ಭಾನುವಾರ, ಏಪ್ರಿಲ್ 11, 2021
23 °C

ಸುಡುಮದ್ದು ಸುಡದಿರಲಿ ಬಾಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತನ್ನ ವಯಸ್ಸಿನ ಹುಡುಗರು ದಿನವಿಡೀ ಪಟಾಕಿ ಮೂತಿಗೆ ಬೆಂಕಿಯಿಕ್ಕಿ ಕುಣಿದಾಡುವುದನ್ನು ದೂರದಿಂದಲೇ ಮತ್ತೆರಡು ಕಣ್ಣುಗಳು ಆಸೆಗಣ್ಣಿನಿಂದ ನೋಡುತ್ತಿದ್ದವು. ತಾನೂ ಸುಸ್ತಾಗುವಷ್ಟು ಪಟಾಕಿ ಸುಡಬೇಕಿತ್ತು...ಆದರೆ ದುಡ್ಡಿಲ್ಲವಲ್ಲ ಎಂದುಕೊಂಡವನಿಗೆ ಕಂಡದ್ದು ಸುಟ್ಟ ಪಟಾಕಿಗಳು ಉಗುಳಿದ ಬಿಳಿಪುಡಿ (ಗನ್ ಪೌಡರ್). ಅರೆ! ಅದೆಲ್ಲವನ್ನೂ ಗುಡ್ಡೆ ಹಾಕಿ ಬೆಂಕಿ ಹಚ್ಚಿದರೆ? ಡಮ್ ಅಂದೀತೇ? ಠುಸ್ ಆದೀತೇ?ದೂರಾಲೋಚನೆ ಮಾಡುವಷ್ಟು ಸಂಯಮವಿರದ ಹುಡುಗುಬುದ್ಧಿ. ಕೈಗೆ ಸಿಕ್ಕಿದ ಕಾಗದದ ಚೂರಿನಲ್ಲಿ ಗನ್ ಪೌಡರ್ ಬಾಚಿಕೊಂಡವನೇ ಅದಕ್ಕೆ ಬೆಂಕಿ ಹಚ್ಚಿದ್ದಾನೆ. ತನ್ನ `ಕನಸಿನ ಪಟಾಕಿ~ ಡಮ್ ಅನ್ನುತ್ತದೆ ಅನ್ನುತ್ತದೆ ಎಂದು ಕಣ್ಣರಳಿಸಿ ಕೇಕೆ ಹಾಕಿ  ಕುಪ್ಪಳಿಸುತ್ತಿದ್ದ ಹುಡುಗನ ಮುಖಕ್ಕೆ ಸುಡುವ ಮದ್ದು ರಾಚಿತು. ಕಣ್ಣೊಳಗೆ ಸುನಾಮಿ ಎದ್ದಂತಹ ಅನುಭವ!ಸ್ವಲ್ಪ ಹೊತ್ತಿನಲ್ಲೇ ಹುಡುಗ ಮಿಂಟೊ ಆಸ್ಪತ್ರೆಗ ದಾಖಲಾದ. ಮಗನಿಗೆ ಪಟಾಕಿ ಕೊಡಿಸುವಷ್ಟೂ ಶಕ್ತಿಯಿಲ್ಲದ ಅಪ್ಪ ಅಮ್ಮನ ಮುಂದೆ ದೀಪಾವಳಿಯ ಹೊಂಬೆಳಕಿರಲಿಲ್ಲ; ಅಂಧಕಾರವೇ ತುಂಬಿಕೊಂಡಿತ್ತು. ಚಿಕಿತ್ಸೆ ನಡೆಸಿದ ತಜ್ಞ ವೈದ್ಯರು ಹುಡುಗನ ಒಂದು ಕಣ್ಣನ್ನಷ್ಟೇ ಉಳಿಸುವಲ್ಲಿ ಸಫಲರಾದರು. ಮುಖದ ತುಂಬಾ ಸುಟ್ಟಗಾಯಕ್ಕೆ ಚಿಕಿತ್ಸೆ ನಡೆಯಿತು.ಕಳೆದ ಬಾರಿಯ ದೀಪಾವಳಿಯಲ್ಲಿ ಸಂಭವಿಸಿದ ಈ ದುರಂತ ಎಲ್ಲಾ ಮಕ್ಕಳಿಗೂ ಪಾಠವಾಗಬೇಕು ಎನ್ನುತ್ತಾರೆ ಮಿಂಟೊ ಆಸ್ಪತ್ರೆಯ ನಿರ್ದೇಶಕರೂ ಹಿರಿಯ ನೇತ್ರತಜ್ಞರೂ ಆದ ಡಾ.ಶಿವಪ್ರಸಾದ್ ರೆಡ್ಡಿ.`ದೀಪಾವಳಿಯೆಂದರೆ ಬೆಳಕಿನ ಹಬ್ಬ ಅನ್ನುವುದಕ್ಕಿಂತಲೂ ಸಿಡಿಮದ್ದುಗಳ ಮೂಲಕ ತಮ್ಮ ಆರ್ಥಿಕ ಶಕ್ತಿಯನ್ನು ಪ್ರದರ್ಶಿಸಲು ಸುವರ್ಣಾವಕಾಶ ಕೆಲವರ ಪಾಲಿಗೆ. ಆದರೆ ಅದು ಇನ್ಯಾರದೋ ಬಾಳಿನ ಬೆಳಕನ್ನೇ ಕಿತ್ತುಕೊಳ್ಳುವಂತಾಗಬಾರದು ಅಲ್ವೇ? ಕಳೆದ ಐದು ವರ್ಷಗಳಿಂದಲೂ ಪಟಾಕಿ ದುರಂತ ಪ್ರಕರಣಗಳು ಹೆಚ್ಚುತ್ತಲೇ ಇವೆ.ವಿಪರ್ಯಾಸವೆಂದರೆ, ಪಕ್ಕದಲ್ಲೋ ಕಾಲಬುಡದಲ್ಲೋ ಪಟಾಕಿಯೊಂದು ಸುಡುವ ಹಂತದಲ್ಲಿದೆ ಎಂಬ ಅರಿವೇ ಇಲ್ಲದ ಮುಗ್ಧ ದಾರಿಹೋಕರು ಬಲಿಪಶುಗಳಾಗಿರುವುದೇ ಹೆಚ್ಚು. ಕಳೆದ ವರ್ಷ 45 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಮನೆಯಿಂದಾಚೆ ಹೊರಟಿದ್ದರು. ಎಲ್ಲಿಂದಲೋ ಹಾರಿಬಂದ ರಾಕೆಟ್ ಮುಖಕ್ಕೆ ಬಡಿಯಿತು. ತಕ್ಷಣ ಶಸ್ತ್ರಚಿಕಿತ್ಸೆ ಮಾಡಿದರೂ ಕಣ್ಣುಗುಡ್ಡೆಯನ್ನೇ ಕಳಕೊಳ್ಳಬೇಕಾಯಿತು. ಇಂತಹ `ಮಕ್ಕಳಾಟ~ಕ್ಕೆ ಯಾರು ಹೊಣೆ?~ ಎಂದು ಪ್ರಶ್ನಿಸುತ್ತಾರೆ, ಡಾ. ಶಿವಪ್ರಸಾದ್.ಅಪಾಯದ ಅರಿವಿರಲಿ`ಪ್ರತಿವರ್ಷ 8ರಿಂದ 16ರೊಳಗಿನ ಮಕ್ಕಳೇ ಹೆಚ್ಚು ಅವಘಡಕ್ಕೆ ತುತ್ತಾಗುವುದು. ಹೆಣ್ಣು ಮಕ್ಕಳು ಆತಂಕ, ಭಯ ಅಥವಾ ಅಪಾಯದ ಅರಿವಿನಿಂದಾಗಿ ದೂರವಿರುವ ಕಾರಣ ಅವರು ಗಾಯಗೊಳ್ಳುವ ಪ್ರಮಾಣ ಅತ್ಯಂತ ಕಡಿಮೆ. ಹುಡುಗರು ತುಂಟತನದಿಂದ ಮತ್ತು ಪ್ರಯೋಗಶೀಲರಾಗಲು ಹೋಗಿ ಅಪಾಯಕ್ಕೆ ಸಿಲುಕುತ್ತಾರೆ. ಇಲ್ಲಿ ಮಕ್ಕಳಷ್ಟೇ ಪೋಷಕರು ಮತ್ತು ಹಿರಿಯರ ತಪ್ಪೂ ಇದೆ~ ಎಂದು ಅಭಿಪ್ರಾಯಪಡುತ್ತಾರೆ, ಕುಮಾರಪಾರ್ಕ್ ವೆಸ್ಟ್‌ನಲ್ಲಿರುವ ಸಂಪ್ರತಿ ಕಣ್ಣಾಸ್ಪತ್ರೆಯ ಡಾ.ಅರುಣ್ ಸಂಪ್ರತಿ.`ತಾರಸಿ ಮೇಲೆ ಅಥವಾ ಮನೆಯ ಹೊರಗೆ ನಿಂತು ಯಾರೋ ಪಟಾಕಿ ಹಚ್ಚುವುದನ್ನು ನೋಡುತ್ತಾ ನಿಂತವರು ಪಟಾಕಿ ದುರಂತಕ್ಕೆ ಒಳಗಾದ ಪ್ರಕರಣಗಳನ್ನು ಹೆಚ್ಚು ಕಾಣುತ್ತೇವೆ. ಕಳೆದ ವರ್ಷ 70ರ ಹರೆಯದ ವ್ಯಕ್ತಿಯೊಬ್ಬರು ಮನೆಯ ಕಿಟಕಿಯಿಂದ ಪಕ್ಕದ ಮನೆಯ ಸಿಡಿಮದ್ದಿನಾಟವನ್ನು ನೋಡುತ್ತಿದ್ದಾಗ ಕಿಟಕಿಯಿಂದ ಮನೆಯೊಳಗೆ ತೂರಿಬಂದ ರಾಕೆಟ್ ಅವರ ಮುಖಕ್ಕೆ ಸುಟ್ಟಗಾಯಗಳನ್ನುಂಟು ಮಾಡಿತು! ಆದ್ದರಿಂದ ಸಿಡಿಮದ್ದು ನೋಡುವಾಗಲೂ ಬಹಳ ಎಚ್ಚರದಿಂದಿರಬೇಕು~ ಎಂಬುದು ಅವರ ಸಲಹೆ.ಫ್ಲವರ್‌ಪಾಟ್ ಸುರಕ್ಷಿತವಲ್ಲ!

ಬೆಂಕಿ ಹಚ್ಚಿದ ಕ್ಷಣಮಾತ್ರದಲ್ಲಿ ಹತ್ತಾರು ಅಡಿ ಎತ್ತರಕ್ಕೆ ಬೆಂಕಿಯ ಗೋಲಿಗಳನ್ನು ಚೆಲ್ಲುತ್ತಾ ನೋಡುಗರನ್ನು ಉತ್ಸಾಹದ ಬುಗ್ಗೆಯಾಗಿಸುವ ಫ್ಲವರ್ ಪಾಟ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಆದರೆ ಅವು ನಿಜಕ್ಕೂ ಸುರಕ್ಷಿತವೇ? ಖಂಡಿತಾ ಅಲ್ಲ ಎನ್ನುತ್ತದೆ ವೈದ್ಯಕೀಯ ವಲಯ.ಕೆಲವೊಮ್ಮೆ ಫ್ಲವರ್ ಪಾಟ್ ಹಚ್ಚಿದ ಎಷ್ಟೋ ಹೊತ್ತಿನವರೆಗೂ ನಿಷ್ಕ್ರಿಯವಾದಂತೆ ಉಳಿದುಬಿಡುವುದುಂಟು. ಅದನ್ನು ಮತ್ತೊಮ್ಮೆ ಹಚ್ಚಲು ಮುಂದಾಗುವ ಹೊತ್ತಿಗೆ ಹಿಂದಿನ ಸಲ ಹತ್ತಿಸಿದ ಉರಿ ನಿಧಾನವಾಗಿ ಬತ್ತಿಯವರೆಗೆ ತಲುಪಿ ಸ್ಫೋಟವಾಗುವ ಅಪಾಯವಿದೆ. ಆದ್ದರಿಂದ ಒಂದೇ ಫ್ಲವರ್‌ಪಾಟ್‌ಗೆ ಎರಡನೇ ಬಾರಿಗೆ ಬೆಂಕಿ ಹಚ್ಚುವ ಸಾಹಸಕ್ಕೆ ಕೈಹಾಕಲೇಬಾರದು ಎಂಬುದು ನೆನಪಿರಲಿ.ನಿಜ, ಹಿರಿಯರ ನಿರ್ಲಕ್ಷ್ಯ, ಉದಾಸೀನದಿಂದಾಗಿ ಮಕ್ಕಳು ಉಡಾಫೆ ಮನೋಭಾವ ತೋರುತ್ತಾರೆ. ಅವರ ಕೈಲಾಗುವ ಪ್ರಮಾದಗಳು ಅವರದೇ ಬಾಳಿಗಾಗಲಿ ಇನ್ಯಾರದೋ ಬಾಳಿಗೆ ಕತ್ತಲು ತುಂಬಬಾರದು ಅಲ್ಲವೇ?ಹಾಗಿದ್ದರೆ ನಾವೆಲ್ಲರೂ ಪಟಾಕಿ ಬೇಡ, ಹಣತೆಯ ಕಿರುಬೆಳಕು ಸಾಕು ಎಂದು ಹೇಳಿದರಾಗದೇ? ನಾಗರಿಕಪ್ರಜ್ಞೆಯೊಂದಿಗೆ ಈ ಬಾರಿಯ ಹಬ್ಬಕ್ಕೆ ಬೆಳಕನ್ನು ತುಂಬೋಣ ಬನ್ನಿ...

 

   ಹುಷಾರು... 

 

- ಮಕ್ಕಳು ಪಟಾಕಿ ಹಚ್ಚುವಾಗ ಹಿರಿಯರು ಜೊತೆಗಿರಿ

- ತಂದೆ ತಾಯಿಯ ಕಣ್ಣು ತಪ್ಪಿಸಿ ಪಟಾಕಿ ಹಚ್ಚುವ ಸಾಹಸ ಬೇಡ

- ಫ್ಯಾನ್ಸಿ ಉಡುಪು, ರೇಷ್ಮೆ ವಸ್ತ್ರ, ಸಿಂಥೆಟಿಕ್ ಬಟ್ಟೆಯ ಬದಲು ಕಡ್ಡಾಯವಾಗಿ ಹತ್ತಿ ಬಟ್ಟೆ ಧರಿಸಿಯೇ ಪಟಾಕಿ ಹಚ್ಚಿ.

-ಸುರಕ್ಷಾ ಕನ್ನಡಕ ಧರಿಸಿಕೊಳ್ಳಿ.

-ಅಕಸ್ಮಾತ್ ಪಟಾಕಿ ಮುಖ/ಕೈ/ಕಣ್ಣಿಗೆ ಸಿಡಿದರೂ ತಕ್ಷಣ ತಣ್ಣೀರಿನಿಂದ ಆ ಭಾಗವನ್ನು ನಾಲ್ಕಾರು ಬಾರಿ ತೊಳೆಯಿರಿ. ಕಣ್ಣನ್ನು ಯಾವುದೇ ಕಾರಣಕ್ಕೂ ತಿಕ್ಕಬೇಡಿ.

-ಗ್ಯಾಸ್ ಸಿಲಿಂಡರ್, ಟ್ರಾನ್ಸ್‌ಫಾರ‌್ಮರ್, ಬೀದಿದೀಪಗಳ ಜಂಕ್ಷನ್ ಬಾಕ್ಸ್ ಇತ್ಯಾದಿಗಳ ಬಳಿ ಪಟಾಕಿ ಸುಡಬೇಡಿ.

-ಮನೆಯಲ್ಲಿ ಈ ಪ್ರಥಮ ಚಿಕಿತ್ಸೆಯಾದ ತಕ್ಷಣ ನೇತ್ರ ತಜ್ಞರಲ್ಲಿ ತಪಾಸಣೆ ಮಾಡಿಸಿಕೊಳ್ಳಿ.

-ಸುಟ್ಟ ಗಾಯವಾದಾಗ ಮನೆಮದ್ದಿನ ನೆಪದಲ್ಲಿ ಹರಳೆಣ್ಣೆ, ಕಾಫಿಪುಡಿ ಹಾಕುವುದು ಅಪಾಯಕಾರಿ.

-ದೊಡ್ಡ ಪ್ರಮಾಣದಲ್ಲಿ ಪಟಾಕಿ ಸುಡುವುದಿದ್ದರೆ ಪಕ್ಕದಲ್ಲೇ ಮರಳು ಹಾಗೂ ನೀರು ಸಂಗ್ರಹಿಸಿಟ್ಟುಕೊಂಡಿದ್ದರೆ ಅಗ್ನಿ ಅನಾಹುತವನ್ನು ಪ್ರಾಥಮಿಕ ಹಂತದಲ್ಲೇ ನಿಯಂತ್ರಿಸಬಹುದು.

ಮಿಂಟೊ ಅಸ್ಪತ್ರೆ ಚಾಮರಾಜಪೇಟೆ: 2670 1646

ಸಂಪ್ರತಿ ಕಣ್ಣಿನ ಆಸ್ಪತ್ರೆ: 98454 23955

ಶೇಖರ ನೇತ್ರಾಲಯ ಜೆ.ಪಿ. ನಗರ:

ಪ್ರಭಾ ಐ ಕ್ಲಿನಿಕ್: 2665 9090, 2665 9595, 2663 7041, 2244 4131, 2244 4141 (ತುರ್ತು ಕರೆಗೆ 99450 39005)

ನಾರಾಯಣ ನೇತ್ರಾಲಯ: 666606 550658

6697 4000/4003, 661213001305

6612 1400/1404

(ನಾರಾಯಣ ಹೃದಯಾಲಯದ ಆವರಣದಲ್ಲಿರುವ ನಾರಾಯಣ ನೇತ್ರಾಲಯ: ತುರ್ತು ಸಂದರ್ಭಕ್ಕೆ ಮಾತ್ರ: 9902 821128)

ಅಗರ್‌ವಾಲ್ ಆಸ್ಪತ್ರೆ: 2323 2399/2660 6688

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.