ಸುಗಮ ಸಂಚಾರಕ್ಕೆ `ವೈಟ್ರ್ಯಾಕ್'

7

ಸುಗಮ ಸಂಚಾರಕ್ಕೆ `ವೈಟ್ರ್ಯಾಕ್'

Published:
Updated:

ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ `ಸುಧಾರಿತ ಗಣಕ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರ'ವು (ಸಿ-ಡಾಕ್) `ವೈಟ್ರ್ಯಾಕ್' ಎಂಬ  ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು ದೇಶದ ಮೊದಲ ನಿಸ್ತಂತು ಸಂಚಾರ ನಿರ್ವಹಣೆ ತಂತ್ರಜ್ಞಾನ ಎನ್ನಲಾಗಿದೆ.`ವೈಟ್ರ್ಯಾಕ್' ತಂತ್ರಜ್ಞಾನ ಬಳಸಿ ಕೇಂದ್ರೀಕೃತ ನಿಯಂತ್ರಣ ಕೊಠಡಿಯಿಂದ `ಜಿಪಿಎಸ್' ವ್ಯವಸ್ಥೆ ಮೂಲಕ ನಿಸ್ತಂತು ಸಂಕೇತಗಳನ್ನು ಬಳಸಿ ನಗರದಾದ್ಯಂತ ಇರುವ ಸಂಚಾರ ನಿಯಂತ್ರಣ ದೀಪಗಳನ್ನು ನಿರ್ವಹಿಸಬಹುದಾಗಿದೆ. ಈ ನಿಸ್ತಂತು ಸಂಚಾರ ನಿರ್ವಹಣೆ ವ್ಯವಸ್ಥೆಯಲ್ಲಿ ದತ್ತಾಂಶಗಳನ್ನು ತಾಳೆ ನೋಡಿ, ಅದರ ಸಹಾಯದಿಂದ ಸಂಚಾರ ದಟ್ಟಣೆ ಕಂಡುಬಂದ ಕಡೆಗಳಲ್ಲಿ ಶೀಘ್ರವಾಗಿ ಸಂಚಾರ ಸುಗಮಗೊಳಿಸುವ ನಿರ್ದೇಶನ ಕೂಡ ನೀಡಬಹುದು. ಅಷ್ಟೇ ಅಲ್ಲ, ಪಾರ್ಕಿಂಗ್ ಸೌಲಭ್ಯ ಅಗತ್ಯ ಕಂಡುಬಂದ ಕಡೆಗಳಲ್ಲಿ ಈ ತಂತ್ರಜ್ಞಾನದ ಸಹಾಯದಿಂದ ನಿರ್ದಿಷ್ಟ ಮಾರ್ಗದಲ್ಲಿರುವ ವಾಹನಗಳ  ಸಂಖ್ಯೆ ತಿಳಿದುಕೊಳ್ಳಬಹುದು. ಅದಕ್ಕೆ ತಕ್ಕಂತೆ ಸೂಚನೆಗಳನ್ನೂ ಕೊಡಬಹುದು.ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ(ಡಿಇಐಟಿವೈ-ಡೈಟಿ) ಪ್ರಧಾನ ಘಟಕವಾದ `ಸಿ-ಡಾಕ್' ವಿದ್ಯುನ್ಮಾನ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯಾಗಿದೆ. ಕೇಂದ್ರ ಸರ್ಕಾರ ಈ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ರೂ.14.75 ಕೋಟಿ ವೆಚ್ಚ ಮಾಡಿದೆ.ವಾಣಿಜ್ಯ ಬಳಕೆ ದೃಷ್ಟಿಯಿಂದ ಪರಿಕರಗಳ ಉತ್ಪಾದನೆಗಾಗಿ ಈ ತಂತ್ರಜ್ಞಾನವನ್ನು ಈಗಾಗಲೇ ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರು ಎಂಟು ಭಾರತೀಯ ಕಂಪೆನಿಗಳಿಗೆ ಹಸ್ತಾಂತರಿಸಿದ್ದಾರೆ. ಆ ಕಂಪೆನಿಗಳು ತಯಾರಿಸಿ ಅಳವಡಿಸುವ ಒಂದು `ನಿಸ್ತಂತು ಸಂಚಾರ ನಿರ್ವಹಣೆ ಸಾಧನ'ದ(ವೈಟ್ರ್ಯಾಕ್) ಮೇಲೆ ಸರ್ಕಾರ ರೂ.15 ಸಾವಿರ ರಾಯಧನ (ರಾಯಲ್ಟಿ) ವಿಧಿಸಲಿದೆ.`ವಿದೇಶಗಳಲ್ಲಿ ಈಗಾಗಲೇ ಅಭಿವೃದ್ಧಿ ಪಡಿಸಿರುವ ಸಂಚಾರ ನಿಯಂತ್ರಣ  ತಂತ್ರಜ್ಞಾನಕ್ಕಿಂತಲೂ ಭಿನ್ನವಾಗಿರುವ ಈ ತಂತ್ರಜ್ಞಾನವು ಭಾರತದ ಸಂಚಾರ ವ್ಯವಸ್ಥೆಗೆ ಹೇಳಿ ಮಾಡಿಸಿದಂತಿದೆ' ಎನ್ನುತ್ತಾರೆ `ಡಿಇಐಟಿವೈ' ಕಾರ್ಯದರ್ಶಿ ಜೆ.ಸತ್ಯನಾರಾಯಣ.ಸಂಪೂರ್ಣವಾಗಿ ಸೌರ ವ್ಯವಸ್ಥೆಯಿಂದ ಕಾರ್ಯನಿರ್ವಹಿಸುವ ಈ ವೈಟ್ರ್ಯಾಕ್ ಸಾಧನವನ್ನು ಅಳವಡಿಸುವುದು ಕೂಡ ಸದ್ಯದ ವ್ಯವಸ್ಥೆಗಿಂತ ತುಂಬಾ ಸುಲಭವಾಗಿದೆ. ಈ ಹಿಂದೆ ಸಂಚಾರ ನಿಯಂತ್ರಣ ಸಾಧನಗಳನ್ನು ಅಳವಡಿಸುವಾಗ ರಸ್ತೆಗಳನ್ನು ಅಗೆದು ವೈರ್‌ಗಳನ್ನು ಹೂಳಲಾಗುತ್ತಿತ್ತು. ಇದರಲ್ಲಿ ಆ ರಗಳೆ ಇಲ್ಲ.`ಈ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ನಮ್ಮ ಸದ್ಯದ ಪಾಲುದಾರರು ಸಹಾಯ ಒದಗಿಸುವ ಜತೆಗೆ ತಂತ್ರಜ್ಞಾನ ಹಸ್ತಾಂತರಕ್ಕೆ ಅಗತ್ಯವಾದ ರೂ.15 ಲಕ್ಷಗಳನ್ನು ಕೂಡ ನೀಡಿದ್ದಾರೆ. ಅದೇ ರೀತಿ ಹೊಸ ಪಾಲುದಾರರು ಕೂಡ ರೂ.18.75 ಲಕ್ಷ ನೆರವು ನೀಡಿದ್ದಾರೆ' ಎನ್ನುತ್ತಾರೆ `ಡಿಇಐಟಿವೈ' ಸಮೂಹ ನಿರ್ದೇಶಕ ದೆಬಾಶಿಸ್ ದತ್ತ.ಈ ವೈಟ್ರ್ಯಾಕ್ ಸಾಧನವನ್ನು ತಯಾರಿಸಲು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಜೈಪುರ ಮೂಲದ ಶಕ್ತಿ ಎಂಟರ್‌ಪ್ರೈಸಸ್, ದೆಹಲಿ ಮೂಲದ ಓನಿಎಕ್ಸ್ ಎಲೆಕ್ಟ್ರಾನಿಕ್ಸ್, ಗುರಗಾಂವ್ ಮೂಲದ ಎನ್ವಾಯ್ಸ ಎಲೆಕ್ಟ್ರಾನಿಕ್ಸ್, ಇಂಧೊರ್‌ನ ಎಲೆಕ್ಟ್ರೋ-ಆ್ಯಡ್ಸ್, ದೆಹಲಿ ಇಂಟಿಗ್ರೆಟೆಡ್ ಮಲ್ಟಿಮೊಡ್ ಟ್ರಾನ್ಸಿಟ್ ಸಿಸ್ಟಮ್, ಮೆಟ್ರೊ ಇನ್‌ಫ್ರಾಸ್ ಹಾಗೂ ಕೆಲ್‌ಟ್ರೋನ್ ಕಂಪೆನಿಗಳು ಒಪ್ಪಂದ ಮಾಡಿಕೊಂಡಿವೆ.`ವಿದೇಶದಿಂದ ಸಂಚಾರ ನಿಯಂತ್ರಣ ಉಪಕರಣವೊಂದನ್ನು ಆಮದು ಮಾಡಿಕೊಂಡರೆ ಅದಕ್ಕೆ ಸುಮಾರು ರೂ.6-7 ಲಕ್ಷ (10-12 ಸಾವಿರ ಅಮೆರಿಕನ್ ಡಾಲರ್) ವೆಚ್ಚ ತಗಲುತ್ತದೆ. ಇದಕ್ಕೆ ತರಬೇತಿ ವೆಚ್ಚ ಹಾಗೂ ಇತರೆ ಖರ್ಚು ಸೇರಿಸಿದರೆ ತುಂಬಾ ದುಬಾರಿಯಾಗುತ್ತದೆ. ಆದರೆ ನಾವು ತಯಾರಿಸುವ  ವೈಟ್ರ್ಯಾಕ್ ಸಾಧನವು ಸುಮಾರು ರೂ.2 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿದ್ಧವಾಗುತ್ತದೆ' ಎನ್ನುತ್ತಾರೆ ಎನ್ವಾಯ್ಸ ಎಲೆಕ್ಟ್ರಾನಿಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರಸ್‌ಮೀತ್ ಕೊಹ್ಲಿ.

ಬೆಂಗಳೂರು ಟ್ರಾಫಿಕ್

ಬೆಂಗಳೂರು ನಗರದಲ್ಲಿ 44.5 ಲಕ್ಷ ವಾಹನಗಳಿವೆ. ಅದರಲ್ಲಿ ಶೇ 70ರಷ್ಟು ದ್ವಿಚಕ್ರ ವಾಹನಗಳು. ಪ್ರತಿದಿನ700 ಹೊಸ ವಾಹನ ನೋಂದಣಿಯಾಗುತ್ತಿವೆ.  ಪ್ರತಿವರ್ಷ ವಾಹನಗಳ ಸಂಖ್ಯೆ ಶೇ10ರಷ್ಟು ಪ್ರಮಾಣದಲ್ಲಿ ಹೆಚ್ಚುತ್ತಿದೆ. ವ್ಯಕ್ತಿ ಮತ್ತು ವಾಹನಗಳ ಅನುಪಾತ ಗಮನಿಸಿದರೆ ಪ್ರತಿ ಇಬ್ಬರಿಗೆ ಒಂದು ವಾಹನ ಇದೆ(ದೆಹಲಿಯಲ್ಲಿ 1:4)ಬೆಂಗಳೂರಿನಲ್ಲಿರುವ ಕಾರುಗಳ ಸಂಖ್ಯೆ 2020ರ ವೇಳೆಗೆ 18 ಲಕ್ಷವನ್ನು ಮುಟ್ಟಲಿದೆ. 2030ರ ವೇಳೆ ಕಾರುಗಳು 47 ಲಕ್ಷ ಮುಟ್ಟಿದರೆ, ದ್ವಿಚಕ್ರ ವಾಹನಗಳ ಸಂಖ್ಯೆ 2020ರಲ್ಲಿ 62 ಲಕ್ಷಕ್ಕೂ, 2030ರ ವೇಳೆಗೆ 1.62 ಕೋಟಿಗೂ ಹೆಚ್ಚಲಿವೆ ಎನ್ನುತ್ತದೆ ಸಂಚಾರ ಪೊಲೀಸರ ವರದಿ.ಸಿಬ್ಬಂದಿ ಕೊರತೆಯ ಮಧ್ಯೆ ಬೆಂಗಳೂರಿನಂತಹ ಮಹಾನಗರಗಳ ಸಂಚಾರ ದಟ್ಟಣೆ ನಿಯಂತ್ರಿಸುವುದು ಕಷ್ಟದ ಕೆಲಸ. ಮಳೆ-ಬಿಸಿಲು ಎನ್ನದೆ ಸಂಚಾರ ನಿಯಂತ್ರಿಸಲು ಶ್ರಮಿಸುವ ಸಿಬ್ಬಂದಿಗೆ ವೈಟ್ರ್ಯಾಕ್ ತಂತ್ರಜ್ಞಾನವು ಸಹಾಯಕವಾಗಲಿದೆ ಎನ್ನುವುದು ನಮ್ಮ ಆಶಯ.

ಬಿ.ದಯಾನಂದ

ಬೆಂಗಳೂರು ನಗರ ಸಂಚಾರ ಮತ್ತು ಭದ್ರತೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ.-ಜನಸಂಖ್ಯೆ ಒಂದು ಕೋಟಿ

-44.5 ಲಕ್ಷ ವಾಹನಗಳಿವೆ

-ಪ್ರತಿ ತಿಂಗಳು 21,000ಕ್ಕೂ ಅಧಿಕ ಹೊಸ ವಾಹನ ರಸ್ತೆಗಿಳಿಯುತ್ತವೆ

-6,200ಕ್ಕೂ ಅಧಿಕ ಬಿಎಂಟಿಸಿ ಬಸ್‌ಗಳಿವೆ

-11,000 ಕಿ.ಮೀ ರಸ್ತೆ

-ಎರಡು ರಸ್ತೆಗಳನ್ನು ಸಂಪರ್ಕಿಸುವ 44,000 ಚೌಕಗಳಿವೆ (Intersections)

-1000 ಚೌಕಗಳಲ್ಲಿ ಅಗತ್ಯ ಕಂಡುಬಂದ ಕಡೆಗಳಲ್ಲಿ ಸಿಬ್ಬಂದಿ ನಿಯೋಜನೆ

-343 ಚೌಕಗಳಲ್ಲಿ ಮಾನವ ನಿಯಂತ್ರಣ ಸಂಚಾರ ದೀಪ ವ್ಯವಸ್ಥೆ

-168 ಕಡೆ ಏಕಮುಖ ಸಂಚಾರ ಮಾರ್ಗವೆ

-500  ಚೌಕಗಳಲ್ಲಿ ಗೃಹ ರಕ್ಷಕ ದಳ ಸಿಬ್ಬಂದಿ ನಿಯೋಜನೆ

-175 ಚೌಕಗಳಲ್ಲಿ ಲೀಜ್ಡ್ ಲೈನ್ ಹೊಂದಿದ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ

-ಬೆಂಗಳೂರು ಸಂಚಾರ ಪೋಲಿಸ್ ಸಿಬ್ಬಂದಿ ಸಂಖ್ಯೆ 3483(ಪುರುಷರು)

-636 ಸಂಚಾರ ಪೋಲಿಸ್ ಸಿಬ್ಬಂದಿ ಹುದ್ದೆ ಖಾಲಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry