ಸುತ್ತಮುತ್ತ ಎಲ್ಲವೂ ಸ್ತಬ್ಧ; ಕಾರ್ಯಕರ್ತರ ಆಕ್ರೋಶ

7

ಸುತ್ತಮುತ್ತ ಎಲ್ಲವೂ ಸ್ತಬ್ಧ; ಕಾರ್ಯಕರ್ತರ ಆಕ್ರೋಶ

Published:
Updated:

ಬೆಂಗಳೂರು: ಬಂದ್‌ನಿಂದಾಗಿ ನಗರದ ಹೊರ ವಲಯದ ವಿವಿಧ ಪ್ರದೇಶಗಳಲ್ಲೂ ಜನ ಜೀವನ ಅಸ್ತವ್ಯಸ್ತವಾಯಿತು. ರಸ್ತೆ ತಡೆ, ಕಲ್ಲು ತೂರಾಟ, ಪ್ರತಿಕೃತಿ ದಹನದ ಮೂಲಕ ಬಿಜೆಪಿ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನೆಲಮಂಗಲ

ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ ಬಿಜೆಪಿ ನೆಲಮಂಗಲ ಘಟಕದ ಕಾರ್ಯಕರ್ತರು ‘ಪ್ರತಿಪಕ್ಷಗಳ ಮುಖಂಡರು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರ ಮೂಲಕ ಸರ್ಕಾರವನ್ನು ಉರುಳಿಸಲು ಪಿತೂರಿ ನಡೆಸುತ್ತಿದ್ದಾರೆ’ ಎಂದು ದೂರಿದರು. ಪ್ರತಿಪಕ್ಷಗಳ ಕೈಗೊಂಬೆಯಂತೆ ವರ್ತಿಸುತ್ತಿರುವ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ಕೂಡಲೇ ವಾಪಸ್ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ರಾಜ್ಯಪಾಲರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ತುಮಕೂರು ಕಡೆಯಿಂದ ಬರುವ ವಾಹನಗಳನ್ನು ಹಾಗೂ ಸೊಂಡೆಕೊಪ್ಪ ವೃತ್ತದ ಬಳಿ ಹಾಸನ ಕಡೆಯಿಂದ ಬರುವ ವಾಹನಗಳನ್ನು ಪ್ರತಿಭಟನಾಕಾರರು ಕೆಲ ಕಾಲ ತಡೆ ಹಿಡಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಪ್ರತಿಭಟನೆ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಬಿಜೆಪಿಯ ನೂರಾರು ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ರಾಜ್ಯಪಾಲರ ವಿರುದ್ದ ಘೋಷಣೆ ಕೂಗಿದರು. ಬಿಜೆಪಿ ಮುಖಂಡರಾದ ಸುಬ್ಬಣ್ಣ, ಎಸ್.ಮಲ್ಲಯ್ಯ, ಬಾಳೆಕಾಯಿ ನಾಗರಾಜು, ಎಚ್.ಪಿ.ಚೆಲುವರಾಜು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಯಲಹಂಕ ವರದಿ

ಬಿಜೆಪಿ ಕಾರ್ಯಕರ್ತರು ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮುಖ್ಯರಸ್ತೆಯ ಕೋಗಿಲು ವೃತ್ತದಲ್ಲಿ ರಸ್ತೆತಡೆ ನಡೆಸಿದರು. ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸಬೇಕಾಯಿತು. ಅಳ್ಳಾಳಸಂದ್ರದ ಬಿ.ಬಸವಲಿಂಗಪ್ಪ ಸಮಾಧಿ ಸ್ಥಳದ ಬಳಿ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ಸಿದ್ಧ ಉಡುಪು ಕಾರ್ಖಾನೆಯ ಖಾಸಗಿ ಬಸ್‌ನ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳು ಮುಂಭಾಗದ ಗಾಜುಗಳನ್ನು ಒಡೆದುಹಾಕಿ ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬರ ಹಣೆಗೆ ಕಲ್ಲುಬಿದ್ದು, ಸಣ್ಣ ಪ್ರಮಾಣದ ಗಾಯವಾಯಿತು.ರಾಜಾನುಕುಂಟೆ, ಸಿಂಗನಾಯಕನಹಳ್ಳಿ, ಆವಲಹಳ್ಳಿ, ಎನ್‌ಇಎಸ್ ವೃತ್ತ, ಚಿಕ್ಕ ಬೊಮ್ಮಸಂದ್ರ ಕ್ರಾಸ್ ಹಾಗೂ  ದೊಡ್ಡಬೆಟ್ಟಹಳ್ಳಿ  ಪ್ರದೇಶಗಳಲ್ಲಿ ಪ್ರತಿಭಟ ನಾಕಾರರು ಟೈರ್‌ಗಳಿಗೆ ಬೆಂಕಿಹಚ್ಚಿ ರಸ್ತೆತಡೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮುನ್ಸೂಚನೆ ಇಲ್ಲದೆ ಬಸ್ ಸಂಚಾರ ಸ್ಥಗಿತಗೊಂಡ ಪರಿಣಾಮ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು. ರೈಲ್ವೆ ನಿಲ್ದಾಣದಿಂದ ತಮ್ಮ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ಬಸ್‌ಗಳಿಲ್ಲದೆ ಪರದಾಡಿದರು.

 

ಬಸ್ ನಿಲ್ದಾಣಗಳಲ್ಲಿ ನಿಂತಿದ್ದ ಪ್ರಯಾಣಿಕರು, ದ್ವಿಚಕ್ರ ವಾಹನ ಸೇರಿದಂತೆ ಖಾಸಗಿ ವಾಹನಗಳನ್ನು ತಡೆದು ಲಿಫ್ಟ್ ಕೇಳುತ್ತಿದ್ದರು. ಕೆಲವರಂತೂ ಗಂಟೆಗಟ್ಟಲೆ ಕಾದರೂ ವಾಹನಗಳು ಸಿಗದೆ ನಡೆದುಕೊಂಡು ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಉಳಿದಂತೆ ಅಂಗಡಿ-ಮುಂಗಟ್ಟುಗಳು, ಶಾಲಾ ಕಾಲೇಜುಗಳು, ಪೆಟ್ರೋಲ್ ಬಂಕ್, ಸಿನಿಮಾ ಮಂದಿರ ಮುಚ್ಚಿದ್ದವು, ಸರ್ಕಾರಿ ಕಚೇರಿಗಳು ತೆರೆದಿದ್ದರೂ ಸಿಬ್ಬಂದಿ ಬಾರದೆ ಬಿಕೋ ಎನ್ನುತ್ತಿದ್ದವು.

ಕೃಷ್ಣರಾಜಪುರ ವರದಿ 

  ಬಿಜೆಪಿ ಕಾರ್ಯಕರ್ತರು ಎನ್.ವೀರಣ್ಣ ಅವರ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದರು.  ಭಟ್ಟರಹಳ್ಳಿ, ಹೊರಮಾವು, ಮುಂತಾದ ಕಡೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಂದ್ ವೇಳೆ ವರ್ತುಲ ರಸ್ತೆ ಮತ್ತಿತರ ಕಡೆ ಮೂರ್ನಾಲ್ಕು ಆಟೊಗಳಿಗೆ ಬೆಂಕಿ ಹಚ್ಚಲಾಯಿತು. 3 ಬಿಎಂಟಿಸಿ ಬಸ್ಸುಗಳಿಗೆ ಕಲ್ಲು ತೂರಿದ ಘಟನೆ ನಡೆದಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಕಚೇರಿಗಳಲ್ಲಿ ಹಾಜರಾತಿಯೂ ಕಡಿಮೆಯಿತ್ತು. ದಿಢೀರ್ ಬಂದ್‌ನಿಂದಾಗಿ ವಿನಾಕಾರಣ ನಾವು ತೊಂದರೆ ಅನುಭವಿಸಬೇಕಾಯಿತು ಎಂದು ಸಾರ್ವಜನಿಕರು ಅಲ್ಲಲ್ಲಿ ಶಪಿಸುತ್ತಿದ್ದುದು ಕಂಡು ಬಂತು.ಬೊಮ್ಮನಹಳ್ಳಿ ವರದಿ

ಕ್ಷೇತ್ರ ವ್ಯಾಪ್ತಿಯ ಹೊಸೂರು ರಸ್ತೆ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಶನಿವಾರ ಶಾಸಕ ಸತೀಶ್‌ರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ನಗರ ಸಾರಿಗೆ ಬಸ್‌ಗಳನ್ನು ತಡೆದು ಪ್ರತಿಭಟಿಸಿದರು. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು. ಪ್ರತಿಭಟನೆ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಬಸ್ ಮತ್ತು ಲಾರಿಗಳು ಜಖಂಗೊಂಡವು. ಸಮೀಪದ ಎಚ್‌ಎಸ್‌ಅರ್ ಬಡಾವಣೆಯಲ್ಲಿ ಪ್ರತಿಭಟನಾಕಾರರು ಅಂಗಡಿ, ಹೋಟೆಲ್‌ಗಳನ್ನು ಮುಚ್ಚುವಂತೆ ಒತ್ತಾಯಿಸಿದ್ದರಿಂದ ಬಿಗುವಿನ ವಾತಾವರಣ ಉಂಟಾಗಿತ್ತು.ಒಂದು ಹಂತದಲ್ಲಿ ಇನ್ಸ್‌ಪೆಕ್ಟರ್ ರಾಜೇಶ್ ಮತ್ತು ಸ್ಥಳೀಯ ಪಾಲಿಕೆ ಸದಸ್ಯೆ ಲತಾ ಅವರ ಪತಿ ನರಸಿಂಹಮೂರ್ತಿ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.ಕಿಡಿಗೇಡಿಗಳ ದಾಳಿಯನ್ನು ತಡೆಯಲು ಪೊಲೀಸರು ಯಾವುದೇ ಪ್ರಯತ್ನ ಮಾಡಲಿಲ್ಲ. ಬಂದ್ ವಿಷಯ ಗೊತ್ತಿದ್ದರೂ  ಪೊಲೀಸರು ಸಾರ್ವಜನಿಕರ ಅಸ್ತಿ ಪಾಸ್ತಿ ರಕ್ಷಣೆ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಸ್ಥಳೀಯ ನಿವಾಸಿ ಎನ್.ಕೆ.ಸ್ವಾಮಿ ದೂರಿದರು.ಬೊಮ್ಮನಹಳ್ಳಿ ಬಸ್ ನಿಲ್ದಾಣದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಪಾಲಿಕೆ ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್‌ರೆಡ್ಡಿ, ಪಾಲಿಕೆ ಸದಸ್ಯರಾದ ಲತಾ ನರಸಿಂಹಮೂರ್ತಿ. ರೂಪಾ ರಮೇಶ್. ಬಿಜೆಪಿ ಮುಖಂಡರಾದ ಬಿ.ವೈ.ರಮೇಶ್. ಸೈಯದ್ ಸಲಾಂ. ನರಸಿಂಹಮೂರ್ತಿ ಮುಂತಾದವರು ಭಾಗವಹಿಸಿದ್ದರು.ತಲಘಟ್ಟಪುರ ವರದಿ

ಕನಕಪುರ ರಸ್ತೆಯ ರಘುವನಹಳ್ಳಿ, ವಾಜರಹಳ್ಳಿ ಮೊದಲಾದ ಕಡೆ ಬಿಜೆಪಿ ಕಾರ್ಯಕರ್ತರು ರಸ್ತೆತಡೆ ಚಳವಳಿ ನಡೆಸಿ, ರಾಜ್ಯಪಾಲರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ರಘುವನಹಳ್ಳಿಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚುವ ಸಂದರ್ಭದಲ್ಲಿ ಕಾರ್ಯಕರ್ತ ಚಂದ್ರು (24) ಅವರಿಗೆ ಬೆಂಕಿ ತಗುಲಿ  ಮುಖ, ತಲೆ ಕೂದಲು ಸುಟ್ಟಿತು. ಮತ್ತೊಬ್ಬ ಕಾರ್ಯಕರ್ತ ಬಸವರಾಜು (25)ಅವರ ಬಲಗೈಗೆ ಗಾಯವಾಗಿದೆ.ಕಂಠೀರವ ಸ್ಟುಡಿಯೊ ಅಧ್ಯಕ್ಷ ಎಂ.ರುದ್ರೇಶ್, ಬಿಬಿಎಂಪಿ ಸದಸ್ಯೆ ವೀಣಾ ನಾಗರಾಜ್,ವಾರ್ಡ್ ಅಧ್ಯಕ್ಷ ಜಯರಾಮೇಗೌಡ ,ತಾ.ಪಂ. ಮಾಜಿ ಅಧ್ಯಕ್ಷ ಎಚ್.ನಾಗರಾಜ್ ,ಭೂ ನ್ಯಾಯಮಂಡಳಿ ಸದಸ್ಯ ವಜ್ರಪ್ಪ ,ಬಿಜೆಪಿ ಮುಖಂಡರಾದ ವಾಜರಹಳ್ಳಿ ಶಶಿಕುಮಾರ್ ,ವಿನಯ್ ಬೈರಣ್ಣ ,ದೇವೇಂದ್ರ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.ರಾಜರಾಜೇಶ್ವರಿನಗರ ವರದಿ

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಅರಬೆತ್ತಲೆ ಮೆರವಣಿಗೆ ನಡೆಸಿದರು.  ಅಂಗಡಿಗಳನ್ನು ಮುಚ್ಚಿಸಿ, ಅಲ್ಲಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತಪಡಿಸಿದರು.ಬೆಂಗಳೂರು ದಕ್ಷಿಣ ಶಾಸಕ ಎಂ.ಕೃಷ್ಣಪ್ಪ, ಪಾಲಿಕೆ ಸದಸ್ಯರಾದ ವಿಜಯರಮೇಶ್ ,ರಮೇಶ್‌ರಾಜು, ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಪಿ.ಮುನಿರಾಜು (ತುಳಸಿ), ಬಿಜೆಪಿ ಮುಖಂಡರಾದ ಚಂದ್ರಪ್ಪ ,ಸೋಮು, ರಮೇಶ್ ಮತ್ತಿತರರು ಬೈಕ್ ರ್ಯಾಲಿ ನಡೆಸಿ ರಾಜ್ಯಪಾಲರ ವಿರುದ್ದ ಘೋಷಣೆಗಳನ್ನು ಕೂಗಿದರು.ಮಹದೇವಪುರ ವರದಿ

ಬಿಜೆಪಿ ಮಹದೇವಪುರ ಕ್ಷೇತ್ರದ ಕಾರ್ಯಕರ್ತರು ಮಾರತ್‌ಹಳ್ಳಿ- ಕಾಡುಗೋಡಿ ಮುಖ್ಯರಸ್ತೆಯಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ಮಾಡಿದ್ದರಿಂದ ಈ ಮಾರ್ಗದಲ್ಲಿ ಕೆಲ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸವಾಯಿತು. ಪ್ರತಿಭಟನೆಯಿಂದಾಗಿ ವೈಟ್‌ಫೀಲ್ಡ್‌ನಿಂದ ಓಫಾರಂವರೆಗೆ ವಾಹನಗಳು ಗಂಟೆ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು.ಇದರಿಂದ ಕೋಪಗೊಂಡ ವಾಹನ ಸವಾರರು ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿದರು. ಈ ಹಂತದಲ್ಲಿ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.ಇದಕ್ಕೂ ಮೊದಲು ಬಿಜೆಪಿ ಕಾರ್ಯಕರ್ತರು ನಲ್ಲೂರುಹಳ್ಳಿ, ವರ್ತೂರು ಕೋಡಿ, ರಾಮಗೊಂಡನಹಳ್ಳಿ, ಸಿದ್ದಾಪುರ ಹಾಗೂ ವೈಟ್‌ಫೀಲ್ಡ್ ಮುಖ್ಯರಸ್ತೆಯಲ್ಲಿ ರ್ಯಾಲಿ ನಡೆಸಿದರು. ಅಲ್ಲದೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಪ್ರಯತ್ನಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಎಂ.ವೇಣುಗೋಪಾಲ ‘ರಾಜ್ಯಪಾಲರು ಪಕ್ಷಪಾತ ಮಾಡುತ್ತಿದ್ದಾರೆ. ಪ್ರತಿಪಕ್ಷಗಳ ಕೈಗೊಂಬೆಯಾಗಿರುವ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ವಾಪಸ್ ಕರೆಸಿಕೊಳ್ಳಬೇಕು’ ಎಂದರು. ಬಿಜೆಪಿ ಮುಖಂಡರಾದ ಚಂದ್ರಶೇಖರ ರೆಡ್ಡಿ ನಲ್ಲೂರುಹಳ್ಳಿ, ಮುನಿಯಪ್ಪ, ನಾರಾಯಣಸ್ವಾಮಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪಿಲ್ಲಗುಂಪೆಯಲ್ಲಿ

ಹೊಸಕೋಟೆ ಸಮೀಪದ ಪಿಲ್ಲಗುಂಪೆ ಕೈಗಾರಿಕೆ ಪ್ರದೇಶದಲ್ಲಿ ಬಂದ್ ಕಾರಣ ಎಲ್ಲ ಕಾರ್ಖಾನೆಗಳು ಮುಚ್ಚಿದ್ದವು. ಅಲ್ಲಿನ ಕನ್ನಡ ಕಾರ್ಮಿಕರ ಹೋರಾಟ ವೇದಿಕೆ ಮುಖಂಡರಾದ ಎ.ರಾಜಗೋಪಾಲ್, ರವೀಂದ್ರನಾಥ್ ನೇತೃತ್ವದಲ್ಲಿ ರಾಜ್ಯ ಹೆದ್ದಾರಿ ರಸ್ತೆ ತಡೆ ನಡೆಸಿದರು. ತಾಲ್ಲೂಕಿನ ಎಲ್ಲ ಹೋಬಳಿ ಕೇಂದ್ರಗಳಲ್ಲೂ ಬಂದ್ ಆಚರಿಸಿ ರಾಜ್ಯ ಪಾಲರ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ ಬಗ್ಗೆ ವರದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry