ಬುಧವಾರ, ಡಿಸೆಂಬರ್ 11, 2019
26 °C

ಸುಂದರ ಲಿಪಿಗಾರ

Published:
Updated:
ಸುಂದರ ಲಿಪಿಗಾರ

ಕ್ಯಾಲಿಗ್ರಫಿ ಎಂದರೆ ಸುಂದರ ಕೈ ಬರವಣಿಗೆ. ಅದ್ಭುತ ಮನರಂಜನೆ ನೀಡುವ ಈ ಕಲೆ ಕೆಲವರಿಗೆ ಹಾಬಿ. ಹಾಗೆಯೆ ಇದೊಂದು ಕಲೆ ಕೂಡ ಹೌದು. ಮನದೊಳಗೆ ಅವಿತ ಭಾವವನ್ನು ಅಕ್ಷರ ರೂಪಕ್ಕೆ ಇಳಿಸಿ ಕಲೆಯಾಗಿ ಪರಿವರ್ತಿಸುವ ಕ್ಯಾಲಿಗ್ರಫಿಯನ್ನು ಕಲಿತರೆ ಖ್ಯಾತಿಯ ಜತೆಗೆ ಹಣವನ್ನು ಸಂಪಾದಿಸಬಹುದು. ಕ್ಯಾಲಿಗ್ರಫಿ ಕಲಿಯಲು ಮುಖ್ಯವಾಗಿ ಆಸಕ್ತಿ ಇರಬೇಕು. ಜತೆಗೆ ಇದು ಪರಿಶ್ರಮ ಹಾಗೂ ಅಪರಿಮಿತ ಏಕಾಗ್ರತೆಯನ್ನು ಕೂಡ ಬೇಡುತ್ತದೆ. ಇವಿಷ್ಟಿದ್ದರೆ ಈ ಕಲೆಯನ್ನು ಯಾರು ಬೇಕಾದರೂ ದಕ್ಕಿಸಿಕೊಳ್ಳಬಹುದು. ಕಾಗದದ ಮೇಲೆ ಸ್ವಲ್ಪ ಕೂಡ ಜಾಗ ಪೋಲಾಗದಂತೆ ಬರೆಯಬೇಕು. ಕ್ಯಾಲಿಗ್ರಫಿ ಒಡ್ಡುವ ಸವಾಲು ಇದು. ಈ ಕಲೆಗೆ ಪೆನ್ನು, ಪೇಪರ್ ಮತ್ತು ಸೃಜನಶೀಲತೆ ಮಾತ್ರವೇ ಬಂಡವಾಳ.ಸೃಜನಶೀಲರೆಲ್ಲಾ ತಮ್ಮ ವಿಭಿನ್ನತೆಯಿಂದ ಇಷ್ಟವಾಗುತ್ತಾರೆ; ಆದರೆ ಅವರಲ್ಲಿ ಕೆಲವರು ಮಾತ್ರ ಹೊಸತನ್ನು ಹುಟ್ಟುಹಾಕುತ್ತಾರೆ. ಕ್ಯಾಲಿಗ್ರಾಫರ್ ವಿಜಯ್ ಕುಮಾರ್ ಸಹ ತಮ್ಮ ಸೃಜನಶೀಲತೆಯಿಂದ ಇಷ್ಟವಾಗುತ್ತಾರೆ. ಕ್ಯಾಲಿಗ್ರಫಿಯಲ್ಲಿ ಹೆಸರು ಮಾಡಿರುವ ಇವರು ನಗರದ ಹವ್ಯಾಸಿ ಕ್ಯಾಲಿಗ್ರಾಫರ್.ಮೂಲತಃ ಮಡಿಕೇರಿಯವರಾದ ವಿಜಯ್ ಕುಮಾರ್ ಕೆಂಪಾಪುರದಲ್ಲಿರುವ ಪ್ರೆಸಿಡೆನ್ಸಿ ಕಾಲೇಜಿನ ಉದ್ಯೋಗಿ. ವಯಸ್ಸು 60. ಉತ್ಸಾಹ ಮಾತ್ರ 20ರದ್ದು. ವಯಸ್ಸು ಮಾಗಿದಂತೆ ಇವರಿಗೆ ತಾನು ಕೂಡ ಏನಾದರೂ ವಿಶಿಷ್ಟವಾದ ಕಲೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಬಯಕೆ ಮೂಡಿತಂತೆ. ಆಗ ಅವರನ್ನು ಸೆಳೆದಿದ್ದು ಕ್ಯಾಲಿಗ್ರಫಿ ಕಲೆ. ಕಳೆದ 10 ವರ್ಷಗಳಿಂದ ಈ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಬರವಣಿಗೆಯೇ ನನ್ನ ಬಂಡವಾಳ ಎನ್ನುವ ವಿಜಯ್ ಕುಮಾರ್ ಕನ್ನಡ ನಾಡು-ನುಡಿ, ಇತಿಹಾಸ, ಚರಿತ್ರೆ ಎಲ್ಲವನ್ನು ಕ್ಯಾಲಿಗ್ರಫಿಯಲ್ಲಿ ಬಿಂಬಿಸಿದ್ದಾರೆ. ಡಿವಿಜಿ ಅವರ ಮಂಕುತಿಮ್ಮನ ಕಗ್ಗದಲ್ಲಿರುವ 948 ಕಗ್ಗವನ್ನು ಒಂದೇ ಹಾಳೆಯಲ್ಲಿ ಸುಂದರವಾಗಿ ಬರೆದಿದ್ದಾರೆ. ಹಾಗೆಯೇ ಭಗವದ್ಗೀತೆ, ಬೈಬಲ್, ಸ್ವಾಮಿ ವಿವೇಕಾನಂದರ ಸಂದೇಶಗಳು, ಗಾಯತ್ರಿ ಮಂತ್ರ, ಗುರು ದತ್ತಾತ್ರೇಯ ಸ್ವಾಮಿ ಚರಿತೆ, ಗಣೇಶ ಸ್ತೋತ್ರ ಇವೆಲ್ಲವನ್ನು ಒಂದೊಂದೇ ಹಾಳೆಯ ಮೇಲೆ ಬಿಂಬಿಸಿದ್ದಾರೆ.ಚಿತ್ರನಟ ರಾಜ್‌ಕುಮಾರ್ ಅವರು ನಟಿಸಿದ 210 ಚಿತ್ರಗಳು, ಅವುಗಳಲ್ಲಿ 25 ವಾರ ಪ್ರದರ್ಶನ ಕಂಡ ಚಿತ್ರಗಳು ಯಾವುವು, ಅವರಿಗೆ ಸಂದ ಬಿರುದುಗಳು, ಬಾಲ್ಯ ಜೀವನ ಎಲ್ಲವನ್ನು ಒಂದೇ ಹಾಳೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಹಾಗೆಯೇ, ಶಂಕರ್‌ನಾಗ್, ಶಿವರಾಜ್ ಕುಮಾರ್ ಮತ್ತಿತರ ನಟ-ನಟಿಯರ ಸಾಧನೆಗಳನ್ನು ಬರೆದಿದ್ದಾರೆ.ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಎಸ್.ಎಲ್.ಭೈರಪ್ಪ ಅವರ ಜೀವನ, ಬರೆದ ಕಾದಂಬರಿಗಳು, ಎಷ್ಟು ಬಾರಿ ಮುದ್ರಣಗೊಂಡಿವೆ, ಅವರಿಗೆ ಸಂದ ಪ್ರಶಸ್ತಿಗಳು ಯಾವುವು ಇವೆಲ್ಲವನ್ನು ಬರೆದಿದ್ದಾರೆ. ಹಾಗೆಯೇ ಜ್ಞಾನಪೀಠ ಪ್ರಶಸ್ತಿ ಪಡೆದ ಚಂದ್ರಶೇಖರ ಕಂಬಾರರ ಸಾಧನೆಗಳು, ಅಣ್ಣಾ ಹಜಾರೆಯ ಸಂಪೂರ್ಣ ಚರಿತ್ರೆ, ಮಹಾದೇವಿಅಕ್ಕನ ವಚನಗಳು ಹೀಗೆ ಸುಮಾರು 200ಕ್ಕೂ ಅಧಿಕ ಖ್ಯಾತನಾಮರ ಜೀವನ ಚರಿತ್ರೆಯನ್ನು ಹಾಳೆಯ ಮೇಲೆ ಬಿಂಬಿಸಿದ್ದಾರೆ. ಗಂಗಾವತಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳಾನಧ್ಯಕ್ಷ ಸಿಪಿಕೆ ಅವರ ಬಾಲ್ಯದಿಂದ ಅವರು ಏರಿದ ಎತ್ತರದವರೆಗಿನ ಎಲ್ಲ ಅಂಶಗಳನ್ನು ಒಂದೇ ಹಾಳೆಯಲ್ಲಿ ಚಿತ್ರ ಸಹಿತ ಬರೆದು ಕೊಟ್ಟು ಅವರಿಂದ ಪ್ರಶಂಸೆ ಕೂಡ ಪಡೆದಿದ್ದಾರೆ.ಇವರ ಕ್ಯಾಲಿಗ್ರಫಿ ಕಲೆ ಕೇವಲ ಕಾಗದಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಹೆಲ್ಮೆಟ್, ಗಾಜು ಮತ್ತಿತರ ವಸ್ತುಗಳೆಡೆಗೂ ಅದು ವಿಸ್ತರಿಸಿಕೊಂಡಿದೆ. ಅಂದಹಾಗೆ ಇವರು ಬರೆದಿರುವ ಪ್ರತಿ ಅಕ್ಷರಗಳ ಲೆಕ್ಕ ಕೂಡ ಇರಿಸಿದ್ದಾರೆ. ರಾಜ್ಯದ ವಿವಿಧೆಡೆ ತಮ್ಮ ಕಲೆಯನ್ನು ಪ್ರದರ್ಶಿಸಿರುವ ವಿಜಯ್ ಕುಮಾರ್ ಅವರಿಗೆ ಪ್ರಶಂಸೆ ಜತೆಗೆ ಪ್ರಶಸ್ತಿಗಳು ಕೂಡ ಲಭಿಸಿವೆ. ಆದರೂ ಸರ್ಕಾರ ತಮ್ಮ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿಲ್ಲ ಎಂದು ನೊಂದುಕೊಳ್ಳುತ್ತಾರೆ. ಇವರು ಕ್ಯಾಲಿಗ್ರಫಿಯಲ್ಲಿ ಆಸಕ್ತಿ ಇರುವವರಿಗೆ ಉಚಿತವಾಗಿ ಕಲಿಸಿಕೊಡುತ್ತಾರೆ. (ಮೊಬೈಲ್: 99800 35435, 97439 06283)ಕ್ಯಾಲಿಗ್ರಫಿಯನ್ನು ಮನರಂಜನೆ ಜತೆಗೆ ಹಣ ಸಂಪಾದನೆಗೆ ಕೂಡ ಬಳಸಿಕೊಳ್ಳಬಹುದು. ಆಮಂತ್ರಣ ಪತ್ರಿಕೆಗಳು, ಲೋಗೋ ಡಿಸೈನ್, ಗ್ರಾಫಿಕ್ ಡಿಸೈನ್, ಸ್ಮಾರಕಗಳು ಮೊದಲಾದವುಗಳ ಮೇಲೆ ಬರೆವ ಕ್ಯಾಲಿಗ್ರಾಫರ್‌ಗಳಿಗೆ ಇಂದು ಹೆಚ್ಚಿನ ಬೇಡಿಕೆ ಇದೆ.

ಕಾಲಿಗ್ರಫಿ ಕೂಡ `ವಿಶುಯಲ್ ಆರ್ಟ್~. ಕಲಾವಿದ ತನ್ನ ಭಾವನೆಗೆ ನಿಲುಕುವ ವಿಚಾರಗಳನ್ನು ಕುಂಚದಲ್ಲಿ ಮೂಡಿಸುವಂತೆ, ಕ್ಯಾಲಿಗ್ರಾಫರ್ ಅಕ್ಷರರೂಪ ಕೊಟ್ಟು ತನ್ನ ಮನಸ್ಸಿನ ಭಾವನೆಗಳನ್ನು ಬಿಂಬಿಸುತ್ತಾನೆ.  ತನ್ನ ಸೃಜಶೀಲತೆಗೆ ಅನುಗುಣವಾಗಿ ಮನಸ್ಸಿನ ಭಾವನೆಗಳ ಜತೆಗೆ ವಿಶ್ವದ ವಿಚಾರಗಳನ್ನೆಲ್ಲಾ ತುಂಡು ಹಾಳೆಯ ಮೇಲೆ ಸುಂದರವಾಗಿ ಪಡಿಯಚ್ಚುಗೊಳಿಸುವ ಪರಿ ಬೆರಗು ಹುಟ್ಟಿಸುತ್ತದೆ.

 

ಪ್ರತಿಕ್ರಿಯಿಸಿ (+)