ಶನಿವಾರ, ಮಾರ್ಚ್ 6, 2021
32 °C
ಕಲಾಪ

ಸುಗ್ಗಿಯ ಕಲಾ ಕೃಷಿ

ನವೀನ್ ಕುಮಾರ್ ಎ.ಎಂ. Updated:

ಅಕ್ಷರ ಗಾತ್ರ : | |

ಸುಗ್ಗಿಯ ಕಲಾ ಕೃಷಿ

ರೈತರ ಕುಟುಂಬಗಳಲ್ಲಿ ಸುಗ್ಗಿ ಹಬ್ಬವಾಗಿಯೇ ಆಚರಣೆಯಾಗುತ್ತಿದ್ದ ಸಂಕ್ರಾಂತಿ ಹಬ್ಬ, ಇಂದಿನ ತಂತ್ರಜ್ಞಾನ, ಕೈಗಾರಿಕೀಕರಣ, ನಗರೀಕರಣಗಳ ಹಾವಳಿಗೆ ಸಿಕ್ಕು ತನ್ನತನವನ್ನು ಮರೆತಂತಾಗಿದೆ. ಎಲ್ಲವೂ ಅನಿವಾರ್ಯವಾಗಿಯೋ ಅನುಕೂಲಕ್ಕೆ ಅನುಗುಣವಾಗಿಯೋ ಬದಲಾಗಿದೆ.ಈ ಬದಲಾದ ಕಾಲಘಟ್ಟದ ಚಿತ್ರಣಗಳು ಕೃಷಿ ಕುಟುಂಬದಲ್ಲಿ ಜನಿಸಿದ ಕಲಾವಿದನ ಕಲಾ ಕೃಷಿಯಲ್ಲಿ ಹೇಗೆಲ್ಲಾ ಅಭಿವ್ಯಕ್ತಿಯಾಗಬಹುದು ಎನ್ನುವಂತಹ ಚಿತ್ರ ಮಾದರಿಗಳು ಕಂಡುಬಂದಿದ್ದು ಬೆಂಗಳೂರಿನ ವಸಂತನಗರದ ಆರ್ಟ್ ಹೌಸ್ ಗ್ಯಾಲರಿಯಲ್ಲಿ ನಡೆಯುತ್ತಿರುವ ‘ದಿ ಫಸ್ಟ್ ಹಾರ್ವೆಸ್ಟ್’ ಎನ್ನುವ ಹೆಸರಿನ ಸಂಕ್ರಾಂತಿ ವಿಶೇಷ ಕಲಾ ಪ್ರದರ್ಶನದಲ್ಲಿ.ಮೂಲತಃ ಮೈಸೂರಿನ ಕುಂಬಾರ ಕುಪ್ಪಲ್‌ನವರಾದ ದಯಾನಂದ ಎನ್., ರೈತ ಕುಟುಂಬದಲ್ಲಿ ಜನಿಸಿ ಚಿಕ್ಕವಯಸ್ಸಿನಿಂದಲೇ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡವರು. ಇವರು ಮೈಸೂರಿನ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಕಲಾ ಪದವಿ ಪಡೆದು, ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮಾಡಿದ್ದಾರೆ.ಚಿಕ್ಕಂದಿನಿಂದ ತಂದೆಯೊಂದಿಗೆ ಕೃಷಿ ಕೆಲಸಗಳಲ್ಲಿ ಭಾಗವಹಿಸುತ್ತಾ ಬೆಳೆದಿರುವ ದಯಾನಂದ ಈಗಲೂ ನೆಲದೊಂದಿಗೆ  ಸಂಬಂಧ ಉಳಿಸಿಕೊಂಡಿದ್ದಾರೆ.  ರೈತರ ಬದುಕು, ಆಲೋಚನೆಗಳು, ಅವರ ಸ್ಥಿತಿಗಳು ರೈತ ಕುಟುಂಬಗಳೊಂದಿಗಿನ ಒಡನಾಟವೇ ಅವರ ಕಲಾಭಿವ್ಯಕ್ತಿಯ ವಸ್ತುಗಳಾಗಿರುವುದು ವಿಶೇಷ.‘ಚಾಮುಂಡಿ ಸಿಲ್ಕ್ಸ್’ ಸಹಕಾರದಿಂದ ಬೆಂಗಳೂರಿನ  ವಸಂತನಗರದ ಆರ್ಟ್ ಹೌಸ್ ಗ್ಯಾಲರಿಯಲ್ಲಿ ನಡೆಸುತ್ತಿರುವ ‘ದಿ ಫಸ್ಟ್ ಹಾರ್ವೆಸ್ಟ್’ ಕಲಾಪ್ರದರ್ಶನದಲ್ಲಿ ಕ್ಯಾನ್ವಾಸ್, ಪೇಪರ್, ಬಹುಮಾಧ್ಯಮಗಳ ಚಿತ್ರಗಳೊಂದಿಗೆ ನೋಡುಗರಿಗೆ ಸುಗ್ಗಿಯ ಹಿಗ್ಗನ್ನು ಹೆಚ್ಚಿಸುವಂತಹ ಕುಸರಿ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ. ಅವುಗಳಲ್ಲಿ ಗಾಜಿನ ಪಾರದರ್ಶಕ ಕಣಜ, ಒನಕೆ, ಬೊಗಸೆ, ಅತಂತ್ರರು ಹಾಗೂ ಭತ್ತದ ನದಿ ಕಲೆಗಳು ದಯಾನಂದ ಅವರ ಸೂಕ್ಷ್ಮ ಕಲಾವಂತಿಕೆಯನ್ನು ತೋರಿಸುತ್ತವೆ. ನೆಲ್ಲು ಕುಟ್ಟಲು ಬಳಸುತ್ತದ್ದ ಒನಕೆಗಳ ಮಾದರಿಯ ಮೇಲೆ ಆಧುನಿಕ ಯಂತ್ರಗಳಾದ ಮಿಕ್ಸಿ, ಮಿಲ್‌ಗಳ ಚಿತ್ರಗಳು; ರುಬ್ಬುವ ಮಿಷನ್‌ಗಳ ಜಲವರ್ಣ ಚಿತ್ರಗಳನ್ನು ಬಿಡಿಸಿರುವುದು ಬದಲಾದ ಕಾಲದಲ್ಲಿ ತಂತ್ರಜ್ಞಾನಗಳು ಹಳೆಯ ಆಯುಧಗಳ ಸ್ಥಾನವನ್ನು ಆಕ್ರಮಿಸಿಕೊಂಡಿರುವ ಸೂಕ್ಷ್ಮ ಸಂಗತಿಯ ಪ್ರತೀಕವಾಗಿದೆ. ಕೇವಲ ಶಾಸ್ತ್ರಕ್ಕಾಗಿ ಮನೆಗಳಲ್ಲಿ ಒನಕೆಗಳನ್ನು ಕಾಣಬಹುದು. ಈ ಸ್ಥಿತಿಗೆ ಸಾಕ್ಷಿಯಂಬಂತೆ ಅವುಗಳು ಕಂಡುಬರುತ್ತವೆ.ರೈತರ ಮಕ್ಕಳು ಓದಿ ಇತ್ತ ನಗರಗಳಲ್ಲಿ ಇರಲಾರದೆ, ಹೊಲಗಳಲ್ಲಿ ದುಡಿದರೂ ಅದರಿಂದ ಬದುಕಲಾರದ ಅತಂತ್ರ ಸ್ಥಿತಿಗಳ ಪ್ರತಿಬಿಂಬವಾಗಿ ಹೆಬ್ಬಾಗಿಲಿಗೆ ಹಗ್ಗದಿಂದ ನೇತು ಹಾಕಿದ ಕುಡುಗೋಲುಗಳನ್ನು ಹೋಲುವ ‘ಅತಂತ್ರರು’ ಚಿತ್ರ ಮಾದರಿ ದ್ಯೋತಕದಂತೆ ಕಂಡುಬರುತ್ತದೆ. ಹಾಗೆಯೇ ಆಳೆತ್ತರದ ಪಾರದರ್ಶಕ ಕಣಜದಲ್ಲಿ ಭತ್ತ ಸಂಗ್ರಹ ಮಾಡಿರುವ ‘ಕಣಜ’ ಮಾದರಿ, ಭತ್ತದ ರಾಶಿ ಮತ್ತು ಭತ್ತದ ಕಾಳುಗಳಿಂದ ನದಿ ಹರಿಯುತ್ತಿರುವಂತೆ ಬಿಡಿಸಿದ ‘ಭತ್ತದ ನದಿ’ ಚಿತ್ರ ಇಡೀ ಪ್ರಪಂಚಕ್ಕೆ ಧಾನ್ಯವನ್ನು ಸಾಗಿಸುತ್ತಿರುವ  ಅನ್ನದಾತನನ್ನು ನದಿಯಾಗಿ ಚಿತ್ರಿಸಿದಂತೆ ಕಂಡುಬರುತ್ತದೆ.ಇನ್ನು ರೈತರ ಮನೆಗಳಲ್ಲಿ ರೈತನ ಮಡದಿಯಾಗಿ, ಮನೆಯಲ್ಲಿ ಕುಸುರಿ ಕೆಲಸಗಾರ್ತಿಯಾಗಿ, ಕೊಯ್ಲಿನ ವೇಳೆಯಲ್ಲಿ ಬೀಜಗಳ ಅಥವಾ ತಳಿ ಸಂಗ್ರಾಹಕಿಯಾಗಿ ಕೃಷಿಯಲ್ಲಿ ತನ್ನದೇ ಆದ ಪಾತ್ರವನ್ನು ಮಹಿಳೆ ನಿಭಾಯಿಸುತ್ತಾಳೆ. ಅದನ್ನು ಗುರ್ತಿಸುವ ಕೌದಿಯನ್ನು, ಹಳೆ ಸೀರೆಯಲ್ಲಿ ನೇಯ್ದ ನೆಲಹಾಸನ್ನು ಪ್ರದರ್ಶಿಸಲಾಗಿದೆ.ದಯಾನಂದ ಅವರ ಒಟ್ಟು 15ಕ್ಕೂ ಹೆಚ್ಚು ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ. ಕನಿಷ್ಠ ₹ 30 ಸಾವಿರದಿಂದ ₹1 ಲಕ್ಷದವರೆಗಿನ  ಬೆಲೆಯ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.