ಸುಂದರ ಕೈಬರಹ ನಿಮ್ಮದಾಗಬೇಕೇ?

7

ಸುಂದರ ಕೈಬರಹ ನಿಮ್ಮದಾಗಬೇಕೇ?

Published:
Updated:

ಕೈಬರಹ ಕೈಪಿಡಿ

ಸಂಜನಾ ವೇಗವಾಗಿ ಬರೆಯುತ್ತಿರಲಿಲ್ಲ, ಏಕೆ?

ಸಂಜನಾ ಮೊದಲಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿ. ತಾನು ಓದುತ್ತಿರುವ ಕಾನ್ವೆಂಟಿನಲ್ಲಿ ಬೇರೆ ಯಾರಿಗೂ ಮೊದಲ ಸ್ಥಾನ ಬಿಟ್ಟುಕೊಟ್ಟಿರಲಿಲ್ಲ. ಆದರೆ ಎಸ್.ಎಸ್.ಎಲ್.ಸಿ.ಯಲ್ಲಿ ಅವಳು ಬಹಳ ಹಿಂದುಳಿದಳು.ಅವಳ ತಂದೆ ಒಂದು ಕಾರ್ಖಾನೆಯ ಜನರಲ್ ಮ್ಯಾನೇಜರ್. ಎಂ.ಎಸ್ಸಿ ಅಲ್ಲದೆ ಡಾಕ್ಟರೇಟ್ ಪದವಿ ಹೊಂದಿದವರು. ತಮ್ಮ ಮಗಳ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕಾಗಿ ಎರಡು ಬಾರಿ ಅವರು ಬೆಂಗಳೂರಿನ ಪರೀಕ್ಷಾ ಮಂಡಳಿಯ ಕಚೇರಿಗೆ ಹೋಗಿ ಬರಬೇಕಾಯಿತು. ಮರು ಮೌಲ್ಯಮಾಪನ ಆಗಿ ಬರುವವರೆಗೂ ಒಂದು ತಿಂಗಳು ಅವರ ಇಡೀ ಕುಟುಂಬ ಆತಂಕದ ದಿನಗಳನ್ನು ಕಳೆಯಬೇಕಾಯಿತು.ನಾನು ಸಂಜನಾಳ ಮನೆಗೆ ಹೋಗಿದ್ದಾಗ ಅವಳ ಕೈಬರಹದ ದೋಷಗಳನ್ನು ಅವಳ ತಂದೆಗೆ ತಿಳಿಸಿ ಹೇಳಿದೆ. ಅವಳು ಪೆನ್ ಹಿಡಿಯುವ ರೀತಿ ಸರಿ ಇರಲಿಲ್ಲ. ಕಾಗದದ ಮೇಲೆ ಒತ್ತಿ ಬರೆಯುತ್ತಿದ್ದುದರಿಂದ ಬರಹದ ವೇಗ ತುಂಬಾ ಕಡಿಮೆ ಇತ್ತು. ಅವಳು ಬರೆದ ಗುರುತು ಕೆಳಗಿನ ಏಳೆಂಟು ಹಾಳೆಗಳ ಮೇಲೆ ಮೂಡುತ್ತಿದ್ದವು. ವೇಗವನ್ನು ಸಾಧಿಸಲು ಅವಳು ತೀವ್ರ ಪ್ರಯತ್ನ ಮಾಡುತ್ತಿದ್ದುದರಿಂದ ಅವಳ ಅಕ್ಷರಗಳು ಹಾಳಾಗಿದ್ದವು.ಅವಳು ಒತ್ತಿ ಬರೆಯುವುದರ ಕಾರಣವನ್ನು ನಾನು ಹೀಗೆ ವಿಶ್ಲೇಷಿಸಿದೆ: `ಇವಳು ನರ್ಸರಿ ಅಥವಾ ಪ್ರೈಮರಿ ತರಗತಿಯಲ್ಲಿದ್ದಾಗ, ಪೆನ್ಸಿಲ್‌ನಿಂದ ಬರೆಯಲು ಪ್ರಾರಂಭಿಸಿದ್ದಾಳೆ. ಪೆನ್ಸಿಲ್‌ನಿಂದ ಬರೆಯುವಾಗ ಒತ್ತಿ ಬರೆದರೆ ಅದು ದಟ್ಟವಾಗಿ, ಚೆನ್ನಾಗಿ ಕಾಣುತ್ತದೆ. ಇವಳ ಟೀಚರ್ ಕೂಡ ಸಾಕಷ್ಟು ಮುಂದಾಲೋಚನೆ ಇಲ್ಲದೇ ಒತ್ತಿ ಬರೆಯುವಂತೆ ಹೇಳಿರಬಹುದು. ಹಾಗಾಗಿ ಒತ್ತಿ ಬರೆಯುವುದು ಇವಳಿಗೆ ಅಭ್ಯಾಸವಾಗಿ        ಬಿಟ್ಟಿದೆ. ಪೆನ್ನಿನಿಂದ ಬರೆಯಲು ಪ್ರಾರಂಭಿಸಿದ ಮೇಲೂ ಅದು ಮುಂದುವರಿದಿದೆ. ಇವಳು ಪೆನ್ನಿನ ತೀರಾ ತುದಿಯಲ್ಲಿ ಬೆರಳುಗಳನ್ನು ಹಿಡಿಯುವುದರಿಂದ ಬೆರಳುಗಳನ್ನು ಸುಲಭವಾಗಿ ಚಲಿಸಲೂ ಆಗುತ್ತಿಲ್ಲ'.