ಮಂಗಳವಾರ, ಮೇ 11, 2021
25 °C

ಸುಂಕೇರಿ ಶಾಲೆ ಸೇರಿದರೆ ಬಸ್‌ಪಾಸ್ ಉಚಿತ

ಪ್ರಜಾವಾಣಿ ವಾರ್ತೆ/ ನಾಗೇಂದ್ರ ಖಾರ್ವಿ Updated:

ಅಕ್ಷರ ಗಾತ್ರ : | |

ಕಾರವಾರ: ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿದರೆ ದುಪ್ಪಟ್ಟು ಡೊನೇಶನ್ ಕೊಡುವುದು ಅಷ್ಟೇ ಅಲ್ಲ ಕಿಲೋ ಗಟ್ಟಲೆ ನೋಟ್‌ಬುಕ್ ಹಾಗೂ ಪುಸ್ತಕಗಳನ್ನು ಹೊಂದಿದ ಬ್ಯಾಗ್ ದಿನಾಲೂ ಹೊರಬೇಕು. ಶಾಲೆ ದೂರದಲ್ಲಿದ್ದರೆ ಶಾಲಾ ವಾಹನ ಅಥವಾ ಆಟೊಗಳಿಗೆ ಬಾಡಿಗೆ ನೀಡಬೇಕು. ಹೀಗೆ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಲು ಪಾಲಕರು ದುಡ್ಡಿನ ಹೊಳೆಯನ್ನೇ ಹರಿಸಬೇಕಾಗುತ್ತದೆ.ನಗರದಲ್ಲಿರುವ ಖಾಸಗಿ ಶಾಲೆಗಳಿಗೆ ಅಪವಾದವಾಗಿದೆ ನಗರದ ಸುಂಕೇರಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಸುಸಜ್ಜಿತ ಕಟ್ಟಡ ಹೊಂದಿರುವ ಶಾಲೆ ಖಾಸಗಿ ಶಾಲೆಗಳು ಹೊಂದಿರುವ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಅಷ್ಟೇ ಅಲ್ಲ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ದೇಣಿಗೆ ಹಾಕಿ ಉಚಿತ್ ಬಸ್‌ಪಾಸ್‌ಗಳನ್ನು ವಿತರಿಸುವ ವ್ಯವಸ್ಥೆಯನ್ನೂ ಮಾಡಿದ್ದಾರೆ.ಈಗಾಗಲೇ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಸ್‌ಪಾಸ್‌ಗಳನ್ನು ವಿತರಣೆ ಮಾಡಲಾಗಿದೆ. ಜೂನ್ ಅಂತ್ಯದವರೆಗೆ ಶಾಲಾ ದಾಖಲಾತಿ ನಡೆಯಲಿದ್ದು ದೂರದ ಊರುಗಳಿಂದ ಶಾಲೆಗೆ ದಾಖಲಾಗುವ ಎಲ್ಲ ವಿದ್ಯಾರ್ಥಿಗಳಿಗೂ ಬಸ್‌ಪಾಸ್ ಕಲ್ಪಿಸುವ ಗುರಿ ಶಿಕ್ಷಕರು ಮತ್ತು ಆಡಳಿತ ಮಂಡಳಿ ಸದಸ್ಯರು ಹೊಂದಿದ್ದಾರೆ.ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಬೋಧನೆ ಪ್ರಾರಂಭವಾಗಲಿದೆ. ಇದಕ್ಕೆ ಸಂಬಂಧಪಟ್ಟ ಎಲ್ಲ ಸಿದ್ಧತೆಯನ್ನು ಶಿಕ್ಷಕರು ಮಾಡಿಕೊಂಡಿದ್ದಾರೆ.ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ಹೈಟೆಕ್ ಶೌಚಾಲಯ, ವಿದ್ಯುತ್ ಸೌಲಭ್ಯ, ವಿಶೇಷ ಬಿಸಿಯೂಟ ಯೋಜನೆ, ಎಲ್ಲಾ ಮಕ್ಕಳಿಗೂ ಪೀಠೋಪಕರಣ ವ್ಯವಸ್ಥೆ ಹೊಂದಿರುವುದು ಶಾಲೆಯ ವಿಶೇಷತೆಗಳು.ಸರ್ಕಾರಿ ಶಾಲೆ ಎಂದಾಕ್ಷಣ ಅಲ್ಲಿ ಕಂಪ್ಯೂಟರ್ ಕಲಿಕೆ ಇಲ್ಲ ಎನ್ನುವುದು ಬಹುತೇಕ ಪಾಲಕ ಭಾವನೆ. ಪಾಲಕರಲ್ಲಿನ ಈ ಭಾವನೆಗಳನ್ನು ಸುಳ್ಳಾಗಿಸಿದೆ ಸುಂಕೇರಿ ಸರ್ಕಾರಿ ಶಾಲೆ. ಇಲ್ಲಿ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಇದೆ. ಇದರೊಂದಿಗೆ ಬಾನುಲಿಪಾಠ, ಎಜ್ಯುಸ್ಯಾಟ್ ಸೌಲಭ್ಯವೂ ಇದೆ. ಉಚಿತ ವೈದ್ಯಕೀಯ ತಪಾಸಣೆ ಮತ್ತು ವಿಟಾಮಿನ್ ಮಾತ್ರೆ ಪೂರೈಕೆ ಶಾಲೆಯಲ್ಲಿ ನಿಯಮಿತವಾಗಿ ನಡೆಯುತ್ತಿದ್ದು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲಾಗುತ್ತಿದೆ.ಖಾಸಗಿ ಶಾಲೆಗಳಲ್ಲಿರುವಂತೆ ಈ ಶಾಲೆಯಲ್ಲಿ 1ರಿಂದ7ನೇ ವರ್ಗದ ವರೆಗೆ ವರ್ಗ ಬೋಧನೆ ಇದೆ. ನಿರಂತರ ಸಹಪಠ್ಯ ಚಟುವಟಿಕೆಗಳು, ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನ ಕ್ರಮದಿಂದಾಗಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ.ರಾಷ್ಟ್ರೀಯ, ಅಂತರರಾಷ್ಟ್ರೀಯ ದಿನಾಚರಣೆಗಳ ವೈವಿಧ್ಯಮಯ ಆಚರಣೆ, ಮಕ್ಕಳಿಗೆ ಯೋಗ, ವ್ಯಾಯಾಮ, ನೀತಿ ಶಿಕ್ಷಣ ಬೋಧನೆ, ಶಾಲೆಗಾಗಿ ನಾವು-ನೀವು ಕಾರ್ಯಕ್ರಮ ಆಚರಣೆ, ಶಾಲಾ ಸಮುದಾಯದತ್ತ ಕಾರ್ಯಕ್ರಮ, ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಶೈಕ್ಷಣಿಕ ಪ್ರವಾಸಗಳನ್ನು ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಲು ಶಾಲೆಯ ಶಿಕ್ಷಕರು ಹೆಚ್ಚು ಶ್ರಮವಹಿಸುತ್ತಿದ್ದಾರೆ.`ದೂರ ಅಂದರೆ ಶಾಲೆಯಿಂದ ಸುಮಾರು ಒಂದರಿಂದ ಎರಡು ಮತ್ತು ಅದಕ್ಕಿಂತಲೂ ಹೆಚ್ಚು ದೂರದಲ್ಲಿ ವಾಸ ಮಾಡುವ ಮಕ್ಕಳಿಗೆ ಮಳೆಗಾಲದಲ್ಲಿ ನಡೆದು ಶಾಲೆಗೆ ಬರಲು ಕಷ್ಟವಾಗುತ್ತದೆ. ಇದೂ ಅಲ್ಲದೆ ಶಾಲೆ ದೂರ ಎನ್ನುವ ಕಾರಣಕ್ಕೆ ಶಾಲೆಗೆ ಹೋಗುವುದರಿಂದ ದೂರ ಉಳಿಯುವ ಮಕ್ಕಳಿದ್ದಾರೆ. ಹೀಗಾಗಿ ಅವರಿಗೆ ಉಚಿತ ಬಸ್‌ಪಾಸ್ ನೀಡಿದರೆ ಬಸ್‌ಗಳಲ್ಲಿ ಶಾಲೆಗೆ ಬರಲು ಅವರಿಗೆ ಅನುಕೂಲವಾಗಲಿದೆ' ಎನ್ನುತ್ತಾರೆ ಶಾಲೆಯ ಶಿಕ್ಷಕರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.