ಮಂಗಳವಾರ, ನವೆಂಬರ್ 19, 2019
26 °C

`ಸುಂದರ ನಗರ, ಯುವಕರಿಗೆ ಉದ್ಯೋಗ'

Published:
Updated:

ವಿಜಾಪುರ: ಸುಂದರ ಮತ್ತು ಸ್ವಚ್ಛ ನಗರ. ನಗರದ ಬಾವಿಗಳ ಅಭಿವೃದ್ಧಿ, 3ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನ. ಯುವಜನತೆಗೆ 4,000 ಉದ್ಯೋಗ ಸೃಷ್ಟಿ. ಬಡವರಿಗೆ ನಗರ ವ್ಯಾಪ್ತಿಯಲ್ಲಿಯೇ ಮನೆಗಳ ನಿರ್ಮಾಣ. ಅರ್ಜಿ ಸಲ್ಲಿಸಿ ಕಾಯುತ್ತಿರುವ 12,500 ಜನರಿಗೆ ಪಡಿತರ ಚೀಟಿ ವಿತರಣೆ...ಜೆಡಿಎಸ್ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ವಿಜಾಪುರ ನಗರ ಕ್ಷೇತ್ರದ ಮತದಾರರಿಗೆ ನೀಡಿದ ಭರವಸೆಗಳಿವು. ವಿಜಾಪುರ ನಗರ ಕ್ಷೇತ್ರಕ್ಕಾಗಿಯೇ ರೂಪಿಸಿರುವ ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆ ಮಾಡಿದರು.`ಸ್ಥಳೀಯ ಶಾಸಕರ ಹತ್ತು ವರ್ಷದ ದುರಾಡಳಿತದಲ್ಲಿ ವಿಜಾಪುರ ನಗರ ಹಾಳು ಕೊಂಪೆಯಂತಾಗಿದೆ. ಎಲ್ಲೆಲ್ಲೂ ಕಸ-ಕೊಳಚೆ ಹೆಚ್ಚಿದೆ. ಜನ ಸ್ವಯಂ ಪ್ರೇರಿತರಾಗಿ ನಮಗೆ ಬೆಂಬಲ ನೀಡುತ್ತಿರುವುದನ್ನು ಕಂಡರೆ ಬಿಜೆಪಿ ಅಭ್ಯರ್ಥಿ ಠೇವಣಿ ಉಳಿಸಿಕೊಂಡರೆ ದೊಡ್ಡ ಸಾಧನೆ' ಎಂದು ಯತ್ನಾಳ ಹೇಳಿದರು.`ಕಳೆದ ಅವಧಿಯಲ್ಲಿ ನಗರಸಭೆ ಸದಸ್ಯರಾಗಿ ಉತ್ತಮ ಕೆಲಸ ಮಾಡಿದ್ದ ರಾಜೇಶ ದೇವಗಿರಿ, ಎಂ.ಎಸ್. ಕರಡಿ, ರವಿ ಕುಲಕರ್ಣಿ ಮತ್ತಿತರರನ್ನು ಶಾಸಕ ಅಪ್ಪು ಪಟ್ಟಣಶೆಟ್ಟಿ ಅವಮಾನಿಸಿದರು. ಅವರ ದುರಾಡಳಿತದಿಂದ ಬೇಸತ್ತು ಬಿಜೆಪಿಯ ಪ್ರಮುಖರು ಜೆಡಿಎಸ್‌ಗೆ ಬರುತ್ತಿದ್ದಾರೆ' ಎಂದರು.`ಹಿಂದೂ-ಮುಸ್ಲಿಂ-ಕ್ರೈಸ್ತ ಬಾಂಧ ವರು ನಮಗೆ ಆಶೀರ್ವಾದ ಮಾಡುತ್ತಿದ್ದಾರೆ. ಒಮ್ಮೆ ಶಾಸಕ, ಎರಡು ಬಾರಿ ಸಂಸದ ಹಾಗೂ ಕೇಂದ್ರ ಸಚಿವನಾಗಿ ಮಾಡಿದ ಸಾಧನೆಗಳನ್ನು ಜನ ಗಮನಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯಾರಿಗೂ ಪರಿಚಯ ಇಲ್ಲ. ಅವರು ಐದು ವರ್ಷ ಸಮಾಜ ಸೇವೆ ಮಾಡಿ, ಮುಂದಿನ ಚುನಾವಣೆಯಲ್ಲಿ ಟಿಕೆಟ್ ಪಡೆದುಕೊಂಡು ಬರಲಿ. ಜನ ನನ್ನನ್ನು ಆಯ್ಕೆ ಮಾಡಿದರೆ ಮಾದರಿ ಶಾಸಕನಾಗಿ ಜನರ ಮಧ್ಯೆ ಇದ್ದು ಕೆಲಸ ಮಾಡುತ್ತೇನೆ' ಎಂದು ಯತ್ನಾಳ ಹೇಳಿದರು.`ಬಿಜೆಪಿಯಲ್ಲಿ ಏಕವ್ಯಕ್ತಿಯ ದಬ್ಬಾಳಿಕೆ ಹೆಚ್ಚಿದೆ. ಶಾಸಕ ಅಪ್ಪು ಸಾಧನೆ ಶೂನ್ಯ. ನಗರದಲ್ಲಿ ಆಗಿರುವ ಅಭಿವೃದ್ಧಿ ಮತ್ತು ನೀರಿನ ಸಮಸ್ಯೆ ನಿವಾರಣೆಯ ಶ್ರೇಯಸ್ಸು ನಗರಸಭೆಗೆ ಸಲ್ಲುತ್ತದೆ. ಇದರಲ್ಲಿ ಶಾಸಕರ ಪಾತ್ರ ಏನೂ ಇಲ್ಲ' ಎಂದು ಜೆಡಿಎಸ್ ಸೇರ್ಪಡೆಯಾದ ನಗರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ ನುಚ್ಚಿ ಹೇಳಿದರು.ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕ ರಮೇಶ ಬಿದನೂರ, ನಗರಸಭೆಯ ಮಾಜಿ ಸದಸ್ಯರಾದ ಸುರೇಶ ಜಾಧವ, ಮಲ್ಲಿಕಾರ್ಜುನ ನುಚ್ಚಿ, ಯಲ್ಲಾಲಿಂಗ ಹೂಗಾರ ಹಾಗೂ ಪ್ರೀತಂ ರಜಪೂತ, ಕಿರಣ ಪಾಟೀಲ, ಈರಣ್ಣ ಹಿಪ್ಪರಗಿ ಮತ್ತಿತರರು ಜೆಡಿಎಸ್ ಸೇರ್ಪಡೆಯಾದರು. ಸಂಗು ಸಜ್ಜನ, ರಾಜೇಶ ದೇವಗಿರಿ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಮುಖ ಅಂಶಗಳು

4,000 ಉದ್ಯೋಗ ಸೃಷ್ಟಿ: ವಿಜಾಪುರ ನಗರದ ಸುತ್ತಮುತ್ತ ಕೈಗಾರಿಕೆಗಳು ಸ್ಥಾಪನೆಯಾಗುವಂತೆ ಮಾಡುವುದು ಹಾಗೂ ಸಂಘ-ಸಂಸ್ಥೆಗಳನ್ನು ಬೆಳೆಸಿ 4,000 ಉದ್ಯೋಗ ಸೃಷ್ಟಿಸುವುದು.ನೀರು: ನಗರದ ಎಲ್ಲ ಬಾವಿಗಳ ಪುನಃಶ್ಚೇತನ ಮತ್ತು ಅವುಗಳ ಮೂಲಕ ಜನರ ಬಳಕೆಗೆ ನೀರು ಪೂರೈಕೆ. 3ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿ. 10 ಲಕ್ಷ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಕೊಲ್ಹಾರ ದಿಂದ ನೀರು ತರುವ ಯೋಜನೆ ಇದು.ರಸ್ತೆ ಅಗಲೀಕರಣ: ವರ್ತಕರು-ಸ್ಥಳೀಯರಿಗೆ ಹಾನಿಯಾಗದ ರೀತಿಯಲ್ಲಿ ಯೋಗ್ಯ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವುದು.ಶೌಚಾಲಯ: ಸರ್ಕಾರಿ-ನಗರಸಭೆ ಜಾಗೆ ಇರುವ ಎಲ್ಲ ಬಡಾವಣೆಗಳಲ್ಲಿ ಸುಲಭ ಶೌಚಾಲಯ ನಿರ್ಮಾಣ.ಕಲ್ಲು ಗಣಿಗಾರಿಕೆ: ಗ್ರಾಹಕರಿಗೆ ಸಾಗಾಣೆಯ ವೆಚ್ಚದ ಭಾರ ಕಡಿಮೆ ಮಾಡಲು ಹಾಗೂ ಬೋವಿ ಸಮಾಜ ದವರು ಉದ್ಯೋಗ ಮುಂದುವರೆಸಲು ಕಲ್ಲು ಗಣಿಗಾರಿಕೆಗೆ ನಗರದ ಸಮೀಪದಲ್ಲಿ ಸ್ಥಳ ಗುರುತಿಸುವುದು.ಮಾರುಕಟ್ಟೆ ಸಂಕೀರ್ಣ: ವಿಜಾಪುರ ನಗರದ ನಾಲ್ಕು ಭಾಗಗಳಲ್ಲಿಯೂ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ ಸ್ಥಾಪನೆ. ಹೈಟೆಕ್ ಮಾಂಸದ ಮಾರುಕಟ್ಟೆ ನಿರ್ಮಾಣ.ಪುತ್ಥಳಿ: ಶಿವಾಜಿ ಪುತ್ಥಳಿ ಮಾದರಿಯಲ್ಲಿ ರಾಣಿ ಚನ್ನಮ್ಮ, ಕನಕದಾಸರು, ಪುರಂದರ ದಾಸರ ಪುತ್ಥಳಿ ಸ್ಥಾಪನೆ.

ಪುನರ್‌ಸ್ಥಾಪನೆ: ಅತಿಕ್ರಮಣ ತೆರವು ಸಂದರ್ಭದಲ್ಲಿ ತೆರವುಗೊಳಿಸಿರುವ ಗಣಪತಿ ಚೌಕ್ ಮತ್ತು ಅಡಕಿ ಗಲ್ಲಿಯ ಗಣಪತಿ ವಿಗ್ರಹ, ದಾತ್ರಿ ಮಸೀದೆ ಕಂಪೌಂಡ್, ದೇವಾಲಯಗಳನ್ನು ಕಾನೂನಿನಲ್ಲಿರುವ ಅವಕಾಶ ಬಳಸಿಕೊಂಡು ಪುನರ್ ಸ್ಥಾಪನೆ.ಮನೆ: 10 ಕಿ.ಮೀ. ದೂರದಲ್ಲಿ ಮನೆ ಕಟ್ಟುತ್ತಿದ್ದಾರೆ. ಇದು ಸರಿಯಲ್ಲ. ನಗರ ಪ್ರದೇಶದಲ್ಲಿಯೇ ಮನೆಗಳ ನಿರ್ಮಾಣ ಮತ್ತು ಕೊಳೆಗೇರಿಗಳಲ್ಲಿ ಬಡವರಿಗೆ ಬಹುಮಹಡಿ ವಸತಿ ಸಂಕೀರ್ಣ ನಿರ್ಮಿಸಿ ಮನೆ ವಿತರಣೆ.

ಪ್ರತಿಕ್ರಿಯಿಸಿ (+)