ಬುಧವಾರ, ಡಿಸೆಂಬರ್ 11, 2019
24 °C

ಸುತ್ತೂರು: ವಿಜೃಂಭಣೆಯ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುತ್ತೂರು: ವಿಜೃಂಭಣೆಯ ರಥೋತ್ಸವ

ಮೈಸೂರು: ನಂಜನಗೂಡು ತಾಲ್ಲೂಕು ಸುತ್ತೂರು ಶ್ರೀಕ್ಷೇತ್ರದ ಆದಿಜಗದ್ಗುರು ಶಿವರಾತ್ರಿ ಶಿವಯೋಗಿಗಳ ರಥೋತ್ಸವ ಸಹಸ್ರಾರು ಭಕ್ತರ ಸಂಭ್ರಮದ ನಡುವೆ ಶನಿವಾರ ವಿಜೃಂಭಣೆಯಿಂದ ಜರುಗಿತು.ಸುತ್ತೂರು ಗ್ರಾಮದ ಮೂಲ ಮಠದಿಂದ ಶಿವಯೋಗಿಗಳ ಉತ್ಸವಮೂರ್ತಿಯನ್ನು ಗುರುವಾರವೇ ಕರ್ತೃ ಗದ್ದುಗೆಗೆ ತರಲಾಗಿತ್ತು. ಬೆಳಿಗ್ಗೆ 4 ಗಂಟೆಗೆ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ ನೆರವೇರಿಸಿ, 6 ಗಂಟೆಗೆ ಫಲಾಲಂಕಾರ ಹಾಗೂ ವಿಭೂತಿ ಪೂಜೆ ನೆರವೇರಿಸಲಾಯಿತು. ಬಳಿಕ 46ನೇ ಲಿಖಿತ ಮಂತ್ರ ಸಂಸ್ಮರಣೋತ್ಸವ ಹಾಗೂ ರಾಜಗುರು ತಿಲಕ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಗದ್ದುಗೆಗೆ ರುದ್ರಾಭಿಷೇಕ ಕೈಗೊಳ್ಳಲಾಯಿತು.9 ಗಂಟೆಗೆ ಉತ್ಸವಮೂರ್ತಿಗೆ ಅಭಿಷೇಕ ಮತ್ತು ರಾಜೋಪಚಾರ ನಡೆಯಿತು. 10 ಗಂಟೆಗೆ ಉತ್ಸವಮೂರ್ತಿಯನ್ನು ರಥದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಅರ್ಚಕರು ಪೂಜಾ-ವಿಧಿ ವಿಧಾನ ಪೂರೈಸಿದರು. ಬಳಿಕ ಸುತ್ತೂರು ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಮೊದಲಿಗೆ ರಥದ ಹಗ್ಗವನ್ನು ಎಳೆಯುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ವಿವಿಧ ಮಠಾಧೀಶರು ಈ ಸಂದರ್ಭದಲ್ಲಿ ಹಾಜರಿದ್ದು ಶುಭ ಕೋರಿದರು.ಶ್ರೀಮಠದ ಬಿರುದು, ಬಾವಲಿಗಳು, ಬಣ್ಣದ ಪತಾಕೆಗಳನ್ನು ಮಠದ ಭಕ್ತರು ಮೆರವಣಿಗೆಯುದ್ದಕ್ಕೂ ಹೊತ್ತು ಸಾಗಿದರು. ನಾದಸ್ವರ, ಸ್ಯಾಕ್ಸೋಫೋನ್, ವೀರಗಾಸೆ, ವೀರಮಕ್ಕಳ ಕುಣಿತ, ಪೂಜಾ ಕುಣಿತ, ನವಿಲು ನೃತ್ಯ, ಗಾರುಡಿಗೊಂಬೆ, ತಮಟೆ ನಗಾರಿ, ಡೊಳ್ಳು ಕುಣಿತ ಕಲಾವಿದರು ಆಕರ್ಷಕ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು.10.45 ಗಂಟೆಗೆ ಮೂಲ ಗದ್ದುಗೆಯಿಂದ ಹೊರಟ ರಥವು ಸುತ್ತೂರು ಗ್ರಾಮವನ್ನು ಒಂದು ಸುತ್ತು ಹಾಕಿ ಮರಳಿ ಸ್ವಸ್ಥಾನಕ್ಕೆ ಬಂದಾಗ 1.30 ಗಂಟೆ ಆಗಿತ್ತು. ಜಾತ್ರೆಗೆ ಆಗಮಿಸಿದ್ದ ಭಕ್ತರು ತೇರಿಗೆ ಹಣ್ಣು-ಜವನ ಎಸೆದು ಭಕ್ತಿ ಸಮರ್ಪಿಸಿದರು. 50 ಸಾವಿರಕ್ಕೂ ಹೆಚ್ಚು ಮಂದಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.ಮೈಸೂರು, ಚಾಮರಾಜನಗರ, ನಂಜನಗೂಡು ಹಾಗೂ ವಿವಿಧ ಭಾಗಗಳಿಂದ ಕೆಎಸ್‌ಆರ್‌ಟಿಸಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು.

ಪ್ರತಿಕ್ರಿಯಿಸಿ (+)