ಸುಕೃತ ಮತ್ತು ಪ್ರಸ್ತುತ

7

ಸುಕೃತ ಮತ್ತು ಪ್ರಸ್ತುತ

Published:
Updated:
ಸುಕೃತ ಮತ್ತು ಪ್ರಸ್ತುತ

ಕತಾರ್‌ ಏರ್‌ವೇಸ್‌ನ ಗಗನಸಖಿ ಹುದ್ದೆಯ ನೇಮಕಾತಿ ಪತ್ರ ಕೈಯಲ್ಲಿತ್ತು. ಬಹುಕಾಲದ ಕನಸು ಇನ್ನೇನು ನನಸಾಗುವುದರಲ್ಲಿತ್ತು. ಕನಸು ಮತ್ತು ನನಸು ಎರಡರ ನಡುವೆ ಇದ್ದ ಅವಧಿಯನ್ನು ಮನದೊಳಗಿನ ಕಿಚ್ಚು ಆರಿಸಿಕೊಳ್ಳಲು ಬಳಸಿಕೊಂಡಿದ್ದರು. ತನ್ನ ಬದುಕು ಇನ್ನು ತಾಯ್ನಾಡಿನಿಂದ ಬಲುದೂರ ಎಂದುಕೊಂಡಿದ್ದ ಈಕೆಯ ಹಣೆಬರಹ ಬೇರೆಯೇ ಇತ್ತು. ಪುಟ್ಟದೊಂದು ಅಪಘಾತ ನಡೆಯ ದಿಕ್ಕನ್ನೇ ಬದಲಿಸುವಂತೆ ಮಾಡಿತು. ನೇಮಕಾತಿ ಪತ್ರವನ್ನು ಬದಿಗಿಟ್ಟರು. ಹುಚ್ಚುತನದ ಹಸಿವನ್ನು ತಣಿಸಿಕೊಳ್ಳಲು ಸ್ಪರ್ಶಿಸಿದ್ದ ಬಣ್ಣಗಳೇ ಅಪ್ಯಾಯಮಾನ ಎನಿಸಿತು. ಅಲ್ಲಿಯೂ ತನ್ನ ಸುತ್ತ ಹಾಕಿಕೊಂಡಿದ್ದ ಬೇಲಿಯನ್ನು ಕಿತ್ತೊಗೆಯುವ ಅನಿವಾರ್ಯತೆ. ಬಣ್ಣಗಳ ಗಾಢತೆಯನ್ನು ಕಣ್ತುಂಬಿಕೊಂಡದ್ದಾಗಿದೆ. ಅದನ್ನಿನ್ನು ಹರಹುವುದೇ ತನ್ನ ಕಾಯಕ ಎಂಬ ನಂಬಿಕೆಗೆ ಬದ್ಧ.‘ಜಟ್ಟ’ ಚಿತ್ರದ ‘ಬೋಲ್ಡ್‌’ ಪಾತ್ರದಿಂದ ಸುಕೃತಾ ವಾಗ್ಳೆ ಮನೆಮಾತಾದ ನಟಿ. ಗಗನಸಖಿ ಆಗಬೇಕೆಂಬ ಆಸೆಯನ್ನು ಪುಟ್ಟದೊಂದು ಅಪಘಾತದಿಂದ ಆದ ಗಾಯಗಳು ಕಿತ್ತುಕೊಂಡವು. ಆಗಲೇ ‘ಲೌ’ ಮತ್ತು ‘ಜಟ್ಟ’ ಚಿತ್ರಗಳಲ್ಲಿ ನಟಿಸಿದ್ದ ಅವರಲ್ಲಿ ಕನಸಿನ ಮೆಟ್ಟಿಲಿಗೆ ಒಂದೇ ಹೆಜ್ಜೆ ಇದ್ದ ಕಾರಣ ಮತ್ತೆ ಬಣ್ಣಹಚ್ಚುವ ಬಯಕೆಯೇನೂ ಇರಲಿಲ್ಲ. ಗಗನಸಖಿ ಆಗದಿದ್ದರೂ ‘ಜಟ್ಟ’ ಚಿತ್ರದಲ್ಲಿ ನಟಿಸಿ ಗಗನಕ್ಕೇ ಹೋದಂತೆ ಆಡುತ್ತಿದ್ದಾಳೆ ಎಂದು ಮಾತಾಡಿಕೊಂಡವರು ಹಲವರು. ಬಲು ಜಾಣೆ, ಜೋರು, ಒರಟು, ಮಹಿಳಾವಾದಿ ಇತ್ಯಾದಿ ಬಿರುದುಗಳೂ ಸಿಕ್ಕಿದ್ದವು. ಬಹುಶಃ ‘ಜಟ್ಟ’ದ ಪಾತ್ರದ ಪರಿಣಾಮ ಅದು ಎನ್ನುವುದು ಅವರ ಅನಿಸಿಕೆ.ಗಗನಸಖಿಯಾಗುವ ಅವಕಾಶ ಕೈತಪ್ಪಿದ ಬಳಿಕ ಸಿನಿಮಾವನ್ನೇ ಅಪ್ಪಿಕೊಂಡಿದ್ದಾರೆ ಸುಕೃತಾ. ಅವರು ನಟಿಸಿರುವ ‘ಬಹುಪರಾಕ್‌’ ತೆರೆಕಾಣಲು ಸಿದ್ಧವಾಗಿದ್ದರೆ, ಹೊಸ ಚಿತ್ರ ‘ಫ್ಲಾಪ್‌’ ಸೆಟ್ಟೇರುತ್ತಿದೆ. ತಮಿಳಿನಲ್ಲಿಯೂ ಆಹ್ವಾನ ಎದುರಿಗಿದೆ. ‘ಜಟ್ಟ’ ಬಿಡುಗಡೆಗೂ ಮುನ್ನವೇ ಲೆಕ್ಕವಿಲ್ಲದಷ್ಟು ಅವಕಾಶಗಳು ಎದುರಾದವು. ಚಿತ್ರದ ಟ್ರೇಲರ್‌ ನೋಡಿ ಅವರ ಬೋಲ್ಡ್‌ನೆಸ್‌ ಅನ್ನು ಕೆಟ್ಟದಾಗಿ ಕಲ್ಪಿಸಿಕೊಂಡವರು ಕೀಳು ಕಥೆಗಳ ಸಿನಿಮಾಗಳಿಗೆ ಕರೆದರು. ಸಿನಿಮಾ ಮಾಡುವುದಿಲ್ಲ ಎಂದು ದೃಢವಾಗಿದ್ದರಿಂದ ಒಳ್ಳೆ ಅವಕಾಶಗಳನ್ನೂ ತಿರಸ್ಕರಿಸಿದರು. 

ಸಿನಿಮಾ ಅನಿವಾರ್ಯ ಎನಿಸಿದಾಗ ಮೊದಲು ಎದುರಾದ ಸವಾಲು– ಕಥೆ ಹೇಗಿದ್ದರೂ ತೊಂದರೆಯಿಲ್ಲ, ಮೊದಲು ನಟಿಯೆಂದು ಗುರ್ತಿಸಿಕೊಳ್ಳಬೇಕು ಎನ್ನುವುದು. ಅದಕ್ಕೆಂದೇ ನಿಯಮಗಳನ್ನು ಸಡಿಲಿಸಿಕೊಂಡಿದ್ದಾರೆ. ಅಷ್ಟೇನೂ ವಿಶೇಷವಲ್ಲದಿದ್ದರೂ ವಿಭಿನ್ನ ಗ್ಲಾಮರ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಸಲುವಾಗಿಯೇ ‘ಫ್ಲಾಪ್’ ಎಂಬ ಚಿತ್ರ ಒಪ್ಪಿಕೊಂಡಿದ್ದಾರೆ. ವಿಭಿನ್ನ ಎನ್ನುವುದು ಕಥೆ ಅಥವಾ ನಿರ್ವಹಿಸುವ ಪಾತ್ರದಲ್ಲಿ ಮಾತ್ರವಲ್ಲ, ಕಾಣಿಸಿಕೊಳ್ಳುವುದರಲ್ಲಿಯೂ ಇರುತ್ತದೆ ಎನ್ನುವುದು ಅವರ ನಂಬಿಕೆ. ಅದಕ್ಕಾಗಿಯೇ ತಮ್ಮ ಪಾತ್ರಕ್ಕೆ ಸ್ವತಃ ವಸ್ತ್ರವಿನ್ಯಾಸ ಮಾಡಿಕೊಳ್ಳುತ್ತಿದ್ದಾರೆ.ಹೊಸ ವರ್ಷಕ್ಕೆ ಸರಿಯಾಗಿ ಸುಕೃತಾ ಫ್ಯಾಷನ್‌ ಲೋಕದಲ್ಲಿ ನಡೆದಾಡಿ ರ್‍ಯಾಂಪ್‌ ಮೇಲೆ ನಿಂತಿದ್ದರು. ಆರಂಭದಲ್ಲಿಯೇ ಭವಿಷ್ಯದ ಭರವಸೆಗಳು ಸಿಕ್ಕಿವೆ ಎಂಬ ಖುಷಿ ಅವರದು. ‘ಬಹುಪರಾಕ್‌’ ಅದಕ್ಕೆ ಮುನ್ನುಡಿ ಬರೆಯುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ ಅವರು. ರಂಗ ಕಲಾವಿದೆಯ ಪಾತ್ರದಲ್ಲಿ ಒಂದೇ ಶಾಟ್‌ನಲ್ಲಿ ನವರಸಗಳನ್ನೂ ಪ್ರಕಟಪಡಿಸುವ ಸವಾಲು ಈ ಚಿತ್ರದಲ್ಲಿದೆ. ನಾಯಕಿಯ ಪಾತ್ರವಲ್ಲದಿದ್ದರೂ ಇದು ತನ್ನನ್ನು ‘ಜಟ್ಟ’ ಚಿತ್ರದಲ್ಲಿ ನೋಡಿದವರ ಭಾವನೆಗಳನ್ನು ಬದಲಿಸಲಿದೆ ಎನ್ನುತ್ತಾರೆ ಸುಕೃತಾ.ಯಾವುದೇ ಅಹಿತಕರ ಘಟನೆ ನಡೆದಾಗಲೂ ಮನೆಯಲ್ಲಿ ಅದರ ಬಗ್ಗೆ ತೀವ್ರ ಚರ್ಚೆ ಆಗುತ್ತಿತ್ತು. ಸಮಾಜ ತಿದ್ದುವ ಕಾರ್ಯದಲ್ಲಿ ಯಾವ ರೀತಿಯಲ್ಲಾದರೂ ನಾವೂ ತೊಡಗಬೇಕು ಎಂಬ ತುಡಿತ ವ್ಯಕ್ತವಾಗುತ್ತಿತ್ತು. ಬಿಸಿರಕ್ತ, ಹುಚ್ಚುತನ ಎಲ್ಲವೂ ಹೆಚ್ಚಾಗುತ್ತಿದ್ದಾಗಲೇ ಸಿಕ್ಕಿದ್ದು ‘ಜಟ್ಟ’ದ ಅವಕಾಶ. ‘ಅದೊಂದು ರೀತಿ ಒಳಗೆ ಕುದಿಯುತ್ತಿದ್ದ ಕಿಚ್ಚು. ಈ ಚಿತ್ರದ ಮೂಲಕ ಕಾಡು, ಹೆಣ್ಣುಮಕ್ಕಳು ಮುಂತಾದವುಗಳ ಕುರಿತು ಜನರನ್ನು ಎಚ್ಚರಗೊಳಿಸುವ ಮತ್ತು ಬದಲಿಸುವ ಪ್ರಯತ್ನ ಮಾಡಬಹುದು ಎಂದುಕೊಂಡಿದ್ದೆ. ಆದರೆ ಹೆಚ್ಚಿನ ಜನರಿಗೆ ಅದು ತಲುಪಲೇ ಇಲ್ಲ’ ಎಂದು ಬೇಸರದಿಂದ ಹೇಳಿಕೊಳ್ಳುತ್ತಾರೆ ಸುಕೃತಾ. ‘ಜಟ್ಟ’ದ ಅಭಿನಯಕ್ಕೆ ಪ್ರಶಸ್ತಿ ಸಿಗಬೇಕು ಎಂಬ ಮಾತುಗಳನ್ನು ಕೆಲವರು ಹೇಳುತ್ತಾರೆ. ಸಿಗುತ್ತದೆ ಎಂಬ ನಿರೀಕ್ಷೆ ನನಗಿಲ್ಲ, ಆಸೆಯಂತೂ ಖಂಡಿತಾ ಇಲ್ಲ ಎನ್ನುತ್ತಾರೆ ಅವರು. ತಮ್ಮ ಆಯ್ಕೆ ಮತ್ತು ನಡೆಯ ಬಗ್ಗೆ ಎಚ್ಚರದಿಂದ ಇರುವ ಸುಕೃತಾ, ಪ್ರತಿ ಚಿತ್ರದಲ್ಲಿ ವಿಭಿನ್ನ ಪಾತ್ರಗಳು ಸಿಗದಿದ್ದರೂ, ತಮ್ಮನ್ನು ವಿಭಿನ್ನವಾಗಿ ತೋರಿಸಿಕೊಳ್ಳುವ ಬಯಕೆ ವ್ಯಕ್ತಪಡಿಸುತ್ತಾರೆ. ಈ ಪ್ರಯತ್ನಕ್ಕೆ ತೆಲುಗಿನ ನಟಿ ಇಲಿಯಾನಾ ಮಾದರಿ. ‘ಜಟ್ಟ’ದಂಥ ಪಾತ್ರ ಮತ್ತೆ ಸಿಕ್ಕರೆ ಅಷ್ಟೇ ಖುಷಿಯಿಂದ ಮಾಡುತ್ತೇನೆ ಎನ್ನುವ ಸುಕೃತಾ ಕಂಗಳಲ್ಲಿ ಹೊಸ ವರ್ಷ ಹೊಸ ಬೆಳಕನ್ನು ಮೂಡಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry