ಭಾನುವಾರ, ಏಪ್ರಿಲ್ 18, 2021
33 °C

ಸೀಸದಿಂದ ಮುಕ್ತಿ ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲಿ ನೋಡಿದರೂ ಸೀಸ, ಯಾವುದರಲ್ಲಿ ನೋಡಿದರೂ ಸೀಸ, ಹಾಗಿದ್ದರೆ ಇದನ್ನು ಬಳಸದೆ ಇರಲು ಸಾಧ್ಯವೇ ಇಲ್ಲವೇ? ಸೀಸದ ದುಷ್ಪರಿಣಾಮಗಳಿಂದ ನಮಗೆ ಮುಕ್ತಿಯೇ ಇಲ್ಲವೇ ಎಂಬ ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡಬಹುದು. ಇವುಗಳಲ್ಲಿ ಮೊದಲನೆಯ ಪ್ರಶ್ನೆಗೆ `ಇಲ್ಲ~ ಮತ್ತು ಎರಡನೇ ಪ್ರಶ್ನೆಗೆ `ಇದೆ~ ಎಂಬ ಉತ್ತರ ನೀಡಬೇಕಾಗುತ್ತದೆ. ಏಕೆಂದರೆ ನಮ್ಮ ನಿತ್ಯಬಳಕೆಯಲ್ಲಿ ಸೀಸವನ್ನು ಬಳಸದೇ ಇರುವುದು ಅಸಾಧ್ಯ. ಈಗ ನಮ್ಮ ಜೀವನದಲ್ಲಿ ಸೀಸ ಹಾಸುಹೊಕ್ಕಾಗಿರುವುದನ್ನು ಲೆಕ್ಕದಲ್ಲಿಟ್ಟು ನೋಡಿದರೆ, ಪ್ರತಿ ಮನುಷ್ಯನ ಬಳಕೆಗೆ ಜೀವನಪರ್ಯಂತ 500 ಕೆ.ಜಿ ಸೀಸ ಬೇಕಾಗುತ್ತದೆ! ಆದರೆ ಅದರ ದುಷ್ಪರಿಣಾಮಗಳಿಂದ ಮುಕ್ತಿ ಪಡೆಯುವುದು ಮಾತ್ರ ನಮ್ಮ ಕೈಯಲ್ಲೇ ಇದೆ.ಮೊಬೈಲ್, ಟಿ.ವಿ, ಯುಪಿಎಸ್... ಹೀಗೆ ಯಾವುದೇ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತೆಗೆದುಕೊಂಡರೂ ಅದರಲ್ಲಿ ಸೀಸ ಇರುತ್ತದೆ. ಅಲ್ಲದೆ ಈ ವಸ್ತುಗಳನ್ನು ದುರಸ್ತಿ ಮಾಡುವಾಗ ಬೆಸುಗೆ ಹಾಕುವಾಗಲೂ ಸೀಸ ಬಳಸಲಾಗುತ್ತದೆ. ಆದರೆ ಅವುಗಳನ್ನು ಬಳಸುವಾಗ ಮುನ್ನೆಚ್ಚರಿಕಾ ಕ್ರಮಗಳನ್ನು ಮಾತ್ರ ತಪ್ಪದೇ ತೆಗೆದುಕೊಳ್ಳಬೇಕು. ಅಲಂಕಾರಿಕ ಸಾಮಗ್ರಿ, ಬಣ್ಣಗಳು, ಅದರಲ್ಲೂ ಮಕ್ಕಳು ಚಿತ್ರ ಬರೆಯಲು ಬಳಸುವ ಬಣ್ಣ, ಆಟಿಕೆ, ಅಡುಗೆ ಕೋಣೆಯಲ್ಲಿ ಬಳಸುವ ಪಾತ್ರೆ ಪಗಡಗಳು, ಪಿಂಗಾಣಿ ವಸ್ತುಗಳಲ್ಲಿ ಸೀಸದ ಅಂಶ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ನಮ್ಮ ಆರೋಗ್ಯಕ್ಕೆ, ನಮ್ಮ ಮಕ್ಕಳ ಬುದ್ಧಿಮತ್ತೆಗೆ ಧಕ್ಕೆ ತಂದರೂ ಸರಿ, ಪ್ರತಿಷ್ಠೆಯ ಸಲುವಾಗಿಯಾದರೂ ಸೀಸಸಹಿತ ಪಿಂಗಾಣಿ ವಸ್ತುಗಳು, ಅಲಂಕಾರ ಸಾಮಗ್ರಿಗಳನ್ನು ಬಳಸಿಯೇ ತೀರಬೇಕೆಂಬ ಹುಚ್ಚು ವ್ಯಾಮೋಹ ನಮಗೆ ಯಾಕೆ?ಸೀಸದ ಅಪಾಯ ಅರಿಯದೇ ಅದರ ಬಳಕೆಯನ್ನು ಹೆಚ್ಚಾಗಿ ಮಾಡಿದ್ದರೆ ಹೆದರಬೇಕಿಲ್ಲ, ಅದಕ್ಕೆ ಪರಿಹಾರ ಇದೆ. ಅಂಥಾ ಸೀಸದಂತಾ ಸೀಸಕ್ಕೂ ನಮ್ಮ ಬಗ್ಗೆ ಕೊಂಚ ಕರುಣೆ ಇದೆ. ಅದು ದೇಹ ಸೇರಿದ ಕೂಡಲೇ ತನ್ನ ಅಟಾಟೋಪ ತೋರಿಸಲು ಆರಂಭಿಸಿಬಿಡುವುದಿಲ್ಲ. ನಮಗೆ ಒಂದಷ್ಟು ಸಮಯ ಕೊಟ್ಟು ನೋಡುತ್ತದೆ. ಆದರೂ ನಾವು ಎಚ್ಚೆತ್ತುಕೊಳ್ಳದೆ ನಿರಂತರವಾಗಿ ಅದರ ಸಂಪರ್ಕಕ್ಕೆ ಬಂದು ಅದು ಒಮ್ಮೆ ಮೂಳೆ, ಹಲ್ಲು, ಉಗುರುಗಳಲ್ಲಿ ಸಂಗ್ರಹವಾಗಿಬಿಟ್ಟಿತೆಂದರೆ ಮಾತ್ರ ಮುಗಿಯಿತು. ಶೇ 50 ಭಾಗ ಹೊರಬರಬೇಕೆಂದರೂ ಬರೋಬ್ಬರಿ 35- 38 ವರ್ಷಗಳು ಬೇಕೇಬೇಕು.ಹೀಗಾಗಿ ಮೊದಲು ನಮ್ಮ ಮನೆಯ ಅಥವಾ ಮಕ್ಕಳು ಹೆಚ್ಚಾಗಿ ಸಮಯ ಕಳೆಯುವ ಸ್ಥಳದ ಸುತ್ತಮುತ್ತಲಿನ ವಾತಾವರಣ ಸೀಸ ಹೆಚ್ಚಾಗಿ ಬಳಕೆಯಾಗುವಂತಹ ಬ್ಯಾಟರಿ ದುರಸ್ತಿ ಅಂಗಡಿ, ಗ್ಯಾರೇಜ್‌ಗಳು, ಗಾಜು ತಯಾರಿಕೆ, ನಿರ್ಮಾಣ ಕಾರ್ಯದ ಸ್ಥಳಗಳಿಂದ ದೂರ ಇದೆಯೇ, ಮನೆಗಳಿಗೆ ಸೀಸ ರಹಿತ ಬಣ್ಣ ಹೊಡೆಯಲಾಗಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಹಾಗೇನಾದರೂ ಇದ್ದರೆ ಮೊದಲು ಅವುಗಳಿಂದ ದೂರ ಆಗಬೇಕು. ಮಕ್ಕಳು ಸೀಸದ ಸಂಪರ್ಕಕ್ಕೆ ಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ, ದೇಹ ಸೇರಿದರೂ ಅದರ ವಿರುದ್ಧ ಹೋರಾಡುವ ಸಾಮರ್ಥ್ಯ ನೀಡುವಂತಹ ಪೌಷ್ಟಿಕ ಆಹಾರವನ್ನು ಅವರಿಗೆ ನೀಡಬೇಕು. ಸೀಸ ತೆಗೆಯುವ ಫಿಲ್ಟರ್‌ಗಳನ್ನು ಬಳಸಬೇಕು.ಎಲ್ಲಕ್ಕಿಂತ ಹೆಚ್ಚಾಗಿ ಜಲ ಮೂಲಗಳಿಗೆ ಸೀಸ ಸೇರದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಪೈಪ್‌ಗಳಿಗೆ ಸೀಸದ ಬೆಸುಗೆ ಹಾಕದಂತೆ ಜಲಮಂಡಳಿ ಅಧಿಕಾರಿಗಳಿಗೆ ಸರ್ಕಾರ ಅರಿವು ಮೂಡಿಸಬೇಕು. ಹಳ್ಳಿಗಳಲ್ಲಿ ಟ್ರ್ಯಾಕ್ಟರ್ ಬ್ಯಾಟರಿಗಳು ಹಾಳಾಗಿದ್ದರೆ ಅವುಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಆಯಾಯ ಕಂಪೆನಿಗಳಿಗೆ ವಾಪಸ್ ಕಳುಹಿಸಬೇಕು.ಮಗುವಿಗೆ ಐದು ವರ್ಷ ತುಂಬುವವರೆಗೂ ವರ್ಷಕ್ಕೆ ಒಂದು ಸಲ ರಕ್ತದಲ್ಲಿರುವ ಸೀಸದ ಪ್ರಮಾಣದ ಪರೀಕ್ಷೆ ಮಾಡಿಸಬೇಕು. ಹೆಚ್ಚಾಗಿರುವುದು ಕಂಡುಬಂದರೆ ಕಡಿವೆು ಮಾಡಿಕೊಳ್ಳಲು ಅಗತ್ಯವಾದ ಔಷಧಿ, ಚಿಕಿತ್ಸೆ ಪಡೆದುಕೊಳ್ಳಬೇಕು. ಹೀಗೆ ವರ್ಷಕ್ಕೊಮ್ಮೆ ನಾವು ಶ್ರಮ ಹಾಕಿದರೆ ಸಾಕು ಜೀವನಪೂರ್ತಿ ಮಕ್ಕಳ ಬುದ್ಧಿಮತ್ತೆ (ಐ.ಕ್ಯು) ಕಾಪಾಡಿಕೊಳ್ಳಬಹುದು. ಒಟ್ಟಿನಲ್ಲಿ ಸೀಸ ದೇಹ ಹೊಕ್ಕರೂ ಅದು ಮೂಳೆ ಸೇರುವ ಮೊದಲು ಇದೆಲ್ಲಾ ಕೆಲಸ ನಡೆಯಬೇಕು. ದೇಹ ಪದೇ ಪದೇ ಸೀಸದ ಸಂಪರ್ಕಕ್ಕೆ ಬಂದರೆ 5-6 ವರ್ಷಗಳಲ್ಲಿ ಅದು ಮೂಳೆ ಸೇರುವುದು ಗ್ಯಾರಂಟಿ.ಒಮ್ಮೆ ಮಕ್ಕಳ ಬುದ್ಧಿಮತ್ತೆ ಕಡಿವೆು ಆಗಿಬಿಟ್ಟರೆ ಅದನ್ನು ಮತ್ತೆ ಪಡೆದುಕೊಳ್ಳಲಾಗದು. ಆದರೆ ಪ್ರಯತ್ನ ಮಾಡಿದರೆ ಇರುವಷ್ಟನ್ನು ಉಳಿಸಿಕೊಳ್ಳಬಹುದು. ಮಕ್ಕಳು ದೇಶದ ಆಸ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದೇ ಬುದ್ಧಿಹೀನ ಮಕ್ಕಳು ಬೆಳೆದಂತೆಲ್ಲಾ ದೇಶಕ್ಕೆ ಭಾರವಾಗುತ್ತಾ ಹೋಗುತ್ತಾರೆ. ನಮ್ಮದು ಬುದ್ಧಿವಂತರ ನಾಡು ಆಗಬೇಕಾದರೆ ಮಕ್ಕಳ ಬುದ್ಧಿಮತ್ತೆ ಕಾಯ್ದುಕೊಳ್ಳಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು.ಲೆಡ್ ಕ್ಲಿನಿಕ್

ತೀರಾ ಇತ್ತೀಚಿನವರೆಗೂ ದೇಹದಲ್ಲಿನ ಸೀಸದ ಅಂಶ ಪತ್ತೆ ಮಾಡುವ ವ್ಯವಸ್ಥೆ ನಮ್ಮಲ್ಲಿ ಇರಲಿಲ್ಲ. ಆದರೆ ಇದೀಗ ಬೆಂಗಳೂರಿನ ಮೂರು ಕೇಂದ್ರಗಳಲ್ಲಿ (ಬ್ಯಾಪ್ಟಿಸ್ಟ್ ಆಸ್ಪತ್ರೆ, ಕಣ್ವ ಡಯಾಗ್ನಾಸ್ಟಿಕ್ ಸೆಂಟರ್ ಮತ್ತು ಸೇಂಟ್ ಜಾನ್ಸ್ ವೈದ್ಯಕೀಯ ಆಸ್ಪತ್ರೆ) ಕೇವಲ 400- 500 ರೂಪಾಯಿಗೆ ಇಂತಹ ಪರೀಕ್ಷೆ ಲಭ್ಯವಿದೆ. ಹೀಗೆ ಪರೀಕ್ಷೆ ಮಾಡಿದ ಮಕ್ಕಳಲ್ಲಿ ಸೀಸದ ಅಂಶ ಇರದಿದ್ದರೆ `ಲೆಡ್ ಸೇಫ್~ ಎಂಬ ಬ್ಯಾಡ್ಜ್ ನೀಡುವ ವ್ಯವಸ್ಥೆ ಸಹ ಇದೆ. ಈ ವರ್ಷದ ಕೊನೆಗೆ 25 ಕೇಂದ್ರಗಳಲ್ಲಾದರೂ ರಕ್ತ- ಸೀಸ ಪರೀಕ್ಷೆಗೆ ಅವಕಾಶ ಕಲ್ಪಿಸಿ, ಮುಂದಿನ ವರ್ಷ ಕೇಂದ್ರಗಳ ಸಂಖ್ಯೆಯನ್ನು 100ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಸೀಸದ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು, ಎಲ್ಲ ಆಸ್ಪತ್ರೆಗಳೂ ವಾರಕ್ಕೆ ಒಂದು ದಿನವಾದರೂ ಈ ಬಗೆಯ ಸೇವೆಗೆ ಸಿದ್ಧವಾಗಬೇಕು ಎಂಬ ಒತ್ತಡ ಕೇಳಿಬರುತ್ತಿದೆ. ಗ್ರಾಮ ಮಟ್ಟದಲ್ಲಿ ಸೀಸದ ಪರಿಣಾಮಗಳ ಅರಿವು, ಚಿಕಿತ್ಸಾ ಮಾಹಿತಿ ಒದಗಿಸುವ ಕಾರ್ಯಕ್ರಮಗಳು, ಗ್ರಾಮ ಪಂಚಾಯಿತಿಗಳಿಗೆ ಪ್ರೋತ್ಸಾಹ ಧನದ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ತೇಜನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ.ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶಗಳಲ್ಲಿ `ಲೆಡ್ ಕ್ಲಿನಿಕ್~ಗಳು ಆರಂಭವಾಗಿದ್ದು, ಕೇರಳ, ತಮಿಳುನಾಡುಗಳಲ್ಲೂ ಸದ್ಯದಲ್ಲೇ ಕಾರ್ಯಾರಂಭ ಮಾಡಲಿವೆ. ಭಾರತದ `ಲೆಡ್ ಕ್ಲಿನಿಕ್~ಗಳಿಗೆ ಈಗ ವಿದೇಶಗಳಲ್ಲೂ ಬೇಡಿಕೆ ಆರಂಭವಾಗಿದೆ. ಸೀಸದ ದುಷ್ಪರಿಣಾಮಗಳನ್ನು ತಡೆಯುವ ಭಾರತದ ಪ್ರಯತ್ನದಿಂದ ಉತ್ತೇಜಿತವಾಗಿರುವ ನೇಪಾಳ, ಬಾಂಗ್ಲಾ, ಶ್ರೀಲಂಕಾ, ಮಾಲ್ಡೀವ್ಸ್, ಮಾರಿಷಸ್, ಫಿಲಿಪ್ಪೀನ್ಸ್‌ನಂತಹ ದೇಶಗಳು ತಮ್ಮಲ್ಲೂ ಇಂತಹ ಕ್ಲಿನಿಕ್‌ಗಳನ್ನು ತೆರೆಯಲು ಸಹಕರಿಸುವಂತೆ ಭಾರತವನ್ನು ಕೋರಿವೆ.

ಎಷ್ಟಿದ್ದರೆ ಅಪಾಯ?

ಈ ಪ್ರಶ್ನೆಗೆ ಸಿಗುವ ಉತ್ತರ ಕೇಳಿದರೆ ಯಾರಿಗಾದರೂ ಅಚ್ಚರಿಯಾಗದೇ ಇರದು. ಏಕೆಂದರೆ ನಗಣ್ಯ ಎನ್ನಬಹುದಾದ ಪ್ರಮಾಣದಲ್ಲಿ ಸೀಸ ನಮ್ಮ ದೇಹ ಸೇರಿದರೂ ಅದು ಅತ್ಯಂತ ಅಪಾಯಕಾರಿ ಸ್ಥಿತಿಗೆ ನಮ್ಮನ್ನು ಕೊಂಡೊಯ್ಯಬಲ್ಲದು.ಉದಾಹರಣೆಗೆ: ಒಂದು ಕೆ.ಜಿಗೆ 1000 ಗ್ರಾಂ. 1000 ಮಿಲಿಗ್ರಾಂ ಸೇರಿದರೆ ಒಂದು ಗ್ರಾಂ ಆಗುತ್ತದೆ. ಇಂತಹ ಒಂದು ಮಿಲಿಗ್ರಾಂ ಅನ್ನು 1000 ಭಾಗ ಮಾಡಿದರೆ ಸಿಗುವುದೇ ಮೈಕ್ರೋಗ್ರಾಂ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇಂತಹ ಕೇವಲ 10 ಮೈಕ್ರೊಗ್ರಾಂನಷ್ಟು ಸೀಸ ರಕ್ತದ ಕಣಗಳಲ್ಲಿ ಸೇರಿ ಹೋದರೂ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ!

* * *

ಸೌದಿ ಅರೇಬಿಯಾಗೆ ಹೋಗಲು ನಮ್ಮ ದೇಶದಲ್ಲಿ ವೀಸಾ ಪಡೆದುಕೊಳ್ಳಬೇಕೆಂದರೆ ಸೀಸದ ಪರೀಕ್ಷೆ ಮಾಡಿಸಿಕೊಂಡಿರಲೇಬೇಕು. ಸೀಸದ ಅಂಶ ಹೆಚ್ಚಾಗಿದ್ದರೆ ವೀಸಾ ಇಲ್ಲ. ಹೀಗಾಗಿ ಮುಂಬೈನಲ್ಲಿ ಇದೀಗ ವೀಸಾಗಾಗಿ ಇಂತಹ ಪರೀಕ್ಷೆ ಮಾಡಲಾಗುತ್ತಿದೆ. ಭಾರತದಲ್ಲಿ ಸೀಸದ ಉತ್ಪಾದನೆ ಕಡಿಮೆ, ಮರುಬಳಕೆಯೇ ಹೆಚ್ಚು. ದೇಶದ ಏಕೈಕ ಸೀಸದ ಗಣಿ ರಾಜಸ್ತಾನದಲ್ಲಿದೆ.

* * *

ನಾವು ಬಳಸುವ ನೀರಿನಲ್ಲಿ ಸೀಸದ ಅಂಶ 50 ಪಿಪಿಬಿ (ಪಾರ್ಟ್ಸ್ ಪರ್ ಬಿಲಿಯನ್) ಮೀರಬಾರದು ಎಂದು ಅಂತರ ರಾಷ್ಟ್ರೀಯ ಮಾನದಂಡ ಹೇಳುತ್ತದೆ. ಆದರೆ ಭಾರತದಲ್ಲಿ ಈ ಪ್ರಮಾಣ 50- 400 ಪಿಪಿಬಿ ಇದೆ. ಹೀಗಾಗಿ ನೀವು ಕುಡಿಯುತ್ತಿರುವ ನೀರು ಸೀಸ ರಹಿತವೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಿಂದೆಲ್ಲಾ ನಮ್ಮ ನೀರು ಸೀಸದ ಅಂಶ ಸೇರಿರದ ಮೇಲ್ಮೈ ಮೂಲದಿಂದ (ನದಿ, ಸರೋವರ ಇತ್ಯಾದಿ) ಬರುತ್ತಿತ್ತು. ಆದರೆ ಈಗ ಇಂತಹ ನೀರಿನ ಮೂಲಗಳು ಕ್ಷೀಣಿಸುತ್ತಿರುವುದರಿಂದ ಪರಿಸರ ಮಾಲಿನ್ಯದ ಬಳುವಳಿಯಾಗಿ ಸೀಸವನ್ನು ಸೇರಿಸಿಕೊಂಡಿರುವ ಅಂತರ್ಜಲ ಮೂಲವನ್ನೇ ನಾವು ಆಶ್ರಯಿಸಬೇಕಾಗಿದೆ.