ನಾನು ಹೇಳಿದ್ದು ಸಂಜನಾಳ ತಂದೆಗೆ ಸರಿ ಎನಿಸಿತು. ಅವರು ಹೇಳಿದರು. `ಛೆ! ಅವಳು ಚಿಕ್ಕವಳಿದ್ದಾಗಲೇ ನಾವು ಈ ಬಗ್ಗೆ ಗಮನ ಕೊಡಬೇಕಾಗಿತ್ತು. ಅವಳ ತಾಯಿ ಕೂಡ ವಿಜ್ಞಾನದ ಗ್ರಾಜುಯೇಟ್. ನಾವಿಬ್ಬರೂ ಇಷ್ಟು ಸುಶಿಕ್ಷಿತರಿದ್ದೂ ಈ ಬಗ್ಗೆ ಗಮನಹರಿಸಲಿಲ್ಲ. ನಮ್ಮಿಂದ ಎಂತಹ ತಪ್ಪಾಯಿತು!' ತೀವ್ರ ಪಶ್ಚಾತ್ತಾಪ ಅವರ ದನಿಯಲ್ಲಿತ್ತು.ಎರಡು ವರ್ಷದ ಹಿಂದೆ ನಾನು ಕಾರವಾರದಲ್ಲಿ ಒಂದು ವಾರದ (ದಿನಕ್ಕೆ ಒಂದೂವರೆ ತಾಸಿನಂತೆ) ಕೈಬರಹ ಸುಧಾರಣಾ ಶಿಬಿರ ನಡೆಸಿದೆ. ಅದರ ಮುಕ್ತಾಯ ಸಮಾರಂಭಕ್ಕೆ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರಕ್ಕೆ ನಿವೃತ್ತ ಶಿಕ್ಷಕರೊಬ್ಬರು ಬಂದಿದ್ದರು. ಕೈಬರಹದ ಕುರಿತು ನಾನು ಹೇಳಿದುದನ್ನೆಲ್ಲ ಕೇಳಿದ ಮೇಲೆ ಅವರು ಎದ್ದು ನಿಂತು ಹೇಳಿದರು.`ಕೈಬರಹದ ಬಗ್ಗೆ ಇಷ್ಟೆಲ್ಲಾ ತಿಳಿಯುವುದಿದೆ ಎಂದು ನನಗೆ ಗೊತ್ತೇ ಇರಲಿಲ್ಲ. ಮೂರ್ತಿಯವರು 30 ವರ್ಷಗಳ ಹಿಂದೆಯೇ ನನಗೆ ಸಿಕ್ಕಿದ್ದರೆ ನಾನು ಇನ್ನೂ ಉತ್ತಮ ಶಿಕ್ಷಕನಾಗಬಹುದಿತ್ತು!'.36 ವರ್ಷಗಳಿಂದ ಶಿಕ್ಷಕನಾಗಿರುವ ನನಗೆ, ಕೈಬರಹದ ಬಗ್ಗೆ ಅನೇಕರಲ್ಲಿ ದಿವ್ಯ ಅಜ್ಞಾನ ಇರುವುದು ಗಮನಕ್ಕೆ ಬಂದಿದೆ. ನಾನು ನೀಡಿದ ಕೆಲವು ಸಲಹೆಗಳನ್ನು ಅನುಸರಿಸಿ ಕೈಬರಹದಲ್ಲಿ ಗಣನೀಯ ಸುಧಾರಣೆ ಮಾಡಿಕೊಂಡ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಕೈಬರಹದ ಬಗ್ಗೆ ಇನ್ನೂ ಹೆಚ್ಚಿನವರಿಗೆ ಜ್ಞಾನೋದಯ ಆಗಲಿ ಎಂಬ ಉದ್ದೇಶದಿಂದ ಈ ಲೇಖನ ಸರಣಿ ಆರಂಭವಾಗಿದೆ. ಇಲ್ಲಿನ ವಿಚಾರಗಳನ್ನು ತಿಳಿದು ಇನ್ನೂ ಹೆಚ್ಚಿನವರ ಕೈಬರಹ ಸುಧಾರಣೆ ಆಗಲಿ ಎಂಬ ಆಶಯ ಇಲ್ಲಿದೆ. ಮುಂದಿನ ವಾರ: ಕೈಬರಹ ಏಕೆ ಮುಖ್ಯ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry