ಮಂಗಳವಾರ, ನವೆಂಬರ್ 19, 2019
27 °C

ಸುಂಟರಗಾಳಿಯೊಂದು ಬೀಸಿ ಹೋದ ಮೇಲೆ...

Published:
Updated:

ಗದಗ: ಸುಂಟರಗಾಳಿಯೊಂದು ಬೀಸಿಹೋದ ನಂತರದ ಸ್ಥಿತಿ ಗದಗ ಜಿಲ್ಲೆಯಲ್ಲಿದೆ. `ಹುಲಕೋಟಿಯ ಹುಲಿ' ಮತ್ತು ಅದರ `ಮರಿ'ಗಳು ಸುಮಾರು ಮೂರು-ನಾಲ್ಕು ದಶಕಗಳಿಂದ ಕಷ್ಟಪಟ್ಟು ಕಟ್ಟಿಕೊಂಡಿದ್ದ ರಾಜಕೀಯ ಸಾಮ್ರಾಜ್ಯವನ್ನು ಬಳ್ಳಾರಿ ಕಡೆಯಿಂದ ಬಂದ ಶ್ರಿರಾಮುಲು ಎಂಬ ಸುಂಟರಗಾಳಿ ಕಳೆದ ಚುನಾವಣೆಯಲ್ಲಿ ಕೆಡವಿಹಾಕಿತ್ತು. ಇಂದಿನ ರಾಜಕೀಯದಲ್ಲಿ ಅಪರೂಪವಾಗಿರುವ ಅಭಿವೃದ್ಧಿಯ ಮುನ್ನೋಟ ಮತ್ತು ಸ್ವಚ್ಚ ರಾಜಕಾರಣದ ಹಂಬಲವನ್ನು ಹೊಂದಿರುವ ಎಚ್.ಕೆ.ಪಾಟೀಲ್ ಮತ್ತು ಡಿ.ಆರ್.ಪಾಟೀಲ್ ಎಂಬ ಸೋದರರು  ರಾಮುಲು ಅವರ `ಕೊಡುಗೈ ದಾನಿ' ವ್ಯಕ್ತಿತ್ವದ ಎದುರು ನಿಸ್ಸಹಾಯಕರಾಗಿದ್ದರು.  ಹಣದ ಬಲದಿಂದ ನೋಡನೋಡುತ್ತಿದ್ದಂತೆಯೇ ರಾಮುಲು ಪ್ರತಿಸಾಮ್ರಾಜ್ಯವನ್ನು ಕಟ್ಟಿ ನಿಲ್ಲಿಸಿದ್ದರು.ಗತವೈಭವದ ಆ ದಿನಗಳನ್ನು ಮೆಲುಕುಹಾಕುತ್ತಾ ವಿರಹಿಗಳಂತೆ ನಿಟ್ಟುಸಿರು ಬಿಡುತ್ತಿರುವ ಹಳೆಯ ಫಲಾನುಭವಿಗಳನ್ನು ಈಗಲೂ ಗದಗ ನಗರದ ಬೀದಿಗಳಲ್ಲಿ ಕಾಣಬಹುದು. ಕ್ರಿಕೆಟ್, ನಾಟಕ, ಮದುವೆ, ಸಾವು ಎಲ್ಲವೂ ದುಡ್ಡು ಹಂಚಲಿಕ್ಕೆ ಒಂದು ನೆಪವಾಗಿತ್ತು ಅಷ್ಟೆ. ಈ ಊರಲ್ಲಿ ಇಂತಹ ರಾಜಕೀಯ ಸಂಸ್ಕೃತಿಗೆ ಅವಕಾಶ ಇರಲಾರದು ಎಂದು ತಿಳಿದುಕೊಂಡವರೆಲ್ಲ ಮೂಗಿನ ಮೇಲೆ ಬೆರಳಿಡುವ ರೀತಿಯಲ್ಲಿ ಜನ ಕಿಂದರಿಜೋಗಿಯ ಹಿಂದೆ ಹೋಗಿದ್ದ ಮೂಷಕಸಂಕುಲದಂತೆ ಕೊಚ್ಚಿಕೊಂಡು ಹೋಗಿದ್ದರು.ಎಚ್.ಕೆ.ಪಾಟೀಲರ ಸಹಕಾರ ತತ್ವದ ಪಾಠ, ಡಿ.ಆರ್.ಪಾಟೀಲರ ಗ್ರಾಮಸ್ವರಾಜ್ಯದ ಬಗೆಗಿನ ಬೋಧನೆಯನ್ನು ಕೇಳುವವರೇ ಇಲ್ಲದಂತಾಗಿತ್ತು. ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿದ್ದ ಮಾಜಿ ಸಚಿವ ಎಚ್.ಕೆ.ಪಾಟೀಲ್ ಪರಾಭವ ಹೊಂದಿದ್ದರು. ಇವೆಲ್ಲವೂ ಈಗ ಹಳೆಯ ಕತೆ.  ಐದೇ ವರ್ಷಗಳ ಅವಧಿಯಲ್ಲಿ ರಾಮುಲು ಎಂಬ ಸುಂಟರಗಾಳಿ ಬೀಸಿ ಬಂದಷ್ಟೆ ವೇಗವಾಗಿ ಶಕ್ತಿ ಕಳೆದುಕೊಂಡು ದುರ್ಬಲವಾಗಿ ಹುಟ್ಟಿದೂರಿನಲ್ಲಿಯೇ  ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿದೆ.  ಗದಗ ಜಿಲ್ಲೆಯ ಐದು ವರ್ಷಗಳ ಕಿರು ಅವಧಿಯಲ್ಲಿ ನಡೆದ ಕ್ಷಿಪ್ರಗತಿಯ ರಾಜಕೀಯದ ಏಳು-ಬೀಳುಗಳು ರಾಜಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಒಳ್ಳೆಯ ವಸ್ತು.`ನಿಮ್ಮ ತಪ್ಪು ಇರಲಿಲ್ಲವೇ?' ಎಂದು ಚುನಾವಣಾ ಪ್ರಚಾರದಲ್ಲಿದ್ದ ಎಚ್.ಕೆ.ಪಾಟೀಲರನ್ನು  ಕೇಳಿದೆ. ಅವರು ಎಂದಿನಂತೆ ನಕ್ಕು ಸುಮ್ಮನಾದರು. ಇದೇ ಪ್ರಶ್ನೆಯನ್ನು ಜನರನ್ನು ಕೇಳಿದೆ. `ಮನುಷ್ಯ ಒಳ್ಳೆಯವರು, ಪ್ರಾಮಾಣಿಕರು, ಬುದ್ಧಿವಂತರು. ಆದರೆ ಸಾಮಾನ್ಯ ಮನುಷ್ಯರ ಜತೆ ಬೆರೆಯುತ್ತಿರಲಿಲ್ಲ. ಅವರದ್ದೇನಿದ್ದರೂ ಹುಬ್ಬಳ್ಳಿ ಕ್ಯಾಂಪ್. ಪಾಟೀಲ್ ಸೋದರರು ಮತ್ತು ರಾಮುಲು ಅವರ ವ್ಯಕ್ತಿತ್ವಗಳ ನಡುವೆ ರಾತ್ರಿಹಗಲುಗಳ ಅಂತರ ಇದೆ. ಸೋದರರಿಬ್ಬರದ್ದೂ ಥಟ್ಟನೆ ಆಕರ್ಷಿಸುವ ವ್ಯಕ್ತಿತ್ವ ಅಲ್ಲ, ನಿಧಾನವಾಗಿ ಅರ್ಥಮಾಡಿಕೊಳ್ಳುವಂತಹದ್ದು. ಹಿರಿಯರಿಗೆ ಇದು ಗೊತ್ತಿತ್ತು, ಅಷ್ಟೊಂದು ವ್ಯವಧಾನ ಇಲ್ಲದ ಕಿರಿಯರು ಥಳುಕುಬಳುಕಿನ ರಾಜಕೀಯದ ಹಿಂದೆ ಹೋಗಿಬಿಟ್ಟರು. ಸಂಕೋಚ ಇಲ್ಲದೆ  ಎಲ್ಲರ ಜತೆ ಬೆರೆಯುವ  `ಹಳ್ಳಿಹೈದ' ರಾಮುಲು `ನಮ್ಮವನು' ಎಂದು ಅನಿಸಿದ್ದು ಕೂಡಾ ಪಾಟೀಲ್ ಸೋಲಿಗೆ ಕಾರಣ ಇರಬಹುದು' ಎಂದರು ವಕೀಲರೊಬ್ಬರು.ಬಹುಶಃ ಎಚ್‌ಕೆ ಬದಲಿಗೆ ಡಿ.