* * *

ಕಲಾಯಿ ಹಾಕಿದ ಪಾತ್ರೆಗಳ ಬಗ್ಗೆ ಎಚ್ಚರಿಕೆ ಇರಲಿ. ಏಕೆಂದರೆ ಕಲಾಯಿ ಹಾಕುವಾಗ ಟಿನ್ನು, ತವರದ ಜೊತೆಗೆ ಸೀಸವನ್ನೂ ಸೇರಿಸಿಬಿಡುವ ಸಾಧ್ಯತೆ ಇರುತ್ತದೆ. ಗೌರಿ- ಗಣೇಶ ಹಬ್ಬದಲ್ಲಿ ಆದಷ್ಟೂ ಬಣ್ಣವಿಲ್ಲದ ಮೂರ್ತಿಗಳನ್ನೇ ತರಬೇಕು. ಒಂದು ವೇಳೆ ಬಣ್ಣ ಇದ್ದರೂ ಅದು ಸೀಸ ರಹಿತವಾಗಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಹೋಳಿ ಆಡಲು ಬಳಸುವ ಬಣ್ಣ ಸಹ ಸೀಸರಹಿತ ಆಗಿರಬೇಕು. 

ಉತ್ತಮ ಆಹಾರ ಸೇವಿಸುವ ಮಕ್ಕಳ ದೇಹ ಕಡಿವೆು ಪ್ರಮಾಣದಲ್ಲಿ ಸೀಸವನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಮಕ್ಕಳ ಆಹಾರದಲ್ಲಿ ಸೊಪ್ಪು, ಕಬ್ಬಿಣದ ಅಂಶ, ಬೇಳೆಕಾಳಿನಂತಹ ಪೌಷ್ಟಿಕ ಅಂಶ ಇರಲೇಬೇಕು. ಬೆಳ್ಳುಳ್ಳಿ, ಈರುಳ್ಳಿ ಬಳಕೆ ಸಹ ಸೀಸ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ತಿನ್ನುವ ಮುನ್ನ ಮತ್ತು ಹಾಸಿಗೆಗೆ ಹೋಗುವ ಮುನ್ನ ಮಕ್ಕಳ ಕೈಯನ್ನು ಚೆನ್ನಾಗಿ ತೊಳೆಯಿರಿ.ಆಟದ ಸ್ಥಳಗಳನ್ನು ಸ್ವಚ್ಚವಾಗಿಡಿ. ಬಾಟಲಿಗಳು, ಮಕ್ಕಳು ಚೀಪುವ ವಸ್ತುಗಳನ್ನು ಸೀಸರಹಿತ ನೀರಿನಿಂದ ಆಗಾಗ್ಗೆ ತೊಳೆಯುತ್ತಿರಿ. ಬಣ್ಣದ ಗೋಡೆಗಳು ಅಥವಾ ವಸ್ತುಗಳನ್ನು ಮುಟ್ಟಿದ ಕೈಗಳನ್ನು ಬಾಯಿಗೆ ಇಟ್ಟುಕೊಳ್ಳದಂತೆ ನೋಡಿಕೊಳ್ಳಿ

 

(ಸೀಸದ ಬಳಕೆ ಹೇಗೆ?- ಪ್ರಶ್ನೋತ್ತರ ಮಾಲಿಕೆ: ಮುಂದಿನ ವಾರ)

ಡಾ. ತೂಪ್ಪಿಲ್ ವೆಂಕಟೇಶ್

ನಿರ್ದೇಶಕರು- ನ್ಯಾಷನಲ್ ರೆಫರಲ್ ಸೆಂಟರ್ ಫಾರ್ ಲೆಡ್ ಪಾಯಿಸನಿಂಗ್ ಇನ್ ಇಂಡಿಯಾ (ಎನ್‌ಆರ್‌ಸಿಎಲ್‌ಪಿಐ)

ನಿರ್ದೇಶಕರು- ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿ

ಪ್ರಧಾನ ಸಲಹೆಗಾರರು- ಭಾರತ ಗುಣಮಟ್ಟ ಮಂಡಳಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.