ಸುಂದರ ಉದ್ಯಾನ: ಪ್ರವೇಶ ನಿರ್ಬಂಧ...!

7

ಸುಂದರ ಉದ್ಯಾನ: ಪ್ರವೇಶ ನಿರ್ಬಂಧ...!

Published:
Updated:

ಮಂಡ್ಯ: ಅದೊಂದು ಹಚ್ಚ ಹಸಿರಿನ ಹೊದಿಕೆಯಿರುವ ಸುಂದರ ಉದ್ಯಾನ. ಇಲ್ಲಿ ಹಸಿರಿನ ಜೊತೆಗೆ ನಳನಳಿಸುವ , ಮನಸ್ಸಿಗೆ ಮುದ ನೀಡುವ ಬಗೆಬಗೆಯ ಹೂಗಳೂ ಇದೆ. ಉದ್ಯಾನದೊಳಗೆ, ತೆರಳಿ ಸ್ವಲ್ಪ ರಿಲ್ಯಾಕ್ಸ್‌ ಆಗೋಣ ಅಂದ್ರೆ, ಪ್ರವೇಶಕ್ಕೆ ನಿರ್ಬಂಧ...!

ಅದು, ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಹಿಂಭಾಗದ ಉದ್ಯಾನ. ಇಲ್ಲಿನ, ಹಸಿರಿನ ಸಿರಿಯನ್ನು ಕಣ್ತುಂಬಿಕೊಳ್ಳಬೇಕು ಎಂದರೆ, ಬೇಲಿಯ ಹೊರಗೆ ನಿಲ್ಲಲೇ ಬೇಕು.ನಗರದಲ್ಲಿ ಸುಮಾರು 23ರಷ್ಟು ಉದ್ಯಾನಗಳಿವೆ ಎಂಬ ದಾಖಲೆ ಸಿಕ್ಕರೂ ಒಂದೆರೆಡನ್ನು ಹೊರತುಪಡಿಸಿದರೇ, ಉಳಿದವ್ಯಾವುಗಳಿಗೂ ‘ಉದ್ಯಾನ’ದ ಸ್ವರೂಪವೇ ಇಲ್ಲ. ಬಹುತೇಕ ಉದ್ಯಾನಗಳ ನಿರ್ವಹಣೆ ಜವಾಬ್ದಾರಿಯು ನಗರಸಭೆಗೆ ಇದ್ದರೆ, ಒಂದೆರಡನ್ನು ತೋಟಗಾರಿಕೆ ಇಲಾಖೆಯೂ ನಿರ್ವಹಿಸುತ್ತಿದೆ.ಬಹಳಷ್ಟು ವರ್ಷಗಳಿಂದ ಪಾಳು ಬಿದ್ದಿದ್ದ, ಆಸುಪಾಸಿನ ಶಾಲೆಯ ವಿದ್ಯಾರ್ಥಿಗಳಿಗೆ ಆಟ ಮೈದಾನವಾಗಿದ್ದ ಈ ಸ್ಥಳಕ್ಕೆ ಉದ್ಯಾನ ರೂಪದಲ್ಲಿ ಜೀವಂತಿಕೆ ನೀಡಲಾಗಿದೆ. ಇದರ ನಿರ್ವಹಣೆಯನ್ನು ನಗರಸಭೆಯೇ ವಹಿಸಿದೆ.ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ, ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಸುಮಾರು 3,600 ಚದರ ಮೀ. ಅಳತೆಯ ಈ ಪಾರ್ಕ್‌ನ್ನು ಅಭಿವೃದ್ಧಿಪಡಿಸಲಾಗಿದೆ.ಉದ್ಯಾನದ ಸುತ್ತಲೂ, ಫೆನ್ಸಿಂಗ್‌ ಹಾಕಲಾಗಿದೆ. ಅಂಗಳದಲ್ಲಿ ಮೆಕ್ಸಿಕನ್‌ ಹುಲ್ಲು ಬೆಳಸಲಾಗಿದೆ. ತೋಟಗಾರಿಕೆ ಇಲಾಖೆಯಿಂದ ಅಲಂಕಾರಿಕ ಸಸ್ಯಗಳನ್ನು ತಂದು ನೆಡಲಾಗಿದೆ. ನಾಲ್ಕು ಕಡೆಗಳಲ್ಲಿ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಿ, ಹುಲ್ಲುಹಾಸಿಗೆ ನಿಯಮಿತವಾಗಿ ನೀರುಣಿಸಲಾಗುತ್ತಿದೆ.ಪಾರ್ಕ್‌ ಆವರಣದಲ್ಲಿ ವಾಟರ್‌ ಸಂಪ್‌, ಪಂಪ್‌ ಮತ್ತು ಮೋಟಾರುಗಳನ್ನು ಅಳವಡಿಸಲಾಗಿದೆ. ಉದ್ಯಾನ ಸುತ್ತಲಿರುವ ಮರಗಳು, ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ. ಉದ್ಯಾನದೊಳಗೆ ಪಾದಚಾರಿ ಮಾರ್ಗವಿದ್ದರೂ ಓಡಾಡಲು ನಿರ್ಬಂಧವಿದೆ.‘ಹಸಿರಿರುವ, ಉತ್ತಮ ಗಾಳಿ ದೊರೆಕುವ ಈ ಉದ್ಯಾನದೊಳಗೆ ಪ್ರವೇಶ ನಿರಾಕರಿಸಿರುವುದು ನಿರಾಶೆ ಜೊತೆಗೆ ಬೇಸರವನ್ನುಂಟು ಮಾಡಿದೆ. ಮುಂಜಾನೆ ಮತ್ತು ಸಂಜೆಯ ಸಮಯದಲ್ಲಾದರೂ ವಾಯುವಿಹಾರಕ್ಕೆ ಅವಕಾಶ ನೀಡಬೇಕು ಎನ್ನುವುದು’ ಎಂ.ಕೆ. ಮೋಹನ್‌ರಾಜ್‌ ಅವರ ಬೇಡಿಕೆ.ಹಿರಿಯರಾದ ರಾಮೇಗೌಡ, ಕೃಷ್ಣಪ್ಪ, ಸರೋಜಮ್ಮ, ಲಕ್ಷಮ್ಮ, ರೇಣುಕಮ್ಮ ಅವರದೂ ಇದೇ ಬೇಡಿಕೆ. ಇಲ್ಲಿನ ಪರಿಸ್ಥಿತಿ ಕನ್ನಡಿಯೊಳಗಿನ ಸುಂದರ ಬಿಂಬದಂತಿದೆ. ಉದ್ಯಾನದೊಳಗಿನ ಪಾದಚಾರಿಯ ಮಾರ್ಗದಲ್ಲಾದರೂ ಓಡಾಡಲು ಅವಕಾಶ ನೀಡಬೇಕು ಎಂಬುದು ಅವರ ಕೋರಿಕೆ.

–ಕೆ. ಚೇತನ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry