ಗುರುವಾರ , ಮೇ 13, 2021
40 °C

ಸುಗಮ ಸಂಚಾರ: ಸಿಗ್ನಲ್‌ಮುಕ್ತ ಕಾರಿಡಾರ್‌ಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಓಕಳೀಪುರಂ ಜಂಕ್ಷನ್‌ನಿಂದ ಫೌಂಟೇನ್ ವೃತ್ತದವರೆಗೆ ಎಂಟು ಪಥದ ಕಾರಿಡಾರ್ ರಸ್ತೆ, ಅಂಡರ್‌ಪಾಸ್ ರಸ್ತೆ ಮತ್ತು ರೈಲ್ವೆ ಕೆಳಸೇತುವೆ ನಿರ್ಮಿಸುವ ಸಂಬಂಧ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಗೃಹ ಕಚೇರಿ `ಕೃಷ್ಣಾ~ದಲ್ಲಿ ಅಧಿಕಾರಿಗಳ ಸಭೆ ನಡೆಸಲಾಯಿತು.ನಗರದ ಪೂರ್ವದಿಂದ ಪಶ್ಚಿಮಕ್ಕೆ ಸೇತುವೆ ಕೊಂಡಿಯಂತಿರುವ ವೃತ್ತವನ್ನು ಸಿಗ್ನಲ್‌ಮುಕ್ತ ಕಾರಿಡಾರ್ ಅನ್ನಾಗಿ ಪರಿವರ್ತಿಸಿದಲ್ಲಿ ಹಾಲಿ ಸಂಚಾರ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಬಹುದು ಎಂದು ನಗರಾಭಿವೃದ್ಧಿ ಸಚಿವ ಎಸ್. ಸುರೇಶ್‌ಕುಮಾರ್ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.ಈ ಯೋಜನೆಗೆ ರೈಲ್ವೆ ಇಲಾಖೆಯ 3 ಎಕರೆ ಜಾಗ ಅಗತ್ಯವಿದೆ. ಇಲಾಖೆಯು ಭೂ ಬದಲಾವಣೆ ಆಧಾರದ ಮೇರೆಗೆ ಭೂಮಿ ಹಸ್ತಾಂತರಿಸಲು ತೀರ್ಮಾನಿಸಿದೆ.ರಸ್ತೆ ವಿಸ್ತರಣೆಗೆ ಪಡೆದ ಜಮೀನಿಗೆ ಪ್ರತಿಯಾಗಿ ಪಾಲಿಕೆಗೆ ಸೇರಿದ 1 ಎಕರೆ ಜಾಗವನ್ನು ಈಗಾಗಲೇ ರೈಲ್ವೆ ಇಲಾಖೆಗೆ ನೀಡಲಾಗಿದೆ. ಬಿನ್ನಿ ಮಿಲ್ ಬಳಿ ಕಂದಾಯ ಇಲಾಖೆ ಅಧೀನದ 27 ಎಕರೆ ಜಾಗದಲ್ಲಿ 2 ಎಕರೆ ಜಾಗವನ್ನು ಹಸ್ತಾಂತರಿಸಲು ಇಲಾಖೆಯ ಜತೆ ಚರ್ಚಿಸಿ ಜರೂರು ಸರ್ಕಾರಿ ಆದೇಶ ಹೊರಡಿಸಲು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಹಾಜರಿದ್ದ ಮುಖ್ಯಮಂತ್ರಿಗಳ ಕಾರ್ಯಾಲಯದ ಜಂಟಿ ಆಯುಕ್ತರಿಗೆ ಆದೇಶಿಸಲಾಯಿತು.ಈ ಯೋಜನೆಗಾಗಿ ತೆರವುಗೊಳಿಸಬೇಕಾಗಿರುವ ರೈಲ್ವೆ ಇಲಾಖೆ ನೌಕರರ ವಸತಿಗೃಹ ಕಟ್ಟಡಗಳನ್ನು ಪುನರ್‌ನಿರ್ಮಿಸಲು ಇಲಾಖೆಯು ರೂ 7.28 ಕೋಟಿ ಪ್ರಸ್ತಾವ ಸಲ್ಲಿಸಿರುವ ಹಿನ್ನೆಲೆಯಲ್ಲಿ ತಕ್ಷಣ ರೂ 7.20 ಕೋಟಿ  ಠೇವಣಿಯಿಡಲು ನಿರ್ಧರಿಸಲಾಯಿತು. ಅಲ್ಲದೆ, ತುರ್ತು ರೈಲ್ವೆ ಇಲಾಖೆಯಿಂದ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸಲು ತೀರ್ಮಾನಿಸಲಾಯಿತು.ಈ ಯೋಜನೆಯ ಕೆಳಸೇತುವೆ ನಿರ್ಮಾಣದ ಜಾಗದಲ್ಲಿ ರೈಲ್ವೆ ಇಲಾಖೆಗೆ ಸೇರಿದ ಎಲ್ಲ ಕಟ್ಟಡಗಳನ್ನು ಸ್ಥಳಾಂತರಿಸುವ ಅಗತ್ಯವಿದೆ. ಈ ಕಟ್ಟಡಗಳನ್ನು ಬೇರೆ ಜಾಗದಲ್ಲಿ ಪುನರ್ ನಿರ್ಮಿಸಿದ ನಂತರ ಜಾಗ ಹಸ್ತಾಂತರಿಸಲಾಗುವುದು ಎಂದು ಸಭೆಯಲ್ಲಿ ಹಾಜರಿದ್ದ ನೈರುತ್ಯ ರೈಲ್ವೆ ಅಧಿಕಾರಿಗಳು ಭರವಸೆ ನೀಡಿದರು.ಯೋಜನೆ ತ್ವರಿತವಾಗಿ ಅನುಷ್ಠಾನಗೊಳಿಸುವ ದೃಷ್ಟಿಯಿಂದ ಕಾಮಗಾರಿಯನ್ನು ನಿರ್ಮಿತಿ ಕೇಂದ್ರ ಅಥವಾ ಭೂಸೇನಾ ನಿಗಮಕ್ಕೆ ವಹಿಸಲು ಆರ್ಥಿಕ ಇಲಾಖೆಯಿಂದ ಆದೇಶ ಹೊರಡಿಸಲು ಸೂಕ್ತ ಕ್ರಮ ಜರುಗಿಸುವಂತೆಯೂ ಮುಖ್ಯಮಂತ್ರಿಗಳ ಕಾರ್ಯಾಲಯದ ಜಂಟಿ ಆಯುಕ್ತರಿಗೆ ಆದೇಶ ನೀಡಲಾಯಿತು.

 

ಈ ಯೋಜನೆಯ ಟೆಂಡರ್ ಪ್ರಕ್ರಿಯೆಯ 2ನೇ ಹಂತದ ತಾಂತ್ರಿಕ ಬಿಡ್ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಏ. 7ರೊಳಗೆ ಆರ್ಥಿಕ ಬಿಡ್ ತೆರೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನ ಎಂಜಿನಿಯರ್ ಸಭೆಯ ಗಮನಕ್ಕೆ ತಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.