ಸುಗಮ ಸಂಚಾರಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ

7

ಸುಗಮ ಸಂಚಾರಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ

Published:
Updated:

ಕೋಲಾರ: ಜನ ಮತ್ತು ವಾಹನ ದಟ್ಟಣೆ ಹೆಚ್ಚಿರುವ ನಗರದ ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರ ವ್ಯವಸ್ಥೆ ರೂಪಿಸುವ ಸಲುವಾಗಿ ಜಿಲ್ಲಾಡಳಿತ ಯೋಜನೆ ತಯಾರಿಸಿದ್ದು, ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ವಿವಿಧ ಇಲಾಖೆ ಅಧಿಕಾರಿಗಳೊಡನೆ ಎಂ.ಜಿ.ರಸ್ತೆಯಲ್ಲಿ ಸೋಮವಾರ ಸಂಚರಿಸಿದರು.ಮಧ್ಯಾಹ್ನ 12.30ರ ವೇಳೆಗೆ ನಗರದ ಗಾಂಧಿವನದಿಂದ ಆರಂಭವಾಗುವ ಎಂ.ಜಿ.ರಸ್ತೆಯಿಂದ ತಮ್ಮ ನಡಿಗೆ ಆರಂಭಿಸಿದ ಜಿಲ್ಲಾಧಿಕಾರಿ ಅಡ್ಡರಸ್ತೆಗಳ ಬಳಿಯೂ ನಿಂತು ಅಲ್ಲಿನ ಜನ ಮತ್ತು ವಾಹನ ದಟ್ಟಣೆ ಪರಿಶೀಲಿಸಿದರು. ಅಡ್ಡರಸ್ತೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸುವುದು ಮತ್ತು ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ತರುವ ಬಗ್ಗೆಯೂ ಸ್ಥಳದಲ್ಲಿಯೆ ಚರ್ಚಿಸಿದರು.ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವಲಯ ಕಚೇರಿ ಇರುವ ರಸ್ತೆ ಬಳಿ ನಿಂತ ಜಿಲ್ಲಾಧಿಕಾರಿ, ಬ್ಯಾಂಕ್ ಮಂಭಾಗ ವಾಹನ ನಿಲುಗಡೆ ಇರುವುದನ್ನು ಗಮನಿಸಿದರು. ಅದಕ್ಕೆ ಹೊಂದಿಕೊಂಡಿರುವ ಹಳೇ ಕಾರ್ಪೊರೇಷನ್ ಬ್ಯಾಂಕ್ ರಸ್ತೆಯನ್ನೂ ಗಮನಿಸಿದರು. ಆ ರಸ್ತೆಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಜಾರಿಗೊಳಿಸಬಹುದು ಎಂಬ ಸಲಹೆಯನ್ನು ಅವರು ಒಪ್ಪಲಿಲ್ಲ.ಅಸಮಾಧಾನ: ಇನ್ನೂ ಮುಂದೆ ಬಂದ ಅವರು ಎಂ.ಜಿ.ಚೌಕದಲ್ಲಿರುವ ದೊಡ್ಡಪೇಟೆ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಚರ್ಚಿಸಿದರು. ಸ್ಥಳದಲ್ಲಿದ್ದ ಕೆಲವು ನಾಗರಿಕರು, ವರ್ತಕರು, ಏಕಮುಖ ಸಂಚಾರ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ಸಂಚಾರ ನಿಯಂತ್ರಣಠಾಣೆ ಪೊಲೀಸರು ವಿಫಲರಾಗಿದ್ದಾರೆ. ಅವರ ಕಣ್ಣ ಮುಂದೆಯೇ ಏಕಮುಖ ಸಂಚಾರ ರಸ್ತೆಯಲ್ಲಿ ಎರಡೂ ಬದಿಯಿಂದ ವಾಹನ ಸವಾರರು ನುಗ್ಗುವುದು ಸಾಮಾನ್ಯ ದೃಶ್ಯವಾಗಿದೆ ಎಂದು ದೂರಿದರು.ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಇಂಥ ಅಸಮರ್ಪಕ ಅಂಶಗಳನ್ನು ಗಮನಿಸುವ ಸಲುವಾಗಿಯೇ ವಿವಿಧ ಇಲಾಖೆ ಅಧಿಕಾರಿಗಳೊಡನೆ ರಸ್ತೆಗಳ ಪರಿಶೀಲನೆ ನಡೆಸಲಾಗುತ್ತಿದೆ. ವಾಹನ ದಟ್ಟಣೆ ಮತ್ತು ಜನದಟ್ಟಣೆ ನಿಯಂತ್ರಿಸಿ ಸುಗಮ ಸಂಚಾರ ಏರ್ಪಡಿಸುವ ರಸ್ತೆಗಳನ್ನು ಗುರುತಿಸಿ ನಿಯಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.ರಸ್ತೆಯುದ್ದಕ್ಕೂ ಅನಧಿಕೃತವಾಗಿ ಬ್ಯಾನರ್, ಫ್ಲೆಕ್ಸ್, ಬೋರ್ಡ್, ಬಾವುಟಗಳನ್ನು ಅಳವಡಿಸುವವರ ವಿರುದ್ಧವೂ ಇನ್ನು ಮುಂದೆ ಕ್ರಮ ಕೈಗೊಳ್ಳಲಾಗುವುದು, ಎಲ್ಲ ರಸ್ತೆಗಳಲ್ಲೂ ಅಳವಡಿಸಿರುವ ಬ್ಯಾನರ್, ಫ್ಲೆಕ್ಸ್, ಬೋರ್ಡ್, ಬಾವುಟ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.ನಗರದ ಅಮ್ಮವಾರಿಪೇಟೆ ವೃತ್ತದವರೆಗೂ ನಡೆದು ಬಂದ ಅವರು, ಸಾರಿಗೆ ಪ್ರಾಧಿಕಾರ ತಯಾರಿಸಿದ ನೀಲನಕ್ಷೆಯ ಅನ್ವಯ ವೃತ್ತವನ್ನು ಪರಿಶೀಲಿಸಿದರು. ಕಾಳಮ್ಮ ಗುಡಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿ ದಿನವೂ ಸಮಸ್ಯೆ ಸೃಷ್ಟಿಯಾಗುತ್ತಿರುವ ಕುರಿತು ಸಾರ್ವಜನಿಕರು ಅವರ ಗಮನಕ್ಕೆ ತಂದರು.4ರಂದು ಸಭೆ: ನಂತರ ಸುದ್ದಿಗಾರರೊಡನೆ ಮಾತನಾಡಿದ ಜಿಲ್ಲಾಧಿಕಾರಿ, ನಗರದಲ್ಲಿ ಸುಗಮ ಸಂಚಾರ ರೂಪಿಸುವ ಸಲುವಾಗಿ ಅ.4ರಂದು ಸಭೆ ನಡೆಸಲಾಗುವುದು. ಅಲ್ಲಿ ಸಾರ್ವಜನಿಕರು ಮತ್ತು ಅಧಿಕಾರಿಗಳೊಡನೆ ಚರ್ಚಿಸಿ ಯೋಜನೆ ಅಂತಿಮಗೊಳಿಸಲಾಗುವುದು. ನಾಲ್ಕು ಚಕ್ರದ ವಾಹನಗಳ ಸಂಚಾರ ಮತ್ತು ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡುವುದು, ದ್ವಿಚಕ್ರ ವಾಹನಗಳ ನಿಲುಗಡೆ ವ್ಯವಸ್ಥೆ, ಪ್ರಮುಖ ರಸೆಗಳಲ್ಲಿ ಏಕಮುಖ ವಾಹನ ಸಂಚಾರ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಅಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಬಸವರಾಜು, ನಗರಸಭೆ ಆಯುಕ್ತ ಎಂ.ಮಹೇಂದ್ರ ಕುಮಾರ್, ಡಿವೈಎಸ್‌ಪಿ ಶ್ರೀಹರಿ ಬರಗೂರು, ನಗರ ಸರ್ಕಲ್ ಇನ್ಸ್‌ಪೆಕ್ಟರ್ ಜಗದೀಶ್, ಸಬ್ ಇನ್ಸ್‌ಪೆಕ್ಟರ್ ಅಂಬರೀಶ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry