ಭಾನುವಾರ, ಆಗಸ್ಟ್ 25, 2019
21 °C

ಸುತ್ತೂರಿನ ಸುತ್ತ...

Published:
Updated:

ಕೃಷಿ ಉಪಕರಣಗಳ ವಿವಿಧ ಮಾದರಿ, ಹಿರಿಯರು ಬಳಸುತ್ತಿದ್ದ ತಂತ್ರಜ್ಞಾನ, ತೆರೆಮರೆಗೆ ಸರಿದ ಆಟಿಕೆಗಳು, ರಾಗಿಕಲ್ಲು, ಅಪರೂಪದ ಬಾಚಣಿಗೆ, ಹಿಂದಿನವರು ಬಳಸುತ್ತಿದ್ದ ಆಭರಣಗಳ ಅಚ್ಚು, ಮರದ ಗಂಟೆ, ಕಾಫಿ ಪುಡಿ ಯಂತ್ರ, ವಿವಿಧ ನಮೂನೆಯ ಗೊಂಬೆಗಳು...ಅಬ್ಬಾ... ಒಂದೇ ಎರಡೇ ಇಲ್ಲಿಗೆ ಭೇಟಿ ನೀಡಿದರೆ ಹಿಂದಿನ ಕಾಲಕ್ಕೇ ಹೊಕ್ಕ ಅನುಭವ. ಇಂಥ ಒಂದು ಅಪರೂಪದ ಸವಿಯ ಸವಿಯಬೇಕೆಂದರೆ ಮೈಸೂರು ಜಿಲ್ಲೆಯ ಸುತ್ತೂರಿಗೆ ಹೋಗಬೇಕು. ಮೈಸೂರಿನಿಂದ 25 ಕಿ.ಮೀ. ದೂರದಲ್ಲಿದೆ ಸುತ್ತೂರು. ಹತ್ತು ಶತಮಾನಗಳ ಪರಂಪರೆಯುಳ್ಳ ವೀರಸಿಂಹಾಸನ ಮಹಾಸಂಸ್ಥಾನದ ಮಠ ಇದು. ಇದೀಗ ನವೀಕರಣಗೊಂಡು ಹೊಸ ರೂಪು ಪಡೆದಿದೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ನೂರಾರು ವರ್ಷಗಳಿಂದ ಬಳಸುತ್ತಿದ್ದ ಅಪರೂಪದ ವಸ್ತುಗಳ ಸಂಗ್ರಹ ಇಲ್ಲಿದೆ. ಹಿಂದೆ ಮನೆಯಲ್ಲಿ ತರಕಾರಿ ಕತ್ತರಿಸಲು ಬಳಸುತ್ತಿದ್ದ ದೊಡ್ಡ ಈಳಿಗೆ ಮಣೆ, ಪಾವು, ಚಟಾಕು, ಸೇರು ಇನ್ನಿತರ ಅಳತೆ ಸಾಧನಗಳು, ಬೀದಿಯಲ್ಲಿ ಬಳಸುತ್ತಿದ್ದ ಕಟ್ಟಿಗೆಯ ವಿವಿಧ ಬಗೆಯ ದೀಪಸ್ಥಂಭಗಳು, ಗಂಧದ ಕರಡಿಗೆ, ಮಕ್ಕಳನ್ನು ಮಲಗಿಸಲು ಬಳಸುತ್ತಿದ್ದ ತೊಟ್ಟಿಲಿನ ಜತೆಗೆ ಕೂಡಿಸಿ ತೂಗುತ್ತಿದ್ದ ಪುಟ್ಟ ತೊಟ್ಟಿಲು ಗಮನಾರ್ಹ.ಮೇಣೆ, ಬಂಡಿ

ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲ್ಲೂಕಿನ ಮುಡುಕುತೊರೆಯ ಮಲ್ಲಿಕಾರ್ಜುನ ಬೆಟ್ಟಕ್ಕೆ ಜಾತ್ರೆಯ ಸಂದರ್ಭದಲ್ಲಿ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರನ್ನು ಭಕ್ತರು ಕರೆದೊಯ್ಯಲಾಗುತ್ತಿದ್ದ ಮೇಣೆಯೊಂದು ಬಣ್ಣ ಬಳಿದುಕೊಂಡು ಕಣ್ಮನ ಸೆಳೆಯುತ್ತಿದೆ. ಹಿಂದಿನ ಮಠಾಧೀಶ ಶಿವರಾತ್ರೀಶ್ವರ ಸ್ವಾಮೀಜಿ ಪ್ರಯಾಣಕ್ಕಾಗಿ ಬಳಸುತ್ತಿದ್ದ ಬಂಡಿಯೂ ಇಲ್ಲಿದೆ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರಿಗೆ ಮೈಸೂರು ಅರಮನೆಯಿಂದ ಗುರುಮನೆಗೆ ಕಾಣಿಕೆಯಾಗಿ ಬಂದ ವಿಶೇಷ ಕುಸುರಿ ಕೆತ್ತನೆಯ ಬೀಟೆ ಮರದ ಪೀಠೋಪಕರಣಗಳು ಇಲ್ಲಿಯ ಹೈಲೈಟ್. ಬಾತುಕೋಳಿ ಆಕಾರದ ಬೆತ್ತದ ಹೂಬುಟ್ಟಿ, ಬೆಳ್ಳಿ ಪಾದುಕೆಗಳು, ಹಳೆಯ ಕಾಲದ ರೇಡಿಯೊ, ರಾಜೇಂದ್ರ ಸ್ವಾಮೀಜಿಯವರ ಚುಕ್ಕಿ ಭಾವಚಿತ್ರಗಳು, ಓಲೆಗರಿ, ಓಲೆಗರಿ ಕೊರೆಯಲು ಬಳಸುತ್ತಿದ್ದ ಕಂಠಗಳು, ಮಸಿಕುಡಿಕೆ, ನಾಟಕಕ್ಕೆ ಬಳಸುತ್ತಿದ್ದ ಬತ್ತಿಯ ಗ್ಯಾಸ್‌ಲೈಟ್, ಬೈಸಿಕಲ್ಲಿನ ದೀಪ... ಇನ್ನಷ್ಟು ಮತ್ತಷ್ಟು...ಕೃಷಿ ಉಪಕರಣಗಳಲ್ಲಿ ನೀರು ಎತ್ತುವ ಏತ, ಎತ್ತಿನ ಗಾಣದ ಮಾದರಿ, ಅಡಿಕೆ ಸುಲಿಯುವ ಮಣೆ ಮೊದಲಾದವು ಹಳೆಯವಾದರೂ ನಮ್ಮ ಹಿರಿಯರ ತಾಂತ್ರಿಕ ಕೌಶಲ ಪರಿಚಯವಾಗುತ್ತದೆ. ಇವುಗಳೊಂದಿಗೆ ನೂಲುವ ಚರಕ, ಅಂಬರ ಚರಕ, ಹತ್ತಿ ಬೀಜ ತೆಗೆಯುವ ರಾಟೆ, ಬಿದಿರಿನ ಎಣ್ಣೆ ಪಾತ್ರೆ, ವಿವಿಧ ಬಗೆಯ ಬೀಗಗಳು, ನಾಲ್ಕು ಮುಖದ ಬಾಚಣಿಗೆ, ಮರದ ಸಪ್ತ ಬಟ್ಟಲು, ತೂಕದ ಬಟ್ಟುಗಳು, ಮರದ ಗಂಟೆ, ಧಾರೆ ಎರೆವ ಗಿಂಡಿ, ಪಂಚಪಾತ್ರೆ, ಬೈತಲೆ ಕಡ್ಡಿ, ಹಾಲು ಹಂಡೆ, ದೊಡ್ಡ ಹಂಡೆ, ದಸರಾ ಗೊಂಬೆಗಳು, ತೊಗಲು ಗೊಂಬೆಗಳು, ಸೂತ್ರದ ಗೊಂಬೆಗಳು, ವಿದೇಶಿ ನೋಟುಗಳು, ವಿಶೇಷ ಸಂಖ್ಯೆಯ ದೇಸಿ ನೋಟುಗಳನ್ನು ಚೆಂದಾಗಿ ಜೋಡಿಸಿಡಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಕಾಣಿಕೆಯಾಗಿ ನೀಡಿದ ವಿಶೇಷ ಕ್ಯಾಮೆರಾ, ಖಡ್ಗ, ದಂತದ ಬ್ರಶ್, ಭೂತಾರಾಧನೆಯ ವಸ್ತುಗಳನ್ನು ಅಚ್ಚುಕಟ್ಟಾಗಿ ಇಡಲಾಗಿದೆ.ಈ ಸಂಗ್ರಹಾಲಯಕ್ಕಾಗಿ ವಸ್ತುಗಳ ಸಂಗ್ರಹ ಶುರುವಾಗಿದ್ದು 1995ರಲ್ಲಿ. ಕಲಾವಿದ ಪಿ.ಆರ್. ತಿಪ್ಪೇಸ್ವಾಮಿ ಮಾರ್ಗದರ್ಶನ ನೀಡಿದರು. ನಂತರ 2000ದಲ್ಲಿ ಉದ್ಘಾಟನೆಗೊಂಡಿತು. ಸಂಗ್ರಹಿಸಿದ ವಸ್ತುಗಳನ್ನು ಕಡತದಲ್ಲಿ ರೇಖಾಚಿತ್ರಗಳ ಸಮೇತ ದಾಖಲಿಸಲಾಗಿದೆ. ಸದ್ಯ ಡಿಜಿಟಲ್ ತಂತ್ರದ ಮೂಲಕವೂ ದಾಖಲಾತಿ ನಡೆದಿದೆ. ಈ ಸಂಗ್ರಹಾಲಯದಿಂದ ಹಳೆಯ ವಸ್ತುಗಳ ಮಹತ್ವ ಪರಿಚಯವಾಗುತ್ತದೆ. ಸ್ಥಳೀಯ ಸಂಸ್ಕೃತಿಯನ್ನು ಸಂರಕ್ಷಿಸಿದಂತಾಗಿದೆ. ಜತೆಗೆ ಇತಿಹಾಸ, ಸಂಸ್ಕೃತಿಯ ಅರಿವೂ ಮೂಡುತ್ತದೆ.ಮಂಗಳವಾರ ಹೊರತುಪಡಿಸಿ ಬೆಳಿಗ್ಗೆ 10ರಿಂದ ಸಂಜೆ ಐದರೊಳಗೆ ಈ ವಸ್ತುಸಂಗ್ರಹಾಲಯ ವೀಕ್ಷಿಸಬಹುದು. ಇದನ್ನು ವಿಸ್ತರಿಸುವ ಯೋಜನೆಯಿದ್ದು, ಸಾರ್ವಜನಿಕರು ಅಪರೂಪದ ವಸ್ತುಗಳನ್ನು ಈ ಸಂಗ್ರಹಾಲಯಕ್ಕೆ ನೀಡಬಹುದು. ಸಂಪರ್ಕಕ್ಕೆ 08221- 232224.

 

Post Comments (+)