎನ್ನುತ್ತಾರೆ.ಇಂಥ ಅಪರೂಪದ ಸೀರೆ ಮೋಹಿ ಶ್ರೀಮತಿ ಅವರಿಗೆ ಇಷ್ಟವಾಗುವ ಸೀರೆ ಎಂದರೆ ಅದು ಮೈಸೂರು ರೇಷಿಮೆ ಸೀರೆ. `ಸಣ್ಣ ಕಾರ್ಯಕ್ರಮವೇ ಇರಲಿ, ದೊಡ್ಡ ಕಾರ್ಯಕ್ರಮವೇ ಇರಲಿ ಮೈಸೂರು ಸಿಲ್ಕ್ ಸೀರೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ. ಅದರ ತೂಕ ಕಡಿಮೆ ಮತ್ತು ಅದು `ಜಾರ್ಜಿಯಸ್ ಲುಕ್' ಕೊಡುತ್ತದೆ. ಅದಕ್ಕೆ ನನಗೆ ತುಂಬಾ ಇಷ್ಟ. ನನ್ನ ಬಳಿ 10 ಸಾವಿರ ರೂಪಾಯಿಂದ 25 ಸಾವಿರ ರೂಪಾಯಿವರೆಗಿನ ಮೈಸೂರು ರೇಷಿಮೆ ಸೀರೆಗಳು ಇವೆ' ಎಂದು ಖುಷಿ ವ್ಯಕ್ತಪಡಿಸುತ್ತಾರೆ.ನೀಲಿ ಬಣ್ಣದ ಸೀರೆಗಳನ್ನು ಮೆಚ್ಚುವ ಶ್ರೀಮತಿ ಅವರ ಸಂಗ್ರಹದಲ್ಲಿ ತೆಳು ನೀಲಿ, ಗಾಢ ನೀಲಿ, ಆನಂದ ಬಣ್ಣ, ಆಕಾಶ ನೀಲಿ ಹೀಗೆ ವಿವಿಧ ಶೇಡ್‌ನ ನೀಲಿ ಸೀರೆಗಳಿವೆ. ಗೌರವರ್ಣ ಹೊಂದಿರುವ ಶ್ರೀಮತಿ ಅವರಿಗೆ ಎಲ್ಲಾ ಬಣ್ಣದ ಸೀರೆಗಳು ಹೊಂದಿಕೆಯಾಗುವುದು ಕೂಡ ಅವರು ಎಲ್ಲಾ ಬಣ್ಣದ ಸೀರೆ ಕೊಳ್ಳುವುದಕ್ಕೆ ಪ್ರೇರಣೆಯಾಗಿದೆಯಂತೆ.ತಮ್ಮ ಆದಾಯವನ್ನೂ ಮೀರಿ ಸೀರೆಗಳಿಗೆ ಖರ್ಚು ಮಾಡುವ ಅವರು ಇಂಥದ್ದೇ ಅಂಗಡಿ ನಿರ್ದಿಷ್ಟವಾದ ಅಂಗಡಿಯನ್ನೇನು ಸೀರೆ ಖರೀದಿಗೆ ಆಶ್ರಯಿಸಿದವರಲ್ಲ. ರಸ್ತೆಯಲ್ಲಿ ಓಡಾಡುವಾಗ ಕಣ್ಣಿಗೆ ಬೀಳುವ ಇಷ್ಟವಾದ ಸೀರೆಯನ್ನೂ ಅವರು ಖರೀದಿಸಿದ್ದು ಇದೆ.ಸೀರೆಯೊಂದಿಗೆ ನೂರು ಚೂಡಿದಾರ್‌ಗಳನ್ನು ಅವರು ಸಂಗ್ರಹಿಸಿದ್ದಾರೆ. ಪಾರ್ಟಿವೇರ್, ಕ್ಯಾಸುವಲ್, ಮಾಮೂಲು ವಿನ್ಯಾಸದ ಚೂಡಿದಾರ್‌ಗಳು ಅವರ ಬಳಿ ಇವೆ. `ಜೀನ್ಸ್- ಟೀಶರ್ಟ್, ಗಾಗ್ರಾ, ಚೂಡಿದಾರ್ ಏನೇ ತೊಟ್ಟರೂ ಸಾಯೋವರೆಗೂ ಉಡಬಹುದಾದ ಸೀರೆ ಕಂಡರೆ ನನಗೆ ಇಷ್ಟ' ಎನ್ನುತ್ತಾ ಸೀರೆ ಮೇಲಿನ ಅಕ್ಕರೆಯನ್ನು ತೋರುತ್ತಾರೆ ಶ್ರೀಮತಿ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.