ಸೋಮವಾರ, ಮಾರ್ಚ್ 1, 2021
31 °C

ಸುಗ್ಗಿಯ ಹಿಗ್ಗಿನ ಸಂಕ್ರಾಂತಿ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ಸುಗ್ಗಿಯ ಹಿಗ್ಗಿನ ಸಂಕ್ರಾಂತಿ

‘ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ’ ಎನ್ನುವವರ ಸಂಖ್ಯೆಯೇ ಇಲ್ಲಿ ಹೆಚ್ಚು. ವಿವಿಧ ಭಾಗಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದವರ ಪಾಲಿಗೆಲ್ಲ ಸಂಕ್ರಾಂತಿ ಇಂದಿನ ಸಂಭ್ರಮ ಎನ್ನುವ ಜೊತೆಗೆ ಅಲ್ಲಿನ ಖುಷಿಯ ಕ್ಷಣಗಳನ್ನು ವರ್ಷ ವರ್ಷವೂ ನೆನೆಯುವ ನೆಪವೂ ಹೌದು. ಹಾಗೆಯೇ ಹುಟ್ಟೂರ– ಇದ್ದೂರ ಭಾವ ಬೆಸುಗೆಗಳನ್ನು ಹಂಚಿಕೊಂಡು ಪುಳಕಗೊಂಡವರ ಭಾವಲಹರಿಯಿದು..‘ಸಂಕ್ರಾಂತಿ’ ಎನ್ನುವ ಪದದಲ್ಲಿಯೇ ಏನೋ ಒಂದು ಸಂಭ್ರಮವಿದೆ. ಹೊಸತನ ಮೈದುಂಬುವ, ಸಕಲ ಸಮೃದ್ಧಿಯೂ ನೆಲೆಯೂರುವ ಹಬ್ಬವೆಂಬ ನಂಬುಗೆ. ಹಳ್ಳಿ ಹಬ್ಬವಾಗಿ, ಸುಗ್ಗಿಯ ಹಿಗ್ಗಾಗಿ ಜನಮನದಲ್ಲಿ ಖುಷಿಯ ಬುಗ್ಗೆ ಎಬ್ಬಿಸುವ ಹಬ್ಬವಿದು. ಮಾಗಿಯ ಚಳಿಗೆ ಮುದುಡಿದ ಮೈಮನಕ್ಕೆ ಮುದ ತುಂಬಿ ನಗು ಚೆಲ್ಲುತ್ತದೆ.ಹಳ್ಳಿಗಳಲ್ಲಿ ಸಂಕ್ರಮಣ ಕಾಲ ತರುವ ಸಡಗರವೇ ಬೇರೆ. ಹೊಸ ಬಟ್ಟೆ ತೊಟ್ಟು, ಮೊಗ್ಗಿನ ಜಡೆ ಹಾಕಿಕೊಂಡು, ಹಿರಿ ಹಿರಿ ಹಿಗ್ಗಿನಿಂದ ಓಡಾಡುವ ಹುಡುಗಿಯರು, ಮಕ್ಕಳು. ಸಿಹಿಯೂಟ, ಪೂಜೆಯ ತಯಾರಿಯಲ್ಲಿ ಸಂಭ್ರಮಿಸುವ ಹಿರಿಯರು. ಹೊಲ/ಗದ್ದೆಯ ಪೈರಿನ ಕದಿರನ್ನು ಮನೆ ಬಾಗಿಲಿಗೆ ಕಟ್ಟಿ, ದನಕರುಗಳನ್ನು ಮತ್ತು ನಗ, ನೇಗಿಲುಗಳನ್ನು ಪೂಜೆ ಮಾಡುವ ಮನೆಯೊಡೆಯ. ಹಳ್ಳಿ ಹಬ್ಬ ಎಂದೊಡನೆ ಕಣ್ತುಂಬುವ ನೋಟಗಳಿವು.ಆದರೆ ಬೆಂಗಳೂರಿನಂತಹ ಮೆಟ್ರೊ ನಗರಗಳಲ್ಲಿ ಕಾಣಸಿಗುವ ಸಂಕ್ರಮಣದ ಚಿತ್ರಣಗಳೇ ಬೇರೆ. ಹಳ್ಳಿಯ ವಾತಾವರಣ, ಅಲ್ಲಿನ ಆಚಾರ–ವಿಚಾರಗಳನ್ನು ಮೆಟ್ರೊ ನಗರದಲ್ಲಿ ಕಟ್ಟಿಕೊಳ್ಳುವುದು ತುಸು ಕಷ್ಟವೇ.ಇದರ ನಡುವೆಯೂ ಈ ಹಳ್ಳಿ ಹಬ್ಬವನ್ನು ಹಾಗೇ ಅಲ್ಲದಿದ್ದರೂ ಅದಕ್ಕೆ ಹತ್ತಿರ ಎನ್ನುವಂತೆ ಆಚರಿಸಿ ಸಂಭ್ರಮಿಸುವವರು ಇದ್ದಾರೆ. ಇಂತಹ ಮಹಾನಗರದಲ್ಲಿ ಅವರೆಲ್ಲ ಸುಗ್ಗಿಯ ಹಿಗ್ಗನ್ನು ಹೇಗೆಲ್ಲ ಬಾಚಿಕೊಳ್ಳುತ್ತಾರೆ, ಗೋಪೂಜೆಗೆ ಎಲ್ಲಿ ಹೋಗುತ್ತಾರೆ. ಎಳ್ಳು –ಬೆಲ್ಲದ ಸವಿಗೇನು ಮಾಡುತ್ತಾರೆ... ಅವರವರ ಹಬ್ಬದ ಪರಿ ಅವರದೇ ಧಾಟಿಯಲ್ಲಿ..***

ಇಲ್ಲಿರುವುದೆಲ್ಲ ಸುಮ್ಮನೆ

ನಮ್ಮೂರು ಕೊಪ್ಪಳ. ಊರಲ್ಲಿ ಮಾಡುವ ಹಬ್ಬದ ಸಡಗರವೇ ಬೇರೆ. ಬೆಳಿಗ್ಗೆ ಸೂರ್ಯ ಹುಟ್ಟುವ ಮೊದಲೇ ಎದ್ದು ಎಳ್ಳು–ಅರಿಸಿಣ ಹಚ್ಚಿಕೊಂಡು ಸ್ನಾನ ಮುಗಿಸಿ, ಹೊಸ ಬಟ್ಟೆ ತೊಟ್ಟು ಅಡುಗೆಮನೆಯಲ್ಲಿ ಅಮ್ಮನಿಗೆ ಸಹಾಯ ಮಾಡುವುದೂ ಒಂದು ಖುಷಿಯೇ.

ಹಿಂದಿನ ದಿನವೇ ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ, ಸಜ್ಜಿ ರೊಟ್ಟಿ ಮಾಡಿಯಾಗಿರುತ್ತದೆ. ಅಂದು ಹೊಸ ಗಡಿಗೆ ತಂದು, ಪೂಜೆ ಮಾಡಿ ಒಲೆಯ ಮೇಲಿಟ್ಟು 21 ಪ್ರಕಾರದ ಕಾಳು–ತರಕಾರಿಗಳನ್ನು ಹಾಕಿ ‘ಬರ್ತ’ ಎನ್ನುವ ಅಪರೂಪದ ಪಲ್ಯ ಮಾಡಲಾಗುತ್ತದೆ. ನಂತರ ಪೂಜೆ ಮುಗಿಸಿ, ಎತ್ತಿನ ಗಾಡಿ ಕಟ್ಟಿ ಮಾಡಿದ ಅಡುಗೆಯನ್ನೆಲ್ಲ ಕಟ್ಟಿಕೊಂಡು ಹೊಲಕ್ಕೆ ಹೋಗುವುದು ಹರ್ಷದ ಮತ್ತೊಂದು ಮಗ್ಗಲು. ಅಲ್ಲಿ ಊಟ ಮಾಡಿ ಸಂಜೆಯ ಹೊತ್ತಿಗೆ ದಣಿದು ಮನೆಗೆ ಬಂದರೂ ಬತ್ತದ ಉತ್ಸಾಹ. ಮತ್ತೆ ಸಂಜೆ ಮನೆ ಮನೆಗೆ ಹೋಗಿ ಎಳ್ಳು–ಬೆಲ್ಲ ಬೀರಿದ ಮೇಲೆಯೇ ಸಮಾಧಾನ.ಇಲ್ಲಿ ಅಷ್ಟೆಲ್ಲ ಮಾಡಲಾಗದು. ಹಬ್ಬ ಮೂರು ದಿನ ಇರುವಾಗಲೇ ತರಕಾರಿ ಬೆಲೆ ಗಗನ ಮುಟ್ಟುತ್ತದೆ. ಐದು ತರಹದ ಕಾಳು/ತರಕಾರಿ ಬೆರೆಸಿ ಬರ್ತ ಮಾಡಿದರೆ ಸಾಕು. ಮನೆಯಲ್ಲಿಯೇ ಪೂಜೆ, ಊಟ ಮುಗಿಸಿದರೆ ಹಬ್ಬ ಮುಗಿದೇ ಹೋಗುತ್ತದೆ.

ಗಿರಿಜಾ ಮುಳುಗುಂದ***

ಎಲ್ಲವೂ ನೇಪಥ್ಯಕ್ಕೆ ಸರಿದಿದೆ

ಆಂಧ್ರದಲ್ಲಿ ಸಂಕ್ರಮಣ ಎಂದರೆ ಬರೀ ಮನುಷ್ಯರ ಹಬ್ಬವಲ್ಲ. ನಮ್ಮೊಂದಿಗೆ ಬೆರೆತು ಸಾಗಿದ ಸಕಲ ಜೀವಿಗಳನ್ನು, ಪ್ರಕೃತಿಯನ್ನೂ ಪೂಜಿಸಿ ಧನ್ಯವಾದ ಸಮರ್ಪಿಸುವ ಹಬ್ಬ.

ಭತ್ತ, ಪೈರು, ಸೂರ್ಯ, ಹಸು, ಹಿರಿಯರ ಸಮಾಧಿ... ಹೀಗೆ ಎಲ್ಲವನ್ನೂ, ಎಲ್ಲರನ್ನೂ ನೆನಪಿಸಿಕೊಳ್ಳುವ ಗಳಿಗೆ ಇದು. ಇಲ್ಲಿ ಗದ್ದೆಯೇ ಇಲ್ಲ, ಭತ್ತ–ಪೈರಿನ ಪೂಜೆ ನಡೆಸುವುದು ಹೇಗೆ? ಇನ್ನು ಮನೆ ಮುಂದೆ ನಿಂತು ಎಷ್ಟುದ್ದ ಕತ್ತು ಎತ್ತಿದರೂ ಸೂರ್ಯ ಕಾಣುವುದು ವಿರಳವೇ. ಹಸು ಸಿಗುವುದೂ ಕಷ್ಟ. ಹಿರಿಯರ ಸಮಾಧಿಯೂ ಇಲ್ಲ. ಅಲ್ಲಿ ಹಬ್ಬ ಮಾಡಿದ ನೆನಪೇ ಇಲ್ಲಿ ವರ್ಷ ವರ್ಷವೂ ನೆನಪಾಗಿ ಪುಳಕ ನೀಡುತ್ತದೆ.

- ಜಿ.ಆರ್‌. ವಿಮಲಾ***

ಸಂಕ್ರಾಂತಿ ಬರುವ ಕಾಲವೇ ಅಂಥದ್ದು. ಹಲವಾರು ಪೈರಿನ ಫಸಲು, ಬೆಳೆದ ಬೇಳೆ ಕಾಳುಗಳು... ತುಂಬಿಡಲು ಮನೆಯ ಮೂಲೆ ಮೂಲೆಯಲ್ಲಿರುವ ಚೀಲ, ಗುಡಾಣ, ಹರಿವಿ, ಮಡಕೆ ಎಲ್ಲವೂ ಕಣಜವೇ .ಎಂತಹ ಬಡವರ ಮನೆಯಲ್ಲೂ ಕಾಳು-ಕಡಿಗಳು ತುಂಬಿ ತುಳುಕುವ ಸಮೃದ್ಧ ಕಾಲವದು. ಆ ಸಂತಸಕ್ಕೆ ಕಾರಣವಾದ ಭೂತಾಯಿ–ದನ-ಕರುಗಳನ್ನು ಪೂಜಿಸುಲೆಂದೇ ಸಂಕ್ರಾಂತಿ. ಈಗ ಅದೆಲ್ಲ ನೆನಪಿಗೆ ಮಾತ್ರ ಸಿಗುವ ಸುಖದ ದಿನಗಳು. ಹಬ್ಬ ಎಂದರೆ ಎಲ್ಲವೂ ತುಟ್ಟಿಯಾಗಿಬಿಟ್ಟಿದೆ. ಹಬ್ಬದೂಟ, ಪೂಜೆ ಎಲ್ಲವೂ ನೇಪಥ್ಯಕ್ಕೆ ಸರಿದಿವೆ.

- ಜಾನಕಿ ಮೃತ್ಯುಂಜಯ***

ಅಲ್ಲಿ ಮೂರು ದಿನದ ಹಬ್ಬ, ಇಲ್ಲಿ ಒಂದು ದಿನ

ಚೆನ್ನೈಯಲ್ಲಿ ಸಂಕ್ರಾಂತಿಯ ಮೂರೂ ದಿನ ಯಾವ ಪದ್ಧತಿಯೂ ಕೈತಪ್ಪದಂತೆ ಆಚರಿಸುವುದು ರೂಢಿ. ಬೋಗಿಯ ದಿನ ಸೂರ್ಯ ಹುಟ್ಟುವ ಮೊದಲೇ ಎದ್ದು ಮನೆ ಮುಂದೆ ಹಳೆಯ ವಸ್ತುಗಳನ್ನೆಲ್ಲ ಹಾಕಿ ಬೆಂಕಿ ಹಚ್ಚುವುದು ಪದ್ಧತಿ. ಹಳೆಯ ಕಹಿ ಕ್ಷಣಗಳನ್ನು ಮರೆಯುವ ಹಾಗೂ ಹೊಸ ಜೀವನ, ಹೊಸ ಸಂಭ್ರಮವನ್ನು ಆಹ್ವಾನಿಸುವ ಸಂಕೇತವದು.

ಈ ಹಬ್ಬದಲ್ಲಿ ಹೆಣ್ಣು–ಗಂಡು ಇಬ್ಬರೂ ಸಮಾನರು. ಅಡುಗೆ, ಪೂಜೆ ಎಲ್ಲದರಲ್ಲೂ ಇಬ್ಬರ ಸಮಾನ ಪಾತ್ರವಿರುತ್ತದೆ. ಗಂಡ–ಹೆಂಡತಿ, ಹಿರಿಯರು, ಮಕ್ಕಳ ಸಮೇತ ಎಲ್ಲರೂ ಸ್ನಾನ ಮುಗಿದ ಮೇಲೆ ಮಣ್ಣಿನ ಮಡಕೆಗೆ ವಿಶೇಷ ರೀತಿಯಲ್ಲಿ ಪೂಜೆ ಮಾಡುತ್ತಾರೆ. ಹೊರಗಡೆ ಒಲೆ ಹೂಡಿ ಅದರ ಮೇಲೆ ಮಡಕೆ ಇಟ್ಟು ಹಾಲುಕ್ಕಿಸುವ ಕಾರ್ಯ ನೆರವೇರಿಸಲಾಗುತ್ತದೆ. ಅದೇ ಹಾಲಿನಲ್ಲಿ ಹೊಸ ಅಕ್ಕಿ–ಬೆಲ್ಲ ಸೇರಿಸಿ ಪೊಂಗಲ್‌ ಮಾಡಲಾಗುತ್ತದೆ.ಸೂರ್ಯ ಹುಟ್ಟುವ ವೇಳೆಗೆ ಆ ಪೊಂಗಲ್‌ನಿಂದ ನೈವೇದ್ಯ ಮಾಡಬೇಕು. ನಂತರ ಏಳು ಪ್ರಕಾರದ ತರಕಾರಿಗಳಿಂದ ‘ಏಳು ಖರಿ’ ಎನ್ನುವ ವಿಶೇಷ ಪಲ್ಯ ಸಿದ್ಧವಾಗುತ್ತದೆ.  ನಮ್ಮನ್ನಗಲಿದ ಹಿರಿಯರಿಗೂ ನೈವೇದ್ಯ ನೀಡಿ, ದೇವರ ಪೂಜೆಯ ನಂತರ ನಮ್ಮ ಊಟ. ಬೆಂಗಳೂರಿನಲ್ಲಿ ಇಷ್ಟೆಲ್ಲ ಆಚರಣೆಗಳನ್ನು ನೆರವೇರಿಸುವುದು ಸಾಧ್ಯವಿಲ್ಲ. ಅಲ್ಲಿನ ನೆನಪಿನೊಂದಿಗೆ ಇಲ್ಲಿ ಅಷ್ಟಿಷ್ಟು ಆಚರಣೆ ಮಾಡಿ ತೃಪ್ತಿ ಪಟ್ಟುಕೊಳ್ಳಬೇಕು.

- ರವೀಂದ್ರನಾಥ್ ಲಕ್ಷ್ಮಣ್‌***

ನಾವಿದ್ದಲ್ಲೇ ನಮ್ಮೂರು

ಮಂಡ್ಯದಲ್ಲಿ ಬೋಗಿ–ಸಂಕ್ರಾಂತಿ ಎರಡೂ ದಿನ ಸಂಭ್ರಮ ತುಂಬಿ ತುಳುಕುತ್ತದೆ. ಅಡುಗೆಯಲ್ಲೆಲ್ಲ ಅವರೆಕಾಳು ರಾಜನಾಗುವ ಕಾಲವಿದು. ಸೂಡು ಪಲ್ಲೆ, ಪಾಯಸ, ವಡೆ, ಬಾಸು ಮಾಡಿ ಅಕ್ಕ ಪಕ್ಕದವರಿಗೂ ಹಂಚಿ ಉಣ್ಣುವುದು ವಾಡಿಕೆ. ಸಂಜೆ ಗೋಪೂಜೆ ಮಾಡಿ, ಬೆಂಕಿ ಹಾಯಿಸುವುದು ಪದ್ಧತಿ.ಇಲ್ಲಿಯೂ ಸಾಧ್ಯವಾದ ಮಟ್ಟಿಗೆ ಎಲ್ಲಾ ಪದ್ಧತಿಗಳನ್ನೂ ಆಚರಿಸುವ ಪ್ರಯತ್ನ ಇದ್ದೇ ಇರುತ್ತದೆ. ಚಾಮರಾಜಪೇಟೆಯಲ್ಲಿ ಹಸು ಸಾಕಿಕೊಂಡಿರುವ ಸಾಕಷ್ಟು ಮನೆಗಳು ಉಂಟು. ಅವರ ಮನೆಗೇ ಹೋಗಿ ಪೂಜೆ ಮಾಡಿ ಬರುತ್ತೇವೆ. ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.

- ಸಾವಿತ್ರಮ್ಮ***

ಹಬ್ಬ ಒಂದು, ಭಾವ ಹಲವು

ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಅನೇಕ ಭಾಗಗಳಲ್ಲಿ ಒಂದೇ ಸಮಯಕ್ಕೆ ಆಚರಿಸಲಾಗುವ ಸಂಕ್ರಾಂತಿ ಹಬ್ಬದ ಮೂಲ ಒಂದೇ ಆದರೂ ಕರೆಯುವ ಹೆಸರು, ಆಚರಣೆಯ ವಿಧಾನ ಭಿನ್ನವೇ. ನಮ್ಮ ನಾಡಿನಲ್ಲಿ ಸುಗ್ಗಿ ಹಬ್ಬ, ಮಕರ ಸಂಕ್ರಮಣ, ಸಂಕ್ರಾಂತಿ ಎಂದು ಕರೆದರೆ, ಕೇರಳ, ತಮಿಳುನಾಡಿನಲ್ಲಿ ಇದು ಮಕರವಿಳಕ್ಕು, ಪೊಂಗಲ್  ಹಬ್ಬ. ಅಸ್ಸಾಂನಲ್ಲಿ ಬೋಗಲಿ ಬಿಹು ಆದರೆ, ಕಾಶ್ಮೀರದಲ್ಲಿ ಶಿಶುರ್ ಸೆಂಕ್ರಾತ್, ನೇಪಾಳದಲ್ಲಿ ಮಗೆ ಸಂಕ್ರಾಂತಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.