ಆರ್. ಪಾಟೀಲರು ಸ್ಪರ್ಧಿಸಿದ್ದರೆ ಗೆದ್ದುಬಿಡುತ್ತಿದ್ದರೋ ಏನೋ ಎಂದು ಹೇಳುವವರೂ ಇದ್ದಾರೆ. ಮೂರು ಬಾರಿ ತಾನು ಪ್ರತಿನಿಧಿಸಿದ್ದ ಕ್ಷೇತ್ರವನ್ನು ಮರುಮಾತಿಲ್ಲದೆ ತಮ್ಮನಿಗೆ ಕೊಟ್ಟುಬಿಟ್ಟವರು ಡಿ.ಆರ್.ಪಾಟೀಲರು. ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿರುವುದು ಮಾತ್ರ ಅಲ್ಲ ತಮ್ಮನ ಗೆಲುವಿಗಾಗಿ ರಾತ್ರಿಹಗಲು ಶ್ರಮಿಸುತ್ತಿರುವವರು ಡಿ.ಆರ್.ಪಾಟೀಲ್. ಭಾರತದ ರಾಜಕಾರಣದಲ್ಲಿ ಇಂತಹ ಉದಾಹರಣೆಗಳು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ.ರಾಜಕಾರಣಿಗಳು ಸೋಲಿನಿಂದ ಪಾಠವನ್ನು ಕಲಿಯುವುದು ಕಡಿಮೆ. ಆದರೆ ಎಚ್.ಕೆ.ಪಾಟೀಲ್ ಸ್ವಲ್ಪ ಭಿನ್ನ ರಾಜಕಾರಣಿ. ತನ್ನ ದೋಷವನ್ನು ಎತ್ತಿ ತೋರಿಸಿದ ಚುನಾವಣಾ ಫಲಿತಾಂಶದಿಂದ ಪಾಠ ಕಲಿತ ಎಚ್‌ಕೆ ಜನರನ್ನು ನೇರವಾಗಿ ಮುಟ್ಟಬಲ್ಲಂತಹ ದಾರಿಯ ಹುಡುಕಾಟದಲ್ಲಿದ್ದಾಗ ಅವರಿಗೆ ತೋಚಿದ್ದು ಶುದ್ಧ ಕುಡಿಯುವ ನೀರು ಪೂರೈಕೆಯ ಯೋಜನೆ.  ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆ ಗದಗ. ಗದಗ ನಗರದಲ್ಲಿಯೇ 20-25 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯಲಿಕ್ಕೆ ನೀರು ಕೊಟ್ಟರಷ್ಟೇ ಸಾಕು ಎನ್ನುವ ವಾತಾವರಣ ಇದೆ. ಇನ್ನು ಶುದ್ಧ ಕುಡಿಯುವ ನೀರನ್ನು ಕೊಡುವವರು ಯಾರು? ತಮ್ಮ ಆಸ್ಪತ್ರೆಯಲ್ಲಿದ್ದ ಇಂತಹದ್ದೊಂದು ಘಟಕವನ್ನು ನೋಡಿದ ಪಾಟೀಲರಿಗೆ ಇದನ್ನು ಸಾರ್ವಜನಿಕರಿಗಾಗಿಯೂ ನಿರ್ಮಿಸಿದರೆ ಹೇಗೆ ಎನ್ನುವ ಯೋಚನೆ ಬಂತು. ಇದರ ಪರಿಣಾಮವಾಗಿ ಗದಗ ಮತ್ತು ಸುತ್ತಮುತ್ತಲಿನ 101 ಕಡೆಗಳಲ್ಲಿ  ದಿನದ 24 ಗಂಟೆಗಳ ಕಾಲ `ಶುದ್ಧ ಜೀವ ಜಲ' ನೀಡುವ ಘಟಕಗಳನ್ನು ಸ್ಥಾಪಿಸಿದ್ದಾರೆ.`ಶುದ್ಧ ಜೀವ ಜಲ' ಘಟಕದ ಮುಂದೆ ನೀರಿಗೆ ನಿಂತ ಜನಕೊಳವೆಬಾವಿ ನೀರನ್ನೇ ಆಧುನಿಕ ತಂತ್ರಜ್ಞಾನದ ಮೂಲಕ ಏಳುಹಂತಗಳಲ್ಲಿ ಶುದ್ಧೀಕರಿಸಿ ಹತ್ತು ಪೈಸೆಗೆ ಹತ್ತು ಲೀಟರ್‌ನಂತೆ ನೀಡಲಾಗುತ್ತಿದೆ. ಒಂದೊಂದು ಘಟಕಗಳಲ್ಲಿಯೂ ಹತ್ತರಿಂದ ಹದಿನೈದು ಸಾವಿರ ಲೀಟರ್ ನೀರನ್ನು ಜನ ಕೊಂಡೊಯ್ಯುತ್ತಾರೆ. ರಾಜಕೀಯದಲ್ಲಿ ವಿರೋಧಿಗಳಿಗೆ ನೀರು ಕುಡಿಸಿ ಗೆಲ್ಲುವುದುಂಟು. ಎಚ್.ಕೆ. ಪಾಟೀಲ್ ತಾನು ನಂಬಿದ ಜನರಿಗೆ ನೀರು ಕುಡಿಸಿ ಗೆಲ್ಲಲು ಹೊರಟಿದ್ದಾರೆ. `ಪಾಟೀಲರು ಸೋಲದೆ ಇದ್ದಿದ್ದರೆ ಇಂತಹದ್ದೊಂದು ಯೋಜನೆ ಬರುತ್ತಿತ್ತೊ ಇಲ್ಲವೋ ಗೊತ್ತಿಲ್ಲ. ಈ ದೃಷ್ಟಿಯಿಂದ ಅವರು ಸೋತಿದ್ದು ಒಳ್ಳೆಯದೇ ಆಯಿತು' ಎಂದ ಎಚ್‌ಕೆ ಅಭಿಮಾನಿಯೊಬ್ಬ ಮುಗುಳ್ನಗುತ್ತಾ.ಗದಗ ಕ್ಷೇತ್ರ ಮಾತ್ರವಲ್ಲ ಇಡೀ ಜಿಲ್ಲೆಯ ರಾಜಕೀಯದ ಗಾಳಿ ದಿಕ್ಕು ಬದಲಾಗಿರುವ ಸೂಚನೆಗಳು ಹೋದಲ್ಲಿ ಬಂದಲ್ಲಿ ಸಿಗುತ್ತವೆ. ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರೋಣ ಜಿಲ್ಲೆಯ ಗಜೇಂದ್ರಗಡ ಮತ್ತು ನರಗುಂದ ಜಿಲ್ಲೆಯನ್ನು ಹೊರತುಪಡಿಸಿದರೆ ಉಳಿದೆಲ್ಲೆಡೆ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಗದಗ-ಬೆಟಗೇರಿಯ 35 ಸ್ಥಾನಗಳಲ್ಲಿ 20, ಮುಳಗುಂದದ ಎಲ್ಲ 16 ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ. ರಾಮುಲು ಗಾಳಿಯ ಬಲದಿಂದಾಗಿ ಗದಗ ಕ್ಷೇತ್ರದಲ್ಲಿ ಗೆದ್ದ ಬಿಜೆಪಿಯ ಶ್ರಿಶೈಲಪ್ಪ ಬಿದರೂರು ಈಗ ಗಾಳಿ ಇಲ್ಲದ ಬಲೂನ್ ಆಗಿದ್ದಾರೆ. ಕೆಜೆಪಿಗೆ ಹೋಗಿಯೇ ಬಿಟ್ಟರು ಎಂದು ಹೇಳಲಾಗುತ್ತಿದ್ದ ಬಿದರೂರು ಕೊನೆಗೂ ಬಿಜೆಪಿಯಲ್ಲಿಯೇ ಉಳಿದು ಅಭ್ಯರ್ಥಿಯಾಗಿದ್ದಾರೆ. ಅವರು ಆ ಕಡೆ ಹೋದರೆ ತಮಗೆ ಟಿಕೆಟ್ ಖಂಡಿತ ಎಂದು ಕಾಯುತ್ತಿದ್ದ ಎಸ್.ಬಿ.ಸಂಕಣ್ಣವರ ಈಗ ಅನಿವಾರ್ಯವಾಗಿ ಕೆಜೆಪಿ ಅಭ್ಯರ್ಥಿ. ಇವರ ಜತೆಗೆ ಬಿಎಸ್‌ಆರ್ ಕಾಂಗ್ರೆಸ್‌ನ ಅನಿಲ್ ಮೆಣಸಿನಕಾಯಿ ಕಣದಲ್ಲಿದ್ದಾರೆ. ಇವರು ಮೂವರು ಲಿಂಗಾಯತ ಪಂಚಮಸಾಲಿ ಬಣಕ್ಕೆ ಸೇರಿದವರಾಗಿರುವುದು ಜಾತಿ ಲೆಕ್ಕಾಚಾರ ಕೂಡಾ ಪಾಟೀಲರ ಪರವಾಗಿರುವಂತೆ ಮಾಡಿದೆ. ಜೆಡಿಎಸ್ ಅಭ್ಯರ್ಥಿಯ ಸುಳಿವೇ ಇಲ್ಲ.ಹಾವೇರಿ ಜಿಲ್ಲೆ ಬಿಟ್ಟರೆ ಯಡಿಯೂರಪ್ಪನವರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು ಗದಗ ಜಿಲ್ಲೆಯ ಮೇಲೆ. ಜಗದೀಶ್ ಶೆಟ್ಟರ್ ಅವರಿಗೆ ವೈಯಕ್ತಿಕವಾಗಿ ಸಮೀಪದವರಾಗಿರುವ ಕಳಕಪ್ಪ ಬಂಡಿ (ರೋಣ) ಅವರನ್ನು ಹೊರತುಪಡಿಸಿದರೆ ಉಳಿದ ಮೂವರು ಶಾಸಕರಾದ ಶ್ರಿಶೈಲಪ್ಪ ಬಿದರೂರು (ಗದಗ), ಸಿ.ಸಿ. ಪಾಟೀಲ್ (ನರಗುಂದ) ಮತ್ತು ರಾಮಣ್ಣ ಲಮಾಣಿ (ಶಿರಹಟ್ಟಿ) ಬಹಿರಂಗವಾಗಿಯೇ ಯಡಿಯೂರಪ್ಪನವರ ಜತೆ ಗುರುತಿಸಿಕೊಂಡಿದ್ದರು. ಕೊನೆಗೆ ಮೂವರೂ ಬಿಜೆಪಿಯಲ್ಲಿಯೇ ಉಳಿದರು. ಇದರಿಂದಾಗಿ ಕೆಜೆಪಿ ಕೂಡಾ ಇಲ್ಲಿ ದುರ್ಬಲ. ಸದ್ಯಕ್ಕೆ ಎಲ್ಲ ರಾಜಕೀಯ ಅನುಕೂಲತೆಗಳು ಪಾಟೀಲ್ ಪರವಾಗಿಯೇ ಇದೆ. ಇದನ್ನು ಕಂಡ ರಾಜಕೀಯ ವಿರೋಧಿಗಳು ಪಾಟೀಲ್ ವಿರುದ್ಧ ಏಕ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆಯೂ ಕೊನೆಗಳಿಗೆಯಲ್ಲಿ ಪ್ರಯತ್ನ ನಡೆಸಿದ್ದರು. ಇಂತಹ ಯಾವ ಪ್ರಯತ್ನವೂ ಈ ಬಾರಿ ಎಚ್ಕೆಯವರಿಗೆ ಇರುವ ಅವಕಾಶವನ್ನು ಕಿತ್ತುಕೊಳ್ಳಲಾರದೇನೋ? ಚುನಾವಣಾ ರಾಜಕೀಯವೇನೇ ಇರಲಿ, ಆದರೆ ಎಚ್,ಕೆ. ಪಾಟೀಲ್ ಅವರಂತಹ ರಾಜಕಾರಣಿಗಳು  ವಿಧಾನಸಭೆಯಲ್ಲಿ ಇರಬೇಕಾಗಿರುವುದು ನ್ಯಾಯ.

ಹುಲಕೋಟಿ ಮಾದರಿ

ಪಾಟೀಲ್ ಸೋದರರಲ್ಲಿ ಬಹಳಷ್ಟು ಕಡಿಮೆ ರಾಜಕಾರಣಿಗಳಲ್ಲಿರುವ ಅಭಿವೃದ್ಧಿಯ ಮುನ್ನೋಟ ಇದೆ. ಇದು ಕುಟುಂಬದ ಹಿರಿಯ ಕೆ.ಎಚ್.ಪಾಟೀಲರಿಂದ ವಂಶಪರಂಪರೆಯಾಗಿ ಬಂದ ಗುಣ. ಈ ಮುನ್ನೋಟಕ್ಕೆ ಸಾಕ್ಷಿ ಹುಲಕೋಟಿ.  ಈ ಊರಿನ ಸುಮಾರು 36 ಎಕರೆ ಜಮೀನಿನಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ವಸತಿ ಶಾಲೆ, 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ, ಪ್ರಕೃತಿ ಚಿಕಿತ್ಸೆಯ ಘಟಕ ಮತ್ತು ಕೃಷಿ ವಿಕಾಸ ಕೇಂದ್ರಗಳಿವೆ. ಯುವ ಉದ್ಯಮಶೀಲರಿಗಾಗಿಯೇ ನಿರ್ಮಿಸಲಾಗಿರುವ ನೂರು ಉದ್ಯಮಗಳ ಕೈಗಾರಿಕಾ ಕೇಂದ್ರ ಇದೆ. ಎಲ್ಲವೂ ಸಹಕಾರ ತತ್ವದಡಿಯಲ್ಲಿಯೇ ಸ್ಥಾಪಿಸಲಾಗಿದೆ.

ಸುಮಾರು ಹತ್ತು ಸಾವಿರ ಜನಸಂಖ್ಯೆಯ ಪುಟ್ಟ ಊರಿನಲ್ಲಿ ಗದಗ ನಗರದಲ್ಲಿ ಇಲ್ಲದ ಒಳಚರಂಡಿ ವ್ಯವಸ್ಥೆ ಇದೆ. ಎಲ್ಲರಿಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಇದೆ. ಇಲ್ಲಿನ ಸರ್ವಜಾತಿಗಳ ಸಾರ್ವಜನಿಕ ಸ್ಮಶಾನವನ್ನು ಸುಂದರ ಉದ್ಯಾನದ ರೀತಿ ನಿರ್ಮಿಸಿ ನಿರ್ವಹಿಸಲಾಗುತ್ತಿದೆ. ಇಲ್ಲಿನ ವಸತಿ ಶಾಲೆಯಲ್ಲಿ ಕಲಿತ ಕನಿಷ್ಠ 25 ವಿದ್ಯಾರ್ಥಿಗಳು ವಿದೇಶಗಳಲ್ಲಿ ನೆಲೆಸಿದ್ದಾರೆ.ಗ್ರಾಮೀಣ ಅಭಿವೃದ್ಧಿಗೆ ಹುಲಕೋಟಿಗಿಂತ ಪರಿಪೂರ್ಣವಾದ ಇನ್ನೊಂದು ಮಾದರಿ ಇಡೀ ದೇಶದಲ್ಲಿ ಇರಲಾರದೇನೋ? ಆದರೆ ಪಾಟೀಲ್ ಸೋದರರು ಇದನ್ನು ಕನಿಷ್ಠ ಗದಗ ಜಿಲ್ಲೆಗಾದರೂ  ಯಾಕೆ ವಿಸ್ತರಿಸಲಿಲ್ಲವೋ ಗೊತ್ತಿಲ್ಲ. ಬಹಳಷ್ಟು ಮತದಾರರು ಕೂಡಾ ಕೇಳುವ ಪ್ರಶ್ನೆ ಇದು.

ಪ್ರತಿಕ್ರಿಯಿಸಿ (+)