ಬುಧವಾರ, ನವೆಂಬರ್ 20, 2019
27 °C

ಸುಡುವ ರಣಬಿಸಿಲು...ಜನರ ಪರದಾಟ

Published:
Updated:
ಸುಡುವ ರಣಬಿಸಿಲು...ಜನರ ಪರದಾಟ

ಲಕ್ಷ್ಮೇಶ್ವರ: ಕಳೆದ ಎರಡು ವರ್ಷಗಳಿಂದ ಸರಿಯಾಗಿ ಮಳೆ ಬಾರದೆ ತಾಲ್ಲೂಕಿನ ಜನತೆ ಬರದ ಬೇಗೆಗೆ ಸಿಲುಕಿ ಕಂಗಾಲಾಗಿದ್ದರು.  ಈಗ ನೆತ್ತಿ ಸುಡುವ ಉರಿ ಬಿಸಿಲಿನ ತಾಪಕ್ಕೆ ತತ್ತರಿಸುತ್ತಿದ್ದಾರೆ.  ಬೆಳಗಿನ ಹತ್ತು ಗಂಟೆ ಆಗುವುದೇ ತಡ ಸೂರ್ಯ ಆರ್ಭಟಿಸುತ್ತಿದ್ದಾನೆ. ನಡು ಮಧ್ಯಾಹ್ನದ ಹೊತ್ತಿಗೆ ನೆತ್ತಿ ಸುಡುವಷ್ಟು ಪ್ರಖರವಾಗುತ್ತಿದೆ ಬಿಸಿಲು. ಬಿರು ಬಿಸಿಲ ಹೊಡೆತಕ್ಕೆ ಜನರು ಬೆವರು ಸುರಿಸುತ್ತಿದ್ದಾರೆ. ವಿಪರೀತ ಬಿಸಿಲಿನ ಪರಿಣಾಮ  ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಮಾತ್ರ ಮಕ್ಕಳು ಆಟವಾಡಲು ಮನೆಯಿಂದ ಹೊರ ಬರುತ್ತಿದ್ದಾರೆ. ಕೆರೆ, ಬಾವಿ ಇರುವ ಊರುಗಳಲ್ಲಿ ಯುವಕರು ಹಾಗೂ ಮಕ್ಕಳು ತಣ್ಣೀರಿನಲ್ಲಿ ಈಜಾಡಿ ಸೆಕೆಯಿಂದ ಪಾರಾಗಲು ಪ್ರಯತ್ನಿಸುತ್ತಿದ್ದಾರೆ.  ಮೊದಲು ಪಟ್ಟಣದಲ್ಲಿ ಇಟ್ಟಿಗೆರೆ, ಕೆಂಪಿಗೆರೆ, ಮೋಟಾರ್‌ಗಟ್ಟಿ ಕೆರೆಗಳು ಇದ್ದವು. ಆಗ ಯುವಕರು ಆ ಕೆರೆಗಳಲ್ಲಿ ಈಜಾಡಿ ಬಿಸಿಲಿನಿಂದ ಪಾರಾಗುತ್ತಿದ್ದರು. ಆದರೆ ಇದ್ದ ಕೆರೆಗಳು ನಿರ್ಲಕ್ಷ್ಯ ಒಳಗಾಗಿ ಸಂಪೂರ್ಣ ಒಣಗಿ ಭಣ ಗುಡುತ್ತಿವೆ. ಹೀಗಾಗಿ ಈಜಾಡಲು ಯುವಕರಿಗೆ ಅವಕಾಶ ತಪ್ಪಿ ಹೋಗಿದೆ.ಹಳ್ಳಿಗಳಲ್ಲಿ ಹಿರಿಯರು, ಮಹಿಳೆಯರು, ಮಕ್ಕಳು ಬೇವಿನಮರ, ಮಾವಿನಮರ, ಹುಣಸೆ ಮರದ ನೆರಳು ಮತ್ತು ದೇವಸ್ಥಾನಗಳನ್ನು ಆಶ್ರಯಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಬಿಸಿಲಿನ ತಾಪದಿಂದ ಪಾರಾಗಲು ಜನರು ತಂಪು ಪಾನೀಯಗಳಿಗೆ ಮೊರೆ ಹೋಗಿದ್ದಾರೆ.ಪಟ್ಟಣದ ಐಸ್‌ಕ್ರಿಮ್ ಪಾರ್ಲರ್ ಹಾಗೂ ತಂಪಯ ಪಾನೀಯ ಅಂಗಡಿಗಳಿಗೆ ಜನ ಲಗ್ಗೆ ಹಾಕುತ್ತಿದ್ದಾರೆ. ಇದರ ಜೊತೆಗೆ ಎಳನೀರು, ಕಬ್ಬಿನ ಹಾಲು ಹಾಗೂ ಕಲ್ಲಂಗಡಿ ಹಣ್ಣುಗಳ ಮಾರಾಟವೂ ಜೋರಾಗಿದೆ. ದೊಡ್ಡ ಆಕಾರದ ಕಲ್ಲಂಗಡಿ ಹಣ್ಣು ರೂ.50- 60ಗೆ ಮಾರಾಟವಾಗುತ್ತಿದೆ.ಬಿಸಿಲಿನ ತಾಪದಿಂದಾಗಿ ಬಡವರ ಫ್ರಿಡ್ಜ್ ಎಂದೇ ಖ್ಯಾತವಾಗಿರುವ ಮಣ್ಣಿನ ಕೊಡ ಹಾಗೂ ಹರವಿಗಳಿಗೂ ಬೇಡಿಕೆ ಬಂದಿದೆ. ಇವುಗಳನ್ನು ಖರೀದಿಸಲು ಸಾಮಾನ್ಯ ಜನರು ಪೇಟೆಯತ್ತ ಧಾವಿಸುತ್ತಿದ್ದಾರೆ.ಗುಡ್ಡಗಾಡು ಪ್ರದೇಶ ಹೊಂದಿರುವ ತಾಲ್ಲೂಕಿನ ಗೊಜನೂರು, ಅಕ್ಕಿಗುಂದ, ಅಕ್ಕಿಗುಂದ ತಾಂಡಾ, ಶೆಟ್ಟಿಕೇರಿ, ಛಬ್ಬಿ, ನಾದಿಗಟ್ಟಿ, ಆದರಹಳ್ಳಿ, ದೇವಿಹಾಳ, ರಣತೂರುಗಳಲ್ಲಿ ಬಿಸಿಲಿನ ಪ್ರಖರತೆ ಅತಿಯಾಗಿದ್ದು, ಗುಡ್ಡದ ಮೇಲಿನ ಬಿಸಿ ಗಾಳಿ ಮುಖಕ್ಕೆ ರಾಚುತ್ತದೆ.ಕನಿಷ್ಠ 38 ಡಿಗ್ರಿಗಿಂತಲೂ ಅಧಿಕವಾಗಿರುವ ಸುಡು ಬಿಸಿಲಿಗೆ ಡಾಂಬರ್ ರಸ್ತೆಗಳು ರೊಟ್ಟಿ ಹಂಚಿನಂತೆ ಕಾಯುತ್ತಿದ್ದು ಮಧ್ಯಾಹ್ನ ರಸ್ತೆಯಲ್ಲಿ ಓಡಾಡುವವರು ಇದರ ಕಹಿ ಅನುಭವ ಪಡೆಯುತ್ತಿದ್ದಾರೆ.ಬಿಸಿಲಿನ ಹೊಡೆತಕ್ಕೆ ಸಿಕ್ಕು ತಾಲ್ಲೂಕಿನಲ್ಲಿನ ಅನೇಕ ಕೆರೆಗಳು ಬತ್ತಿದ್ದು ಜಾನುವಾರುಗಳ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದೆ.ಲಕ್ಷ್ಮೇಶ್ವರಕ್ಕೆ ನೀರು ಪೂರೈಸುತ್ತಿರುವ ಮೇವುಂಡಿ ಹತ್ತಿರದ ತುಂಗಭದ್ರಾ ನದಿಯಲ್ಲಿ ನೀರಿನ ಕೊರತೆ ಉಂಟಾಗಿದೆ. ಅಡವಿಗಳಲ್ಲಿ ಕುಡಿಯಲು ನೀರು ಸಿಗದೆ ಜಾನುವಾರು, ಕುರಿ, ಆಡು-ಮೇಕೆಗಳು ಒದ್ದಾಡುತ್ತಿವೆ. ಕುರಿಗಾಹಿಗಳು ತಮ್ಮ ಕುರಿಗಳಿಗೆ ನೀರು ಅರಸಿಕೊಂಡು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಅಲೆಯುತ್ತಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಬರದ ಜೊತೆಗೆ ಸುಡು ಬಿಸಿಲೂ ಹೆಚ್ಚಿದ್ದು ಜನರನ್ನು ಕಂಗಾಲಾಗಿಸಿದೆ.

ಪ್ರತಿಕ್ರಿಯಿಸಿ (+)