ಸುತ್ತೋಲೆಯೂ ಇಲ್ಲ, ಸುಪ್ರೀಂ ಆದೇಶವೂ ನೆನಪಿಲ್ಲ

7

ಸುತ್ತೋಲೆಯೂ ಇಲ್ಲ, ಸುಪ್ರೀಂ ಆದೇಶವೂ ನೆನಪಿಲ್ಲ

Published:
Updated:

ಬೆಂಗಳೂರು: `ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸುತ್ತೇವೆ, ಸುಪ್ರೀಂಕೋರ್ಟ್ ಹೊರಡಿಸಿರುವ ಮಾರ್ಗಸೂಚಿಯನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ. ಈ ಸಂಬಂಧ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳುತ್ತೇವೆ...~-ಇದು 10 ದಿನಗಳ ಹಿಂದೆಯಷ್ಟೇ ಹೈಕೋರ್ಟ್‌ನಲ್ಲಿ ಸರ್ಕಾರ ಮಾಡಿದ್ದ ವಾಗ್ದಾನ. ಈ ವಾಗ್ದಾನವನ್ನು ಮೀರುವುದಿಲ್ಲ ಎಂದೂ ಅದು ತಿಳಿಸಿದೆ, ಅದನ್ನು ನ್ಯಾಯಾಲಯವೂ ದಾಖಲಿಸಿಕೊಂಡಿದೆ.ಪಟಾಕಿಗೆ ನಿಷೇಧ ಹೇರುವಂತೆ ಕೋರಿ ವಕೀಲ ಬಿ.ವಿ.ಪುಟ್ಟೇಗೌಡ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠದ ಮುಂದೆ ಸರ್ಕಾರದ ಪರವಾಗಿ ವಕೀಲರು ಮುಚ್ಚಳಿಕೆ ನೀಡಿದ್ದರು.ಆದರೆ ಈ ಹಿಂದೆ ದೀಪಾವಳಿ ಹಬ್ಬಗಳಂದು ಆಗಿರುವ ಅನಾಹುತಗಳು ಈ ಬಾರಿಯೂ ಪುನರಾವರ್ತನೆ ಆಗಿವೆ. ಪಟಾಕಿ ಹಚ್ಚುವವರಿಗಿಂತ ಹೆಚ್ಚಾಗಿ, ದಾರಿಹೋಕರು, ಪಟಾಕಿ ಹಚ್ಚುವುದನ್ನು ವೀಕ್ಷಣೆ ಮಾಡುತ್ತಿರುವವರೇ ಈ ಅವಘಡದಲ್ಲಿ ಸಿಲುಕುತ್ತಿದ್ದಾರೆ ಎಂದೆಲ್ಲ ಅರ್ಜಿಯಲ್ಲಿ ವಕೀಲ ಪುಟ್ಟೇಗೌಡ ಅವರು ನೀಡಿದ್ದ ಮಾಹಿತಿ ಈ ಬಾರಿಯೂ ನಿಜವಾಗಿದೆ.ಸುಪ್ರೀಂಕೋರ್ಟ್ ಮಾರ್ಗಸೂಚಿಯನ್ನು ಪಾಲಿಸುತ್ತೇವೆ ಎಂದು ರಾಜ್ಯದ ಉನ್ನತ ಕೋರ್ಟ್‌ನಲ್ಲಿ ಮುಚ್ಚಳಿಕೆ ನೀಡಿದ್ದ ಸರ್ಕಾರ, ಆ ಕುರಿತು ಕೊನೆಯ ಪಕ್ಷ ಒಂದು ಸುತ್ತೋಲೆಯನ್ನೂ ಹೊರಡಿಸಿಲ್ಲ. ಸುಪ್ರೀಂಕೋರ್ಟ್ ಮಾರ್ಗಸೂಚಿ ಏನು, ಅದನ್ನು ಪಾಲನೆ ಮಾಡದಿದ್ದರೆ ಏನಾಗುತ್ತದೆ ಎಂಬಿತ್ಯಾದಿಯಾಗಿ ಸಾರ್ವಜನಿಕರ ಅರಿವಿಗೆ ಬರುವ ಯಾವುದೇ ಮಾಹಿತಿಯನ್ನೂ ಜನರಿಗೆ ನೀಡಿಲ್ಲ ಎನ್ನುತ್ತಾರೆ ಪುಟ್ಟೇಗೌಡ. ಈ ಹಿನ್ನೆಲೆಯಲ್ಲಿ ಈ ಬಾರಿಯ ಅನಾಹುತಗಳ ದಾಖಲೆಗಳನ್ನು ಕಲೆಹಾಕಿ ಇದನ್ನು ಪುನಃ ಕೋರ್ಟ್ ಗಮನಕ್ಕೆ ತರಲು ಅವರು ಉದ್ದೇಶಿಸಿದ್ದಾರೆ.`ಸುಪ್ರೀಂ~ ಹೇಳಿದ್ದೇನು: ಪ್ರಕರಣವೊಂದರ ವಿಚಾರಣೆ ವೇಳೆ 2007ರಲ್ಲಿ ಸುಪ್ರೀಂಕೋರ್ಟ್ ಮಾರ್ಗಸೂಚಿ ರೂಪಿಸಿತ್ತು. `ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆಯ ವರೆಗೆ ಪಟಾಕಿ ಸಿಡಿತ ನಿಷೇಧಿಸಬೇಕು. ಪಟಾಕಿ ಸಿಡಿಸಲು ನಿಗದಿತ ಸ್ಥಳ ಗೊತ್ತು ಮಾಡಬೇಕು~ ಎಂದು ಅದು ತಿಳಿಸಿತ್ತು.ಅಷ್ಟೇ ಅಲ್ಲದೇ, ಭಾರಿ ಸದ್ದು ಮಾಡುವ (90 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದದ) ಪಟಾಕಿಗಳನ್ನು ನಿಷೇಧಿಸಬೇಕು ಎಂದೂ ನ್ಯಾಯಾಲಯ ತಿಳಿಸಿತ್ತು. ಯಾವ ಪಟಾಕಿಯ ಶಬ್ದ ಐದು ಮೀಟರ್‌ಗಳಿಗಿಂತ ಹೆಚ್ಚಿನ ದೂರಕ್ಕೆ ಕೇಳಿಸುವುದೋ ಅಂತಹ ಪಟಾಕಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಬೇಕು ಎಂದು ಕೋರ್ಟ್ ಸೂಚಿಸಿತ್ತು. ಇವುಗಳಲ್ಲಿ ಚಾಕಲೇಟ್ ಬಾಂಬ್ಸ್, ಸರಪಳಿ ಪಟಾಕಿ, ಕಾಲಿ ಪಟ್ಕಾ, ಧಾನಿ ಪಟ್ಕಾ, ಡೊಡೊಮಾ, ಸೆವೆನ್ ಶಾಟ್, ರಾಕೆಟ್ ಬಾಂಬ್ ಇತ್ಯಾದಿ ಪ್ರಮುಖವಾದವು.ರಾಜ್ಯದಲ್ಲಿ ಆದದ್ದೇನು? `ಸುಪ್ರೀಂ~ ಆದೇಶವನ್ನು ರಾಜಸ್ತಾನ, ಹರಿಯಾಣ, ದೆಹಲಿ ಸೇರಿದಂತೆ ಕೆಲವು ರಾಜ್ಯಗಳು ಪಾಲಿಸಿವೆ. ದೀಪಾವಳಿ ಸಂದರ್ಭದಲ್ಲಿ ಸಾರ್ವಜನಿಕರು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕುರಿತು, ಯಾವ ಸಮಯದಲ್ಲಿ ಪಟಾಕಿ ಸಿಡಿಸಬೇಕು ಇತ್ಯಾದಿಗಳನ್ನು ಒಳಗೊಂಡ ಸುತ್ತೋಲೆ ಹೊರಡಿಸಿವೆ. ಈ ಸುತ್ತೋಲೆಯನ್ನು ಮೀರಿ ನಡೆದುಕೊಂಡರೆ ತಪ್ಪಿತಸ್ಥರ ವಿರುದ್ಧ ಯಾವ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಬಗ್ಗೆ ಈ ಸುತ್ತೋಲೆಯಲ್ಲಿ ಮಾಹಿತಿ ನೀಡಲಾಗಿದೆ.ಆದರೆ ರಾಜ್ಯದಲ್ಲಿ ಮಾತ್ರ ಇಂತಹ ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಪಟಾಕಿ ಸಿಡಿಸಿಲು ನಿರ್ದಿಷ್ಟ ಜಾಗ ಗೊತ್ತು ಮಾಡಲಿಲ್ಲ. ಮನಸೋ ಇಚ್ಛೆ ಎಲ್ಲೆಂದರೆಲ್ಲಿ ಪಟಾಕಿ ಸಿಡಿಸಿರುವ ಕಾರಣ, ಪ್ರತಿ ಬಾರಿಯಂತೆ ಈ ಬಾರಿಯೂ ಹಲವು ಅವಘಡಗಳು ಸಂಭವಿಸಿವೆ ಎನ್ನುತ್ತಾರೆ ಪಟಾಕಿ ವಿರೋಧಿಯಾಗಿರುವ ಕಿರಣ್. `ಗಲ್ಲಿಗಲ್ಲಿಗಳತ್ತ ಪೊಲೀಸರು ಗಮನ ಹರಿಸುವುದು ಕಷ್ಟದ ಕೆಲಸ ಎನ್ನುವುದನ್ನು ನಾನು ಒಪ್ಪುತ್ತೇನೆ.ಆದರೆ ನಿಯಮ ಮೀರಿದರೆ ಏನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಬಗ್ಗೆ ಬೇರೆ ರಾಜ್ಯಗಳಲ್ಲಿ ಜನರಿಗೆ ಮಾಹಿತಿ ನೀಡಲಾಗಿದೆ. ಸಿಕ್ಕಿಬಿದ್ದರೆ ಕಷ್ಟ ಎಂಬ ಭಯದಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುತ್ತಾರೆ. ಆದರೆ ಇಲ್ಲಿ ಮಾತ್ರ ಕೋರ್ಟ್ ಆದೇಶ ಪಾಲನೆಗೆ ಒಂದೇ ಒಂದು ಹೆಜ್ಜೆಯನ್ನೂ ಪೊಲೀಸ್ ಇಲಾಖೆ ಮುಂದಿಟ್ಟಿಲ್ಲ ಎನ್ನುವುದು ವಿಷಾದನೀಯ~ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry