ಮಂಗಳವಾರ, ನವೆಂಬರ್ 19, 2019
29 °C

ಸುಚಿತ್ರ ಸಾಹಿತ್ಯ ಸಂಜೆಯಲ್ಲಿ ತ.ರಾ.ಸು, ತೇಜಸ್ವಿ

Published:
Updated:

ಈ ವಾರಾಂತ್ಯ ಸಾಹಿತ್ಯ ಪ್ರೇಮಿಗಳಿಗೆ ಹಬ್ಬ. ಸುಚಿತ್ರ ಕಲಾಕೇಂದ್ರದ ಅಂಗಳದಲ್ಲಿ ಏ.6 ಮತ್ತು 7ರಂದು ಕನ್ನಡದ ಇಬ್ಬರು ಶ್ರೇಷ್ಠ ಕಾದಂಬರಿಕಾರರಾದ ತ.ರಾ.ಸು. ಮತ್ತು ಪೂರ್ಣಚಂದ್ರ ತೇಜಸ್ವಿ ಕುರಿತು ವಿಚಾರ ಸಂಕಿರಣ ನಡೆಯಲಿದೆ.ಏ.6 ಶನಿವಾರ ಸಂಜೆ 5.30ಕ್ಕೆ ಕಿ.ರಂ.ನುಡಿಮನೆಯಲ್ಲಿ `ಮರೆಯಲಾಗದ ಕಾದಂಬರಿಕಾರ ತ.ರಾ.ಸು.' ವಿಷಯವಾಗಿ ಡಾ.ಪಿ.ಚಂದ್ರಿಕಾ ಉಪನ್ಯಾಸ ನೀಡಲಿದ್ದಾರೆ.ಏ.7ರಂದು ಭಾನುವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ ಸುಚಿತ್ರ ಸಭಾಂಗಣದಲ್ಲಿ `ತೇಜಸ್ವಿ-ಬಹುತ್ವದ ನೆಲೆಗಳಲ್ಲಿ' ವಿಚಾರಸಂಕಿರಣ ಆಯೋಜಿಸಲಾಗಿದೆ.`ತೇಜಸ್ವಿ ವಿಚಾರ; ವಿಮರ್ಶೆ' ಕುರಿತಾಗಿ ಡಾ.ಎಸ್.ತುಕಾರಾಂ ಮಾತನಾಡಲಿದ್ದಾರೆ. `ನನ್ನ ತೇಜಸ್ವಿ' ಕುರಿತು ಖ್ಯಾತ ಲೇಖಕ ಅಬ್ದುಲ್ ರಷೀದ್ ಮಾತನಾಡುವರು.ತೇಜಸ್ವಿ ಕುರಿತ ವಿಶೇಷ ಸಾಕ್ಷ್ಯಚಿತ್ರ ಪ್ರದರ್ಶನವಿದೆ. ಇದರ ನಿರ್ದೇಶನ ಕೃಪಾಕರ ಮತ್ತು ಸೇನಾನಿ.ವಿಚಾರಸಂಕಿರಣದ ಉದ್ಘಾಟಕರಾಗಿ ಪ್ರೊ.ಜಿ.ಎಸ್.ಸಿದ್ಧರಾಮಯ್ಯ, ಅಧ್ಯಕ್ಷರಾಗಿ ಪ್ರೊ.ಎಂ.ಎಚ್.ಕೃಷ್ಣಯ್ಯ, ಮುಖ್ಯ ಅತಿಥಿಯಾಗಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಭಾಗವಹಿಸುವರು.ತ.ರಾ.ಸು. ಮತ್ತು ತೇಜಸ್ವಿ ಇಬ್ಬರೂ ಕನ್ನಡದ ಅನನ್ಯ ಪ್ರತಿಭೆಗಳು. ಇಬ್ಬರೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ತಮ್ಮ ಪ್ರೌಢಿಮೆಯನ್ನು ಮೆರೆದವರು.ತ.ರಾ.ಸು.: ತ.ರಾ.ಸು. ಸಣ್ಣಕತೆ, ನಾಟಕ, ಮಕ್ಕಳ ಸಾಹಿತ್ಯ, ಭಾಷಾಂತರ ಮುಂತಾದ ಕ್ಷೇತ್ರದಲ್ಲಿ ಸಾಕಷ್ಟುಕೆಲಸ ಮಾಡಿದ್ದಾರೆ. ಇವರ `ಚಕ್ರತೀರ್ಥ', `ಗಾಳಿಮಾತು', `ಬೆಂಕಿಯ ಬಲೆ', `ಚಂದನದ ಬೊಂಬೆ' ಕಾದಂಬರಿಗಳು ಅದೇ ಹೆಸರಿನಲ್ಲಿ ಚಲನಚಿತ್ರಗಳಾಗಿ ಜನಮಾನಸದಲ್ಲಿ ಬೇರೂರಿವೆ. ಇದೇ ಕಾರಣಕ್ಕೆ ತ.ರಾ.ಸು. ಕಾದಂಬರಿಕಾರ ಎಂದೇ ಪ್ರಸಿದ್ಧರಾದವರು.ಪ್ರಗತಿಶೀಲ ಚಳವಳಿ, ಏಕೀಕರಣ ಚಳವಳಿ, ಸ್ವಾತಂತ್ರ್ಯ ಚಳವಳಿಗಳಲ್ಲಿ ಸಕ್ರಿಯರಾಗಿದ್ದ ತ.ರಾ.ಸು. ಅವರ ಕಡೆಯ ಕಾದಂಬರಿ `ದುರ್ಗಾಸ್ತಮಾನ'ಕ್ಕೆ 1985ರಲ್ಲಿ ಮರಣೋತ್ತರವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.ಪೂರ್ಣಚಂದ್ರ ತೇಜಸ್ವಿ: ಸಾಹಿತ್ಯದ ಯಾವುದೇ ಪಂಥಕ್ಕೆ ಸೇರದ ತೇಜಸ್ವಿ ಎಲ್ಲ ಘಟ್ಟಗಳಲ್ಲೂ ಕೃತಿ ರಚಿಸುತ್ತಾ ಬಂದವರು. ಇವರ ಪರಿಸರದ ಕತೆಗಳು, ನಾಟಕ, ನೀಳ್ಗತೆ, ಕಾದಂಬರಿ, ಸಣ್ಣಕತೆ, ವಿಮರ್ಶೆ, ಅನುವಾದ, ಮನಃಶಾಸ್ತ್ರ ಕೃತಿಗಳು ಇವತ್ತಿಗೂ ಹೆಚ್ಚು ಮಾರಾಟವಾಗುತ್ತಿವೆ.ಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೇ ಚರ್ಚೆ, ವಿವಾದಗಳಿಗೆ ನಿಷ್ಠುರವಾಗಿ ಪ್ರತಿಕ್ರಿಯಿಸುತ್ತಿದ್ದ ತೇಜಸ್ವಿ ಎಲ್ಲ ವರ್ಗದ ಓದುಗರ ಪ್ರೀತಿಯ ಲೇಖಕ.

ಪ್ರತಿಕ್ರಿಯಿಸಿ (+)