ಶುಕ್ರವಾರ, ನವೆಂಬರ್ 22, 2019
27 °C
ಕಲ್ಲಂಗಡಿ, ಕಬ್ಬಿನ ರಸ, ಲಸ್ಸಿಗೆ ಬೇಡಿಕೆ; ಮಾರುಕಟ್ಟೆ ಪ್ರವೇಶಿಸಿದ ಆಪೂಸ್, ರಸಪೂರಿ

ಸುಡುವ ಬಿಸಿಲು;ದಾಹ ತೀರಿಸಲು ಸರದಿ ಸಾಲು!

Published:
Updated:
ಸುಡುವ ಬಿಸಿಲು;ದಾಹ ತೀರಿಸಲು ಸರದಿ ಸಾಲು!

ಹುಬ್ಬಳ್ಳಿ: ನೆತ್ತಿ ಸುಡುವ ಬಿಸಿಲು. ಏನೇ ಕುಡಿದರೂ ಮತ್ತೆ ಮತ್ತೆ ಬಾಯಾರಿಕೆ- ದಾಹ. ಹೀಗಾಗಿ ಕಲ್ಲಂಗಡಿ, ಕಬ್ಬಿನ ರಸ, ಲಸ್ಸಿ, ತಂಪು ಪಾನೀಯಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಅದಾಗಲೇ ಆಪೂಸ್, ರಸಪೂರಿ ಮಾವಿನ ಹಣ್ಣುಗಳೂ ಮಾರುಕಟ್ಟೆಗೆ ದಾಂಗುಡಿ ಇಟ್ಟಿವೆ.ಚನ್ನಮ್ಮ ವೃತ್ತ, ಈದ್ಗಾ ಮೈದಾನ, ಮಹಾತ್ಮಾ ಗಾಂಧೀ ಮಾರುಕಟ್ಟೆ ಅಲ್ಲದೇ ಬಡಾವಣೆಗಳಲ್ಲಿ ಸಹ ಕಲ್ಲಂಗಡಿ, ಕಬ್ಬಿನ ರಸ ಮಾರಾಟಗಾರರಿಗೆ ಬಲು ಜೋರು ವ್ಯವಹಾರ. ಬಿಸಿಲಿನ ಬೇಗೆ ಏರುತ್ತಿದ್ದಂತೆ ದಣಿವಾರಿಸಿಲುಕೊಳ್ಳಲು ಬಯಸು ವವರಿಗೆ ಈ ಸಣ್ಣಪುಟ್ಟ ವ್ಯಾಪಾರಿಗಳು ಆಶ್ರಯವಾಗಿದ್ದಾರೆ.`ಬಿಸಿಲ ಧಗೆಗೆ ಜನರು ಬೇಸತ್ತಿದ್ದಾರೆ. ಹೀಗಾಗಿ ಪೇಟೆಯಲ್ಲಿ ಹೆಚ್ಚು ಓಡಾಡುವುದಿಲ್ಲ. ಪೇಟೆಗೆ ಬಂದವರೂ ಮಧ್ಯಾಹ್ನ 12 ಗಂಟೆಯೊಳಗೆ ಮನೆ ಸೇರುತ್ತಾರೆ. ಮತ್ತೆ ಸಂಜೆ 6ರ ನಂತರವೇ ಹೊರಗಿಳಿಯುತ್ತಾರೆ. ಹೀಗಾಗಿ ನಿರೀಕ್ಷೆಯಂತೆ ವ್ಯವಹಾರ ಇಲ್ಲ' ಎನ್ನುತ್ತಾರೆ ಕಲ್ಲಂಗಡಿ ವ್ಯಾಪಾರಿ ಅಶೋಕ ಕಲಾಲ್.`ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಲ್ಲಂಗಡಿಗೆ ಬೇಡಿಕೆ ಕಡಿಮೆ ಇದೆ. ರಾಜ್ಯದಲ್ಲಿ ಮಳೆ ಇಲ್ಲದ್ದರಿಂದ ಈ ಬಾರಿ ದರವೂ ಹೆಚ್ಚಿದೆ. ಕಲ್ಲಂಗಡಿಗೆ 2-3 ತಿಂಗಳಷ್ಟೇ ಬೇಡಿಕೆ. ಈಗ ಒಂದು ತಿಂಗಳು ಸೀಜನ್' ಎಂದರು.`ಇನ್ನು ಮಾವಿನ ಹಣ್ಣಿನ ಸೀಜನ್. ಆದರೆ ಈಗ ಬೆಲೆ ದುಬಾರಿ. ಈ ತಿಂಗಳ 15ರ ನಂತರ ಬೆಲೆ ಇಳಿಮುಖವಾಗುವ ಸಾಧ್ಯತೆ ಇದೆ' ಎಂದು ಮಾವಿನಹಣ್ಣು ವ್ಯಾಪಾರಿ ಮೆಹಬೂಬ್‌ಸಾಬ್ ಬಾಗಲಕೋಟೆ ಹೇಳಿದರು.`ಮಹಾರಾಷ್ಟ್ರದ ಸಾವಂತವಾಡಿ, ರತ್ನಾಗಿರಿಯಿಂದ ಮಾವಿನಹಣ್ಣು ನಗರಕ್ಕೆ ಬರಲಾಂಭಿಸಿದೆ. ಆಪೂಸ್, ರಸಪುರಿ ಹಣ್ಣು ಕಳೆದ 20 ದಿನಗಳಿಂದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈಗಷ್ಟೇ ಮಾವಿನಹಣ್ಣು ಮಾರುಕಟ್ಟೆ ಪ್ರವೇಶಿಸಿರುವುದರಿಂದ ಬೆಲೆ ದುಬಾರಿ ಇದೆ. ಬೆಲೆ ಜಾಸ್ತಿ ಇದ್ದರೂ ಜನ ಖರೀದಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಹೊರರಾಜ್ಯದ ವಿವಿಧಬಗೆಯ ಮಾವಿನ ಹಣ್ಣುಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ರಾಜ್ಯಕ್ಕೆ ಬಂದಿಲ್ಲ. ಸದ್ಯದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಹಣ್ಣುಗಳು ಬರಲಿವೆ. ಆಗ ಬೆಲೆಯೂ ಕಡಿಮೆಯಾಗಲಿದೆ' ಎಂದರು.`ಸದ್ಯ ಎರಡು ಡಜನ್ ಹಣ್ಣುಗಳಿರುವ ಒಂದು ಬಾಕ್ಸ್‌ಗೆ ರೂ 800ರಿಂದ 1200 ದರ ಇದೆ. ಸದ್ಯ ಮಾರುಕಟ್ಟೆಗೆ ಬಂದಿರುವ ಹಣ್ಣುಗಳು ಸಿಹಿಯಾಗಿವೆ. ಹೀಗಾಗಿ ಬೆಲೆ ಹೆಚ್ಚಿದ್ದರೂ ಒಮ್ಮೆ ಕೊಂಡೊಯ್ದವರು ಮತ್ತೆ ಮತ್ತೆ ಖರೀದಿಸುತ್ತಿದ್ದಾರೆ' ಎಂದರು.`ಈದ್ಗಾ ಮೈದಾನದಲ್ಲಿ ಮಹಮ್ಮದ್ ಅಲಿ ಎಂ. ಕರ್ಜಗಿ ಅವರು ಮಾರಾಟಕ್ಕಾಗಿ ಕಲ್ಲಂಗಡಿ ರಾಶಿ ಗುಡ್ಡೆ ಹಾಕಿದ್ದಾರೆ. ಅವರ ಪ್ರಕಾರ ಈ ಬಾರಿಯೂ ಕಲ್ಲಂಗಡಿ ಬೇಡಿಕೆ ಕಡಿಮೆ ಆಗಿಲ್ಲ. ಬಿಸಿಲು ಹೆಚ್ಚುತ್ತಿದ್ದಂತೆ ಜನ ಕಲ್ಲಂಗಡಿ ಜ್ಯೂಸ್ ಕುಡಿಯಲು ಅಥವಾ ಕಲ್ಲಂಗಡಿ ಹೋಳು ತಿನ್ನಲು ಬರುತ್ತಾರೆ. ಪೇಟೆ ಪ್ರದೇಶದಲ್ಲಿ ತಕ್ಷಣಕ್ಕೆ ಬಾಯಾರಿಕೆ ನೀಗಿಸಿಕೊಳ್ಳಲು ಕಲ್ಲಂಗಡಿ ಅಂಗಡಿಗಳತ್ತ ಧಾವಿಸುತ್ತಾರೆ' ಎಂದರು.`ಕಲ್ಲಂಗಡಿಯಲ್ಲಿ ಕಿರಣ್ ಕಲ್ಲಂಗಡಿ (ಸಣ್ಣ ಗಾತ್ರ) ಮತ್ತು ಸ್ಥಳೀಯ ಎಂದು ಎರಡು ವಿಭಾಗದಲ್ಲಿದೆ. ಸ್ಥಳೀಯ ಕಲ್ಲಂಗಡಿಗಳಲ್ಲೂ ನಾಮಧಾರಿ, ಸುಲ್ತಾನ್, ಬಿರ್ಜವೋ, ಆಶೋಮೋಟಾ, ಮಧುಬಾಲ, ಮೋಹಿನೆ... ಹೀಗೆ ಬೇರೆ ಬೇರೆ ವಿಧಗಳಿವೆ. ರುಚಿ ಮತ್ತು ರಸಕ್ಕೆ ಅನುಗುಣವಾಗಿ ಈ ಕಲ್ಲಂಗಡಿಯ ಬೆಲೆ ಕಿಲೋ ಒಂದಕ್ಕೆ ರೂ 6ರಿಂದ 45ರವರೆಗೆ ಇದೆ.ಆದರೆ ಕಿರಣ್ ಕಲ್ಲಂಗಡಿಗೆ ಕಿಲೋ ಒಂದಕ್ಕೆ ರೂ 20 ದರ ಇದೆ' ಎಂದರು. ಈ ಮಧ್ಯೆ ಲಸ್ಸಿ ಮಾರಾಟಗಾರರಿಗೂ ಭಾರಿ ಬೇಡಿಕೆ ಬಂದಿದೆ. ಮಧ್ಯಾಹ್ನದ ಬಿಸಿಲು ನೆತ್ತಿ ಸುಡಲು ಆರಂಭವಾಗುತ್ತಿದ್ದಂತೆ ನಗರದ ಪದ್ಮಾ ಚಿತ್ರಮಂದಿರದ ಬಳಿ ಇರುವ ಅಖ್ತರ್ ಮಾದಾಮಿ ಅವರ ಪುಟ್ಟ ಲಸ್ಸಿ ಅಂಗಡಿಯ ಮುಂಭಾಗದಲ್ಲಿ ಸರದಿ ಸಾಲಲ್ಲಿ ಜನ ನಿಲ್ಲುತ್ತಾರೆ. ತಂಪು ಲಸ್ಸಿ ಕುಡಿದು ಸಮಾಧಾನಪಟ್ಟುಕೊಳ್ಳುವುದು ಈಗ ಸಾಮಾನ್ಯ ದೃಶ್ಯವಾಗಿದೆ.`ನನ್ನ ಪಾಲಿನ ಜೀವನಾಧಾರವಾದ ಈ ಪುಟ್ಟ ಅಂಗಡಿಯನ್ನು ಕಳೆದ 18 ವರ್ಷಗಳಿಂದ ನಡೆಸುತ್ತಿದ್ದೇನೆ. ಬೆಳಿಗ್ಗೆ 9 ಗಂಟೆಗೆ ಅಂಗಡಿ ತೆರೆದರೆ ಸಂಜೆ 7 ಗಂಟೆಗೆ ಮುಚ್ಚುತ್ತೇನೆ. ಈಗಂತೂ ಸೀಜನ್. ಜನರ ರುಚಿಗೆ ತಕ್ಕಂತೆ ಲಸ್ಸಿ ನೀಡುತ್ತಲೇ ಬಂದಿದ್ದೇನೆ. ಅರ್ಧ ಲೋಟವಾದರೆ ರೂ 15, ಇಡೀ ಲೋಟಕ್ಕೆ 20 ರೂಪಾಯಿ ವಸೂಲು ಮಾಡುತ್ತೇನೆ' ಎಂದರು.ಈ ಮಧ್ಯೆ, ಎಳನೀರಿಗೂ ಭಾರಿ ಬೇಡಿಕೆ ಕುದುರಿದೆ. ಆದರೆ ಸಾಕಷ್ಟು ಪ್ರಮಾಣದಲ್ಲಿ ಎಳನೀರು ಲಭ್ಯ ಇಲ್ಲದಿರುವುದರಿಂದ ಕೆಲವು ಕಡೆ ಒಂದಕ್ಕೆ ರೂ 20 ರೂಪಾಯಿವರೆಗೂ ವಸೂಲಿ ಮಾಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)