ಸುಗ್ಗಿ ನಿರೀಕ್ಷೆಯಲ್ಲಿ...

7

ಸುಗ್ಗಿ ನಿರೀಕ್ಷೆಯಲ್ಲಿ...

Published:
Updated:
ಸುಗ್ಗಿ ನಿರೀಕ್ಷೆಯಲ್ಲಿ...

ಅಭಿನಯಿಸಿದ ಮೊದಲ ಚಿತ್ರವಿನ್ನೂ ಬಿಡುಗಡೆಯಾಗಿಲ್ಲ. ಆಗಲೇ ಈ ನಟಿಗೆ ಕನ್ನಡ ಮತ್ತು ತೆಲುಗಿನಿಂದ ಆರೇಳು ಚಿತ್ರಗಳಲ್ಲಿ ಅವಕಾಶಗಳು ಅರಸಿ ಬಂದಿವೆಯಂತೆ. ಆದರೆ, ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳದ ಈಕೆ ಜನ ಗುರುತಿಸುವಂತಹ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುವಷ್ಟು ಚೂಸಿ. `ಐ~ ಎಂಬ ಚಿತ್ರದಲ್ಲಿ ಬಣ್ಣ ಹಚ್ಚುವ ಮೂಲಕ ಕನ್ನಡದ ನವ ನಟಿಯರ ಪಟ್ಟಿಗೆ ಸೇರ್ಪಡೆಗೊಂಡವರು ಸುಷ್ಮಾ ರಾಜ್.ಕುಟುಂಬದ ಮೂಲ ಆಂಧ್ರಪ್ರದೇಶವಾದರೂ ಸುಷ್ಮಾ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಓದಿದ್ದು ಫ್ಯಾಶನ್ ಡಿಸೈನಿಂಗ್. ಸಿನಿಮಾ ಆಸಕ್ತಿ ಆರಂಭದಲ್ಲಿಯೇ ಇದ್ದರೂ ಓದಿನ ಕಡೆ ಗಮನ ಹರಿಸಬೇಕಾಗಿದ್ದರಿಂದ, ವಿದ್ಯಾರ್ಥಿನಿಯಾಗಿದ್ದಾಗಲೇ ಬಂದ ಅವಕಾಶಗಳನ್ನು ತಿರಸ್ಕರಿಸಿದ್ದರು.ಪದವಿ ಮುಗಿಯುವ ವೇಳೆಗೆ ಸಿನಿಮಾ ರಂಗದಿಂದ ಮತ್ತೊಂದು ಆಫರ್ ಬಂತು. ತಮ್ಮ ಚಿತ್ರದಲ್ಲಿ ನಟಿಸುವಂತೆ ಕೇಳಿಕೊಂಡಿದ್ದು ಅವರ ಸ್ನೇಹಿತ ನಿರ್ದೇಶಕ ವಿ.ವಿ.ವರ್ಧನ್. ಅವರಿಗೂ ಅದು ಮೊದಲ ಚಿತ್ರ. ಚಿತ್ರರಂಗಕ್ಕೆ ಕಾಲಿಡಲು ಇದೇ ಸುಸಮಯ ಎಂದು ಸುಷ್ಮಾ ಕೂಡಲೇ ಒಪ್ಪಿಕೊಂಡರು.ಶಾಲಾ ಕಾಲೇಜು ದಿನಗಳಲ್ಲಿ ಮಾಡೆಲಿಂಗ್, ನೃತ್ಯ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸುಷ್ಮಾ ಮುಂದು. ಆದರೆ ಕ್ಯಾಮೆರಾ ಮುಂದೆ ನಿಲ್ಲುವ ಅನುಭವ ಮೊದಮೊದಲು ಭಯ ಹುಟ್ಟಿಸಿತಂತೆ. ನಟನೆ ಮತ್ತು ಕ್ಯಾಮೆರಾ ಎರಡೂ ಹೊಸತು. ಕೆಲವು ದಿನಗಳಲ್ಲಿಯೇ ಈ ಭಯ ತೊಲಗಿತು. ನಟನೆಯೂ ಸುಧಾರಿಸಿತು. ಚಿತ್ರತಂಡದಲ್ಲಿದ್ದವರು ಮಾರ್ಗದರ್ಶನ ನೀಡಿದ್ದರು. ಹೀಗಾಗಿ ಹೊಸ ಅನುಭವ ಖುಷಿ ತಂದಿದೆ ಎನ್ನುತ್ತಾರೆ ಅವರು.ಸಿನಿಮಾಕ್ಕೆ ಬಾರದಿದ್ದರೆ ಫ್ಯಾಶನ್ ಡಿಸೈನಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜಿನೆಸ್ ಮಾಡುವ ಉದ್ದೇಶವಿತ್ತು ಎನ್ನುವ ಸುಷ್ಮಾ ರಾಜ್ ಈಗ ನಟನೆಯನ್ನು ಸಂಪೂರ್ಣ ವೃತ್ತಿಯನ್ನಾಗಿ ಆಯ್ದುಕೊಳ್ಳಲು ನಿರ್ಧರಿಸಿದ್ದಾರೆ.ಸದಾ ನಗುನಗುತ್ತಾ, ಪಟಪಟನೆ ಮಾತನಾಡುವ ಅವರ ಸ್ವಭಾವಕ್ಕೆ ತದ್ವಿರುದ್ಧ ಪಾತ್ರ `ಐ~ ಚಿತ್ರದ್ದು. ಆಗತಾನೆ ಓದು ಮುಗಿಸಿದ ಯುವತಿಯ ಪಾತ್ರ ಅವರದು. ಮಿತಭಾಷಿ, ತಪ್ಪನ್ನು ಸಹಿಸದ ಕಟ್ಟುನಿಟ್ಟಿನ ವ್ಯಕ್ತಿತ್ವದ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.ಹಳೆಯ ಚಿತ್ರಗಳನ್ನು ತುಂಬಾ ನೋಡುತ್ತೇನೆ. ಆಗಿನ ಚಿತ್ರಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಅವಕಾಶ ಜಾಸ್ತಿ ಇತ್ತು. ಅಂತಹ ಸಿನಿಮಾಗಳನ್ನು ನೋಡಿಯೇ ನಾನು ನಟನೆ ಕಲಿತದ್ದು. ಈಗ ಸಿನಿಮಾ ರಂಗಕ್ಕೆ ಬಂದ ಮೇಲೆ ನಟನೆಯನ್ನು ಸುಧಾರಿಸಿಕೊಳ್ಳಲು ಹಳೆಯ ಚಿತ್ರಗಳನ್ನು ನೋಡುವುದನ್ನು ಜಾಸ್ತಿ ಮಾಡಿದ್ದೇನೆ ಎನ್ನುವ ಅವರಿಗೆ ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಚಿತ್ರಗಳೆಂದರೆ ಅಚ್ಚುಮೆಚ್ಚಂತೆ.

 

`ಐ~ ಚಿತ್ರ ಬಿಡುಗಡೆಯಾಗುವ ಮುಂಚೆ ಬೇರೆ ಸಿನಿಮಾಗಳನ್ನು ಒಪ್ಪಿಕೊಳ್ಳಲು ಸುಷ್ಮಾ ಬಯಸುತ್ತಿಲ್ಲ. ಮೊದಲ ಚಿತ್ರದಲ್ಲಿ ಜನ ತಮ್ಮನ್ನು ಗುರುತಿಸಬೇಕು ಎನ್ನುವುದು ಅವರ ಇರಾದೆ. ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇರುವ ಚಿತ್ರಗಳು ಬಂದರೆ ಈಗಲೇ ಒಪ್ಪಿಕೊಳ್ಳುತ್ತೇನೆ. ಕನ್ನಡದಲ್ಲಿ ಕೆಲವು ಅವಕಾಶಗಳು ಬಂದಿವೆ.ಅವುಗಳ ಬಗ್ಗೆ ಇನ್ನೂ ಯೋಚಿಸಿಲ್ಲ ಎನ್ನುತ್ತಾರೆ. ಅವರ ಮಾತೃಭಾಷೆಯಾದ ತೆಲುಗಿನಿಂದಲೂ ಮೂರು ಚಿತ್ರಗಳಿಂದ ಅವಕಾಶ ಬಂದಿವೆ. ಅದರಲ್ಲಿ ಒಂದು ಕಥೆ ತುಂಬಾ ಇಷ್ಟವಾಗಿದೆಯಂತೆ.ಗ್ಲಾಮರ್ ಸಿನಿಮಾದ ಒಂದು ಭಾಗ. ಆದರೆ ನಟಿಯಾಗಲು ಗ್ಲಾಮರ್‌ಗಿಂತ ಪ್ರತಿಭೆ ಮುಖ್ಯ. ನನ್ನ ಪ್ರಕಾರ ತೆರೆಯ ಮೇಲೆ ಚೆನ್ನಾಗಿ ಕಾಣುವುದೇ ಗ್ಲಾಮರ್. ಕಥೆಯ ಅಗತ್ಯಕ್ಕೆ ತಕ್ಕಂತೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಸಿದ್ಧ ಎನ್ನುತ್ತಾರೆ ಸುಷ್ಮಾ ರಾಜ್. ಅವರು ಮುಂದೆ ಹುಟ್ಟಬಹುದಾದ ಗಾಸಿಪ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲವಂತೆ.ಸಿನಿಮಾ ನಟ ನಟಿಯರ ಬದುಕಿನಲ್ಲಿ ಗಾಸಿಪ್‌ಗಳು ಮಾಮೂಲಿ. ನಾನು ತಪ್ಪು ಮಾಡದಿದ್ದಾಗ ಅಂತಹ ಗಾಸಿಪ್‌ಗಳ ಬಗ್ಗೆ ಏಕೆ ಚಿಂತಿಸಬೇಕು ಎನ್ನುವ ಅವರು ಪ್ರಬುದ್ಧ ನಟಿಯಾಗಿ ಬೆಳೆಯಲು ಮಿತಿಗಳನ್ನು ಮೀರಿ ತಮ್ಮನ್ನು ತೊಡಗಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry