ಸುಗಮ ಸಂಗೀತಕ್ಕೆ ನಿಸಾರ್ ಹೊಸ ತಿರುವು

7

ಸುಗಮ ಸಂಗೀತಕ್ಕೆ ನಿಸಾರ್ ಹೊಸ ತಿರುವು

Published:
Updated:
ಸುಗಮ ಸಂಗೀತಕ್ಕೆ ನಿಸಾರ್ ಹೊಸ ತಿರುವು

ಬೆಂಗಳೂರು:  `ಸುಗಮ ಸಂಗೀತ ಕ್ಷೇತ್ರಕ್ಕೆ ತಮ್ಮ ಕವಿತೆಯ ಮೂಲಕ ಹೊಸ ತಿರುವು ನೀಡಿದವರು ಕವಿ ಕೆ.ಎಸ್. ನಿಸಾರ್ ಅಹಮದ್. ಅವರು ಸತ್ವ ಬರಹಗಳಿಂದಲೇ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕಾಣಿಕೆ ನೀಡಿದ್ದಾರೆ~ ಎಂದು ಗಾಯಕ ಶಿವಮೊಗ್ಗ ಸುಬ್ಬಣ್ಣ ಹೇಳಿದರು.ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟವು ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ಜನ್ಮದಿನಾಚರಣೆಯ ಪ್ರಯುಕ್ತ ನಗರದಲ್ಲಿ ಸೋಮವಾರ ಆಯೋಜಿಸಿದ್ದ `ಸುಗಮ ಸಂಗೀತ ಸುದಿನ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ನಿತ್ಯೋತ್ಸವ ಧ್ವನಿ ಸುರುಳಿ ಬಿಡುಗಡೆ ನಂತರ ಭಾವಗೀತೆಗಳ ಧ್ವನಿಸುರುಳಿಗಳಿಗೆ ಬೇಡಿಕೆ ಹೆಚ್ಚಾಯಿತು. ಭಾವಗೀತೆಗಳನ್ನು ಸುಗಮ ಸಂಗೀತವಾಗಿಸುವಲ್ಲಿ ನಿಸಾರ್ ಅವರ ಕಾವ್ಯವು ಮಹತ್ತರ ಪಾತ್ರ ವಹಿಸುತ್ತದೆ. ಅಂತರಂಗದರ್ಶನ ಮತ್ತು ಮಾನವೀಯ ಸೂಕ್ಷ್ಮಗಳ ನೆಲೆಯಲ್ಲಿ ಅವರ ಕವಿತೆಗಳು ರೂಪುಗೊಂಡಿರುವುದರಿಂದ ರಾಗ ಸಂಯೋಜನೆಯ ಸಾಧ್ಯತೆಗಳನ್ನು ಹೆಚ್ಚಿಸಿವೆ~ ಎಂದರು.`ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ನಿಸಾರ್ ಅವರು ಆದಷ್ಟು ಬೇಗ ಗುಣಮುಖರಾಗಿ ಇಂತಹ ನೂರಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿ~ ಎಂದು ಆಶಿಸಿದರು.ಒಕ್ಕೂಟದ ಅಧ್ಯಕ್ಷ ವಿಜಯ ಹಾವನೂರು ಮಾತನಾಡಿ, `ರೇಡಿಯೋದಲ್ಲಿ ಬಿತ್ತರವಾಗುತ್ತಿದ್ದ ನಿಸಾರ್ ಅವರ ಕವಿತೆಗಳೇ ನನಗೆ ಹಾಡಲು ಪ್ರೇರಣೆ ನೀಡಿದೆ. ಮೇರು ಪ್ರತಿಭೆ ಹೊಂದಿದ್ದರೂ, ಸರಳ ಜೀವನ ನಡೆಸುವ ಅವರ ವ್ಯಕ್ತಿತ್ವ ಅನುಸರಣೀಯ~ ಎಂದರು.ಸಮಾರಂಭದಲ್ಲಿ ನಿಸಾರ್ ಅವರ ಪತ್ನಿ ಶಹನ್ವಾಜ್ ಬೇಗಂ ಅವರನ್ನು ಸನ್ಮಾನಿಸಲಾಯಿತು. ಗಾಯಕರಾದ ಶಿವಮೊಗ್ಗ ಸುಬ್ಬಣ್ಣ, ಶ್ರೀನಿವಾಸ ಉಡುಪ, ಗಣೇಶ ದೇಸಾಯಿ ಅವರು ನಿಸಾರ್ ರಚಿತ ಕವಿತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಒಕ್ಕೂಟದ ಉಪಾಧ್ಯಕ್ಷ ವೀರೇಶ್ ಬಳ್ಳಾರಿ, ಕಾರ್ಯದರ್ಶಿ ಆನಂದ ಮಾದಲಗೆರೆ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry